ಟೀಂ ಇಂಡಿಯಾ ಮಾಜಿ ನಾಯಕ ಎಂ ಎಸ್ ಧೋನಿ, ಕೂಲ್ ಕ್ಯಾಪ್ಟನ್ ಎಂದೇ ಗುರುತಿಸಿಕೊಂಡವರು. ಆದರೆ ಧೋನಿ ಹಲವು ಬಾರಿ ಮೈದಾನದಲ್ಲಿ ತಾಳ್ಮೆ ಕಳೆದುಕೊಂಡ ಉದಾಹರಣೆಗಳಿವೆ. ಇದೀಗ ಧೋನಿ ಎರಡನೇ ಬಾರಿಗೆ ಯುವ ಬೌಲರ್ ವಿರುದ್ಧ ಕಿಡಿ ಕಾರಿದ್ದಾರೆ. ಧೋನಿ ಹಾಗೂ ಬೌಲರ್ ನಡುವಿನ ಸಂಭಾಷಣೆ ವೀಡಿಯೋ ಇಲ್ಲಿದೆ.
ದುಬೈ(ಸೆ.26): ಏಷ್ಯಾಕಪ್ ಟೂರ್ನಿಯ ಅಫ್ಘಾನಿಸ್ತಾನ ವಿರುದ್ಧದ ಪಂದ್ಯದಲ್ಲಿ ಟೀಂ ಇಂಡಿಯಾ ನಾಯಕನಾಗಿ ಕಮ್‌ಬ್ಯಾಕ್ ಮಾಡಿದ ಧೋನಿಗೆ ಗೆಲುವು ಸಿಗಲಿಲ್ಲ. ಪಂದ್ಯ ರೋಚಕ ಟೈನಲ್ಲಿ ಅಂತ್ಯಗೊಂಡಿತ್ತು. ಆದರೆ ಈ ಪಂದ್ಯದ ವೇಳೆ ನಾಯಕ ಧೋನಿ ಗರಂ ಆಗಿರೋದು ಇದೀಗ ವೈರಲ್ ಆಗಿದೆ.
ಎಂ.ಎಸ್ ಧೋನಿ ಹಾಗೂ ಯುವ ಸ್ಪಿನ್ನರ್ ಕುಲ್ದೀಪ್ ಯಾದವ್ ಕೆಮೆಸ್ಟ್ರಿ ಪ್ರತಿ ಬಾರಿ ಸುದ್ದಿಯಾಗುತ್ತಿದೆ. ಕಳೆದ ಬಾರಿ ಕುಲ್ದೀಪ್ ಯಾದವ್ ವಿರುದ್ಧ ಗರಂ ಆಗಿದ್ದ ಧೋನಿ, ಇದೀಗ ಎರಡನೇ ಬಾರಿ ಕಿಡಿ ಕಾರಿದ್ದಾರೆ.
ಧೋನಿ ಕುಲ್ದೀಪ್‌ಗಾಗಿ ಫೀಲ್ಡಿಂಗ್ ಸೆಟ್ ಮಾಡಿ ಬೌಲಿಂಗ್ ಮಾಡಲು ಸೂಚಿಸಿದರು. ಬೌಲಿಂಗ್ ಮಾಡಲು ಮುಂದಾದ ಕುಲ್ದೀಪ್ ಫೀಲ್ಡಿಂಗ್ ಚೇಂಜ್ ಮಾಡಲು ಧೋನಿಗೆ ಹೇಳಿದ್ದಾರೆ. ಈ ವೇಳೆ ಧೋನಿ ಬೌಲಿಂಗ್ ಮಾಡ್ತಿಯಾ? ಇಲ್ಲಾ ಬೌಲರ್ ಚೇಂಜ್ ಬದಲಾಯಿಸಬೇಕಾ? ಎಂದು ಧೋನಿ ಗರಂ ಆಗಿದ್ದಾರೆ.
ಧೋನಿ ಹಾಗೂ ಕುಲ್ದೀಪ್ ನಡುವಿನ ಈ ಸಂಭಾಷಣೆ ಇದೀಗ ವೈರಲ್ ಆಗಿದೆ. ಧೋನಿ ಗರಂ ಆಗಿರೋದನ್ನ ಅರಿತ ಕುಲ್ದೀಪ್ ಮರುಮಾತನಾಡದೇ ಬೌಲಿಂಗ್ ಮಾಡಿದರು. ಕುಲ್ದೀಪ್ ವಿರುದ್ಧ ಧೋನಿ ಗರಂ ಆಗುತ್ತಿರುವುದು ಇದೇ ಮೊದಲಲ್ಲ.
2017ರ ಡಿಸೆಂಬರ್‌ರಲ್ಲಿ ಇಂಧೋರ್‌ನಲ್ಲಿ ನಡೆದ ಶ್ರೀಲಂಕಾ ವಿರುದ್ದದ ಪಂದ್ಯದಲ್ಲಿ ಲಂಕಾ ತಂಡ ನಿರಾಯಾಸವಾಗಿ ರನ್ ಗಳಿಸುತ್ತಿತ್ತು. ಕುಲದೀಪ್ ಯಾದವ್ ಬೌಲಿಂಗ್ ಮಾಡಲು ಬಂದಾಗ, ಧೋನಿ ಕವರ್ ಫೀಲ್ಡರ್ ತೆಗೆದು ಪಾಯಿಂಟ್‌ನಲ್ಲಿ ಫೀಲ್ಡರ್ ಹಾಕುವಂತೆ ಕುಲದೀಪ್‌ಗೆ ಸೂಚಿಸಿದ್ದಾರೆ. ಆದರೆ ಕುಲದೀಪ್ ಪರವಾಗಿಲ್ಲ ಸದ್ಯ ಇರೋ ಹಾಗೇ ಇರಲಿ ಎಂದಿದ್ದಾರೆ.
ಇದನ್ನು ಓದಿ: ನನಗೆ ತಲೆಕೆಟ್ಟಿದೆಯಾ ಎಂದು ಸ್ಟಾರ್ ಬೌಲರ್ ಮೇಲೆ ಎಂ ಎಸ್ ಧೋನಿ ಹರಿಹಾಯ್ದಿದ್ದೇಕೆ?
ಅಷ್ಟರಲ್ಲೇ ಧೋನಿ ಗರಂ ಆಗಿದ್ದಾರೆ. ನನಗೆ ತಲೆಕೆಟ್ಟಿದೆಯಾ? 300 ಪಂದ್ಯ ಸುಮ್ಮನೆ ಆಡಿದ್ದೇನಾ ಎಂದು ಕುಲದೀಪ್ ಯಾದವ್ ವಿರುದ್ದ ಹರಿಹಾಯ್ದಿದ್ದಾರೆ. ಅಷ್ಟರಲ್ಲೇ ಕುಲದೀಪ್ ಬೆಚ್ಚಿ ಬಿದ್ದು ಫೀಲ್ಡಿಂಗ್ ಚೇಂಜ್ ಮಾಡಿದರು. ಇಷ್ಟೇ ಅಲ್ಲ ಮರು ಎಸೆತದಲ್ಲೇ ವಿಕೆಟ್ ಪಡೆದರು. ಇದೀಗ ಕುಲ್ದೀಪ್ ಎರಡನೇ ಬಾರಿಗೆ ಧೋನಿಯಿಂದ ಮಂಗಳಾರತಿ ಮಾಡಿಸಿಕೊಂಡಿದ್ದಾರೆ.
