ಶುಕ್ರವಾರ ನಡೆದ ಸೆಮಿಫೈನಲ್‌ನಲ್ಲಿ ವಿಶ್ವ ನಂ.3 ಭಾರತದ ಜೋಡಿಯು ಮಾಜಿ ವಿಶ್ವ ಚಾಂಪಿಯನ್, ಮಲೇಷ್ಯಾದ ಆ್ಯರೊನ್ ಚಿಯಾ-ಸೊಹ್ ವೂಯಿ ವಿರುದ್ಧ 21-17, 21-12ರಲ್ಲಿ ಸುಲಭ ಗೆಲುವು ಸಾಧಿಸಿತು. ಈ ವರೆಗಿನ 8 ಮುಖಾಮುಖಿಗಳಲ್ಲಿ 7ರಲ್ಲಿ ಗೆದ್ದು ಪ್ರಾಬಲ್ಯ ಸಾಧಿಸಿದ್ದ ಟೋಕಿಯೋ ಒಲಿಂಪಿಕ್ ಪದಕ ವಿಜೇತ ಮಲೇಷ್ಯಾ ಜೋಡಿಗೆ ಈ ಸಲ ಸಾತ್ವಿಕ್-ಚಿರಾಗ್ ಜೋಡಿ ಆಘಾತ ನೀಡಿತು.
ಹಾಂಗ್ಝೂ(ಅ.07): ಭಾರತದ ಸಾತ್ವಿಕ್-ಚಿರಾಗ್ ಶೆಟ್ಟಿ ಪುರುಷರ ಡಬಲ್ಸ್‌ನಲ್ಲಿ ಫೈನಲ್ ಪ್ರವೇಶಿಸಿದ್ದು, ಏಷ್ಯಾಡ್‌ನಲ್ಲಿ ಈ ಸಾಧನೆ ಮಾಡಿದ ಭಾರತದ ಮೊದಲ ಜೋಡಿ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. 1982ರಲ್ಲಿ ಲೆರೋಯ್ ಫ್ರಾನ್ಸಿಸ್-ಪ್ರದೀಪ್ ಗಾಂಧಿ ಕಂಚು ಗೆದ್ದಿದ್ದು ಈವರೆಗೆ ಪುರುಷರ ಡಬಲ್ಸ್‌ನಲ್ಲಿ ಸಿಕ್ಕ ಏಕೈಕ ಪದಕವಾಗಿತ್ತು.
ಶುಕ್ರವಾರ ನಡೆದ ಸೆಮಿಫೈನಲ್‌ನಲ್ಲಿ ವಿಶ್ವ ನಂ.3 ಭಾರತದ ಜೋಡಿಯು ಮಾಜಿ ವಿಶ್ವ ಚಾಂಪಿಯನ್, ಮಲೇಷ್ಯಾದ ಆ್ಯರೊನ್ ಚಿಯಾ-ಸೊಹ್ ವೂಯಿ ವಿರುದ್ಧ 21-17, 21-12ರಲ್ಲಿ ಸುಲಭ ಗೆಲುವು ಸಾಧಿಸಿತು. ಈ ವರೆಗಿನ 8 ಮುಖಾಮುಖಿಗಳಲ್ಲಿ 7ರಲ್ಲಿ ಗೆದ್ದು ಪ್ರಾಬಲ್ಯ ಸಾಧಿಸಿದ್ದ ಟೋಕಿಯೋ ಒಲಿಂಪಿಕ್ ಪದಕ ವಿಜೇತ ಮಲೇಷ್ಯಾ ಜೋಡಿಗೆ ಈ ಸಲ ಸಾತ್ವಿಕ್-ಚಿರಾಗ್ ಜೋಡಿ ಆಘಾತ ನೀಡಿತು. ಶನಿವಾರ ಫೈನಲ್‌ನಲ್ಲಿ ದ.ಕೊರಿಯಾದ ಚೊಯಿ ಸೊಲ್ಯು-ಕಿಮ್ ವೊನ್ಹೊ ಜೋಡಿಯ ಸವಾಲು ಎದುರಾಗಲಿದೆ.
ವಿಶ್ವ ನಂ.1 ಆದ ಭಾರತೀಯ ಜೋಡಿ!
ಸೆಮಿಫೈನಲ್ ಗೆಲುವಿನೊಂದಿಗೆ ಸಾತ್ವಿಕ್-ಚಿರಾಗ್ ಜೋಡಿ ಬಿಡಬ್ಲ್ಯುಎಫ್ ಡಬಲ್ಸ್ ರ್‍ಯಾಂಕಿಂಗ್‌ನಲ್ಲಿ ಮೊತ್ತ ಮೊದಲ ಬಾರಿ ನಂ.1 ಸ್ಥಾನಕ್ಕೇರಿದೆ. ಪುರುಷರ ಡಬಲ್ಸ್‌ನಲ್ಲಿ ಈ ಸಾಧನೆ ಮಾಡಿದ ಭಾರತದ ಮೊದಲ ಜೋಡಿ ಎನ್ನುವ ದಾಖಲೆ ಬರೆದಿದೆ. ಇತ್ತೀಚೆಗಷ್ಟೇ ಜೀವನಶ್ರೇಷ್ಠ 2ನೇ ಸ್ಥಾನಕ್ಕೇರಿದ್ದ ಭಾರತದ ಜೋಡಿ ಸದ್ಯ 3ನೇ ಸ್ಥಾನದಲ್ಲಿದೆ. ಕ್ರೀಡಾಕೂಟ ಮುಕ್ತಾಯಗೊಂಡ ಬಳಿಕ ರ್‍ಯಾಂಕಿಂಗ್ ಪಟ್ಟಿ ಪರಿಷ್ಕೃತಗೊಳ್ಳಲಿದ್ದು, ಭಾರತೀಯ ಜೋಡಿಯು ನಂ.1 ಸ್ಥಾನ ಅಲಂಕರಿಸಲಿದೆ.
ಏಷ್ಯನ್ ಗೇಮ್ಸ್‌ನಲ್ಲಿ ಭಾರತ ಚೊಚ್ಚಲ 'ಶತಕ'..!
ಪ್ರಣಯ್‌ಗೆ ಕಂಚು
ಭಾರತದ ತಾರಾ ಶಟ್ಲರ್, ವಿಶ್ವ ನಂ.7 ಎಚ್.ಎಸ್.ಪ್ರಣಯ್ 1982ರ ಬಳಿಕ ಭಾರತಕ್ಕೆ ಸಿಂಗಲ್ಸ್‌ನಲ್ಲಿ ಪದಕ ತಂದುಕೊಟ್ಟಿದ್ದಾರೆ. ಫೈನಲ್‌ಗೇರಿ ಚಿನ್ನ ಗೆಲ್ಲುವ ಕನಸು ಕಂಡಿದ್ದರೂ ಗಾಯದಿಂದ ಬಳಲುತ್ತಿದ್ದ ಪ್ರಣಯ್‌ಗೆ ತಮ್ಮ ಗುರಿ ಸಾಧಿಸಲಾಗಲಿಲ್ಲ. ಸೆಮಿಫೈನಲ್‌ನಲ್ಲಿ ಅವರು ಹಾಲಿ ಆಲ್ ಇಂಗ್ಲೆಂಡ್ ಚಾಂಪಿಯನ್, ವಿಶ್ವ ನಂ.8 ಚೀನಾದ ಲೀ ಶಿ ಫೆಂಗ್ ವಿರುದ್ಧ 16-21, 9-21ರಲ್ಲಿ ಸೋಲನುಭವಿಸಿ, ಕಂಚಿನ ಪದಕಕ್ಕೆ ತೃಪ್ತಿಪಟ್ಟರು. ಪ್ರಣಯ್‌ಗೆ ಸಿಕ್ಕ ಕಂಚು ಏಷ್ಯಾಡ್‌ನಲ್ಲಿ ಭಾರತಕ್ಕೆ ಪುರುಷರ ಸಿಂಗಲ್ಸ್‌ನಲ್ಲಿ ದೊರೆತ 2ನೇ ಪದಕ. 1982ರಲ್ಲಿ ಸೈಯದ್ ಮೋದಿ ಕಂಚಿನ ಪದಕ ಜಯಿಸಿದ್ದರು.
ಆರ್ಚರಿಯಲ್ಲಿ ಮತ್ತೊಂದು ಚಿನ್ನ, ಕಂಚು!
ಆರ್ಚರಿಯ ರೀಕರ್ವ್ ಸ್ಪರ್ಧೆಯ ಯಾವುದೇ ವಿಭಾಗಗಳಲ್ಲೂ 13 ವರ್ಷಗಳಿಂದ ಪದಕ ಬರ ಎದುರಿಸುತ್ತಿದ್ದ ಭಾರತ, ಈ ಬಾರಿ 2 ಪದಕಗಳನ್ನು ತನ್ನದಾಗಿಸಿಕೊಂಡಿದೆ. ಶುಕ್ರವಾರ ಪುರುಷರ ವಿಭಾಗದಲ್ಲಿ ಬೆಳ್ಳಿ ಲಭಿಸಿದರೆ, ಮಹಿಳೆಯರ ವಿಭಾಗದಲ್ಲಿ ಕಂಚು ಭಾರತದ ಖಾತೆಗೆ ಸೇರ್ಪಡೆಗೊಂಡಿತು. ಇದರೊಂದಿಗೆ ಆರ್ಚರಿಯಲ್ಲಿ ಭಾರತಕ್ಕೆ ಈ ಬಾರಿ 5ನೇ ಪದಕ ಲಭಿಸಿತು. ಇನ್ನೂ ಕನಿಷ್ಠ 3 ಪದಕ ಖಚಿತವಾಗಿವೆ.
Asian Games 2023: ಜೈ ಹೋ ಇಂಡಿಯಾ, ಚಿನ್ನ ಗೆದ್ದ ಭಾರತಕ್ಕೆ ಪ್ಯಾರಿಸ್ ಒಲಿಂಪಿಕ್ಸ್ ಟಿಕೆಟ್ ಕನ್ಫರ್ಮ್
ಅತನು ದಾಸ್, ತುಷಾರ್ ಶೆಲ್ಕೆ ಹಾಗೂ ಧೀರಜ್ ಅವರಿದ್ದ ಪುರುಷರ ತಂಡ ಶುಕ್ರವಾರ ಫೈನಲ್‌ನಲ್ಲಿ ದಕ್ಷಿಣ ಕೊರಿಯಾ ವಿರುದ್ಧ 1-5 ಅಂತರದಲ್ಲಿ ಸೋಲನುಭವಿಸಿತು. ಇದಕ್ಕೂ ಮುನ್ನ ಕ್ವಾರ್ಟರ್‌ನಲ್ಲಿ ಮಂಗೋಲಿಯಾ, ಸೆಮೀಸ್‌ನಲ್ಲಿ ಬಾಂಗ್ಲಾದೇಶ ವಿರುದ್ಧ ಗೆದ್ದಿತ್ತು. ಇನ್ನು, ಅಂಕಿತಾ ಭಕತ್, ಸಿಮ್ರನ್‌ಜೀತ್ ಕೌರ್ ಹಾಗೂ ಭಾಜನ್ ಕೌರ್ ಅವರನ್ನೊಳಗೊಂಡ 5ನೇ ಶ್ರೇಯಾಂಕಿತ ಮಹಿಳಾ ತಂಡ ಕಂಚಿನ ಪದಕದ ಪಂದ್ಯದಲ್ಲಿ ವಿಯೆಟ್ನಾಂ ವಿರುದ್ಧ 6-2 ಅಂತರದಲ್ಲಿ ಗೆಲುವು ಸಾಧಿಸಿತು.
ಈ ಮೊದಲು ಭಾರತ 2010ರ ಏಷ್ಯಾಡ್‌ನ ರೀಕರ್ವ್ ವೈಯಕ್ತಿಕ ವಿಭಾಗದಲ್ಲಿ ಬೆಳ್ಳಿ, ಪುರುಷ ಹಾಗೂ ಮಹಿಳಾ ತಂಡ ವಿಭಾಗಗಳಲ್ಲಿ ಕಂಚು ಜಯಿಸಿತ್ತು.
