* ಭಾರತೀಯ ಫುಟ್ಬಾಲ್ ಸಂಸ್ಥೆಯ ಮೇಲೆ ಫೀಫಾ ನಿಷೇಧದ ತೂಗುಗತ್ತಿ* ಎಐಎಫ್'ಎಫ್'ನ ಆಡಳಿತ ವಿಚಾರದಲ್ಲಿ ದೆಹಲಿ ಹೈಕೋರ್ಟ್ ಹಸ್ತಕ್ಷೇಪಕ್ಕೆ ಫೀಫಾ ಆಕ್ಷೇಪ* ಪಾಕಿಸ್ತಾನ, ಕುವೇತ್ ಮೊದಲಾದ ಫುಟ್ಬಾಲ್ ಸಂಸ್ಥೆಗಳನ್ನು ನಿಷೇಧಿಸಿರುವ ಫೀಫಾ

ನವದೆಹಲಿ(ನ. 05): ಭಾರತೀಯ ಫುಟ್ಬಾಲ್ ಸಂಸ್ಥೆ (ಎಐಎಫ್ಎಫ್)ಯ ಮೇಲೆ ನಿಷೇಧದ ತೂಗುಗತ್ತಿ ಜೋತಾಡುತ್ತಿದೆ. ಸ್ವಲ್ಪ ಏಮಾರಿದರೂ ಎಐಎಫ್'ಎಫ್'ನ್ನು ಫೀಫಾ ನಿಷೇಧಿಸುವ ಸಾಧ್ಯತೆ ಇದೆ. ತನ್ನ ಅಧೀನದ ಸಂಸ್ಥೆಗಳ ಆಡಳಿತ ವ್ಯವಹಾರದಲ್ಲಿ ಮೂರನೇ ಪಕ್ಷದ ಹಸ್ತಕ್ಷೇಪ ಇರಬಾರದು ಎಂಬ ಕಠಿಣ ನಿಯಮ ಫೀಫಾದಲ್ಲಿದೆ. ಭಾರತೀಯ ಫುಟ್ಬಾಲ್ ಸಂಸ್ಥೆಯ ಅಧ್ಯಕ್ಷ ಆಯ್ಕೆ ವಿಚಾರದಲ್ಲಿ ದೆಹಲಿ ಹೈಕೋರ್ಟ್ ಮಧ್ಯಪ್ರವೇಶಿಸಿರುವುದು ಫೀಫಾಗೆ ಅಸಮಾಧಾನ ತಂದಿದೆ. ಈ ಹಿನ್ನೆಲೆಯಲ್ಲಿ ಎಐಎಫ್'ಎಫ್'ಗೆ ಫೀಫಾ ಎಚ್ಚರಿಕೆಯ ಸಂದೇಶ ರವಾನಿಸಿದೆ.

ಇಂಥದ್ದೇ ಸಮಸ್ಯೆಗಳಿದ್ದ ಪಾಕಿಸ್ತಾನ, ಕುವೇತ್ ಮತ್ತು ಗ್ವಾಟೆಮಾಲಾ ಮೊದಲಾದ ಕೆಲ ದೇಶಗಳ ಫುಟ್ಬಾಲ್ ಸಂಸ್ಥೆಗಳನ್ನು ಫೀಫಾ ಯಾವುದೇ ಮುಲಾಜಿಲ್ಲದೇ ನಿಷೇಧಿಸಿದೆ. ಅಂಡರ್-17 ವಿಶ್ವಕಪ್ ಮೂಲಕ ವಿಶ್ವ ಫುಟ್ಬಾಲ್ ಭೂಪಟದಲ್ಲಿ ಗುರುತಿಸಿಕೊಂಡಿರುವ ಭಾರತ ಈಗ ಸ್ವಲ್ಪ ಎಡವಿದರೂ ನಿಷೇಧಕ್ಕೊಳಗಾಗುವ ಅಪಾಯದಲ್ಲಿದೆ.

ಭಾರತೀಯ ಫುಟ್ಬಾಲ್ ಸಂಸ್ಥೆಯ ಸಮಸ್ಯೆ ಏನು?
ಎಐಎಫ್'ಎಫ್'ನ ಅಧ್ಯಕ್ಷೀಯ ಚುನಾವಣೆಯಲ್ಲಿ ಪ್ರಫುಲ್ ಪಟೇಲ್ ಮರುಆಯ್ಕೆಯಾಗಿರುತ್ತಾರೆ. ಆದರೆ, ಚುನಾವಣೆಯಲ್ಲಿ ಅಕ್ರಮ ಎಸಗಲಾಗಿದೆ ಎಂಬ ಆರೋಪದ ಹಿನ್ನೆಲೆಯಲ್ಲಿ ದೆಹಲಿ ಹೈಕೋರ್ಟ್ ಪ್ರಫುಲ್ ಪಟೇಲ್ ಆಯ್ಕೆಯನ್ನು ಅನೂರ್ಜಿತಗೊಳಿಸಿದೆ. ಪಟೇಲ್ ಬದಲು ಮಾಜಿ ಮುಖ್ಯ ಚುನಾವಣಾ ಆಯುಕ್ತ ಡಾ| ಎಸ್.ವೈ.ಖುರೇಷಿ ಅವರನ್ನು ಫುಟ್ಬಾಲ್ ಸಂಸ್ಥೆಯ ಆಡಳಿತಗಾರನಾಗಿ ನೇಮಿಸಿತು. ಈ ಮೂಲಕ ಎಐಎಫ್ಎಫ್ ಸಂಸ್ಥೆಯ ಆಡಳಿತದ ವಿಚಾರದಲ್ಲಿ ದೆಹಲಿ ಹೈಕೋರ್ಟ್ ತೃತೀಯ ಪಕ್ಷವಾಗಿ ಹಸ್ತಕ್ಷೇಪ ಮಾಡಿದಂತಾಯಿತು. ಇದು ಫೀಫಾ ನಿಯಮಕ್ಕೆ ವಿರುದ್ಧವಾಗಿದೆ. ಈ ಹಿನ್ನೆಲೆಯಲ್ಲಿ ಭಾರತೀಯ ಫುಟ್ಬಾಲ್ ಸಂಸ್ಥೆಗೆ ಫೀಫಾ ಪತ್ರ ಬರೆದಿದ್ದು, ಈ ಪ್ರಕರಣದಲ್ಲಿ ಹೆಚ್ಚಿನ ಮಾಹಿತಿ ಹಾಗೂ ಸಂಸ್ಥೆಯ ಮುಂದಿನ ನಡೆಗಳ ಬಗ್ಗೆ ತನಗೆ ತಿಳಿಸಬೇಕೆಂದು ಸೂಚಿಸಿದೆ.