ದುಬೈ[ಸೆ.27]: ಆಫ್ಘಾನಿಸ್ತಾನ ವಿರುದ್ಧ ಏಷ್ಯಾಕಪ್ ಪಂದ್ಯದಲ್ಲಿ ಅಂಪೈರ್‌ಗಳ ಕೆಟ್ಟ ನಿರ್ಣಯಗಳನ್ನು ಭಾರತ ತಂಡದ ನಾಯಕತ್ವ ವಹಿಸಿದ್ದ ಎಂ.ಎಸ್.ಧೋನಿ ಪರೋಕ್ಷವಾಗಿ ಟೀಕಿಸಿದ್ದಾರೆ. 

ಇದನ್ನು ಓದಿ: ಭಾರತ-ಅಫ್ಘಾನ್ ಪಂದ್ಯ ಟೈ-ಧೋನಿ ನಾಯಕತ್ವಕ್ಕೆ ಸಿಗಲಿಲ್ಲ ಗೆಲುವು!

ಪ್ರಶಸ್ತಿ ಸಮಾರಂಭದ ವೇಳೆ ಮಾತನಾಡಿದ ಧೋನಿ, ‘ಕೆಲ ವಿಚಾರಗಳ ಬಗ್ಗೆ ಮಾತನಾಡುವಂತಿಲ್ಲ. ಯಾಕೆಂದರೆ ನನಗೆ ದಂಡ ಹಾಕಿಸಿಕೊಳ್ಳಲು ಇಷ್ಟವಿಲ್ಲ’ ಎಂದರು. ಧೋನಿ ಹಾಗೂ ದಿನೇಶ್ ಕಾರ್ತಿಕ್ ವಿರುದ್ಧ ಮೈದಾನದಲ್ಲಿದ್ದ ಅಂಪೈರ್‌ಗಳಾದ ವಿಂಡೀಸ್‌ನ ಗ್ರೆಗೊರಿ ಬ್ರಾಥ್‌ವೇಟ್ ಹಾಗೂ ಬಾಂಗ್ಲಾ ದೇಶದ ಅನಿಸುರ್ ರಹಮಾನ್ ಕಳಪೆ ನಿರ್ಣಯ ನೀಡಿದ್ದರು. ಇಬ್ಬರೂ ಎಲ್‌ಬಿ ಬಲೆಗೆ ಬಿದ್ದು ಮೈದಾನ ತೊರೆದಿದ್ದರು. ಆದರೆ ಟೀವಿ ರೀಪ್ಲೇಗಳು ಧೋನಿ ಹಾಗೂ ಕಾರ್ತಿಕ್ ಇಬ್ಬರೂ ಔಟಾದ ಎಸೆತ, ಲೆಂಗ್ ಸ್ಟಂಪ್‌ನಿಂದ ಆಚೆ ಹೋಗುತ್ತಿದ್ದನ್ನು ದೃಢಪಡಿಸಿದವು. ಅಂಪೈರ್’ಗಳ ಕೆಟ್ಟ ತೀರ್ಪು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಟೀಕೆಗೂ ಗುರಿಯಾಗಿತ್ತು.

ಇದನ್ನು ಓದಿ: ಬೌಲಿಂಗ್ ಮಾಡ್ತಿಯೋ? ಇಲ್ಲಾ ಬೌಲರ್ ಚೇಂಜ್ ಮಾಡ್ಲಾ? ಗರಂ ಆದ ಧೋನಿ!

ಏಷ್ಯಾಕಪ್ ಟೂರ್ನಿಯಲ್ಲಿ ಡಿಆರ್’ಎಸ್ ಬಳಕೆಗೆ ಅವಕಾಶವಿದೆಯಾದರೂ, ಆರಂಭಿಕ ಬ್ಯಾಟ್ಸ್’ಮನ್ ಕೆ.ಎಲ್ ರಾಹುಲ್ ಡಿಆರ್’ಎಸ್ ಹಾಳು ಮಾಡಿಕೊಂಡಿದ್ದರು. ಸೂಪರ್ 4 ಹಂತದಲ್ಲಿನ ಭಾರತ-ಆಫ್ಘಾನ್ ನಡುವಿನ ಪಂದ್ಯ ರೋಚಕ ಟೈನಲ್ಲಿ ಅಂತ್ಯವಾಗಿತ್ತು. ರೋಹಿತ್ ಅನುಪಸ್ಥಿತಿಯಲ್ಲಿ ಸುಮಾರು ಎರಡು ವರ್ಷಗಳ ಬಳಿಕ ಧೋನಿ 200ನೇ ಬಾರಿಗೆ ಅಂತರಾಷ್ಟ್ರೀಯ ಪಂದ್ಯವೊಂದರಲ್ಲಿ ತಂಡವನ್ನು ಮುನ್ನಡೆಸಿದ್ದರು.