ಬ್ಯಾಂಕಾಕ್‌(ಏ.26): ಏಷ್ಯನ್‌ ಬಾಕ್ಸಿಂಗ್‌ ಚಾಂಪಿಯನ್‌ಶಿಪ್‌ನಲ್ಲಿ ಭಾರತದ 6 ಬಾಕ್ಸರ್‌ಗಳು ಫೈನಲ್‌ ಪ್ರವೇಶಿಸಿದ್ದಾರೆ. ಸೆಮಿಫೈನಲ್‌ನಲ್ಲಿ ಒಟ್ಟು 13 ಬಾಕ್ಸರ್‌ಗಳು ಸ್ಪರ್ಧಿಸಿದ್ದರು. ಈ ಪೈಕಿ 7 ಮಂದಿ ಕಂಚಿನ ಪದಕಕ್ಕೆ ತೃಪ್ತಿಪಟ್ಟಿದ್ದಾರೆ. 

ಗುರುವಾರ ನಡೆದ ಪುರುಷರ 52 ಕೆ.ಜಿ ವಿಭಾಗದ ಸೆಮೀಸ್‌ನಲ್ಲಿ ಅಮಿತ್‌ ಪಂಗಲ್‌ ಚೀನಾದ ಹು ಜಿಯಾನ್‌ಗ್ವುನ್‌ ವಿರುದ್ಧ ಗೆಲುವು ಸಾಧಿಸಿದರು. 56 ಕೆ.ಜಿ ವಿಭಾಗದಲ್ಲಿ ಕವೀಂದರ್‌ ಬಿಶ್ತ್ ಮಂಗೋಲಿಯಾದ ಅಮರ್‌ ಖಾಖು ವಿರುದ್ಧ 3-2 ಬೌಟ್‌ಗಳಲ್ಲಿ ಜಯಗಳಿಸಿದರು. ಈ ವರ್ಷ ಇವರಿಬ್ಬರು 2ನೇ ಅಂತಾರಾಷ್ಟ್ರೀಯ ಚಿನ್ನದ ಪದಕ ಗೆಲ್ಲುವತ್ತ ದಾಪುಗಾಲಿರಿಸಿದ್ದಾರೆ. ಇನ್ನು 49 ಕೆ.ಜಿ ವಿಭಾಗದಲ್ಲಿ ದೀಪಕ್‌ ಸಿಂಗ್‌, 75 ಕೆ.ಜಿ ವಿಭಾಗದಲ್ಲಿ ಆಶಿಶ್‌ ಕುಮಾರ್‌ ಪುರುಷರ ವಿಭಾಗದಲ್ಲಿ ಫೈನಲ್‌ ಪ್ರವೇಶಿಸಿದರೆ, ಮಹಿಳೆಯರ ವಿಭಾಗದಲ್ಲಿ ಪೂಜಾ ರಾಣಿ (81 ಕೆ.ಜಿ) ಹಾಗೂ ಸಿಮ್ರನ್‌ಜಿತ್‌ ಕೌರ್‌ (64 ಕೆ.ಜಿ) ಶುಕ್ರವಾರ ನಡೆಯಲಿರುವ ಚಿನ್ನದ ಪದಕದ ಸುತ್ತಿಗೆ ಪ್ರವೇಶ ಪಡೆದರು.

ಸೆಮೀಸ್‌ಗೇರುವ ಮೂಲಕ ಏಷ್ಯನ್‌ ಚಾಂಪಿಯನ್‌ಶಿಪ್‌ನಲ್ಲಿ ಸತತ 4ನೇ ಪದಕ ಖಚಿತಪಡಿಸಿಕೊಂಡಿದ್ದ ಶಿವ ಥಾಪ (60 ಕೆ.ಜಿ) ಖಜಕಸ್ತಾನದ ಜಾಕಿರ್‌ ವಿರುದ್ಧ ಸೋಲುಂಡು ಕಂಚಿನ ಪದಕ ಗಳಿಸಿದರು. ಪುರುಷರ ವಿಭಾಗದಲ್ಲಿ ಆಶಿಶ್‌ (69 ಕೆ.ಜಿ) ಹಾಗೂ ಸತೀಶ್‌ ಕುಮಾರ್‌ (+91 ಕೆ.ಜಿ), ಮಹಿಳಾ ವಿಭಾಗದಲ್ಲಿ ಮಾಜಿ ಚಾಂಪಿಯನ್‌ ಸರಿತಾ ದೇವಿ (60 ಕೆ.ಜಿ), ಮನೀಶಾ (54 ಕೆ.ಜಿ), ನಿಖತ್‌ ಜರೀನ್‌ (51 ಕೆ.ಜಿ) ಹಾಗೂ ಸೋನಿಯಾ ಚಹಲ್‌ (57 ಕೆ.ಜಿ) ಸೆಮಿಫೈನಲ್‌ ಪಂದ್ಯಗಳಲ್ಲಿ ಸೋತು ಕಂಚಿನ ಪದಕಕ್ಕೆ ತೃಪ್ತಿಪಟ್ಟರು.