Asian Games 2023: ಟೆನಿಸ್‌ ತಾರೆಗಳಾದ ಸುಮಿತ್ ನಗಾಲ್‌, ಅಂಕಿತಾ ರೈನಾ ಕ್ವಾರ್ಟರ್‌ಗೆ ಲಗ್ಗೆ

ಮಿಶ್ರ ಡಬಲ್ಸ್‌ನಲ್ಲಿ ಯೂಕಿ ಭಾಂಬ್ರಿ-ಅಂಕಿತಾ ರೈನಾ ಪ್ರಿ ಕ್ವಾರ್ಟರ್‌ಗೇರಿದರು. ಇನ್ನು, ಪುರುಷರ ಸಿಂಗಲ್ಸ್‌ನಲ್ಲಿ ರಾಮನಾಥನ್‌ ರಾಮ್‌ಕುಮಾರ್‌, ಮಹಿಳಾ ಸಿಂಗಲ್ಸ್‌ನಲ್ಲಿ ಋತುಜಾ ಭೋಸಲೆ 3ನೇ ಸುತ್ತಿನಲ್ಲಿ ಸೋತು ಹೊರಬಿದ್ದರು. ಮಹಿಳಾ ಡಬಲ್ಸ್‌ನಲ್ಲಿ ಭಾರತದ ಸವಾಲು ಮುಕ್ತಾಯಗೊಂಡಿತು.

Asian Games 2023 Sumit Nagal Ankita Raina enters Quarter Final kvn

ಹಾಂಗ್ಝೂ(ಸೆ.27): ಏಷ್ಯಾಡ್‌ ಟೆನಿಸ್‌ನಲ್ಲಿ ಭಾರತ ಮಂಗಳವಾರ ಮಿಶ್ರ ಫಲ ಅನುಭವಿಸಿದೆ. ದೇಶದ ಅಗ್ರ ಶ್ರೇಯಾಂಕಿತ ಟೆನಿಸಿಗ ಸುಮಿತ್‌ ನಗಾಲ್‌ ಪುರುಷರ ಸಿಂಗಲ್ಸ್‌ನಲ್ಲಿ, ಅಂಕಿತಾ ರೈನಾ ಮಹಿಳಾ ಸಿಂಗಲ್ಸ್‌ನಲ್ಲಿ ಕ್ವಾರ್ಟರ್‌ ಫೈನಲ್‌ಗೇರಿದ್ದಾರೆ. ಇವರಿಬ್ಬರೂ ಕ್ರಮವಾಗಿ ಕಜಕಸ್ತಾನದ ಝುಕಯೆವ್‌ ಹಾಗೂ ಹಾಂಕಾಂಗ್‌ನ ಆದಿತ್ಯ ಪಾಟೀಲ್‌ ವಿರುದ್ಧ ಗೆದ್ದರು. ಇದೇ ವೇಳೆ ಮಿಶ್ರ ಡಬಲ್ಸ್‌ನಲ್ಲಿ ಯೂಕಿ ಭಾಂಬ್ರಿ-ಅಂಕಿತಾ ರೈನಾ ಪ್ರಿ ಕ್ವಾರ್ಟರ್‌ಗೇರಿದರು. ಇನ್ನು, ಪುರುಷರ ಸಿಂಗಲ್ಸ್‌ನಲ್ಲಿ ರಾಮನಾಥನ್‌ ರಾಮ್‌ಕುಮಾರ್‌, ಮಹಿಳಾ ಸಿಂಗಲ್ಸ್‌ನಲ್ಲಿ ಋತುಜಾ ಭೋಸಲೆ 3ನೇ ಸುತ್ತಿನಲ್ಲಿ ಸೋತು ಹೊರಬಿದ್ದರು. ಮಹಿಳಾ ಡಬಲ್ಸ್‌ನಲ್ಲಿ ಭಾರತದ ಸವಾಲು ಮುಕ್ತಾಯಗೊಂಡಿತು. ಋತುಜಾ-ಕರ್ಮನ್‌ ಕೌರ್‌, ಅಂಕಿತಾ-ಪ್ರಾರ್ಥನಾ ಜೋಡಿ ಪರಾಭವಗೊಂಡಿತು.

ಸೇಲಿಂಗ್‌ನಲ್ಲಿ ಭಾರತಕ್ಕೆ 2 ಪದಕ

ಈ ಬಾರಿ ಏಷ್ಯಾಡ್‌ನಲ್ಲಿ ಭಾರತದ ಅಥ್ಲೀಟ್‌ಗಳು ಸೇಲಿಂಗ್‌ (ಹಾಯಿ ದೋಣಿ) ಸ್ಪರ್ಧೆಯಲ್ಲಿ 2 ಪದಕಕ್ಕೆ ಕೊರಳೊಡ್ಡಿದ್ದಾರೆ. ಇದರೊಂದಿಗೆ ಭಾರತದ ಒಟ್ಟಾರೆ ಪದಕ ಗಳಿಕೆ 14ಕ್ಕೆ ಏರಿಕೆಯಾಯಿತು. ಮಂಗಳವಾರ ಬಾಲಕಿಯರ ಡಿಂಗಿ ಐಎಲ್‌ಸಿಎ-4 ಸ್ಪರ್ಧೆಯಲ್ಲಿ 17ರ ನೇಹಾ ಠಾಕೂರ್‌ ಬೆಳ್ಳಿ ಪದಕ ತಮ್ಮದಾಗಿಸಿಕೊಂಡರು. ಒಟ್ಟು 32 ಅಂಕಗಳನ್ನು ಸಂಪಾದಿಸಿದ ಭೋಪಾಲ್‌ನ ನೇಹಾ 2ನೇ ಸ್ಥಾನ ಪಡೆದರೆ, ಥಾಯ್ಲೆಂಡ್‌ನ ನೊಪ್ಪಾಸ್ಸಾನ್‌ ಚಿನ್ನದ ಪದಕ ಗೆದ್ದರು. ಸಿಂಗಾಪೂರದ ಕೀರಾ ಮೇರಿಗೆ ಕಂಚು ಲಭಿಸಿತು. ಈ ವಿಭಾಗದಲ್ಲಿ 2006 ಅಥವಾ ಆನಂತರ ಜನಿಸಿದವರಿಗೆ ಮಾತ್ರ ಸ್ಪರ್ಧಿಸಲು ಅವಕಾಶವಿತ್ತು.

Asian Games 2023: ಈಕ್ವೆಸ್ಟ್ರಿಯನ್‌ ಚಿನ್ನ ಗೆದ್ದು ಭಾರತ ಇತಿಹಾಸ!

ಇನ್ನು, ಪುರುಷರ ವಿಂಡ್‌ಸರ್ಫರ್‌ ಆರ್‌ಎಸ್‌:ಎಕ್ಸ್‌ ವಿಭಾಗದಲ್ಲಿ ಇಬಾದ್ ಅಲಿ ಕಂಚು ಪಡೆದರು. ಅವರು 52 ಅಂಕಗಳೊಂದಿಗೆ 3ನೇ ಸ್ಥಾನ ಪಡೆದರೆ, ಕೊರಿಯಾದ ವೊನ್ವೂ ಚೊ ಚಿನ್ನ, ಥಾಯ್ಲೆಂಡ್‌ನ ಫೊನೊಪ್ಫಾರತ್‌ ಬೆಳ್ಳಿ ಪದಕ ಪಡೆದರು. ಭಾರತ ಕೂಟದಲ್ಲಿ ಒಟ್ಟು 3 ಚಿನ್ನ, 4 ಬೆಳ್ಳಿ ಹಾಗೂ 7 ಕಂಚಿನ ಪದಕ ಸಂಪಾದಿಸಿದ್ದು, ಪದಕ ಪಟ್ಟಿಯಲ್ಲಿ 6ನೇ ಸ್ಥಾನ ಕಾಯ್ದುಕೊಂಡಿದೆ.

ಭಾರತದ ಇತರ ಫಲಿತಾಂಶ

ಬಾಕ್ಸಿಂಗ್‌: ಪುರುಷರ 90+ ಕೆ.ಜಿ. ಸ್ಪರ್ಧೆಯಲ್ಲಿ ನರೇಂದರ್‌ ಬರ್ವಾಲ್‌ ಕಿರ್ಗಿಸ್ತಾನದ ಓಮಟ್‌ಬೆಕ್‌ ವಿರುದ್ಧ ಗೆಲುವು ಸಾಧಿಸಿ ಕ್ವಾರ್ಟರ್‌ ಫೈನಲ್‌ ಪ್ರವೇಶಿಸಿದರು. ಪುರುಷರ 57 ಕೆ.ಜಿ. ವಿಭಾಗದಲ್ಲಿ ಸಚಿನ್‌ ಸಿವಾಚ್‌ ಇಂಡೋನೇಷ್ಯಾದ ಅಸೀರುದ್ದೀನ್‌ ವಿರುದ್ಧ 5-0 ಅಂತರದಲ್ಲಿ ಜಯಿಸಿ ಪ್ರಿ ಕ್ವಾರ್ಟರ್‌ಗೇರಿದರು.

ಶೂಟಿಂಗ್‌: ಮಹಿಳೆಯರ 25 ಮೀ. ಪಿಸ್ತೂಲ್‌ ವಿಭಾಗದ ಪ್ರೆಸಿಷನ್‌ ಸುತ್ತಿನಲ್ಲಿ ಮನು ಭಾಕರ್‌ ಅಗ್ರಸ್ಥಾನ ಪಡೆದರೆ, ಈಶಾ ಸಿಂಗ್‌ 3ನೇ, ರಿಧಮ್‌ ಸಂಗ್ವಾನ್‌ 11ನೇ ಸ್ಥಾನ ಗಳಿಸಿದರು. ರ್‍ಯಾಪಿಡ್‌ ಸುತ್ತು ಬುಧವಾರ ನಡೆಯಲಿದೆ.

'ಕ್ರಿಕೆಟ್ ದೇವತೆ' ಸ್ಮೃತಿ ಮಂಧನಾ ನೋಡಲು ಬೀಜಿಂಗ್‌ನಿಂದ ಹಾಂಗ್ಝೂಗೆ ಬಂದ ಚೀನಿ ಅಭಿಮಾನಿ..!

ಫೆನ್ಸಿಂಗ್‌: ಮಹಿಳೆಯರ ಫೆನ್ಸಿಂಗ್‌ ಸೇಬರ್‌ ವೈಯಕ್ತಿಕ ವಿಭಾಗದಲ್ಲಿ ಭವಾನಿ ದೇವಿ ಕ್ವಾರ್ಟರ್‌ನಲ್ಲಿ ಚೀನಾದ ಯಾಕಿ ಶಾವೊ ವಿರುದ್ಧ 7-15ರಿಂದ ಸೋಲನುಭವಿಸಿದರು. ಭವಾನಿ ಗೆದ್ದು ಸೆಮೀಸ್‌ಗೇರಿದ್ದರೆ ಕನಿಷ್ಠ ಕಂಚು ಖಚಿತಪಡಿಸಿಕೊಳ್ಳುತ್ತಿದ್ದರು. ಜೊತೆಗೆ ಏಷ್ಯಾಡ್‌ ಇತಿಹಾಸದಲ್ಲೇ ಫೆನ್ಸಿಂಗ್‌ನಲ್ಲಿ ಭಾರತಕ್ಕೆ ಮೊತ್ತಮೊದಲ ಪದಕ ಲಭಿಸುತ್ತಿತ್ತು.

ಚೆಸ್‌: ಮಂಗಳವಾರ ಪುರುಷ, ಮಹಿಳಾ ವಿಭಾಗಗಳಲ್ಲಿ ತಲಾ 3 ಸುತ್ತಿನ ಆಟಗಳು ನಡೆಯಿತು. ವಿದಿತ್‌ ಗುಜರಾತಿ 5 ಮತ್ತು 6ನೇ ಸುತ್ತಿನಲ್ಲಿ ಗೆದ್ದು, 7ನೇ ಸುತ್ತಿನಲ್ಲಿ ಸೋತರು. ಅರ್ಜುನ್‌ ಎರಿಗೈಸಿ 5ನೇ ಸುತ್ತಿನಲ್ಲಿ ಡ್ರಾಗಳಿಸಿ, 6ನೇ ಸುತ್ತಲ್ಲಿ ಸೋತರೆ 7ನೇ ಸುತ್ತಲ್ಲಿ ಗೆದ್ದರು. ಸದ್ಯ ವಿದಿತ್‌ ಜಂಟಿ 2ನೇ, ಅರ್ಜುನ್‌ ಜಂಟಿ 3ನೇ ಸ್ಥಾನದಲ್ಲಿದ್ದಾರೆ. ಇನ್ನು, ಮಹಿಳೆಯರ ವಿಭಾಗದಲ್ಲಿ ಹರಿಕಾ ದ್ರೋಣವಲ್ಲಿ, ಕೊನೆರು ಹಂಪಿ ಇಬ್ಬರೂ 5ನೇ ಸುತ್ತಲ್ಲಿ ಗೆದ್ದು 6, 7ನೇ ಸುತ್ತಲ್ಲಿ ಡ್ರಾ ಸಾಧಿಸಿದರು. ಇಬ್ಬರೂ ಸದ್ಯ ಜಂಟಿ 4ನೇ ಸ್ಥಾನದಲ್ಲಿದ್ದಾರೆ. ಎರಡೂ ವಿಭಾಗಗಳಲ್ಲಿ ಇನ್ನೆರಡು ಸುತ್ತು ಬಾಕಿ ಇವೆ.

ಸ್ಕ್ವ್ಯಾಶ್‌: ಪುರುಷರ ಸ್ಕ್ವ್ಯಾಶ್‌ ‘ಎ’ ಗುಂಪಿನಲ್ಲಿ ಭಾರತ ತಂಡ ಸಿಂಗಾಪೂರ ಹಾಗೂ ಕತಾರ್‌ ವಿರುದ್ಧ ತಲಾ 3-0 ಅಂತರದಲ್ಲಿ ಗೆಲುವು ಸಾಧಿಸಿತು. ಮಹಿಳಾ ತಂಡ ಪಾಕಿಸ್ತಾನ ವಿರುದ್ಧ 3-0 ಅಂತರದಲ್ಲಿ ಜಯಗಳಿಸಿತು.

ವುಶು: ಪುರುಷರ 60 ಕೆ.ಜಿ. ವಿಭಾಗದ ಕ್ವಾರ್ಟರ್‌ ಫೈನಲ್‌ನಲ್ಲಿ ಸೂರ್ಯಭಾನು ಪ್ರತಾಪ್‌, 70 ಕೆ.ಜಿ. ವಿಭಾಗದ ಕ್ವಾರ್ಟರ್‌ ಫೈನಲ್‌ನಲ್ಲಿ ಸೂರಜ್‌ ಯಾದವ್‌ ಸೋಲುಂಡರು.
 

Latest Videos
Follow Us:
Download App:
  • android
  • ios