ನವದೆಹಲಿ[ಜ.06]: ಛಲವೊಂದಿದ್ದರೆ ಏನನ್ನಾದರೂ ಸಾಧಿಸಬಹುದು ಎಂಬುದಕ್ಕೆ ಭಾರತದ ಪರ್ವತಾರೋಹಿ ಅರುಣಿಮಾ ಸಿನ್ಹಾ ಅವರೇ ಜೀವಂತ ಸಾಕ್ಷಿ. ತಮ್ಮ ಪರ್ವತಾರೋಹಿ ಬದುಕಿಗೆ ಅರುಣಿಮಾ ಮತ್ತೊಂದು ಸಾಧನೆಯ ಗರಿ ಸೇರಿಸಿದ್ದಾರೆ. ಕೃತಕ ಕಾಲು ಹೊಂದಿರುವ ಅರುಣಿಮಾ, ಅಂಟಾರ್ಟಿಕ ಖಂಡದ ಅತಿ ಎತ್ತರದ ಮೌಂಟ್ ವಿನ್ಸನ್ ಪರ್ವತ ಏರಿದ್ದಾರೆ. ಈ ಪರ್ವತ ಏರಿದ ವಿಶ್ವದ ಮೊದಲ ಮಹಿಳೆ ಎಂಬ ಹೆಗ್ಗಳಿಕೆಗೆ ಅರುಣಿಮಾ ಪಾತ್ರರಾಗಿದ್ದಾರೆ.

30 ವರ್ಷದ ಅರುಣಿಮಾ, 2013ರಲ್ಲಿ ವಿಶ್ವದ ಅತಿ ಎತ್ತರದ ಮೌಂಟ್ ಎವರೆಸ್ಟ್ ಶಿಖರ ಏರಿದ ಮೊದಲ ಮಹಿಳೆ ಎಂಬ ಖ್ಯಾತಿಯನ್ನು ಹೊಂದಿದ್ದರು. ಇಷ್ಟೆ ಅಲ್ಲದೆ, ಆಫ್ರಿಕಾದ ಅತಿ ಎತ್ತರದ ಶಿಖರ ಮೌಂಟ್ ಕಿಲಿಮಾಂಜರೋ, ಯುರೋಪ್‌ನ ಎಲ್ಬ್ರಸ್, ಆಸ್ಟ್ರೇಲಿಯಾದ ಕೊಸಿಸ್ಜಕೋ, ಅರ್ಜೆಂಟೀನಾದ ಅಕಾಂಕಗಾ ಮತ್ತು ಇಂಡೋನೇಷ್ಯಾದ ಕಾರ್ಸ್ಟೆಂಜ್ ಪಿರಾಮಿಡ್ ಪರ್ವತಗಳನ್ನು ಏರಿದ್ದಾರೆ. ಈ ಸಾಧನೆಗಳಿಂದ ಭಾರತ ಸರ್ಕಾರ ಅವರಿಗೆ 2015ರಲ್ಲಿ ಭಾರತ 4ನೇ ಅತ್ಯುನ್ನತ ಪದ್ಮಶ್ರೀ ಪ್ರಶಸ್ತಿ ನೀಡಿ ಗೌರವಿಸಿದೆ. ಅದೇ ವರ್ಷದಲ್ಲಿ ತೇಂಜಿಂಗ್ ನಾರ್ಗೆ ರಾಷ್ಟ್ರೀಯ ಸಾಹಸ ಪ್ರಶಸ್ತಿಯನ್ನು ಪಡೆದಿದ್ದಾರೆ. ಅರುಣಿಮ ಅವರ ಸಾಧನೆಗೆ ಪ್ರಧಾನಿ ನರೇಂದ್ರ ಮೋದಿ ಮೆಚ್ಚುಗೆ ವ್ಯಕ್ತಪಡಿಸಿದ್ದು, ‘ಅರುಣಿಮಾಗೆ ಅಭಿನಂದನೆಗಳು’ ಎಂದು ತಮ್ಮ ಟ್ವೀಟರ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ.

ಮಾಜಿ ವಾಲಿಬಾಲ್ ಆಟಗಾರ್ತಿ:

ಅರುಣಿಮಾ, ರಾಷ್ಟ್ರೀಯ ಮಾಜಿ ವಾಲಿಬಾಲ್ ಆಟಗಾರ್ತಿಯಾಗಿದ್ದರು. ಆದರೆ ಅವರ ಜೀವನದಲ್ಲಿ ನಡೆದ ಕಹಿ ಘಟನೆಯಿಂದಾಗಿ ಅವರು ಪರ್ವತಾರೋಹಿಯಾಗಿ ಬದಲಾಗಬೇಕಾಯಿತು. ಅರುಣಿಮ, ದರೋಡಕೋರರಿಂದ ತಮ್ಮನ್ನು ಮತ್ತು ಸಹ ಪ್ರಯಾಣಿಕರನ್ನು ರಕ್ಷಿಸಲು ಪ್ರಯತ್ನಿಸುತ್ತಿದ್ದರು. ಇದೇ ವೇಳೆ ದರೋಡೆಕೋರರು ಅವರನ್ನು ರೈಲಿನಿಂದ ತಳ್ಳಿದ್ದರಿಂದ ಕಾಲು ಕಳೆದುಕೊಂಡಿದ್ದರು.