ಮಹಿಳೆಯರ ಶಾಟ್‌ಪುಟ್‌ನಲ್ಲಿ ಕಿರಣ್‌ ಬಲಿಯಾನ್‌ ತಮ್ಮ 3ನೇ ಪ್ರಯತ್ನದಲ್ಲಿ 17.36 ಮೀ. ದೂರಕ್ಕೆ ಗುಂಡು ಎಸೆದು ಕಂಚಿನ ಪದಕ ಪಡೆದರು. ಇದರೊಂದಿಗೆ ಏಷ್ಯಾಡ್‌ ಇತಿಹಾಸದಲ್ಲೇ ಮಹಿಳಾ ಶಾಟ್‌ಪುಟ್‌ನಲ್ಲಿ ದೇಶಕ್ಕೆ 2ನೇ ಪದಕ ತಂದುಕೊಟ್ಟರು.

ಹಾಂಗ್ಝೂ(ಸೆ.30): ಅಥ್ಲೆಟಿಕ್ಸ್‌ನ ಮೊದಲ ದಿನವೇ ಭಾರತ ಐತಿಹಾಸಿಕ ಸಾಧನೆ ಮಾಡಿದೆ. ಮಹಿಳೆಯರ ಶಾಟ್‌ಪುಟ್‌ನಲ್ಲಿ ಕಿರಣ್‌ ಬಲಿಯಾನ್‌ ತಮ್ಮ 3ನೇ ಪ್ರಯತ್ನದಲ್ಲಿ 17.36 ಮೀ. ದೂರಕ್ಕೆ ಗುಂಡು ಎಸೆದು ಕಂಚಿನ ಪದಕ ಪಡೆದರು. ಇದರೊಂದಿಗೆ ಏಷ್ಯಾಡ್‌ ಇತಿಹಾಸದಲ್ಲೇ ಮಹಿಳಾ ಶಾಟ್‌ಪುಟ್‌ನಲ್ಲಿ ದೇಶಕ್ಕೆ 2ನೇ ಪದಕ ತಂದುಕೊಟ್ಟರು. 1951ರ ಚೊಚ್ಚಲ ಏಷ್ಯಾಡ್‌ನಲ್ಲಿ ಬಾರ್ಬರಾ ವೆಬ್‌ಸ್ಟೆರ್‌ ಕಂಚು ಗೆದ್ದಿದ್ದರು.

ಐಶ್ವರ್ಯಾ, ಅಜ್ಮಲ್‌ ಫೈನಲ್‌ಗೆ

ಮಹಿಳೆಯರ 400 ಮೀ.ನಲ್ಲಿ ಐಶ್ವರ್ಯಾ ಮಿಶ್ರಾ 52.73 ಸೆಕೆಂಡ್‌ಗಳಲ್ಲಿ ಗುರಿ ತಲುಪಿ, ಹೀಟ್ಸ್‌ನಲ್ಲಿ 2ನೇ ಸ್ಥಾನಿಯಾಗಿ ಫೈನಲ್‌ ಪ್ರವೇಶಿಸಿದರು. ಪುರುಷರ 400 ಮೀ. ಓಟದಲ್ಲಿ ಮುಹಮ್ಮದ್‌ ಅಜ್ಮಲ್‌ 45.76 ಸೆಕೆಂಡ್‌ಗಲ್ಲಿ ಕ್ರಮಿಸಿ, ಹೀಟ್ಸ್‌ನಲ್ಲಿ 2ನೇ ಸ್ಥಾನ ಪಡೆದು ಫೈನಲ್‌ಗೇರಿದರು.

Asian Games 2023: ಭಾರತೀಯ ಶೂಟರ್ಸ್‌ ಐತಿಹಾಸಿಕ ಸಾಧನೆ..!

ಭಾರತದ ಇತರ ಫಲಿತಾಂಶ

ಹಾಕಿ: ಮಹಿಳಾ ಹಾಕಿಯಲ್ಲಿ ‘ಎ’ ಗುಂಪಿನ 2ನೇ ಪಂದ್ಯದಲ್ಲಿ ಮಲೇಷ್ಯಾ ವಿರುದ್ಧ ಭಾರತ 6-0 ಗೋಲುಗಳಿಂದ ಜಯಗಳಿಸಿತು. ಭಾರತ ಭಾನುವಾರ ಕೊರಿಯಾ ವಿರುದ್ಧ ಸೆಣಸಾಡಲಿದೆ.

3*3 ಬಾಸ್ಕೆಟ್‌ಬಾಲ್‌: ಭಾರತದ ಪುರುಷರ 3*3 ಬಾಸ್ಕೆಟ್‌ಬಾಲ್‌ ತಂಡ ‘ಸಿ’ ಗುಂಪಿನ ಪಂದ್ಯದಲ್ಲಿ ಶುಕ್ರವಾರ ಚೀನಾ ವಿರುದ್ಧ 15-18 ಅಂಕಗಳಿಂದ ಸೋಲನುಭವಿಸಿತು. ಶನಿವಾರ ಕೊನೆ ಪಂದ್ಯದಲ್ಲಿ ಇರಾನ್‌ ವಿರುದ್ಧ ಆಡಲಿದೆ.

ಸೈಕ್ಲಿಂಗ್‌: ಭಾರತದ ಎಸೋ ಆಲ್ಬೆನ್‌ ಹಾಗೂ ಡೇವಿಡ್‌ ಬೆಕ್‌ಹ್ಯಾಮ್‌ ಪುರುಷರ ಸೈಕ್ಲಿಂಗ್‌ನ ಕೀರಿನ್ ವಿಭಾಗದಲ್ಲಿ ಕ್ರಮವಾಗಿ 10 ಮತ್ತು 11ನೇ ಸ್ಥಾನಕ್ಕೆ ತೃಪ್ತಿಪಟ್ಟರು.

ಬಾಸ್ಕೆಟ್‌ಬಾಲ್‌: ಮಹಿಳಾ ಬಾಸ್ಕೆಟ್‌ಬಾಲ್‌ನ ‘ಎ’ ಗುಂಪಿನ ಪಂದ್ಯದಲ್ಲಿ ಭಾರತ ತಂಡ ಮಂಗೋಲಿಯಾ ವಿರುದ್ಧ 68-62 ಅಂಕಗಳಿಂದ ಜಯಗಳಿಸಿತು. ಮುಂದಿನ ಪಂದ್ಯದಲ್ಲಿ ಭಾನುವಾರ ಚೀನಾ ಎದುರಾಗಲಿದೆ.

ಚೆಸ್‌: ತಂಡ ವಿಭಾಗದ ಚೆಸ್‌ನಲ್ಲಿ ಭಾರತದ ಪುರುಷ, ಮಹಿಳಾ ತಂಡಗಳು ಶುಭಾರಂಭ ಮಾಡಿವೆ. ಪುರುಷರು ಮೊದಲ ಸುತ್ತಿನಲ್ಲಿ ಮಂಗೋಲಿಯಾ ವಿರುದ್ಧ 3.5-0.5 ಅಂಕಗಳಲ್ಲಿ ಜಯಗಳಿಸಿದರೆ, ಮಹಿಳಾ ತಂಡ ಫಿಲಿಪ್ಪೀನ್ಸ್‌ ವಿರುದ್ಧ 3.5-0.5 ಅಂಕಗಳಲ್ಲಿ ಗೆಲುವು ಪಡೆಯಿತು.

Asian Games 2023: ಅಥ್ಲೆಟಿಕ್ಸ್‌ನಲ್ಲಿ ಕಳೆದ ಸಲದ ದಾಖಲೆ ಮುರಿಯುತ್ತಾ ಭಾರತ?

ಹ್ಯಾಂಡ್‌ಬಾಲ್‌: ಮಹಿಳೆಯರ ಗುಂಪು ಹಂತದ ಪಂದ್ಯದಲ್ಲಿ ಚೀನಾ ವಿರುದ್ಧ ಭಾರತ 30-37 ಅಂಕಗಳಿಂದ ಸೋಲನುಭವಿಸಿತು.

ಅಥ್ಲೆಟಿಕ್ಸ್‌: 20 ಕಿ.ಮೀ. ವೇಗ ನಡಿಗೆಯ ಪುರುಷರ ವಿಭಾಗದಲ್ಲಿ ವಿಕಾಸ್‌ ಸಿಂಗ್‌, ಮಹಿಳೆಯರ ವಿಭಾಗದಲ್ಲಿ ಪ್ರಿಯಾಂಕಾ 5ನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡರು. ಮಹಿಳೆಯರ ಹ್ಯಾಮರ್‌ ಎಸೆತದ ಫೈನಲ್‌ನಲ್ಲಿ ತಾನ್ಯಾ ಚೌಧರಿ, ರಚನಾ ಕ್ರಮವಾಗಿ 7 ಹಾಗೂ 9ನೇ ಸ್ಥಾನ ಪಡೆದರು.

ಗಾಲ್ಫ್‌: ಮಹಿಳೆಯರ ವೈಯಕ್ತಿಕ ವಿಭಾಗ 2ನೇ ಸುತ್ತಿನ ಬಳಿಕ ಅದಿತಿ ಅಶೋಕ್‌ ಜಂಟಿ 2ನೇ ಸ್ಥಾನ ಕಾಯ್ದುಕೊಂಡಿದ್ದಾರೆ. ಪ್ರಣವಿ 10, ಅವನಿ 15ನೇ ಸ್ಥಾನದಲ್ಲಿದ್ದಾರೆ. ಪುರುಷರ 2ನೇ ಸುತ್ತಿನ ಬಳಿಕ ಅನಿರ್ಬನ್‌ 9, ಶುಭಂಕರ್‌ 21ನೇ ಸ್ಥಾನದಲ್ಲಿದ್ದಾರೆ.

ಟೇಬಲ್‌ ಟೆನಿಸ್‌: ಮಹಿಳಾ ಸಿಂಗಲ್ಸ್‌ನಲ್ಲಿ ಮನಿಕಾ ಬಾತ್ರಾ ಕ್ವಾರ್ಟರ್‌ ಫೈನಲ್‌ ಪ್ರವೇಶಿಸಿದ್ದಾರೆ. ಪುರುಷರ ಸಿಂಗಲ್ಸ್‌ನಲ್ಲಿ ಜಿ.ಸತ್ಯನ್‌ ಹಾಗೂ ಶರತ್‌ ಕಮಲ್‌ ಪ್ರಿ ಕ್ವಾರ್ಟರ್‌ನಲ್ಲಿ ಸೋತು ಹೊರಬಿದ್ದರು. ಪುರುಷರ ಡಬಲ್ಸ್‌ನಲ್ಲಿ ಮನುಷ್‌- ಮಾನವ್‌ ಜೋಡಿ ಕ್ವಾರ್ಟರ್‌ ಪ್ರವೇಶಿಸಿತು.