ಭಾರತೀಯ ಕ್ರಿಕೆಟ್ ಆಡಳಿತ ಮಂಡಳಿಯ ಸ್ವರೂಪವನ್ನು ಇಂಗ್ಲೆಂಡ್ ಹಾಗೂ ವೇಲ್ಸ್ ಕ್ರಿಕೆಟ್ ಮಂಡಳಿಯಂತೆ ಮಾರ್ಪಡಿಸಲು ಸಿಒಎ ನಿರ್ಧರಿಸಿದ್ದು, ಈ ಕುರಿತು ಕುಂಬ್ಳೆ ಅವರಿಗೆ ಮೊದಲೇ ತಿಳಿಸಿದೆ ಎನ್ನಲಾಗಿದೆ.
ಚೆನ್ನೈ(ಮಾ.11): ಸರ್ವೋಚ್ಚ ನ್ಯಾಯಾಲಯ ನೇಮಿತ ಬಿಸಿಸಿಐ ಆಡಳಿತ ಸಮಿತಿ (ಸಿಒಎ) ಭಾರತ ತಂಡದ ಕೋಚಿಂಗ್ ಸಿಬ್ಬಂದಿಯನ್ನು ಪುನರ್ ರಚಿಸಲು ಮುಂದಾಗಿದ್ದು, ಪ್ರಸಕ್ತ ಹತ್ತೊಂಭತ್ತು ವರ್ಷದೊಳಗಿನ ಭಾರತ ತಂಡದ ತರಬೇತುದಾರ ರಾಹುಲ್ ದ್ರಾವಿಡ್ ಟೀಂ ಇಂಡಿಯಾದ ನೂತನ ಕೋಚ್ ಆಗಿ ನೇಮಕವಾಗುವ ಸಾಧ್ಯತೆ ಇದೆ ಎಂದು ‘ದಿ ಇಂಡಿಯನ್ ಎಕ್ಸ್‌ಪ್ರೆಸ್’ ವರದಿಯೊಂದು ತಿಳಿಸಿದೆ.
ಇನ್ನು, ಪ್ರಸ್ತುತ ಭಾರತ ತಂಡದ ಕೋಚ್ ಆಗಿ ಕಾರ್ಯನಿರ್ವಹಿಸುತ್ತಿರುವ ಅನಿಲ್ ಕುಂಬ್ಳೆ ಅವರನ್ನು ಟೀಂ ಇಂಡಿಯಾ ನಿರ್ದೇಶಕನಾಗಿ ಮುಂದುವರೆಯಲು ಸಿಒಎ ಕೋರಿದ್ದು, ಒಂದೊಮ್ಮೆ ಈ ಆಹ್ವಾನವನ್ನು ಕುಂಬ್ಳೆ ಒಪ್ಪಿಕೊಂಡದ್ದೇ ಆದಲ್ಲಿ ದ್ರಾವಿಡ್ ರಾಷ್ಟ್ರೀಯ ತಂಡಕ್ಕೆ ಕೋಚ್ ಆಗಿ ಪದಾರ್ಪಣೆ ಮಾಡುವ ಸಾಧ್ಯತೆ ದಟ್ಟವಾಗಿದೆ ಎಂದು ಈ ವರದಿ ಹೇಳಿದೆ.
ಬಿಸಿಸಿಐ ಆಡಳಿತ ಸಮಿತಿಯ ಅತ್ಯಾಪ್ತ ಮೂಲಗಳ ಪ್ರಕಾರ ಭಾರತೀಯ ಕ್ರಿಕೆಟ್ ಆಡಳಿತ ಮಂಡಳಿಯ ಸ್ವರೂಪವನ್ನು ಇಂಗ್ಲೆಂಡ್ ಹಾಗೂ ವೇಲ್ಸ್ ಕ್ರಿಕೆಟ್ ಮಂಡಳಿಯಂತೆ ಮಾರ್ಪಡಿಸಲು ಸಿಒಎ ನಿರ್ಧರಿಸಿದ್ದು, ಈ ಕುರಿತು ಕುಂಬ್ಳೆ ಅವರಿಗೆ ಮೊದಲೇ ತಿಳಿಸಿದೆ ಎನ್ನಲಾಗಿದೆ.
