ಅಬುದಾಬಿ[ಸೆ.22]: ತೀವ್ರ ರೋಚಕತೆಯಿಂದ ಕೂಡಿದ್ದ ಪಂದ್ಯದಲ್ಲಿ ಕೊನೆಗೂ ಪಾಕಿಸ್ತಾನ ತಂಡವು ಆಫ್ಘಾನಿಸ್ತಾನಕ್ಕೆ ಸೋಲಿನ ರುಚಿ ತೋರಿಸಿತು. ಏಷ್ಯಾಕಪ್’ನ ಲೀಗ್ ಹಂತದಲ್ಲಿ ಶ್ರೀಲಂಕಾ ಹಾಗೂ ಬಾಂಗ್ಲಾದೇಶ ವಿರುದ್ಧ ಸತತ ಎರಡು ಪಂದ್ಯಗಳನ್ನು ಗೆದ್ದು ಮುನ್ನುಗ್ಗುತ್ತಿದ್ದ ಆಫ್ಘಾನ್ ಕೊನೆಗೂ ನಿರಾಸೆ ಅನುಭವಿಸಿದೆ.

ಆಫ್ಘಾನಿಸ್ತಾನ ನೀಡಿದ್ದ 258 ರನ್’ಗಳ ಸವಾಲಿನ ಗುರಿ ಬೆನ್ನತ್ತಿದ್ದ ಪಾಕ್ ಆರಂಭದಲ್ಲೇ ಫಖರ್ ಜಮಾನ್ ವಿಕೆಟ್ ಕಳೆದುಕೊಂಡಿತು. ಆದರೆ ಆಬಳಿಕ ಎರಡನೇ ವಿಕೆಟ್’ಗೆ ಜತೆಯಾದ ಇಮಾಮ್ ಉಲ್ ಹಕ್ ಹಾಗೂ ಬಾಬರ್ ಅಜಂ ಜೋಡಿ 154 ರನ್’ಗಳ ಜತೆಯಾಟವಾಡುವ ಮೂಲಕ ತಂಡಕ್ಕೆ ಆಸರೆಯಾಯಿತು. ಇಮಾಮ್ 80 ರನ್ ಸಿಡಿಸಿದರೆ, ಬಾಬರ್ 66 ರನ್ ಬಾರಿಸಿ ವಿಕೆಟ್ ಒಪ್ಪಿಸಿದರು.
ಈ ಜೋಡಿ ಬೇರ್ಪಡುತ್ತಿದ್ದಂತೆ ಸಂಕಷ್ಟಕ್ಕೆ ಸಿಲುಕಿದಂತೆ ಕಂಡುಬಂದ ಪಾಕಿಸ್ತಾನಕ್ಕೆ ಅನುಭವಿ ಬ್ಯಾಟ್ಸ್’ಮನ್ ಶೋಯೆಬ್ ಮಲ್ಲಿಕ್ ಆಸರೆಯಾದರು. ಒಂದೆಡೆ ನಿರಂತರ ವಿಕೆಟ್ ಬೀಳುತ್ತಿದ್ದರೂ ಮತ್ತೊಂದೆಡೆ ದಿಟ್ಟ ಬ್ಯಾಟಿಂಗ್ ಪ್ರದರ್ಶನ ನೀಡಿದ ಮಲ್ಲಿಕ್ ಭರ್ಜರಿ ಅರ್ಧಶತಕ ಸಿಡಿಸುವುದರೊಂದಿಗೆ ಇನ್ನು ಮೂರು ಎಸೆತಗಳು ಬಾಕಿಯಿರುವಂತೆಯೇ ಪಾಕಿಸ್ತಾನಕ್ಕೆ ಗೆಲುವಿನ ಉಡುಗೊರೆ ನೀಡಿದರು.

ಇದಕ್ಕೂ ಮೊದಲು ಟಾಸ್ ಗೆದ್ದು ಬ್ಯಾಟಿಂಗ್ ಮಾಡಿದ ಆಫ್ಘಾನಿಸ್ತಾನದ ಆರಂಭ ಅಷ್ಟೇನು ಉತ್ತಮವಾಗಿರಲಿಲ್ಲ. ಮೊದಲ ಹತ್ತು ಓವರ್’ಗಳಲ್ಲಿ ಆರಂಭಿಕ ಬ್ಯಾಟ್ಸ್’ಮನ್’ಗಳಿಬ್ಬರು ಪೆವಿಲಿಯನ್ ಸೇರಿದ್ದರು. ಮಧ್ಯಮ ಕ್ರಮಾಂಕದಲ್ಲಿ ನೆಲಕಚ್ಚಿ ಆಡಿದ ಹಿಸ್ಮತುಲ್ಲಾ ಹಾಗೂ ಆಸ್ಗರ್ ತಂಡವನ್ನು ಗೌರವಾನ್ವಿತ ಮೊತ್ತದತ್ತ ಕೊಂಡ್ಯೊಯ್ದರು. ಒಟ್ಟು 5 ಸಿಕ್ಸರ್ ಸಿಡಿಸುವ ಮೂಲಕ ಪ್ರೇಕ್ಷಕರನ್ನು ರಂಜಿಸಿದ ಅಸ್ಗರ್ ಸುಮಾರು 21 ಇನ್ನಿಂಗ್ಸ್’ಗಳ ಬಳಿಕ ಅರ್ಧಶತಕ ಪೂರೈಸಿದರು. ಇನ್ನೊಂದೆಡೆ ಉತ್ತಮ ಫಾರ್ಮ್’ನಲ್ಲಿರುವ ಹಿಸ್ಮತುಲ್ಲಾ ಕೇವಲ ಮೂರು ರನ್’ಗಳಿಂದ ಶತಕ ವಂಚಿತರಾದರೂ ಅಜೇಯರಾಗುಳಿದರು. 

ಸಂಕ್ಷಿಪ್ತ ಸ್ಕೋರ್:

ಆಫ್ಘಾನಿಸ್ತಾನ: 257/6
ಹಿಸ್ಮತುಲ್ಲಾ: 97*
ನವಾಜ್: 57/3

ಪಾಕಿಸ್ತಾನ: 258/7
ಇಮಾಮ್ ಉಲ್ ಹಕ್: 80
ರಶೀದ್ : 46/3