Asianet Suvarna News Asianet Suvarna News

ಏಷ್ಯಾಕಪ್: ಮತ್ತೆ ಪಾಕ್ ಬಗ್ಗು ಬಡಿಯಲು ರೆಡಿಯಾದ ಟೀಂ ಇಂಡಿಯಾ

ಲೀಗ್ ಹಂತದಲ್ಲಿ 8 ವಿಕೆಟ್‌ಗಳಿಂದ ಪಾಕಿಸ್ತಾನವನ್ನು ಬಗ್ಗು ಬಡಿದಿದ್ದ ಭಾರತ, ಇಂದು ನಡೆಯಲಿರುವ ಸೂಪರ್ 4 ಹಂತದ ಪಂದ್ಯದಲ್ಲೂ ಇದೇ ಪ್ರದರ್ಶನ ನೀಡುವ ವಿಶ್ವಾಸದಲ್ಲಿದೆ. ಈಗಾಗಲೇ ಸೂಪರ್ 4 ಹಂತದ ಮೊದಲ ಪಂದ್ಯದಲ್ಲಿ ಬಾಂಗ್ಲಾದೇಶ ವಿರುದ್ಧ 7 ವಿಕೆಟ್‌ಗಳ ಭರ್ಜರಿ ಜಯ ಸಾಧಿಸಿರುವ ರೋಹಿತ್ ಶರ್ಮಾ ಪಡೆ, ಇಂದಿನ ಪಂದ್ಯದಲ್ಲಿ ಪಾಕಿಸ್ತಾನವನ್ನು ಮಣಿಸಿದರೆ ಫೈನಲ್ ಪ್ರವೇಶ ಖಚಿತವಾಗಲಿದೆ.

Asia Cup Cricket 2018 Fancied India wary of unpredictable Pakistan
Author
Dubai - United Arab Emirates, First Published Sep 23, 2018, 10:51 AM IST

ದುಬೈ[ಸೆ.23]: ಯುಎಇಯಲ್ಲಿ ನಡೆಯುತ್ತಿರುವ ಏಷ್ಯಾ ಕಪ್ ಕ್ರಿಕೆಟ್ ಪಂದ್ಯಾವಳಿ ಮತ್ತೊಂದು ಹೈವೋಲ್ಟೆಜ್ ಪಂದ್ಯಕ್ಕೆ ಸಾಕ್ಷಿಯಾಗಲಿದ್ದು, ಸಾಂಪ್ರದಾಯಿಕ ಬದ್ಧವೈರಿಗಳಾದ ಭಾರತ ಮತ್ತು ಪಾಕಿಸ್ತಾನ ಟೂರ್ನಿಯಲ್ಲಿ ಮತ್ತೊಮ್ಮೆ ಮುಖಾಮುಖಿ ಆಗಲಿವೆ.

ಲೀಗ್ ಹಂತದಲ್ಲಿ 8 ವಿಕೆಟ್‌ಗಳಿಂದ ಪಾಕಿಸ್ತಾನವನ್ನು ಬಗ್ಗು ಬಡಿದಿದ್ದ ಭಾರತ, ಇಂದು ನಡೆಯಲಿರುವ ಸೂಪರ್ 4 ಹಂತದ ಪಂದ್ಯದಲ್ಲೂ ಇದೇ ಪ್ರದರ್ಶನ ನೀಡುವ ವಿಶ್ವಾಸದಲ್ಲಿದೆ. ಈಗಾಗಲೇ ಸೂಪರ್ 4 ಹಂತದ ಮೊದಲ ಪಂದ್ಯದಲ್ಲಿ ಬಾಂಗ್ಲಾದೇಶ ವಿರುದ್ಧ 7 ವಿಕೆಟ್‌ಗಳ ಭರ್ಜರಿ ಜಯ ಸಾಧಿಸಿರುವ ರೋಹಿತ್ ಶರ್ಮಾ ಪಡೆ, ಇಂದಿನ ಪಂದ್ಯದಲ್ಲಿ ಪಾಕಿಸ್ತಾನವನ್ನು ಮಣಿಸಿದರೆ ಫೈನಲ್ ಪ್ರವೇಶ ಖಚಿತವಾಗಲಿದೆ.

ಪಂದ್ಯಾವಳಿಯ ಮೊದಲ ಪಂದ್ಯದಲ್ಲಿ ಹಾಂಕಾಂಗ್ ವಿರುದ್ಧ ಒಂದು ರೀತಿಯಲ್ಲಿ ಪ್ರಯಾಸದ ಜಯ ಸಾಧಿಸಿದ್ದ ಭಾರತ, ಬಳಿಕ ಪಾಕ್ ವಿರುದ್ಧ ಅದ್ಭುತ ಪ್ರದರ್ಶನ ನೀಡಿತ್ತು. ಇನ್ನು 21 ಓವರ್‌ಗಳು ಬಾಕಿ ಇರುವಂತೆ ಗೆಲುವಿನ ನಗೆ ಬೀರಿತ್ತು. ಕಾಯಂ ನಾಯಕ ವಿರಾಟ್ ಕೊಹ್ಲಿ ಅನುಪಸ್ಥಿತಿಯಲ್ಲಿ ಟೀಂ ಇಂಡಿಯಾ ಬ್ಯಾಟ್ಸ್‌ಮನ್‌ಗಳು ಆಕರ್ಷಕ ಬ್ಯಾಟಿಂಗ್ ನಡೆಸುತ್ತಿದ್ದು, ತಂಡದ ಶಕ್ತಿಯನ್ನು ಇಮ್ಮಡಿಗೊಳಿಸಿದೆ.

ಭಾರತ ತಂಡವನ್ನು ಮುನ್ನಡೆಸುತ್ತಿರುವ ಆರಂಭಿಕ ಆಟಗಾರ ರೋಹಿತ್ ಶರ್ಮಾ, ಹಾಂಕಾಂಗ್ ವಿರುದ್ಧದ ಪಂದ್ಯದಲ್ಲಿ ವಿಫಲರಾಗಿದ್ದರೂ ಪಾಕಿಸ್ತಾನ ಹಾಗೂ ಬಾಂಗ್ಲಾದೇಶ ವಿರುದ್ಧ ಉತ್ತಮ ಪ್ರದರ್ಶನ ನೀಡಿದ್ದರು. ಇಂಗ್ಲೆಂಡ್ ಪ್ರವಾಸದಲ್ಲಿ ಬ್ಯಾಟಿಂಗ್ ಲಯಕ್ಕಾಗಿ ಪರದಾಡಿದ್ದ ಶಿಖರ್ ಧವನ್ ಪ್ರಸ್ತುತ ಸರಣಿಯಲ್ಲಿ ಅದ್ಭುತ ಲಯದಲ್ಲಿದ್ದು, ಎದುರಾಳಿ ಬೌಲರ್‌ಗಳ ಬೆವರಿಳಿಸುತ್ತಿದ್ದಾರೆ. ಮಧ್ಯಮ ಕ್ರಮಾಂಕದಲ್ಲಿ ಅಂಬಟಿ ರಾಯುಡು, ದಿನೇಶ್ ಸಿಕ್ಕ ಅವಕಾಶಗಳನ್ನು ಎರಡು ಕೈಗಳಿಂದ ಬಾಚಿಕೊಂಡಿದ್ದು, ಸ್ಥಿರ ಪ್ರದರ್ಶನ ನೀಡುತ್ತಿದ್ದಾರೆ. ಧೋನಿ ಎಂದಿನಂತೆ ಸಮಯಕ್ಕೆ ತಕ್ಕಂತೆ ಆಟವಾಡುತ್ತಿದ್ದು, ತಂಡಕ್ಕೆ ಆಸರೆಯಾಗಿದ್ದಾರೆ.

ಇನ್ನು ವರ್ಷದ ಬಳಿಕ ಏಕದಿನ ತಂಡಕ್ಕೆ ಮರಳಿರುವ ರವೀಂದ್ರ ಜಡೇಜಾ, ಶುಕ್ರವಾರ ಬಾಂಗ್ಲಾ ವಿರುದ್ಧ ನಡೆದ ಪಂದ್ಯದಲ್ಲಿ 4 ವಿಕೆಟ್ ಉರುಳಿಸುವ ಮೂಲಕ ತಮ್ಮ ಸಾಮರ್ಥ್ಯ ಏನೆಂಬುದನ್ನು ಸಾಬೀತು ಪಡಿಸಿದ್ದಾರೆ. ಅಲ್ಲದೇ ಜಡೇಜಾ ಯಾವುದೇ ಕ್ಷಣದಲ್ಲೂ ಸಿಡಿಯುವ ಸಾಮರ್ಥ್ಯವಿದ್ದು, ಅವರ ಬ್ಯಾಟ್‌ನಿಂದಲೂ ಅತ್ಯುತ್ತಮ ರನ್ ನಿರೀಕ್ಷಿಸಬಹುದಾಗಿದೆ. ಉತ್ತಮ ಫಾರ್ಮ್‌ನಲ್ಲಿರುವ ಜಡೇಜಾ, ಪಾಕ್‌ಗೆ ಕಂಟಕರಾಗುವುದರಲ್ಲಿ ಎರಡು ಮಾತಿಲ್ಲ. ಇದರ ಜತೆಗೆ ಭುವನೇಶ್ವರ್ ಕುಮಾರ್, ಜಸ್‌ಪ್ರೀತ್ ಬುಮ್ರಾ ಅತ್ಯುತ್ತಮ ಲಯದಲ್ಲಿ ಬೌಲ್ ಮಾಡುತ್ತಿದ್ದು, ತಂಡದ ಪ್ರಮುಖ ಅಸ್ತ್ರಗಳಾಗಿದ್ದಾರೆ. ಇದರ ಜತೆ ಸ್ಪಿನ್ನರ್
ಗಳಾದ ಯಜುವೇಂದ್ರ ಚಹಲ್ ಹಾಗೂ ಕುಲ್ದೀಪ್ ಯಾದವ್ ತಂಡದ ಬೌಲಿಂಗ್‌ಗೆ ಹೆಚ್ಚಿನ ಬಲ ತುಂಬಿದ್ದಾರೆ. ಕೇದಾರ್ ಜಾಧವ್ ಬೌಲಿಂಗ್‌ನಲ್ಲಿ ಮಿಂಚುತ್ತಿರುವುದು ತಂಡದ ಪ್ಲಸ್ ಪಾಯಿಂಟ್ ಆಗಿದೆ.

ಪಾಕ್‌ಗೆ ಸೇಡು ತೀರಿಸಿಕೊಳ್ಳುವ ಕಾತರ: ಇನ್ನೊಂದೆಡೆ ಭಾರತವನ್ನು ಮಣಿಸುವ ಮೂಲಕ ಸೇಡು ತೀರಿಸಿಕೊಳ್ಳುವ ಲೆಕ್ಕಾಚಾರದಲ್ಲಿ ಪಾಕಿಸ್ತಾನ ಇದೆ. ಸೂಪರ್ 4 ಹಂತದ ಮೊದಲ ಪಂದ್ಯದಲ್ಲಿ ಆಫ್ಘನ್ ವಿರುದ್ಧ ಪ್ರಯಾಸದ ಜಯ ಸಾಧಿಸಿರುವ ಪಾಕ್‌ಗೆ ಇದು ಮಹತ್ವದ ಪಂದ್ಯವಾಗಿದ್ದು, ಫೈನಲ್ ಸ್ಥಾನ ಖಚಿತ ಪಡಿಸಿಕೊಳ್ಳುವ ಹವಣಿಕೆಯಲ್ಲಿದೆ. ಆಲ್ರೌಂಡರ್ ಶೋಯಿಬ್ ಮಲಿಕ್ ಪಾಕಿಸ್ತಾನದ ಆಧಾರಸ್ತಂಭವಾಗಿದ್ದು, ತಂಡ ಬಹುವಾಗಿ ಅವರನ್ನೇ ನೆಚ್ಚಿಕೊಂಡಿದೆ. ಆಫ್ಘನ್ ವಿರುದ್ಧದ ಪಂದ್ಯದಲ್ಲಿ ಕೊನೆ ಓವರ್’ನಲ್ಲಿ ಬೌಂಡರಿ, ಸಿಕ್ಸರ್ ಸಿಡಿಸುವ ಮೂಲಕ ತಂಡವನ್ನು ಗೆಲುವಿನ ದಡ ಸೇರಿಸುವಲ್ಲಿ ಮಲಿಕ್ ಯಶಸ್ವಿಯಾಗಿದ್ದರು. ಆರಂಭಿಕ ಫಖರ್ ಜಮಾನ್ ಜತೆ ಬಾಬರ್ ಆಜಂ, ಇಮಾಮ್ ಉಲ್ ಹಕ್ ತಮ್ಮ ಜವಾಬ್ದಾರಿ ಅರಿತು ಆಡಬೇಕಿದೆ. ಬೌಲರ್’ಗಳು ಉತ್ತಮ ದಾಳಿ ಸಂಘಟಿಸುವಲ್ಲಿ ವಿಫಲರಾಗಿದ್ದು ಪಾಕ್’ಗೆ ಬಿಸಿ ತುಪ್ಪವಾಗಿ ಪರಿಣಮಿಸಿದೆ.

ಬಾಂಗ್ಲಾಗೆ ಆಫ್ಘನ್ ಸವಾಲು

ಅಬುಧಾಬಿ: ಏಷ್ಯಾಕಪ್ ಸೂಪರ್ 4 ಹಂತದ ಮತ್ತೊಂದು ಪಂದ್ಯದಲ್ಲಿ ಬಾಂಗ್ಲಾದೇಶ ಹಾಗೂ ಆಫ್ಘಾನಿಸ್ತಾನ ಭಾನುವಾರ ಸೆಣಸಾಟ ನಡೆಸಲಿವೆ. ಉಭಯ ತಂಡಗಳು ಸೂಪರ್ 4 ಹಂತದ ಮೊದಲ ಪಂದ್ಯದಲ್ಲಿ ಸೋಲುಂಡಿವೆ. ಭಾರತ ವಿರುದ್ಧ ಬಾಂಗ್ಲಾದೇಶ ಸೋಲುಂಡಿದ್ದರೆ, ಆಫ್ಘನ್ ತಂಡ ಪಾಕಿಸ್ತಾನ ವಿರುದ್ಧ ವಿರೋಚಿತ ಸೋಲುಂಡಿತ್ತು. ಈ ಹಿನ್ನೆಲೆಯಲ್ಲಿ ಮುಂದಿನ ಹಂತಕ್ಕೇರಲು ಉಭಯ ತಂಡಗಳಿಗೆ ಇದು ಮಹತ್ವದ ಪಂದ್ಯವಾಗಿದೆ. ಲೀಗ್ ಹಂತದಲ್ಲಿ ಬಾಂಗ್ಲಾ ವಿರುದ್ಧ ಆಫ್ಘನ್ ತಂಡ ಜಯಭೇರಿ ಸಾಧಿಸಿತ್ತು. 

Follow Us:
Download App:
  • android
  • ios