ತೆಲಂಗಾಣದ ಕರೀಂನಗರದ ರೈತ ಶ್ರೀನಿವಾಸ್ ತಮ್ಮ ಜಮೀನನ್ನು ಅಡಮಾನವಿಟ್ಟು ಮಗಳು ಚಿಕಿತಾಗೆ ಆರ್ಚರಿ ತರಬೇತಿ ಕೊಡಿಸಿದ್ದಾರೆ. ತಂದೆಯ ತ್ಯಾಗದ ಫಲವಾಗಿ ಚಿಕಿತಾ ಏಷ್ಯಾಡ್‌ನಲ್ಲಿ ಎರಡು ಚಿನ್ನದ ಪದಕಗಳನ್ನು ಗೆದ್ದಿದ್ದಾರೆ. ಟಿವಿ, ಸ್ಮಾರ್ಟ್‌ಫೋನ್ ಇಲ್ಲದ ಬಡತನದ ನಡುವೆಯೂ ಈ ಸಾಧನೆ ಮೂಡಿಬಂದಿದೆ.

ತೆಲಂಗಾಣದ ಕರೀಂನಗರ ಜಿಲ್ಲೆಯ ಸುಲ್ತಾನ್‌ಪುರ್ ಗ್ರಾಮದ ಚಿಕಿತಾ ತನಿಪರ್ತಿ ಏಷ್ಯಾಡ್‌ನಲ್ಲಿ ಮಂಗಳವಾರ 2 ಚಿನ್ನ ಗೆದ್ದಿದ್ದಾರೆ. ಆದರೆ ಅವರ ಯಶಸ್ವಿ ಪ್ರಯಾಣಕ್ಕೆ ಶಕ್ತಿ ನೀಡಿದ್ದು, ತಮ್ಮ ಜಮೀನನ್ನು ಅಡ ಇಟ್ಟು ಸಾಲ ಪಡೆದು ಆರ್ಚರಿ ಕನಸನ್ನು ಪೂರೈಸಿದ ರೈತ ತಂದೆ.

ವಾಲಿಬಾಲ್‌ ಆಟಗಾರ ಆಗಬೇಕೆಂದು ಬಯಸಿದ್ದ ಶ್ರೀನಿವಾಸ್‌ಗೆ ಅದರಲ್ಲಿ ಯಶಸ್ಸು ಸಿಕ್ಕಿಲ್ಲ. ಹೀಗಾಗಿ ತಮ್ಮ ಮಗಳನ್ನು ಕ್ರೀಡಾಪಟುವಾಗಿ ಬೆಳೆಸಬೇಕೆಂದು ನಿರ್ಧರಿಸಿದ್ದರು. ಶಾಲಾ ದಿನಗಳಲ್ಲಿ ಕರಾಟೆ ಕಲಿಯುತ್ತಿದ್ದ ಚಿಕಿತಾ, ಬ್ಲಾಕ್‌ ಬೆಲ್ಟ್‌ ಕೂಡಾ ಗೆದ್ದಿದ್ದರು. ಬಳಿಕ ಬ್ಯಾಡ್ಮಿಂಟನ್‌ಗೆ ಸೇರಿಸಲಾಯಿತಾದರೂ ಅದು ಕೂಡಾ ಕೈಗೂಡಲಿಲ್ಲ.

2018ರಲ್ಲಿ ಆರ್ಚರಿ ಕಲಿಯಲು ಶುರುಮಾಡಿದ ಚಿಕಿತಾ

2018ರಿಂದ ಚಿಕಿತಾ ಆರ್ಚರಿ ಕಲಿಯಲು ಆರಂಭಿಸಿದರು. ಆದರೆ ದುಬಾರಿ ಬಿಲ್ಲು ಖರೀದಿಸಲು ಶ್ರೀನಿವಾಸ್‌ ಬಳಿ ಹಣವಿರಲಿಲ್ಲ. ಹೀಗಾಗಿ ಸ್ಥಳೀಯ ಸಾಹುಕಾರರ ಬಳಿ ತಿಂಗಳಿಗೆ ಶೇ.2 ಬಡ್ಡಿಯೊಂದಿಗೆ ₹3.5 ಲಕ್ಷ ಸಾಲ ಪಡೆದಿದ್ದರು. ಅಡಮಾನವಾಗಿ ಇಟ್ಟಿದ್ದು ತಮ್ಮ ಜಮೀನು. ಆದರೂ ಮಗಳ ಆರ್ಚರಿ ಕನಸಿಗೆ ಶ್ರೀನಿವಾಸ ಬೆಂಬಲವಾಗಿ ನಿಂತರು.

ಬುಧವಾರ 51 ವರ್ಷದ ಶ್ರೀನಿವಾಸ್ ತಮ್ಮ 3 ಎಕರೆ ಜಮೀನಿನಲ್ಲಿ ನಾಟಿ ಮಾಡುತ್ತಿದ್ದರೆ, ದೂರದ ಜಪಾನ್‌ನ ನಗೋಯಾದಲ್ಲಿ ಅವರ ಮಗಳು ಚಿನ್ನದ ಕೊಯ್ಲು ಮಾಡುತ್ತಿದ್ದಳು. ಆದರೆ ಚಿಕಿತಾರ ಸ್ಪರ್ಧೆಯನ್ನು ವೀಕ್ಷಿಸಲು ಶ್ರೀನಿವಾಸ್‌ಗೆ ಸಾಧ್ಯವಾಗಿಲ್ಲ. ‘ನಾನು ಮಗಳ ಸ್ಪರ್ಧೆ ನೋಡಿಲ್ಲ. ಮನೆಯಲ್ಲಿ ಟೀವಿ ಇಲ್ಲ. ನನ್ನಲ್ಲಿ ವೀಡಿಯೋ ಅಥವಾ ಕ್ಯಾಮರಾ ಇರುವ ಫೋನ್‌ ಕೂಡಾ ಇಲ್ಲ. ಅವಳ ಸ್ಪರ್ಧೆ, ಗೆಲುವಿನ ಬಗ್ಗೆ ನನ್ನ ಸ್ನೇಹಿತ ಮಾಹಿತಿ ನೀಡುತ್ತಿದ್ದರು’ ಎಂದು ಶ್ರೀನಿವಾಸ್‌ ಖುಷಿ ವ್ಯಕ್ತಪಡಿಸಿದ್ದಾರೆ.

ಕುಸ್ತಿಯಲ್ಲಿ ಕಂಚು ಗೆದ್ದ ಸುನಿಲ್

ಕುಸ್ತಿಯ ಗ್ರೀಕೊ-ರೋಮನ್‌ ಪುರುಷರ 87 ಕೆ.ಜಿ. ವಿಭಾಗದಲ್ಲಿ ಸುನಿಲ್ ಕುಮಾರ್‌ ಕಂಚು ಪಡೆದರು. ಅವರು ಕಂಚಿನ ಪದಕ ಪಂದ್ಯದಲ್ಲಿ ಫಿಲಿಪ್ಪೀನ್ಸ್‌ನ ಕಾಲುಮ್‌ ರೋಬರ್ಟ್ಸ್‌ ವಿರುದ್ಧ ಗೆಲುವು ಸಾಧಿಸಿದರು. ಈ ಮೂಲಕ ಏಷ್ಯಾಡ್‌ನ ಗ್ರೀಕೊ-ರೋಮನ್‌ನಲ್ಲಿ 2 ಪದಕ ಗೆದ್ದ ಭಾರತದ ಮೊದಲ ಕುಸ್ತಿಪಟು ಎನಿಸಿಕೊಂಡರು. 2022ರ ಏಷ್ಯಾಡ್‌ನಲ್ಲೂ ಅವರು ಕಂಚು ಜಯಿಸಿದ್ದರು.

ಸ್ಕ್ವಾಶ್‌ನಲ್ಲಿ ಭಾರತದ 2 ತಂಡಕ್ಕೂ ಪದಕ ಖಚಿತ

ಕ್ರೀಡಾಕೂಟದ ಸ್ಕ್ವಾಶ್‌ನಲ್ಲಿ ಭಾರತದ ಪುರುಷ ಹಾಗೂ ಮಹಿಳಾ ತಂಡಗಳು ಸೆಮಿಫೈನಲ್‌ ಪ್ರವೇಶಿಸಿದ್ದು, ಪದಕ ಖಚಿತಪಡಿಸಿಕೊಂಡಿವೆ. ಹಾಲಿ ಚಾಂಪಿಯನ್ ಪುರುಷರ ತಂಡ ಕ್ವಾರ್ಟರ್ ಫೈನಲ್‌ನಲ್ಲಿ ಕುವೈತ್‌ ವಿರುದ್ಧ 2-0 ಗೆಲುವು ಸಾಧಿಸಿತು. ವೀರ್‌ ಚೊಟ್ರಾನಿ ಹಾಗೂ ಅಭಯ್‌ ಸಿಂಗ್‌ ತಮ್ಮ ಪಂದ್ಯಗಳಲ್ಲಿ ಗೆದ್ದರು. ಇದೇ ವೇಳೆ ಮಹಿಳಾ ತಂಡ ಕ್ವಾರ್ಟರ್‌ನಲ್ಲಿ ಸಿಂಗಾಪುರ ವಿರುದ್ಧ 2-0 ಜಯಗಳಿಸಿತು. ಅನಾಹತ್‌ ಸಿಂಗ್‌ ಹಾಗೂ ತನ್ವಿ ಖನ್ನಾ ಗೆಲುವು ತಂದುಕೊಟ್ಟರು.