ಇಂತಹ ಗಾಳಿ ಸುದ್ದಿ ಬಗ್ಗೆ ಹೆಚ್ಚು ತಲೆಕೆಡಿಸಿಕೊಳ್ಳುವ ಅಗತ್ಯವೂ ಇಲ್ಲ. ಇಂತಹ ಕಾಯಕ್ಕೆ ನಮ್ಮ ಯಾವ ಆಟಗಾರರೂ ಕೈಹಾಕಿಲ್ಲ- ಅನಿಲ್ ಕುಂಬ್ಳೆ
ಮೊಹಾಲಿ(ನ.24): ರಾಜ್‌ಕೋಟ್‌ನ ಟೆಸ್ಟ್ ಪಂದ್ಯದಲ್ಲಿ ಭಾರತ ತಂಡದ ನಾಯಕ ವಿರಾಟ್ ಕೊಹ್ಲಿ ಚೆಂಡು ವಿರೂಪಗೊಳಿಸಿದ್ದಾರೆಂಬ ಬ್ರಿಟನ್ ಟ್ಯಾಬ್ಲಾಯ್ಡ್ ವರದಿಯನ್ನು ಭಾರತ ತಂಡದ ಕೋಚ್ ಅನಿಲ್ ಕುಂಬ್ಳೆ ನಿರಾಕರಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘‘ಮೊದಲಿಗೆ ಯಾವುದೇ ಪತ್ರಿಕೆಯ ವರದಿಯ ಕುರಿತು ಪ್ರತಿಕ್ರಿಯಿಸಲು ನಾನು ಬಯಸುವುದಿಲ್ಲ. ನನಗೆ ತಿಳಿದಂತೆ ಈ ಕುರಿತು ಪಂದ್ಯ ರೆರಿಯಾಗಲೀ, ಇಲ್ಲವೇ ಅಂಪೈರ್ ಆಗಲೀ ನಮ್ಮ ಬಳಿ ಮಾತನಾಡಿಲ್ಲ. ಇಂತಹ ಗಾಳಿ ಸುದ್ದಿ ಬಗ್ಗೆ ಹೆಚ್ಚು ತಲೆಕೆಡಿಸಿಕೊಳ್ಳುವ ಅಗತ್ಯವೂ ಇಲ್ಲ. ಇಂತಹ ಕಾರ್ಯಕ್ಕೆ ನಮ್ಮ ಯಾವ ಆಟಗಾರರೂ ಕೈಹಾಕಿಲ್ಲ ಎಂಬುದನ್ನು ಮಾತ್ರ ನಾನು ಹೇಳಬಯಸುತ್ತೇನೆ’’ ಎಂದು ಕುಂಬ್ಳೆ ತಿಳಿಸಿದರು.
ಇನ್ನು, ಇದೇ ಚೆಂಡು ವಿರೂಪಗೊಳಿಸಿದ ಪ್ರಕರಣದಲ್ಲಿ ಸಿಲುಕಿರುವ ದ.ಆಫ್ರಿಕಾ ತಂಡದ ನಾಯಕ ಫಾಫ್ ಡು ಪ್ಲೆಸಿಸ್ ಕುರಿತೂ ಮಾತನಾಡಿದ ಕುಂಬ್ಳೆ, ‘‘ಆಸೀಸ್ ಪ್ರವಾಸದಲ್ಲಿ ದ.ಆಫ್ರಿಕಾ ತಂಡ ಅತ್ಯಂತ ಮನೋಜ್ಞ ಆಟವಾಡುತ್ತಾ ಸಾಗಿದ್ದು, ಸರಣಿಯನ್ನು ಈಗಾಗಲೇ 2-0 ಅಂತರದಿಂದ ಕೈವಶಮಾಡಿಕೊಂಡಿದೆ. ಡುಪ್ಲೆಸಿಸ್ ವಿರುದ್ಧದ ಆರೋಪ ಹಾಗೂ ಅವರ ಮೇಲೆ ವಿಧಿಸಿರುವ ದಂಡವು ಕ್ಷುಲ್ಲಕವೆನಿಸುತ್ತದೆ’’ ಎಂದರು.
ಇನ್ನು, ವಿಕೆಟ್‌ಕೀಪರ್ ವೃದ್ಧಿಮಾನ್ ಸಾಹ ಗಾಯಗೊಂಡಿರುವುದರಿಂದ ಅವರ ಬದಲಿಗೆ ಪಾರ್ಥೀವ್ ಪಟೇಲ್ ಅವರನ್ನು ಆಯ್ಕೆಮಾಡಿದ್ದು ಅವರಿಗಿರುವ ಅನುಭವದ ಆಧಾರದ ಮೇಲೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು. ‘‘31 ವರ್ಷ ವಯಸ್ಸಿನ ಪಾರ್ಥೀವ್ ಕೀಪಿಂಗ್ ಮತ್ತು ಬ್ಯಾಟಿಂಗ್‌ನಲ್ಲಿ ಉತ್ತಮ ಅನುಭವ ಹೊಂದಿದ್ದಾರೆ. ಇದು ಎಂಟು ವರ್ಷಗಳ ಬಳಿಕ ಅವರನ್ನು ಮತ್ತೆ ರಾಷ್ಟ್ರೀಯ ತಂಡಕ್ಕೆ ಬರಮಾಡಿಕೊಂಡಿದೆ’’ ಎಂದರು.
