ದುಬೈ(ಸೆ.18): ಭಾರತ ಹಾಗೂ ಪಾಕಿಸ್ತಾನ ನಡುವಿನ ಏಷ್ಯಾಕಪ್ ಹೋರಾಟ ಇನ್ನು ಕೆಲ ಹೊತ್ತಲ್ಲೇ ಆರಂಭಗೊಳ್ಳಲಿದೆ. ಸಾಂಪ್ರಾದಯಿಕ ಎದುರಾಳಿಗ ಹೋರಾಟದಲ್ಲಿ ಉಭಯ ತಂಡಗಳು ಕೂಡ ಸೋಲನ್ನ ಸಹಿಸಲ್ಲ. ಅಭಿಮಾನಿಗಳಿಗಂತೂ ಪ್ರತಿಷ್ಠೆಯ ಹೋರಾಟ.  ಈ ಹೈವೋಲ್ಟೇಜ್ ಪಂದ್ಯದಲ್ಲಿ ಗೆಲುವಿನ ಸಿಹಿ ಯಾರಿಗೆ ಅನ್ನೋ ಚರ್ಚೆ ಶುರುವಾಗಿದೆ.

ಏಷ್ಯಾಕಪ್ ಟೂರ್ನಿಯಲ್ಲಿ ಭಾರತ ಹಾಗೂ ಪಾಕಿಸ್ತಾನ ತಂಡಗಳ ಹೋರಾಟದಲ್ಲಿನ ಅಂಕಿಅಂಶಗಳು ಭಾರತದ ಪರವಾಗಿದೆ. ಆದರೆ ಹಾಂಕಾಂಗ್ ವಿರುದ್ದ ಟೀಂ ಇಂಡಿಯಾದ ಪ್ರದರ್ಶನ ಆತಂಕಕ್ಕೆ ಕಾರಣವಾಗಿದೆ. 

ಏಷ್ಯಾಕಪ್ ಟೂರ್ನಿಯಲ್ಲಿ ಭಾರತ ಹಾಗೂ ಪಾಕಿಸ್ತಾನ 12 ಬಾರಿ ಮುಖಾಮುಖಿಯಾಗಿದೆ. ಭಾರತ 6ರಲ್ಲಿ ಗೆಲುವು ಸಾಧಿಸಿದರೆ, ಪಾಕಿಸ್ತಾನ 5 ಪಂದ್ಯದಲ್ಲಿ ಗೆಲುವು ಸಾಧಿಸಿದೆ. ಇನ್ನೊಂದು ಪಂದ್ಯ ಫಲಿತಾಂಶ ಕಾಣದೇ ರದ್ದಾಗಿದೆ.

ಏಷ್ಯಾಕಪ್ ಟೂರ್ನಿಯಲ್ಲಿ ಭಾರತವೇ ಅತ್ಯಂತ ಯಶಸ್ವಿ ತಂಡ. ಟೀಂ ಇಂಡಿಯಾ ಇದುವರೆಗೆ 6 ಬಾರಿ ಏಷ್ಯಾಕಪ್ ಚಾಂಪಿಯನ್ ಆಗಿ ಮೆರೆದಾಡಿದೆ. ಸದ್ಯ ಭಾರತ ಹಾಲಿ ಚಾಂಪಿಯನ್. ಎದುರಾಳಿ ಪಾಕಿಸ್ತಾನ 2 ಬಾರಿ ಚಾಂಪಿಯನ್ಸ್ ಟ್ರೋಫಿ ಗೆದ್ದುಕೊಂಡಿದೆ.

ಭಾರತ ಹಾಗೂ ಪಾಕಿಸ್ತಾನ ನಡುವಿನ 12 ಪಂದ್ಯದಲ್ಲಿ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಗರಿಷ್ಠ ರನ್ ಗೆಟರ್ ಆಗಿ ಹೊರಹೊಮ್ಮಿದ್ದಾರೆ. ಕೊಹ್ಲಿ 2 ಸೆಂಚುರಿ ಸೇರಿದಂತೆ 459 ರನ್ ಸಿಡಿಸಿದ್ದಾರೆ. ಆದರೆ ಈ ಬಾರಿಯ ಏಷ್ಯಾಕಪ್ ಟೂರ್ನಿಯಿಂದ ಕೊಹ್ಲಿಗೆ ವಿಶ್ರಾಂತಿ ನೀಡಲಾಗಿದೆ.

ಪಾಕಿಸ್ತಾನಪರ ಮೊಹಮ್ಮದ್ ಹಫೀಜ್ ಗರಿಷ್ಠ ಸ್ಕೋರ್ ಗಳಿಸಿದ್ದಾರೆ. ಹಫೀಜ್ ಭಾರತ-ಪಾಕ್ ಏಷ್ಯಾಕಪ್ ಹೋರಾಟದಲ್ಲಿ ಒಟ್ಟು 437 ರನ್ ಸಿಡಿಸಿದ್ದಾರೆ. ಆದರೆ ಈ ಬಾರಿಯಾ ಏಷ್ಯಾಕಪ್ ಟೂರ್ನಿಗೆ ಹಫೀಜ್ ಆಯ್ಕೆಯಾಗಿಲ್ಲ.

ಪಾಕಿಸ್ತಾನ ವಿರುದ್ದದ ಏಷ್ಯಾಕಪ್ ಟೂರ್ನಿಯಲ್ಲಿ ಭಾರತದ ಪರ ಗರಿಷ್ಠ ವಿಕೆಟ್ ಕಬಳಿಸಿದ ಹೆಗ್ಗಳಿಕೆಗೆ ಭುವನೇಶ್ವರ್ ಕುಮಾರ್ ಪಾತ್ರರಾಗಿದ್ದಾರೆ. ಭುವಿ 7 ಪಂದ್ಯಗಳಿಂದ  11 ವಿಕೆಟ್ ಉರುಳಿಸಿದ್ದಾರೆ. ಪಾಕಿಸ್ತಾನ ಪರ ಸ್ಪಿನ್ನರ್ ಸಯೀದ್ ಅಜ್ಮಲ್ 9 ಪಂದ್ಯಗಳಿಂದ 20 ವಿಕೆಟ್ ಉರುಳಿಸಿದ್ದಾರೆ.

ಅಂಕಿ ಅಂಶಗಳು ಭಾರತಕ್ಕೆ ವರವಾಗಿದೆ.  ಬಲಿಷ್ಠ ಪಾಕಿಸ್ತಾನದ ಬೌಲಿಂಗ್ ಹಾಗೂ ಬ್ಯಾಟಿಂಗ್ ಸವಾಲು ಎದುರಿಸಲು ಟೀಂ ಇಂಡಿಯಾ ಕೂಡ ಸಜ್ಜಾಗಿದೆ. ಆದರೆ ಹಾಂಕಾಂಗ್ ವಿರುದ್ದ ಪಾಕಿಸ್ತಾನ ಸುಲಭ ಗೆಲುವು ಸಾಧಿಸಿ ಆತ್ಮವಿಶ್ವಾಸ ಹೆಚ್ಚಿಸಿಕೊಂಡಿದ್ದರೆ, ಇತ್ತ ಭಾರತ ಹಾಂಕಾಂಗ್ ವಿರುದ್ಧ ಪ್ರಯಾಸದ ಗೆಲುವು ಸಾಧಿಸಿ ಆತಂಕಕ್ಕೆ ಒಳಗಾಗಿದೆ.