ನವದೆಹಲಿ[ಮೇ.03]: ಐಪಿಎಲ್‌ 12ನೇ ಆವೃತ್ತಿ ಮುಕ್ತಾಯಗೊಳ್ಳುತ್ತಿದ್ದಂತೆ ಐಸಿಸಿ ಏಕದಿನ ವಿಶ್ವಕಪ್‌ ಆರಂಭಗೊಳ್ಳಲಿದ್ದು, ಭಾರತ ತಂಡದ ರಣತಂತ್ರಗಳು ಪ್ರಮುಖ ಎದುರಾಳಿಗಳಾದ ಆಸ್ಪ್ರೇಲಿಯಾ, ದಕ್ಷಿಣ ಆಫ್ರಿಕಾಗೆ ತಿಳಿಯುವ ಸಾಧ್ಯತೆ ದಟ್ಟವಾಗಿದೆ. ಕಾರಣ, ಭಾರತ ತಂಡದ ಆರಂಭಿಕ ಬ್ಯಾಟ್ಸ್‌ಮನ್‌ ಶಿಖರ್‌ ಧವನ್‌ ಆಡುವ ಡೆಲ್ಲಿ ಕ್ಯಾಪಿಟಲ್ಸ್‌ ತಂಡದ ಪ್ರಧಾನ ಕೋಚ್‌ ರಿಕಿ ಪಾಂಟಿಂಗ್‌, ವಿಶ್ವಕಪ್‌ನಲ್ಲಿ ಆಸ್ಪ್ರೇಲಿಯಾ ತಂಡದ ಸಹಾಯಕ ಕೋಚ್‌ ಆಗಿ ಕಾರ್ಯನಿರ್ವಹಿಸಲಿದ್ದಾರೆ. ಧವನ್‌, ಐಪಿಎಲ್‌ನಲ್ಲಿ ವಿಶ್ವಕಪ್‌ಗೆ ಹೇಗೆ ಸಿದ್ಧತೆ ನಡೆಸಿದ್ದಾರೆ. ಅವರ ದೌರ್ಬಲ್ಯವೇನು ಎನ್ನುವ ಸಂಪೂರ್ಣ ಮಾಹಿತಿ ಪಾಂಟಿಂಗ್‌ಗೆ ಇರಲಿದೆ. ತಂಡದ ವಿಡಿಯೋ ವಿಶ್ಲೇಷಕರಾಗಿರುವ ಶ್ರೀರಾಮ್‌, ವಿಶ್ವಕಪ್‌ನಲ್ಲಿ ಶ್ರೀಲಂಕಾ ತಂಡದ ವಿಶ್ಲೇಷಕರಾಗಿ ಕೆಲಸ ಮಾಡಲಿದ್ದಾರೆ. ಧವನ್‌ ಬ್ಯಾಟಿಂಗ್‌ ಬಲಾಬಲದ ಎಲ್ಲಾ ಮಾಹಿತಿ ಲಂಕಾ ತಂಡಕ್ಕೆ ತಿಳಿಯಲಿದೆ.

ಇದೇ ರೀತಿ ಕಿಂಗ್ಸ್‌ ಇಲೆವೆನ್‌ ಪಂಜಾಬ್‌ ತಂಡದ ವಿಡಿಯೋ ವಿಶ್ಲೇಷಕರಾಗಿ ಕಾರ್ಯನಿರ್ವಹಿಸುತ್ತಿರುವ ಪ್ರಸನ್ನ ಅಗೋರಮ್‌, ದಕ್ಷಿಣ ಆಫ್ರಿಕಾ ತಂಡದ ವಿಡಿಯೋ ವಿಶ್ಲೇಷಕರಾಗಿಯೂ ಕೆಲಸ ಮಾಡುತ್ತಾರೆ. ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ದ.ಆಫ್ರಿಕಾ ತಂಡದ ಯಶಸ್ಸಿನಲ್ಲಿ ಪ್ರಸನ್ನ ಪಾತ್ರ ಮಹತ್ವದಾಗಿದೆ. ವಿಶ್ವಕಪ್‌ ತಂಡದಲ್ಲಿರುವ ಕೆ.ಎಲ್‌.ರಾಹುಲ್‌, ಮೊಹಮದ್‌ ಶಮಿ ಕುರಿತೂ ಇಂಚಿಂಚೂ ಮಾಹಿತಿ ಅವರ ಬಳಿ ಇರಲಿದೆ. ಭಾರತ ತಂಡ ವಿಶ್ವಕಪ್‌ನಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧವೇ ತನ್ನ ಮೊದಲ ಪಂದ್ಯವನ್ನು ಆಡಲಿದ್ದು, ವೇಗಿ ಶಮಿ ಎದುರಿಸಲು ಆಫ್ರಿಕಾ ಬ್ಯಾಟ್ಸ್‌ಮನ್‌ಗಳಿಗೆ ಅಗತ್ಯವಿರುವ ತರಬೇತಿಯನ್ನು ಪ್ರಸನ್ನ ನೀಡಲಿದ್ದಾರೆ.

ಸ್ವಹಿತಾಸಕ್ತಿ ವ್ಯಾಪ್ತಿಗಿಲ್ಲ ವಿದೇಶಿಗರು?

ಭಾರತ ತಂಡದ ಕೋಚ್‌, ಸಹಾಯಕ ಸಿಬ್ಬಂದಿಯಾಗಿ ಕಾರ್ಯನಿರ್ವಹಿಸುವವರು ಐಪಿಎಲ್‌ ತಂಡಗಳಲ್ಲಿ ಕೆಲಸ ಮಾಡುವಂತಿಲ್ಲ ಎನ್ನುವ ನಿಯಮ ಜಾರಿ ಮಾಡಿರುವ ಬಿಸಿಸಿಐ, ವಿದೇಶಿಗರನ್ನು ಸ್ವಹಿತಾಸಕ್ತಿ ವ್ಯಾಪ್ತಿಗೆ ಸೇರಿಸಿಲ್ಲ. ರಾಷ್ಟ್ರೀಯ ತಂಡಗಳಲ್ಲಿ ಕಾರ್ಯನಿರ್ವಹಿಸುವ ವಿದೇಶಿಗರು ಐಪಿಎಲ್‌ನಲ್ಲೂ ಪಾಲ್ಗೊಂಡಿದ್ದಾರೆ. ಮುಂದಿನ ವರ್ಷದಿಂದ ಏಕರೀತಿ ನೀತಿ ಜಾರಿ ಮಾಡುವಂತೆ ಹಲವರು ಆಗ್ರಹಿಸಿದ್ದಾರೆ.