ಸುಮಾರು ಎರಡು ವರ್ಷಗಳ ಬಳಿಕ ಇಶಾನ್ ಕಿಶನ್ ಭಾರತ ತಂಡಕ್ಕೆ ಮರಳಿದ್ದು, ನ್ಯೂಜಿಲೆಂಡ್ ವಿರುದ್ಧದ ಮೊದಲ ಟಿ20 ಪಂದ್ಯದಲ್ಲಿ ಆಡಲಿದ್ದಾರೆ ಎಂದು ನಾಯಕ ಸೂರ್ಯಕುಮಾರ್ ಯಾದವ್ ಖಚಿತಪಡಿಸಿದ್ದಾರೆ. ಗಾಯಗೊಂಡಿರುವ ತಿಲಕ್ ವರ್ಮಾ ಬದಲಿಗೆ ಮೂರನೇ ಕ್ರಮಾಂಕದಲ್ಲಿ ಇಶಾನ್ ಕಿಶನ್ ಬ್ಯಾಟಿಂಗ್ ಮಾಡಲಿದ್ದಾರೆ.

ನಾಗ್ಪುರ: ಸುಮಾರು ಎರಡು ವರ್ಷಗಳ ಕಾಲ ಭಾರತ ತಂಡದಿಂದ ಹೊರಗಿದ್ದ ಇಶಾನ್ ಕಿಶನ್ ಅವರ ಭರ್ಜರಿ ವಾಪಸಾತಿಗೆ ನಾಗ್ಪುರ ಸಾಕ್ಷಿಯಾಗಲಿದೆ. ನ್ಯೂಜಿಲೆಂಡ್ ವಿರುದ್ಧದ ಜನವರಿ 21ರಂದು ನಡೆಯಲಿರುವ ಮೊದಲ ಟಿ20 ಪಂದ್ಯದಲ್ಲಿ ಇಶಾನ್ ಆಡಲಿದ್ದಾರೆ ಎಂದು ನಾಯಕ ಸೂರ್ಯಕುಮಾರ್ ಯಾದವ್ ಖಚಿತಪಡಿಸಿದ್ದಾರೆ. ಸೈಯದ್ ಮುಷ್ತಾಕ್ ಅಲಿ ಟ್ರೋಫಿಯಲ್ಲಿ ಜಾರ್ಖಂಡ್ ತಂಡವನ್ನು ಚಾಂಪಿಯನ್ ಪಟ್ಟಕ್ಕೇರಿಸಿದ ಉತ್ತಮ ಪ್ರದರ್ಶನವೇ ಇಶಾನ್‌ಗೆ ಮತ್ತೆ ಭಾರತ ತಂಡದ ಬಾಗಿಲು ತೆರೆದಿದೆ. ಉಪನಾಯಕ ಶುಭಮನ್ ಗಿಲ್ ಅವರನ್ನು ಕೈಬಿಟ್ಟು ವಿಶ್ವಕಪ್ ತಂಡಕ್ಕೆ ಇಶಾನ್ ಕಿಶನ್ ಅವರನ್ನು ಆಯ್ಕೆ ಮಾಡಿದ್ದು ದೊಡ್ಡ ಚರ್ಚೆಗೆ ಕಾರಣವಾಗಿತ್ತು.

ಇಶಾನ್ ಕಿಶನ್ ಮೂರನೇ ಕ್ರಮಾಂಕದಲ್ಲಿ ಮೈದಾನಕ್ಕಿಳಿಯೋದು ಕನ್ಫರ್ಮ್

ಗಾಯಗೊಂಡಿರುವ ತಿಲಕ್ ವರ್ಮಾ ಬದಲಿಗೆ ಇಶಾನ್ ಕಿಶನ್ ಮೂರನೇ ಕ್ರಮಾಂಕದಲ್ಲಿ ಬ್ಯಾಟಿಂಗ್‌ಗೆ ಇಳಿಯಲಿದ್ದಾರೆ. ಶ್ರೇಯಸ್ ಅಯ್ಯರ್ ಅವರನ್ನು ಹಿಂದಿಕ್ಕಿ ಇಶಾನ್‌ಗೆ ಈ ಅವಕಾಶ ಸಿಕ್ಕಿದೆ. ಕಳೆದ 22 ಇನ್ನಿಂಗ್ಸ್‌ಗಳಲ್ಲಿ ಒಂದೇ ಒಂದು ಅರ್ಧಶತಕವನ್ನೂ ಗಳಿಸಲು ಸಾಧ್ಯವಾಗದ ನಾಯಕ ಸೂರ್ಯಕುಮಾರ್ ಯಾದವ್, ತಮ್ಮ ಬ್ಯಾಟಿಂಗ್ ಕ್ರಮಾಂಕದಲ್ಲಿ ಯಾವುದೇ ಬದಲಾವಣೆ ಮಾಡುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ವಿಶೇಷ ಸಂದರ್ಭಗಳಲ್ಲಿ ಮಾತ್ರ ಅವರು ಮೂರನೇ ಕ್ರಮಾಂಕಕ್ಕೆ ಬರಲಿದ್ದಾರೆ.

ಭಾರತ ಮತ್ತು ಶ್ರೀಲಂಕಾದಲ್ಲಿ ನಡೆಯಲಿರುವ ಟಿ20 ವಿಶ್ವಕಪ್‌ಗೆ ಮುಂಚಿನ ಅಂತಿಮ ಹಂತದ ಸಿದ್ಧತೆ ಈ ನ್ಯೂಜಿಲೆಂಡ್ ವಿರುದ್ಧದ ಐದು ಪಂದ್ಯಗಳ ಸರಣಿಯಾಗಿದೆ. "ಇಶಾನ್ ನಾಳೆ ಮೂರನೇ ಕ್ರಮಾಂಕದಲ್ಲಿ ಆಡಲಿದ್ದಾರೆ. ವಿಶ್ವಕಪ್ ತಂಡಕ್ಕೆ ನಾವು ಮೊದಲು ಆಯ್ಕೆ ಮಾಡಿದ್ದು ಅವರನ್ನೇ, ಹಾಗಾಗಿ ಅವರಿಗೆ ಅವಕಾಶ ನೀಡುವುದು ನ್ಯಾಯ," ಎಂದು ಸೂರ್ಯಕುಮಾರ್ ಯಾದವ್ ನಾಗ್ಪುರದಲ್ಲಿ ಮಾಧ್ಯಮಗಳಿಗೆ ತಿಳಿಸಿದರು. 2023ರ ನವೆಂಬರ್ ನಂತರ ಇದೇ ಮೊದಲ ಬಾರಿಗೆ ಇಶಾನ್ ಕಿಶನ್ ನೀಲಿ ಜೆರ್ಸಿಯಲ್ಲಿ ಭಾರತ ಪರ ಕಣಕ್ಕಿಳಿಯುತ್ತಿದ್ದಾರೆ.

Scroll to load tweet…

ಸಂಜು ಸ್ಯಾಮ್ಸನ್ ಮೊದಲ ಆಯ್ಕೆಯ ವಿಕೆಟ್ ಕೀಪರ್

ಇನ್ನು ಮೊದಲ ಆಯ್ಕೆಯ ವಿಕೆಟ್ ಕೀಪರ್ ಬ್ಯಾಟರ್ ಆಗಿ ಸಂಜು ಸ್ಯಾಮ್ಸನ್ ಕಣಕ್ಕಿಳಿಯುವುದು ಬಹುತೇಕ ಖಚಿತ ಎನಿಸಿದ್ದು, ಅಭಿಷೇಕ್ ಶರ್ಮಾ ಜತೆ ಓಪನ್ನರ್ ಆಗಿ ಇನ್ನಿಂಗ್ಸ್ ಆರಂಭಿಸಲಿದ್ದಾರೆ. ಇನ್ನು ನಾಲ್ಕನೇ ಕ್ರಮಾಂಕದಲ್ಲಿ ಸೂರ್ಯಕುಮಾರ್ ಯಾದವ್, ಐದನೇ ಕ್ರಮಾಂಕದಲ್ಲಿ ಹಾರ್ದಿಕ್ ಪಾಂಡ್ಯ ಹಾಗೂ ಆರನೇ ಕ್ರಮಾಂಕದಲ್ಲಿ ಶಿವಂ ದುಬೆ ಕಾಣಿಸಿಕೊಳ್ಳಲಿದ್ದಾರೆ. ಇದರ ಜತೆಗೆ ಅಕ್ಷರ್ ಪಟೇಲ್, ಹರ್ಷಿತ್ ರಾಣಾ, ಜಸ್ಪ್ರೀತ್ ಬುಮ್ರಾ, ವರುಣ್ ಚಕ್ರವರ್ತಿ ಹಾಗೂ ಅರ್ಶದೀಪ್ ಸಿಂಗ್ ಆಡುವ ಹನ್ನೊಂದರ ಬಳಗದಲ್ಲಿ ಸ್ಥಾನ ಪಡೆಯುವ ಸಾಧ್ಯತೆ ದಟ್ಟವಾಗಿದೆ.

ಮುಂಬರುವ ಫೆಬ್ರವರಿ 07ರಿಂದ ಆರಂಭವಾಗಲಿರುವ ಪ್ರತಿಷ್ಠಿತ ಐಸಿಸಿ ಟಿ20 ವಿಶ್ವಕಪ್ ಟೂರ್ನಿಗೂ ಮುನ್ನ ಭಾರತ ತಂಡವು ಆಡಲಿರುವ ಕೊನೆಯ ಸರಣಿ ಇದಾಗಿದ್ದು, ಈ ಸೀರಿಸ್ ಅನ್ನು ಅಭ್ಯಾಸಕ್ಕಾಗಿ ಬಳಸಿಕೊಳ್ಳಲಿದೆ. ಇದರ ಜತೆಗೆ ಸೂರ್ಯಕುಮಾರ್ ಯಾದವ್ ಪಡೆ ಕೆಲವು ಪ್ರಯೋಗಳಿಗೆ ಕೈಹಾಕಿದರೂ ಅಚ್ಚರಿಯೇನಿಲ್ಲ.

ನ್ಯೂಜಿಲೆಂಡ್ ಎದುರಿನ ಮೊದಲ ಟಿ20 ಪಂದ್ಯಕ್ಕೆ ಭಾರತ ಸಂಭಾವ್ಯ ತಂಡ ಹೀಗಿದೆ:

ಅಭಿಷೇಕ್ ಶರ್ಮಾ, ಸಂಜು ಸ್ಯಾಮ್ಸನ್, ಇಶಾನ್ ಕಿಶನ್, ಸೂರ್ಯಕುಮಾರ್ ಯಾದವ್(ನಾಯಕ), ಹಾರ್ದಿಕ್ ಪಾಂಡ್ಯ, ಶಿವಂ ದುಬೆ, ಅಕ್ಷರ್ ಪಟೇಲ್, ಹರ್ಷಿತ್ ರಾಣಾ, ಜಸ್ಪ್ರೀತ್ ಬುಮ್ರಾ, ವರುಣ್ ಚಕ್ರವರ್ತಿ, ಅರ್ಶದೀಪ್ ಸಿಂಗ್.