ದುಬೈ[ಸೆ.22] ಅನುಚಿತವಾಗಿ ವರ್ತಿಸಿ ಕ್ರೀಡಾಸ್ಪೂರ್ತಿಗೆ ಧಕ್ಕೆತಂದ ಪಾಕಿಸ್ತಾನದ ವೇಗದ ಬೌಲರ್ ಹಸನ್ ಅಲಿ, ಆಫ್ಘಾನಿಸ್ತಾನದ ಸ್ಟಾರ್ ಬೌಲರ್ ರಶೀದ್ ಖಾನ್ ಹಾಗೂ ನಾಯಕ ಅಸ್ಗರ್ ಆಫ್ಘಾನ್ ಅವರಿಗೆ ಐಸಿಸಿ ಪಂದ್ಯದ ಸಂಭಾವನೆಯ ಶೇ.15ರಷ್ಟು ದಂಡ ವಿಧಿಸಿದೆ. ಜತೆಗೆ ಐಸಿಸಿ ನೀತಿ ಸಂಹಿತೆಯ 1ನೆ ಲೆವೆಲ್ ಉಲ್ಲಂಘಿಸಿದ್ದಕ್ಕಾಗಿ ತಲಾ ಒಂದೊಂದು ಡಿಮೆರಿಟ್ ಅಂಕವನ್ನು ಪಡೆದುಕೊಂಡಿದ್ದಾರೆ.

ಹಸನ್ ಅಲಿ ಹಾಗೂ ಅಸ್ಗರ್ ಐಸಿಸಿ ನೀತಿ ಸಂಹಿತೆಯ ಆರ್ಟಿಕಲ್ 2.1.1[ಕ್ರೀಡಾ ಸ್ಫೂರ್ತಿಗೆ ಧಕ್ಕೆ]ಅನ್ನು ಉಲ್ಲಂಘಿಸಿದ್ದರೆ, ರಶೀದ್ ಆರ್ಟಿಕಲ್ 2.1.7[ಅಸಭ್ಯ ಭಾಷೆ, ಎದುರಾಳಿ ಬ್ಯಾಟ್ಸ್’ಮನ್’ನನ್ನು ಕೆರಳಿಸುವಂತ ವರ್ತನೆ] ಉಲ್ಲಂಘಿಸಿದ್ದಾರೆ. ಹಸನ್ ಅಲಿ ಹಾಗೂ ರಶೀದ್ ಖಾನ್ ಇದೇ ಮೊದಲ ಬಾರಿಗೆ ಡಿಮೆರಿಟ್ ಅಂಕ ಪಡೆದರೆ, ಅಸ್ಗರ್ 24 ತಿಂಗಳಲ್ಲಿ ಎರಡನೇ ಬಾರಿಗೆ ಋಣಾತ್ಮಕ ಅಂಕ ಪಡೆದಿದ್ದಾರೆ.
ಹಸನ್ ಅಲಿ ತಮ್ಮದೇ ಬೌಲಿಂಗ್’ನಲ್ಲಿ ಶಾಹಿದಿ ಕಡೆ ಥ್ರೋ ಮಾಡಿ ಐಸಿಸಿ ಕೆಂಗಣ್ಣಿಗೆ ಗುರಿಯಾದರೆ, ಆಫ್ಘಾನ್ ನಾಯಕ ಅಸ್ಗರ್ ಪಂದ್ಯದ 37ನೇ ಓವರ್’ನಲ್ಲಿ ಹಸನ್’ಗೆ ಡಿಕ್ಕಿ ಹೊಡೆದು ದಂಡ ಹಾಕಿಸಿಕೊಂಡಿದ್ದಾರೆ.

ರಶೀದ್ ಮಾಡಿದ್ದೇನು..?

ಇನ್ನು ಆಫ್ಘಾನ್ ಸ್ಟಾರ್ ಸ್ಪಿನ್ನರ್ ರಶೀದ್ ಪಾಕಿಸ್ತಾನದ ಆಸಿಫ್ ಅಲಿ ವಿಕೆಟ್ ಕಬಳಿಸಿದ ಬಳಿಕ ಆತನನ್ನೇ ದುರುಗುಟ್ಟಿ ನೋಡುತ್ತಾ ವಿಚಿತ್ರ ವಿದಾಯದ ಪ್ರದರ್ಶನ ತೋರಿ ಐಸಿಸಿಯಿಂದ ಬರೆ ಎಳೆಸಿಕೊಂಡಿದ್ದಾರೆ.