ಆಲ್‌ರೌಂಡರ್ ಅಲಿರೇಜಾ ಮಿರ್ಜಾಯಿನ್ ಅವರ ಅಮೋಘ ಆಟದ ನೆರವಿನಿಂದ ಬೆಂಗಳೂರು ಬುಲ್ಸ್ ತಂಡವು ಪ್ರೊ ಕಬಡ್ಡಿ ಲೀಗ್‌ನಲ್ಲಿ ಬೆಂಗಾಲ್ ವಾರಿಯರ್ಸ್ ವಿರುದ್ಧ 43-32 ಅಂಕಗಳಿಂದ ಗೆಲುವು ಸಾಧಿಸಿತು. ಈ ಮೂಲಕ ಹ್ಯಾಟ್ರಿಕ್ ಜಯ ದಾಖಲಿಸಿದ ಬುಲ್ಸ್, ಅಂಕಪಟ್ಟಿಯಲ್ಲಿ ಅಗ್ರ 5ರಲ್ಲಿ ಉಳಿದುಕೊಂಡಿದೆ.
ನವದೆಹಲಿ: ಆಲ್‌ರೌಂಡರ್ ಅಲಿರೇಜಾ ಮಿರ್ಜಾಯಿನ್ ಅವರ ಅತ್ಯಮೋಘ ಆಟದ ನೆರವಿನಿಂದ ಬೆಂಗಳೂರು ಬುಲ್ಸ್ ತಂಡ ಪ್ರೊ ಕಬಡ್ಡಿ ಲೀಗ್‌ನ 12ನೇ ಆವೃತ್ತಿಯ 80ನೇ ಪಂದ್ಯದಲ್ಲಿ ಬೆಂಗಾಲ್ ವಾರಿಯರ್ಸ್ ವಿರುದ್ಧ 11 ಅಂಕಗಳಿಂದ ಗೆಲುವು ದಾಖಲಿಸಿತು.
ತ್ಯಾಗರಾಜ್ ಒಳಾಂಗಣ ಕ್ರೀಡಾಂಗಣದಲ್ಲಿ ಭಾನುವಾರ ನಡೆದ 2ನೇ ಪಂದ್ಯದಲ್ಲಿ ಬುಲ್ಸ್ ತಂಡ 43-32 ಅಂಕಗಳಿಂದ ಬೆಂಗಾಲ್‌ಗೆ ಸೋಲುಣಿಸಿತು. ಇದರೊಂದಿಗೆ ಹ್ಯಾಟ್ರಿಕ್ ಗೆಲುವು ಸಾಧಿಸಿದ ಬುಲ್ಸ್, ಒಟ್ಟಾರೆ 16 ಅಂಕಗಳನ್ನು ಕಲೆಹಾಕಿ ಅಂಕಪಟ್ಟಿಯಲ್ಲಿಅಗ್ರ ಐದರಲ್ಲಿ ಸ್ಥಾನ ಉಳಿಸಿಕೊಂಡಿದೆ.
ಬೆಂಗಳೂರು ಬುಲ್ಸ್ ಪರ ಮತ್ತೆ ಮಿಂಚಿದ ಅಲಿರೇಜಾ ಮಿರ್ಜಾಯಿನ್
ಬೆಂಗಳೂರು ಬುಲ್ಸ್ ತಂಡದ ಪರ ಅಲಿರೇಜಾ ಮಿರ್ಜಾಯಿನ್(18 ಅಂಕ), ಆಶಿಶ್ ಮಲಿಕ್(7 ಅಂಕ), ದೀಪಕ್(6 ಅಂಕ) ಮತ್ತು ಗಣೇಶ ಎಚ್.(5 ಅಂಕ) ಮಿಂಚಿನ ಸಂಚಲನ ಮೂಡಿಸಿದರೆ, ಬೆಂಗಾಲ್ ವಾರಿಯರ್ಸ್ ಪರ ನಾಯಕ ದೇವಾಂಕ್(13 ಅಂಕ) ಮತ್ತು ಹಿಮಾಂಶು(7) ಹೋರಾಟ ನಡೆಸಿದರು.
ಪಂದ್ಯ ಮುಕ್ತಾಯಕ್ಕೆ ಕೊನೆಯ ಹತ್ತು ನಿಮಿಷಗಳು ಬಾಕಿ ಇರುವಾಗ ವಾರಿಯರ್ಸ್‌ನಿಂದ 9 ಅಂಕಗಳ ಅಂತರ ಕಾಯ್ದುಕೊಂಡ ಬೆಂಗಳೂರು ತಂಡ, ಎಚ್ಚರಿಕೆಯ ಆಟಕ್ಕೆ ಒತ್ತು ನೀಡಿತು. ಇದರ ನಡುವೆ ಲಯ ಕಂಡುಕೊಂಡ ಹಿಮಾಂಶು ನರ್ವಾಲ್ ಮತ್ತು ಅಂಕಿತ್ ಬೆಂಗಾಲ್ ತಂಡದ ಹೋರಾಟವನ್ನು ಕೊನೆಯ ಹಂತದವರೆಗೂ ರೋಚಕಗೊಳಿಸುವ ಸಾಹಸ ನಡೆಸಿದರು.
ದ್ವಿತಿಯಾರ್ಧದಲ್ಲಿ ಮೊದಲ ಸಲ ಬುಲ್ಸ್ ಆಲೌಟ್
ದ್ವಿತೀಯಾರ್ಧ ಆರಂಭವಾಗುತ್ತಿದಂತೆಯೇ ಸಮನ್ವಯತೆ ಕೊರತೆ ಎದುರಿಸಿದ ಬುಲ್ಸ್ ಆಟಗಾರರು ಪಂದ್ಯದಲ್ಲಿ ಮೊದಲ ಬಾರಿಗೆ ಆಲೌಟ್ ಬಲೆಗೆ ಬಿದ್ದರು. ಹೀಗಾಗಿ ಎದುರಾಳಿ ತಂಡ 20-23ರಲ್ಲಿ ಪುಟಿದೇಳಲು ಕಾರಣವಾಯಿತು. ಆದಾಗ್ಯೂ ಸೂಪರ್ ರೇಡ್ ಮೂಲಕ ಮಿರ್ಜಾಯಿನ್ ಮಿಂಚಿದ ಕಾರಣ ಬುಲ್ಸ್ ತಂಡದ ಪ್ರಭುತ್ವ 29-24ಕ್ಕೆ ವಿಸ್ತರಿತು. ಪಂದ್ಯ ಸಾಗಿದಂತೆ ಬುಲ್ಸ್ ಮುನ್ನಡೆಯೂ ಹಿಗ್ಗಿತು. ಈ ಹಂತದಲ್ಲಿಎದುರಾಳಿ ತಂಡವನ್ನು ಆಲೌಟ್ ಮಾಡಿ ಸೇಡು ತೀರಿಸಿಕೊಂಡ ಬುಲ್ಸ್ ಆಟಗಾರರು 30 ನಿಮಿಷಗಳ ಅಂತ್ಯಕ್ಕೆ 35-26ರಲ್ಲಿ ಪಂದ್ಯದ ಮೇಲೆ ಹಿಡಿತ ಸಾಧಿಸಿದರು.
ಹಲವು ಏರಿಳಿತದ ಹೊರತಾಗಿಯೂ ಆಲ್‌ರೌಂಡರ್ ಅಲಿರೇಜಾ ಮಿರ್ಜಾಯಿನ್ ಮತ್ತು ಆಶಿಶ್ ಮಲಿಕ್ ಅವರ ಕೆಚ್ಚೆದೆಯ ಹೋರಾಟದ ಫಲವಾಗಿ ಬೆಂಗಳೂರು ಬುಲ್ಸ್ ತಂಡ ಪಂದ್ಯದ ಪ್ರಥಮಾರ್ಧಕ್ಕೆ 22-15 ಅಂಕಗಳಿಂದ ಬೆಂಗಾಲ್ ವಾರಿಯರ್ಸ್ ವಿರುದ್ಧ ಮೇಲುಗೈ ಸಾಧಿಸಿತು.ಮೊದಲ ಏಳು ನಿಮಿಷವರೆಗೆ 6-5ರಲ್ಲಿ ಬುಲ್ಸ್ 8ನೇ ನಿಮಿಷದಲ್ಲಿ6-7ಕ್ಕೆ ಹಿನ್ನಡೆ ಕಂಡಿತು. ಮೊದಲ ಹತ್ತು ನಿಮಿಷಗಳ ಆಟದಲ್ಲಿ9-10ರಲ್ಲಿ ಹೋರಾಟ ಸಂಘಟಿಸಿದ ಬೆಂಗಳೂರು ಆಟಗಾರರು, ಮರು ನಿಮಿಷದಲ್ಲಿ11-11ರಲ್ಲಿ ಪುಟಿದೇಳುವ ಮೂಲಕ ಲಯ ಕಂಡುಕೊಂಡರು.
ಗಣೇಶ್ ಹನುಮಂತಗೋಳ ಅವರ ಸೂಪರ್ ರೇಡ್ ಜತೆಗೆ ಸೂಪರ್ ಟ್ಯಾಕಲ್‌ನಲ್ಲಿ ಪದೇ ಪದೇ ಮಿಂಚಿದ ಬೆಂಗಳೂರು ತಂಡ ವಿರಾಮದವೆರೆಗೂ ಮುನ್ನಡೆಯ ಹಿಡಿತ ಸಾಧಿಸಿತು. ಏಕಾಂಗಿ ಹೋರಾಟ ನಡೆಸಿದ ನಾಯಕ ದೇವಾಂಕ್ ವಾರಿಯರ್ಸ್ ತಂಡದ ಹಿನ್ನಡೆ ತಗ್ಗಿಸಲು ಹರಸಾಹಸ ನಡೆಸಿದರೂ ಇತರರು ಸೂಕ್ತ ಸಾಥ್ ನೀಡಲಿಲ್ಲ. ಬೆಂಗಳೂರು ಬುಲ್ಸ್ ತನ್ನ ಮುಂದಿನ ಪಂದ್ಯದಲ್ಲಿಅ.16ರಂದು ಪಟನಾ ಪೈರೇಟ್ಸ್ ತಂಡದ ಸವಾಲು ಎದುರಿಸಲಿದೆ.
ಮತ್ತೊಂದು ಪಂದ್ಯದಲ್ಲಿ ದಬಾಂಗ್ ಡೆಲ್ಲಿ ವಿರುದ್ಧ ಪುಣೇರಿ ಪಲ್ಟನ್ ಟೈ ಬ್ರೇಕ ನಲ್ಲಿ ಜಯ ಸಾಧಿಸಿ ಅಗ್ರಸ್ಥಾನಕ್ಕೇರಿತು.
