ದುಬೈ[ಸೆ.18] ಕಳೆದ ಕೆಲ ವರ್ಷಗಳಿಂದ ಎಂ.ಎಸ್.ಧೋನಿಯ ಬ್ಯಾಟಿಂಗ್ ಸಾಮರ್ಥ್ಯದ ಬಗ್ಗೆ ಪ್ರಶ್ನೆಗಳು ಹುಟ್ಟಿಕೊಂಡಿವೆ. 2019ರ ವಿಶ್ವಕಪ್ ವರೆಗೂ ತಂಡದಲ್ಲಿ ಮುಂದುವರಿಯಲು ಇಚ್ಛಿಸಿರುವ ಧೋನಿಯ ಸಾಮರ್ಥ್ಯ ಎಷ್ಟಿದೆ ಎನ್ನುವುದು ಈ ಟೂರ್ನಿಯಲ್ಲಿ ತಿಳಿಯಲಿದೆ. ಜತೆಗೆ ಅವರ ಬ್ಯಾಟಿಂಗ್ ಕ್ರಮಾಂಕದ ಬಗ್ಗೆ ಇರುವ ಗೊಂದಲಕ್ಕೂ ಉತ್ತರ ಹುಡುಕಲು ತಂಡದ ಆಡಳಿತ ಎದುರು ನೋಡುತ್ತಿದೆ. ಧೋನಿ 5, 6 ಇಲ್ಲವೇ 7ನೇ ಕ್ರಮಾಂಕದಲ್ಲಿ ಬ್ಯಾಟ್ ಮಾಡಲಿದ್ದಾರಾ? ಎನ್ನುವುದು ಪಾಕಿಸ್ತಾನ ವಿರುದ್ಧ ಪಂದ್ಯಕ್ಕೂ ಮುನ್ನ ಕುತೂಹಲ ಮೂಡಿಸಿದೆ. ಬ್ಯಾಟಿಂಗ್‌ನಲ್ಲಿ ಧೋನಿ ಕೊಡುಗೆ ತಂಡಕ್ಕೆ ಅಗತ್ಯವಿದ್ದು, ಪಂದ್ಯದ ಗತಿ ಬದಲಿಸಬಲ್ಲಬಹುದಾಗಿದೆ.

ಧೋನಿ ಒಂದೊಮ್ಮೆ 7ನೇ ಕ್ರಮಾಂಕದಲ್ಲಿ ಕ್ರೀಸ್ ಗಿಳಿದರೆ ಮೊಹಮದ್ ಆಮೀರ್, ಉಸ್ಮಾನ್ ಖಾನ್, ಹಸನ್ ಅಲಿಯಂತಹ ಅಪಾಯಕಾರಿ ವೇಗಿಗಳನ್ನು ಎದುರಿಸಬೇಕಾಗುತ್ತದೆ. ಜಾಧವ್ ಇಲ್ಲವೇ ಮನೀಶ್ ಪಾಂಡೆ 5ನೇ ಕ್ರಮಾಂಕದಲ್ಲಿ ಆಡಿ, ಹಾರ್ದಿಕ್‌ಗೆ 7ನೇ ಕ್ರಮಾಂಕ ನೀಡಿದರೆ ಧೋನಿಗೆ 6ನೇ ಕ್ರಮಾಂಕ ಸಿಗಲಿದೆ. ತಂಡದ ಹಿತದೃಷ್ಟಿಯಿಂದ ಇದು ಉತ್ತಮ ಎನಿಸಿದರೂ, ಧೋನಿಯ ಇತ್ತೀಚಿನ ಲಯದ ಆಧಾರದ ಮೇಲೆ ಹೇಳುವುದಾದರೆ ಅವರು 4ನೇ ಕ್ರಮಾಂಕದಲ್ಲಿ ಆಡಿದರೆ ಹೆಚ್ಚು ಸೂಕ್ತ.

4, 6ನೇ ಕ್ರಮಾಂಕಕ್ಕಾಗಿ ಹುಡುಕಾಟ:
ಭಾರತ ಮಧ್ಯಮ ಕ್ರಮಾಂಕದ ಸಮಸ್ಯೆ ಎದುರಿಸುತ್ತಿದೆ ಎನ್ನುವುದನ್ನು ಒಪ್ಪಿಕೊಂಡಿರುವ ಭಾರತ ತಂಡದ ನಾಯಕ ರೋಹಿತ್ ಶರ್ಮಾ, ಏಷ್ಯಾಕಪ್‌ನಲ್ಲಿ 4ನೇ ಹಾಗೂ 6ನೇ ಕ್ರಮಾಂಕಕ್ಕೆ ಸೂಕ್ತ ಬ್ಯಾಟ್ಸ್‌ಮನ್‌ಗಳನ್ನು ಹುಡುಕುವುದು ತಂಡದ ಮುಖ್ಯ ಗುರಿ ಎಂದಿದ್ದಾರೆ. ಮನೀಶ್ ಪಾಂಡೆ, ಕೇದಾರ್ ಜಾಧವ್, ಅಂಬಟಿ ರಾಯುಡು ಸೇರಿ ಇನ್ನೂ ಕೆಲವರ ನಡುವೆ ಸ್ಪರ್ಧೆ ಇದೆ ಎಂದು ರೋಹಿತ್ ಸುಳಿವು ನೀಡಿದ್ದಾರೆ.