ದುಬೈ(ಸೆ.18): ಏಷ್ಯಾಕಪ್ ಟೂರ್ನಿಯ ಹಾಂಕಾಂಗ್ ವಿರುದ್ಧದ ಪಂದ್ಯದಲ್ಲಿ ಟೀಂ ಇಂಡಿಯಾ ಪ್ರಯಾಸದ ಗೆಲುವು ಸಾಧಿಸಿದೆ.  ಈ ಮೂಲಕ ಟೂರ್ನಿಯಲ್ಲಿ ರೋಹಿತ್ ಶರ್ಮಾ ಸೈನ್ಯ ಶುಭಾರಂಭ ಮಾಡಿದರೂ, ಪಾಕಿಸ್ತಾನ ವಿರುದ್ಧದ ಪಂದ್ಯ ಮತ್ತಷ್ಟು ಕಠಿಣವಾಗಲಿದೆ.

ಭಾರತ ವಿರುದ್ಧ ಗೆಲುವಿಗೆ 286 ರನ್ ಟಾರ್ಗೆಟ್ ಪಡೆದ ಹಾಂಕಾಂಗ್ ತಂಡಕ್ಕೆ ನಿಜಾಕತ್ ಖಾನ್ ಹಾಗೂ ಅಂಶುಮಾನ್ ರಾತ್ 174 ರನ್ ಜೊತೆಯಾಟ ನೀಡಿದರು. ಇದು ಟೆಸ್ಟ್ ಮಾನ್ಯತೆ ಪಡೆದ ದೇಶದ ವಿರುದ್ಧ ಹಾಂಕಾಂಗ್ ನೀಡಿದ ಗರಿಷ್ಠ ಜೊತೆಯಾಟ ಅನ್ನೋ ಹೆಗ್ಗಳಿಕೆಗೂ ಪಾತ್ರವಾಯಿತು.

ಆರಂಭಿಕರ ವಿಕೆಟ್‌ಗಾಗಿ ಟೀಂ ಇಂಡಿಯಾ ಪರದಾಡಿತು. ಒಂದು ಹಂತದಲ್ಲಿ ಹಾಂಕಾಂಗ್ ಸಂಪೂರ್ಣವಾಗಿ ಮೇಲುಗೈ ಸಾಧಿಸಿತ್ತು. ಇಷ್ಟೇ ಅಲ್ಲ ಟೀಂ ಇಂಡಿಯಾ ಸೋಲಿನ ಸುಳಿಗೆ ಸಿಲುಕಿತ್ತು. ಆದರೆ ಅಂಶುಮಾನ್ 73 ರನ್ ಸಿಡಿಸಿ ಔಟಾದರೆ, ನಿಜಾಕತ್ 92 ರನ್ ಸಿಡಿಸಿ 8 ರನ್‌ಗಳಿಂದ ಶತಕ ವಂಚಿತರಾದರು. 

ಆರಂಭಿಕರ ವಿಕೆಟ್ ಪತನದ ಬಳಿಕ ಹಾಂಕಾಂಗ್ ಕುಸಿತ ಕಂಡಿತು. ಕ್ರಿಸ್ಟೋಪರ್ ಕಾರ್ಟರ್ 3 ರನ್ ಸಿಡಿಸಿ ಔಟಾದರು. 2 ಸಿಕ್ಸರ್ ಸಿಡಿಸಿ ಗುಡುಗಿದ ಬಾಬರ್ ಹಯಾತ್ 18 ರನ್ ಸಿಡಿಸಿ ಔಟಾದರು. ಕಿಂಚಿತ್ ಶಾ 17 ರನ್ ಕಾಣಿಕೆ ನೀಡಿದರು. ಐಜಾಜ್ ಖಾನ್ ಶೂನ್ಯ ಸುತ್ತಿದರು.