ಮೊಹಾಲಿ[ಮಾ.10]: ಪೀಟರ್ ಹ್ಯಾಂಡ್ಸ್’ಕಂಬ್ ಆಕರ್ಷಕ ಶತಕ ಹಾಗೂ ಆಸ್ಟನ್ ಟರ್ನರ್ ಅವರ ಸಿಡಿಲಬ್ಬರದ ಬ್ಯಾಟಿಂಗ್ ನೆರವಿನಿಂದ ಆಸ್ಟ್ರೇಲಿಯಾ 4 ವಿಕೆಟ್’ಗಳ ಭರ್ಜರಿ ಜಯ ಸಾಧಿಸಿದೆ. ಈ ಮೂಲಕ 5 ಪಂದ್ಯಗಳ ಸರಣಿಯಲ್ಲಿ 2-2ರ ಸಮಬಲ ಸಾಧಿಸಿ ಸರಣಿಯನ್ನು ಜೀವಂತವಾಗಿರಿಸಿಕೊಂಡಿದೆ. ಕಳಪೆ ಕ್ಷೇತ್ರರಕ್ಷಣೆಗೆ ಆತಿಥೇಯರು ಕೊನೆಗೂ ಬೆಲೆ ತೆತ್ತಂತಾಯಿತು. ಕೇವಲ 43 ಎಸೆತಗಳಲ್ಲಿ 84 ರನ್ ಸಿಡಿಸಿದ ಆಸ್ಟನ್ ಟರ್ನರ್ ಆಸಿಸ್ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದರು.

ಭಾರತ ನೀಡಿದ್ದ ಕಠಿಣ ಗುರಿ ಬೆನ್ನತ್ತಿದ ಆಸ್ಟ್ರೇಲಿಯಾ ಆರಂಭದಲ್ಲೇ ಮುಗ್ಗರಿಸಿತು. ತಂಡದ ಮೊತ್ತ 12 ರನ್’ಗಳಾಗುವಷ್ಟರಲ್ಲಿ 2 ಪ್ರಮುಖ ವಿಕೆಟ್ ಕಳೆದುಕೊಂಡು ಆರಂಭಿಕ ಆಘಾತ ಅನುಭವಿಸಿತು. ಈ ವೇಳೆ ಮೂರನೇ ವಿಕೆಟ್’ಗೆ ಜತೆಯಾದ ಉಸ್ಮಾನ್ ಖವಾಜ-ಪೀಟರ್ ಹ್ಯಾಂಡ್ಸ್’ಕಂಬ್ ಜೋಡಿ 192 ರನ್’ಗಳ ಜತೆಯಾಟವಾಡುವ ಮೂಲಕ ತಂಡಕ್ಕೆ ಆಸರೆಯಾಯಿತು. ಈ ಜೋಡಿ ಭಾರತೀಯ ಬೌಲರ್’ಗಳನ್ನು ಇನ್ನಿಲ್ಲದಂತೆ ಕಾಡಿತು. ಖವಾಜ 99 ಎಸೆತಗಳಲ್ಲಿ 91 ರನ್ ಬಾರಿಸಿ ಕುಲ್ದೀಪ್ ಬೌಲಿಂಗ್’ನಲ್ಲಿ ವಿಕೆಟ್ ಒಪ್ಪಿಸಿದರು. ಇದಾದ ಕೆಲಹೊತ್ತಿನಲ್ಲೇ ಮ್ಯಾಕ್ಸ್’ವೆಲ್ ವಿಕೆಟ್ ಪಡೆದ ಕುಲ್ದೀಪ್ ಭಾರತಕ್ಕೆ ಗೆಲುವಿನ ಆಸೆ ಮೂಡಿಸಿದರು. ಕೆಲವೇ ಹೊತ್ತಿನಲ್ಲಿ ಚೊಚ್ಚಲ ಶತಕ ಸಿಡಿಸಿ ಮುನ್ನುಗ್ಗುತ್ತಿದ್ದ ಪೀಟರ್ ಹ್ಯಾಂಡ್ಸ್’ಕಂಬ್ ಕೂಡಾ ಪೆವಿಲಿಯನ್ ಸೇರಿದರು. ಹ್ಯಾಂಡ್ಸ್’ಕಂಬ್ ಕೇವಲ 105 ಎಸೆತಗಳಲ್ಲಿ 8 ಬೌಂಡರಿ ಹಾಗೂ 3 ಸಿಕ್ಸರ್ ಸಹಿತ 117 ರನ್ ಬಾರಿಸಿ ಚಹಲ್’ಗೆ ವಿಕೆಟ್ ಒಪ್ಪಿಸಿದರು.

ಅಬ್ಬರಿಸಿದ ಟರ್ನರ್: ಕೊನೆಯ 10 ಓವರ್’ಗಳಲ್ಲಿ ಆಸ್ಟ್ರೇಲಿಯಾ ಗೆಲ್ಲಲು 98 ರನ್’ಗಳ ಅವಶ್ಯಕತೆಯಿತ್ತು. ಈ ವೇಳೆ ಅಬ್ಬರದ ಬ್ಯಾಟಿಂಗ್ ನಡೆಸಿದ ಆಸ್ಟನ್ ಟರ್ನರ್ ಭಾರತೀಯ ಬೌಲರ್’ಗಳನ್ನು ಮನಬಂದಂತೆ ದಂಡಿಸಿದರು. ಕೇವಲ 43 ಎಸೆತಗಳಲ್ಲಿ 5 ಬೌಂಡರಿ ಹಾಗೂ 6 ಸಿಕ್ಸರ್’ಗಳ ನೆರವಿನಿಂದ 84 ರನ್ ಸಿಡಿಸಿ ಆಸಿಸ್ ತಂಡವನ್ನು ಗೆಲುವಿನ ದಡ ಸೇರಿಸಿದರು.

ಧವನ್ ಸಿಡಿಲಬ್ಬರದ ಶತಕ: ಆಸಿಸ್’ಗೆ ಕಠಿಣ ಗುರಿ ನೀಡಿದ ಟೀಂ ಇಂಡಿಯಾ

ಇದಕ್ಕೂ ಮೊದಲು ಶಿಖರ್ ಧವನ್ ಶತಕ ಹಾಗೂ ರೋಹಿತ್ ಶರ್ಮಾ 95 ಆಕರ್ಷಕ ಅರ್ಧಶತಕದ ನೆರವಿನಿಂದ ಭಾರತ 358 ರನ್ ಬಾರಿಸಿತ್ತು.  

ಸಂಕ್ಷಿಪ್ತ ಸ್ಕೋರ್:

ಭಾರತ: 358/9

ಧವನ್: 143

ಆಸ್ಟ್ರೇಲಿಯಾ: 359/6

ಹ್ಯಾಂಡ್ಸ್’ಕಂಬ್: 117