ಅಫ್ಘಾನಿಸ್ತಾನ ಕ್ರಿಕೆಟ್ ತಂಡದ ನಾಯಕ ತನ್ನ ದೇಶಾಭಿಮಾನಕ್ಕೆ ಹೆಸರುವಾಸಿಯಾಗಿದ್ದಾರೆ. ಇದೀಗ ದೇಶಕ್ಕಾಗಿ ತನ್ನ ಹೆಸರನ್ನ ಬದಲಾಯಿಸಿದ್ದಾರೆ. ಹಾಗಾದರೆ ಹೆಸರು ಬದಲಾಸಿದ ಆಫ್ಘಾನ್ ನಾಯಕ ಯಾರು? ಆತನ ಹೊಸ ಹೆಸರೇನು? ಇಲ್ಲಿದೆ ವಿವರ
ಕಾಬೂಲ್(ಆ.02): ಸದಾ ಬಾಂಬ್ ಸ್ಫೋಟ, ಗುಂಡಿನ ಮೊರೆತದಿಂದಲೇ ಬದುಕುತ್ತಿದ್ದ ಅಫ್ಘಾನಿಸ್ತಾನ ಜನರ ಕತೆ ಈಗ ಭಿನ್ನವಾಗಿದೆ. ಅಫ್ಘಾನಿಸ್ತಾನ ಮೆಲ್ಲನೆ ಹೊಸ ಬದುಕಿನತ್ತ ತೆರೆದುಕೊಳ್ಳುತ್ತಿದೆ. ಆದರೆ ವಿಶ್ವದಲ್ಲಿ ಅಫ್ಘಾನಿಸ್ತಾನದ ಚಿತ್ರಣ ಮಾತ್ರ ಬದಲಾಗಿಲ್ಲ. ಈಗಲೂ ಅಫ್ಘಾನಿಸ್ತಾನವನ್ನ ಬಾಂಬ್ ಸ್ಫೋಟದ ದೇಶ ಎಂದೇ ಕರೆಯಲಾಗುತ್ತಿದೆ.
ವಿಶ್ವದೆದುರು ಅಫ್ಘಾನಿಸ್ತಾನ ದೇಶದ ಚಿತ್ರಣವನ್ನ ಬದಲಾಯಿಸಲು ಅಫ್ಘಾನ್ ಕ್ರಿಕೆಟ್ ನಾಯಕ ಪಣತೊಟ್ಟಿದ್ದಾರೆ. ತನ್ನ ದೇಶದ ಹೆಸರನ್ನ ವಿಶ್ವಮಟ್ಟದಲ್ಲಿ ರಾರಾಜಿಸಲು ಅಫ್ಘಾನಿಸ್ತಾನ ನಾಯಕ ಅಸ್ಗರ್ ಸ್ಟಾನಿಕ್ಜೈ ದಿಟ್ಟ ಹೆಜ್ಜೆ ಇಟ್ಟಿದ್ದಾರೆ.
ಅಸ್ಗರ್ ಸ್ಟಾನಿಕ್ಜೈ ತನ್ನ ದೇಶದ ಮೇಲಿನ ಅಭಿಮಾನದಿಂದ ತನ್ನ ಹೆಸರನ್ನ ಬದಲಾಯಿಸಿದ್ದಾರೆ. ಅಸ್ಗರ್ ಸ್ಟಾನಿಕ್ಜೈ ತನ್ನ ಹೆಸರನ್ನ ಅಸ್ಗರ್ ಅಫ್ಘಾನ್ ಎಂದು ಬದಲಿಸಿದ್ದಾರೆ. ಈ ಮೂಲಕ ತನ್ನ ಹೆಸರಿನ ಜೊತೆಗೆ ದೇಶದ ಹೆಸರು ರಾರಾಜಿಸಬೇಕು ಅನ್ನೋ ಉದ್ದೇಶದಿಂದ ಅಸ್ಗರ್ ಹೆಸರು ಬದಲಾಯಿಸಿದ್ದಾರೆ.
ಅಸ್ಗರ್ ಸ್ಟಾನಿಕ್ಜೈ ತಮ್ಮ ಹೆಸರನ್ನ ಬದಲಾವಣೆ ಅಧೀಕೃತವಾಗುತ್ತಿದ್ದಂತೆ, ಅಫ್ಘಾನಿಸ್ತಾನ ಕ್ರಿಕೆಟ್ ಮಂಡಳಿ ಟ್ವೀಟ್ ಮೂಲಕ ಬಹಿರಂಗ ಪಡಿಸಿದೆ. ಈ ಮೂಲಕ ಅಸ್ಗರ್ ಹೆಸರು ಬದಲಾವಣೆಯನ್ನ ಖಚಿತಪಡಿಸಿದೆ.
