ಹಾಲಿ ಕೋಚ್‌ ಅನಿಲ್‌ ಕುಂಬ್ಳೆ ಅವರೇ ಭಾರತ ತಂಡದ ಕೋಚ್‌ ಆಗಿ ಮುಂದುವರಿಯುವ ಸಾಧ್ಯತೆ ದಟ್ಟವಾಗಿದ್ದು, ಕೋಚ್‌ ಆಯ್ಕೆ ಪ್ರಕ್ರಿಯೆಯನ್ನು ವೆಸ್ಟ್‌ಇಂಡೀಸ್‌ ಪ್ರವಾಸದ ಮುಕ್ತಾಯದ ವರೆಗೂ ಮುಂದೂಡುವಂತೆ ಬಿಸಿಸಿಐ ಹಂಗಾಮಿ ಅಧ್ಯಕ್ಷ ಸಿ.ಕೆ. ಖನ್ನಾ, ಕಾರ್ಯದರ್ಶಿ ಅಮಿತಾಭ್‌ ಚೌಧರಿಗೆ ಪತ್ರ ಬರೆದಿದ್ದಾರೆ.

ನವದೆಹಲಿ(ಜೂ.09): ಹಾಲಿ ಕೋಚ್‌ ಅನಿಲ್‌ ಕುಂಬ್ಳೆ ಅವರೇ ಭಾರತ ತಂಡದ ಕೋಚ್‌ ಆಗಿ ಮುಂದುವರಿಯುವ ಸಾಧ್ಯತೆ ದಟ್ಟವಾಗಿದ್ದು, ಕೋಚ್‌ ಆಯ್ಕೆ ಪ್ರಕ್ರಿಯೆಯನ್ನು ವೆಸ್ಟ್‌ಇಂಡೀಸ್‌ ಪ್ರವಾಸದ ಮುಕ್ತಾಯದ ವರೆಗೂ ಮುಂದೂಡುವಂತೆ ಬಿಸಿಸಿಐ ಹಂಗಾಮಿ ಅಧ್ಯಕ್ಷ ಸಿ.ಕೆ. ಖನ್ನಾ, ಕಾರ್ಯದರ್ಶಿ ಅಮಿತಾಭ್‌ ಚೌಧರಿಗೆ ಪತ್ರ ಬರೆದಿದ್ದಾರೆ.

ಆದರೆ ಸರ್ವೋಚ್ಚ ನ್ಯಾಯಾಲಯ ನೇಮಿತ ಬಿಸಿಸಿಐ ಆಡಳಿತ ಸಮಿತಿ ಒಪ್ಪಿಗೆ ಸೂಚಿಸಿದರೆ ಮಾತ್ರ ಕೋಚ್‌ ಆಯ್ಕೆ ಪ್ರಕ್ರಿಯೆಯನ್ನು ಮುಂದೂಡಲು ಸಾಧ್ಯ. ‘ಕಾರ್ಯದರ್ಶಿ ಅಮಿತಾಭ್‌ಗೆ ನೂತನ ಕೋಚ್‌ ಆಯ್ಕೆ ಸದ್ಯಕ್ಕೆ ಬೇಡವೆಂದು ಪತ್ರ ಬರೆದಿದ್ದೇನೆ. ಜೂನ್‌ 26ರ ವರೆಗೂ ಆಯ್ಕೆ ಪ್ರಕ್ರಿಯೆ ನಡೆಸದಂತೆ ತಿಳಿಸಿದ್ದೇನೆ. ಬಿಸಿಸಿಐ ವಿಶೇಷ ಸಾಮಾನ್ಯ ಸಭೆಯಲ್ಲಿ ಈ ಬಗ್ಗೆ ಚರ್ಚೆ ನಡೆಸಲಾಗುತ್ತದೆ. ಭಾರತ ತಂಡ ಪಂದ್ಯಾವಳಿಯೊಂದನ್ನು ಆಡುವಾಗ ಈ ರೀತಿಯ ಬೆಳವಣಿಗೆಗಳು ನಡೆಯುವುದು ಸರಿಯಲ್ಲ' ಎಂದು ಖನ್ನಾ ತಿಳಿಸಿದ್ದಾರೆ.

‘ಕುಂಬ್ಳೆಯೇ ಕೋಚ್‌ ಆಗಿ ಉಳಿದರೂ ಅಥವಾ ಯಾರೇ ಹೊಸಬರು ಆಯ್ಕೆಯಾದರೂ 2019ರ ಏಕದಿನ ವಿಶ್ವಕಪ್‌ ವರೆಗೂ ಹುದ್ದೆಯಲ್ಲಿರುತ್ತಾರೆ' ಎಂದು ಅವರು ಸ್ಪಷ್ಟಪಡಿಸಿದ್ದಾರೆ. ಇದೇ ವೇಳೆ ಬಿಸಿಸಿಐನ ಪ್ರಭಾವಿ ಆಡಳಿತಾಧಿಕಾರಿ ರಾಜೀವ್‌ ಶುಕ್ಲಾ ಸಹ ಕೋಚ್‌ ಆಯ್ಕೆಗೆ ತರಾತುರಿ ಮಾಡುತ್ತಿರುವುದನ್ನು ವಿರೋಧಿಸಿದ್ದಾರೆ. ‘ಹಂಗಾಮಿ ಅಧ್ಯಕ್ಷರು ಎಲ್ಲಾ ಸದಸ್ಯರೊಂದಿಗೆ ಮಾತನಾಡಿದ್ದಾರೆ. ಜೂನ್‌ 26ರ ವಿಶೇಷ ಸಾಮಾನ್ಯ ಸಭೆಗೂ ಮುನ್ನ ಈ ಬಗ್ಗೆ ಮಾತುಕಥೆ ನಡೆಸುತ್ತೇವೆ. ಅಲ್ಲಿ ತನಕ ಕೋಚ್‌ ಆಯ್ಕೆ ಪ್ರಕ್ರಿಯೆಯನ್ನು ಮುಂದೂಡುವಂತೆ ಕೇಳಿಕೊಂಡಿದ್ದಾರೆ. ಈ ಬಗ್ಗೆ ಬಹುತೇಕರು ಸಮ್ಮತಿ ಸೂಚಿಸಿದ್ದಾರೆ' ಎಂದು ಶುಕ್ಲಾ ಹೇಳಿದ್ದಾರೆ.

ಕುಂಬ್ಳೆ ಪರ ಕ್ರಿಕೆಟ್‌ ಸಮಿತಿ ಒಲವು

ತೆಂಡೂಲ್ಕರ್‌, ಗಂಗೂಲಿ,ಲಕ್ಷ್ಮಣ್‌ ಅವರನ್ನೊಳಗೊಂಡ ಬಿಸಿಸಿಐ ಕ್ರಿಕೆಟ್‌ ಸಲಹಾ ಸಮಿತಿ, ಕುಂಬ್ಳೆ ಅವರನ್ನೇ ಕೋಚ್‌ ಆಗಿ ಮುಂದುವರಿಸಲು ಒಲವು ತೋರಿದ್ದಾರೆ ಎನ್ನಲಾಗಿದೆ. ಭಾರತದ ಮಾಜಿ ನಾಯಕನ ಬದಲಿಗೆ ಬೇರಾರ‍ಯರನ್ನೂ ಕೋಚ್‌ ಆಗಿ ಆಯ್ಕೆ ಮಾಡದಿರಲು ಸಲಹಾ ಸಮಿತಿಗೆ ಇಷ್ಟವಿಲ್ಲ ಎಂದು ತಿಳಿದುಬಂದಿದೆ.