ಟೂರ್ನಿಯಲ್ಲಿ ಭಾರತ ಸೇರಿ ಒಟ್ಟು 10 ತಂಡಗಳು ಪಾಲ್ಗೊಳ್ಳಲಿದ್ದು, 8 ತಂಡಗಳು ನೇರವಾಗಿ ಅರ್ಹತೆ ಪಡೆದುಕೊಂಡವು. ಜುಲೈನಲ್ಲಿ ನೆದರ್‌ಲೆಂಡ್ಸ್‌ನಲ್ಲಿ ನಡೆದ ಅರ್ಹತಾ ಪಂದ್ಯಾವಳಿಯಲ್ಲಿ ಫೈನಲ್‌ಗೇರಿದ ಐರ್ಲೆಂಡ್ ಹಾಗೂ ಬಾಂಗ್ಲಾದೇಶ ತಂಡಗಳು 9 ಹಾಗೂ 10ನೇ ತಂಡಗಳಾಗಿ ವಿಶ್ವಕಪ್‌ನಲ್ಲಾಡುವ ಅವಕಾಶ ಪಡೆದವು.
ಗಯಾನ[ನ.09]: ಬಹುನಿರೀಕ್ಷಿತ ಮಹಿಳಾ ಟಿ20 ಕ್ರಿಕೆಟ್ ವಿಶ್ವಕಪ್‌ಗೆ ಇಂದು ಚಾಲನೆ ದೊರೆಯಲಿದೆ. ನ.9ರಿಂದ 24ರ ವರೆಗೂ ನಡೆಯಲಿರುವ 6ನೇ ಆವೃತ್ತಿಯ ಮಹಾಸಮರಕ್ಕೆ ವೆಸ್ಟ್‌ಇಂಡೀಸ್ ಆತಿಥ್ಯ ವಹಿಸಲಿದ್ದು, ಕೆರಿಬಿಯನ್ ದ್ವೀಪದಲ್ಲಿ ನಡೆಯಲಿರುವ 2ನೇ ಟಿ20 ವಿಶ್ವಕಪ್ ಟೂರ್ನಿ ಇದಾಗಿದೆ. 2010ರಲ್ಲಿ ಮೊದಲ ಬಾರಿಗೆ ವಿಂಡೀಸ್ ವಿಶ್ವಕಪ್‌ಗೆ ಆತಿಥ್ಯ ವಹಿಸಿತ್ತು.
ಮಹಿಳಾ ವಿಶ್ವಕಪ್ ಟಿ20 ಕ್ರಿಕೆಟ್ ಟೂರ್ನಿ: ಇಲ್ಲಿದೆ ಸಂಪೂರ್ಣ ವೇಳಾಪಟ್ಟಿ
ಇಷ್ಟು ವರ್ಷ ಪುರುಷರ ವಿಶ್ವಕಪ್ ವೇಳೆಯೇ ಮಹಿಳೆಯರ ಪಂದ್ಯಾವಳಿ ಸಹ ನಡೆಸಲಾಗುತ್ತಿತ್ತು. ಆದರೆ ಇದೇ ಮೊದಲ ಬಾರಿಗೆ ಪ್ರತ್ಯೇಕವಾಗಿ ಮಹಿಳಾ ವಿಶ್ವಕಪ್ ಆಯೋಜಿಸಲಾಗಿದ್ದು, ತಂಡಗಳಿಗೆ ಅಂಪೈರ್ ತೀರ್ಪು ಮೇಲ್ಮನವಿ ಪದ್ಧತಿ (ಡಿಆರ್‌ಎಸ್) ಬಳಕೆಗೆ ಅವಕಾಶವನ್ನು ಇದೇ ಮೊದಲ ಬಾರಿಗೆ ನೀಡಲಾಗಿದೆ. ಟೂರ್ನಿಯಲ್ಲಿ ಭಾರತ ಸೇರಿ ಒಟ್ಟು 10 ತಂಡಗಳು ಪಾಲ್ಗೊಳ್ಳಲಿದ್ದು, 8 ತಂಡಗಳು ನೇರವಾಗಿ ಅರ್ಹತೆ ಪಡೆದುಕೊಂಡವು. ಜುಲೈನಲ್ಲಿ ನೆದರ್‌ಲೆಂಡ್ಸ್‌ನಲ್ಲಿ ನಡೆದ ಅರ್ಹತಾ ಪಂದ್ಯಾವಳಿಯಲ್ಲಿ ಫೈನಲ್‌ಗೇರಿದ ಐರ್ಲೆಂಡ್ ಹಾಗೂ ಬಾಂಗ್ಲಾದೇಶ ತಂಡಗಳು 9 ಹಾಗೂ 10ನೇ ತಂಡಗಳಾಗಿ ವಿಶ್ವಕಪ್‌ನಲ್ಲಾಡುವ ಅವಕಾಶ ಪಡೆದವು.
ಎಲ್ಲಾ ಪಂದ್ಯಗಳು ನೇರಪ್ರಸಾರ: ವಿಶ್ವಕಪ್‌ನಲ್ಲಿ ಒಟ್ಟು 23 ಪಂದ್ಯಗಳು ನಡೆಯಲಿದ್ದು, ಎಲ್ಲಾ ಪಂದ್ಯಗಳು 200ಕ್ಕೂ ಹೆಚ್ಚು ರಾಷ್ಟ್ರಗಳಲ್ಲಿ ನೇರ ಪ್ರಸಾರಗೊಳ್ಳಲಿದೆ. ಗಯಾನದ ಪ್ರಾವಿಡೆನ್ಸ್‌ನಲ್ಲಿರುವ ಗಯಾನ ಅಂತಾರಾಷ್ಟ್ರೀಯ ಕ್ರೀಡಾಂಗಣ, ಸೇಂಟ್ ಲೂಸಿಯಾದ ಗ್ರಾಸ್ ಐಲೆಟ್‌ನಲ್ಲಿರುವ ಡರೆನ್ ಸ್ಯಾಮಿ ಕ್ರಿಕೆಟ್ ಮೈದಾನ, ಆ್ಯಂಟಿಗಾದ ನಾರ್ಥ್ ಸೌಂಡ್‌ನಲ್ಲಿರುವ ಸರ್.ವಿವಿಯನ್ ರಿಚರ್ಡ್ಸ್ ಕ್ರೀಡಾಂಗಣ ಪಂದ್ಯಗಳಿಗೆ ಆತಿಥ್ಯ ವಹಿಸಲಿವೆ. ಪ್ರಾವಿಡೆನ್ಸ್‌ನಲ್ಲಿ ಅತಿಹೆಚ್ಚು ಅಂದರೆ 11 ಪಂದ್ಯಗಳು, ಗ್ರಾಸ್ ಐಲೆಟ್‌ನಲ್ಲಿ 9 ಹಾಗೂ ನಾಥ್‌ರ್‍ಸೌಂಡ್‌ನಲ್ಲಿ ಫೈನಲ್ ಸೇರಿ ಒಟ್ಟು 3 ಪಂದ್ಯಗಳು ನಡೆಯಲಿವೆ.
ಭಾರತದ ನಿತಿನ್ ಮೆನನ್ ಸೇರಿ ಒಟ್ಟು 12 ಅಂಪೈರ್‌ಗಳು ಕಾಯನಿರ್ವಹಿಸಲಿದ್ದು, ಇಬ್ಬರು ಮ್ಯಾಚ್ ರೆಫ್ರಿಗಳಿದ್ದಾರೆ. ಭಾರತದ ಮಾಜಿ ನಾಯಕಿ ಅಂಜುಮ್ ಚೋಪ್ರಾ, ಮಾಜಿ ಕ್ರಿಕೆಟಿಗ ಸಂಜಯ್ ಮಾಂಜ್ರೇಕರ್ ಸೇರಿದಂತೆ 14 ಮಂದಿ ವೀಕ್ಷಕ ವಿವರಣೆಗಾರರು ಪಂದ್ಯಗಳ ವಿಶ್ಲೇಷಣೆ ನಡೆಲಿಸ್ದಾರೆ.
ಪಂದ್ಯಾವಳಿ ಮಾದರಿ ಹೇಗೆ?
10 ತಂಡಗಳನ್ನು ತಲಾ 5 ತಂಡಗಳಂತೆ 2 ಗುಂಪುಗಳಾಗಿ ವಿಂಗಡಿಸಲಾಗಿದೆ. ಹಾಲಿ ಚಾಂಪಿಯನ್ ವಿಂಡೀಸ್, ಇಂಗ್ಲೆಂಡ್, ಶ್ರೀಲಂಕಾ, ದ.ಆಫ್ರಿಕಾ ಹಾಗೂ ಬಾಂಗ್ಲಾದೇಶ ‘ಎ’ ಗುಂಪಿನಲ್ಲಿವೆ. ಭಾರತ, ಆಸ್ಪ್ರೇಲಿಯಾ, ಐರ್ಲೆಂಡ್, ನ್ಯೂಜಿಲೆಂಡ್ ಹಾಗೂ ಪಾಕಿಸ್ತಾನ ‘ಬಿ’ ಗುಂಪಿನಲ್ಲಿವೆ. ಗುಂಪು ಹಂತದಲ್ಲಿ ಪ್ರತಿ ತಂಡ 4 ಪಂದ್ಯಗಳನ್ನು ಆಡಲಿದ್ದು, ಗುಂಪಿನಲ್ಲಿ ಅಗ್ರ 2 ಸ್ಥಾನ ಪಡೆಯುವ ತಂಡಗಳು ಸೆಮಿಫೈನಲ್‌ಗೆ ಅರ್ಹತೆ ಪಡೆದುಕೊಳ್ಳಲಿವೆ.
‘ಎ’ ಗುಂಪು
ವೆಸ್ಟ್‌ಇಂಡೀಸ್, ಶ್ರೀಲಂಕಾ, ದ.ಆಫ್ರಿಕಾ, ಇಂಗ್ಲೆಂಡ್, ಬಾಂಗ್ಲಾದೇಶ
‘ಬಿ’ ಗುಂಪು
ಭಾರತ, ಆಸ್ಪ್ರೇಲಿಯಾ, ಪಾಕಿಸ್ತಾನ, ನ್ಯೂಜಿಲೆಂಡ್, ಐರ್ಲೆಂಡ್
ಹಿಂದಿನ ಚಾಂಪಿಯನ್ಸ್
ವರ್ಷ ಚಾಂಪಿಯನ್
2009 ಇಂಗ್ಲೆಂಡ್
2010 ಆಸ್ಪ್ರೇಲಿಯಾ
2012 ಆಸ್ಪ್ರೇಲಿಯಾ
2014 ಆಸ್ಪ್ರೇಲಿಯಾ
2016 ವಿಂಡೀಸ್
ಭಾರತಕ್ಕಿಂದು ಕಿವೀಸ್ ಎದುರಾಳಿ
ಪ್ರಾವಿಡೆನ್ಸ್ (ಗಯಾನ): ಯುವ ಭಾರತ ತಂಡ ಈ ಹಿಂದಿನ ವಿಶ್ವಕಪ್‌ಗಳ ಕಹಿ ನೆನಪುಗಳನ್ನು ಬದಿಗೊತ್ತಿ ಈ ಬಾರಿ ಟ್ರೋಫಿ ಗೆಲ್ಲುವ ಉತ್ಸಾಹದಲ್ಲಿದೆ. ಇಂದು ನಡೆಯಲಿರುವ ಉದ್ಘಾಟನಾ ಪಂದ್ಯದಲ್ಲಿ ಬಲಿಷ್ಠ ನ್ಯೂಜಿಲೆಂಡ್ ವಿರುದ್ಧ ಸೆಣಸಲಿದೆ.
ಹರ್ಮನ್‌ಪ್ರೀತ್ ಕೌರ್ ನೇತೃತ್ವದ ತಂಡ ಉತ್ತಮ ಅಭ್ಯಾಸ ನಡೆಸಿದ್ದು, ಶ್ರೀಲಂಕಾ ಹಾಗೂ ಆಸ್ಪ್ರೇಲಿಯಾ ‘ಎ’ ವಿರುದ್ಧ ಸರಣಿ ಗೆಲುವು ಪಡೆದಿತ್ತು. ವಿಂಡೀಸ್‌ಗೆ ತೆರಳಿದ ಬಳಿಕ ಅಭ್ಯಾಸ ಪಂದ್ಯಗಳಲ್ಲಿ ದ.ಆಫ್ರಿಕಾ, ವಿಂಡೀಸ್ ಹಾಗೂ ಇಂಗ್ಲೆಂಡ್ ವಿರುದ್ಧ ಗೆಲುವು ಪಡೆದುಕೊಂಡಿದೆ. ಭಾರತ ತಂಡ ಈ ವರೆಗೂ ಟಿ20 ವಿಶ್ವಕಪ್ ಗೆದ್ದಿಲ್ಲ. 2009 ಹಾಗೂ 2010ರಲ್ಲಿ ಸೆಮೀಸ್ ಪ್ರವೇಶಿಸಿದ್ದೇ ತಂಡದ ಈ ವರೆಗಿನ ಶ್ರೇಷ್ಠ ಸಾಧನೆಯಾಗಿದೆ.
ಭಾರತ ತಂಡ: ಹರ್ಮನ್‌ಪ್ರೀತ್ (ನಾಯಕಿ), ಮಿಥಾಲಿ ರಾಜ್, ಜೆಮಿಮಾ ರೋಡ್ರಿಗಾಸ್, ಸ್ಮೃತಿ ಮಂಧನಾ, ವೇದಾ ಕೃಷ್ಣಮೂರ್ತಿ, ತಾನಿಯಾ ಭಾಟಿಯಾ, ಡಿ.ಹೇಮಲತಾ, ದೀಪ್ತಿ ಶರ್ಮಾ, ಏಕ್ತಾ ಬಿಶ್ತಾ, ಮಾನ್ಸಿ ಜೋಶಿ, ಅರುಂಧತಿ ರೆಡ್ಡಿ, ಪೂಜಾ ವಸ್ತ್ರಾಕರ್, ಪೂನಮ್, ರಾಧಾ ಯಾದವ್.
ಪಂದ್ಯ ಆರಂಭ: ರಾತ್ರಿ 8.30ಕ್ಕೆ, ನೇರ ಪ್ರಸಾರ: ಸ್ಟಾರ್ ಸ್ಪೋರ್ಟ್ಸ್ 1
