ದುಬೈ(ಸೆ.16): ಪ್ರತಿಷ್ಠಿತ ಏಷ್ಯಾಕಪ್ ಟೂರ್ನಿ 2ನೇ ದಿನಕ್ಕೆ ಕಾಲಿಟ್ಟಿದೆ. ಮೊದಲ ದಿನ ಶ್ರೀಲಂಕಾ ಕಂಡಕ್ಕೆ ಬಾಂಗ್ಲಾದೇಶ ಶಾಕ್ ನೀಡಿತ್ತು. ಇದೀಗ ಎಲ್ಲರ ಚಿತ್ತ ಭಾರತ ಹಾಗೂ ಪಾಕಿಸ್ತಾನ ಪಂದ್ಯದ ಮೇಲೆ ನೆಟ್ಟಿದೆ.

ಚಾಂಪಿಯನ್ಸ್ ಟ್ರೋಫಿ ಫೈನಲ್ ಪಂದ್ಯದ ಸೋಲಿಗೆ ಸೇಡು ತೀರಿಸಿಕೊಳ್ಳಲು ಇತ್ತ ಟೀಂ ಇಂಡಿಯಾ ಕೂಡ ಸಜ್ಜಾಗಿದೆ. ಆದರೆ ಪಾಕಿಸ್ತಾನ ತಂಡದ ಐವರು ಆಟಗಾರರು ರೋಹಿತ್ ಶರ್ಮಾ ಸೈನ್ಯಕ್ಕೆ ನಿಜಕ್ಕು ಸಂಕಷ್ಟ ತಂದೊಡ್ಡಲಿದ್ದಾರೆ.

ಫಕರ್ ಜಮಾನ್:
2017ರ ಚಾಂಪಿಯನ್ಸ್ ಟ್ರೋಫಿ ಫೈನಲ್ ಪಂದ್ಯದಲ್ಲಿ ಭರ್ಜರಿ ಶತಕ ಸಿಡಿಸಿ ಟೀಂ ಇಂಡಿಯಾದ ಲೆಕ್ಕಾಚಾರ ಬುಡಮೇಲು ಮಾಡಿದ ಫಕರ್ ಜಮಾನ್ ಇದೀಗ ಏಷ್ಯಾಕಪ್ ಟೂರ್ನಿಯಲ್ಲಿ ಕಾಡಲಿದ್ದಾರೆ. ಅತ್ಯುತ್ತಮ ಫಾರ್ಮ್‌ನಲ್ಲಿರುವ ಫಕಾರ್ ಈಗಾಗಲೇ ಏಕದಿನ ಕ್ರಿಕೆಟ್‌ನಲ್ಲಿ ದ್ವಿಶತಕ ಸಿಡಿಸಿ ದಾಖಲೆ ಬರೆದಿದ್ದಾರೆ.

ಇಮಾಮ್-ಉಲ್-ಹಕ್:
ಪಾಕಿಸ್ತಾನ ಮಾಜಿ ನಾಯಕ ಇಮ್ಜಾಮ್ ಉಲ್ ಹಕ್ ಸಂಬಂಧಿಯಾಗಿರುವ ಇಮಾಮ್ ಉಲ್ ಹಕ್ 9 ಏಕದಿನ ಇನ್ನಿಂಗ್ಸ್‌ಗಳಲ್ಲಿ ಈಗಾಗಲೇ 4 ಶತಕ ಸಿಡಿಸಿದ್ದಾರೆ. ಫಕರ್ ಜಮಾನ್ ಹಾಗೂ ಇಮಾಮ್ ಜೊತೆಯಾಟ ಪಾಕಿಸ್ತಾನ ತಂಡದ ಪ್ರಮುಖ ಶಕ್ತಿ . 

ಬಾಬರ್ ಅಜಮ್:
ಪಾಕಿಸ್ತಾನ ತಂಡದ ಸ್ಫೋಟಕ ಬ್ಯಾಟ್ಸ್‌ಮನ್ ಬಾಬರ್ ಅಜಮ್, ಈಗಾಗಲೇ ದುಬೈನಲ್ಲಿ 11 ಏಕದಿನ ಇನ್ನಿಂಗ್ಸ್‌ಗಳಿಂದ 5 ಶತಕ ಸಿಡಿಸಿ ಮಿಂಚಿದ್ದಾರೆ. ಪಾಕ್ ತಂಡದ ಬ್ಯಾಟಿಂಗ್ ಬೆನ್ನೆಲುಬಾಗಿರುವ ಬಾಬರ್ ಫಾರ್ಮ್ ಮುಂದುವರಿಸಿದರೆ, ಭಾರತಕ್ಕೆ ಅಪಾಯ ತಪ್ಪಿದ್ದಲ್ಲ.

ಶದಬ್ ಖಾನ್:
ಪಾಕಿಸ್ತಾನ ತಂಡದ ಪ್ರಮುಖ ಶಕ್ತಿ ಬೌಲಿಂಗ್. ವೇಗಿಗಳ ಜೊತೆಗೆ ಸ್ಪಿನ್ ಕೂಡ ಪ್ರಮುಖ ಪಾತ್ರ ನಿರ್ವಹಿಸುತ್ತಿದೆ.  ಯುವ ಸ್ಪಿನ್ನರ್ ಶದಬ್ ಖಾನ್ ಭಾರತಕ್ಕೆ ಕಂಟಕವಾಗಲಿದ್ದಾರೆ. ಅನನುಭವಿ ಟೀಂ ಇಂಡಿಯಾ ಬ್ಯಾಟಿಂಗ್ ವಿಭಾಗ, ಪಾಕ್ ಸ್ಪಿನ್ ದಾಳಿ ಎದುರಿಸಬೇಕಿದೆ.

ಹಸನ್ ಆಲಿ:
ಪಾಕಿಸ್ತಾನ ತಂಡ ತನ್ನ ವೇಗದ ಬೌಲಿಂಗ್‌ನಿಂದಲೇ ಪಂದ್ಯದಲ್ಲಿ ಮೇಲುಗೈ ಸಾಧಿಸುತ್ತೆ. ಸದ್ಯ ಪಾಕ್ ತಂಡದಲ್ಲಿ ಮೊಹಮ್ಮದ್ ಅಮೀರ್, ಹಸನ್ ಆಲಿ ಸೇರಿದಂತೆ ಬಲಿಷ್ಠ ವೇಗಿಗಳ ತಂಡವಿದೆ. ಹೀಗಾಗಿ ಟೀಂ ಇಂಡಿಯಾ ಈ ಐವರು ಆಟಗಾರರಿಂದ ಅಗ್ನಿಪರೀಕ್ಷೆ ಎದುರಿಸಲಿದೆ.