ಕ್ರಿಕೆಟ್ ಮಾತ್ರವಲ್ಲದೆ ವಿವಿಧ ಕ್ರೀಡಾಕ್ಷೇತ್ರಗಳ ದಿಗ್ಗಜ ಕ್ರೀಡಾತಾರೆಗಳ ಬಗ್ಗೆ ಬಾಲಿವುಡ್‌'ನಲ್ಲಿ ಕೆಲ ವರ್ಷಗಳಿಂದ ಹಲವು ಸಿನಿಮಾಗಳು ತೆರೆ ಕಂಡಿದ್ದು, ಮತ್ತಷ್ಟು ಸಿನಿಮಾಗಳು ತೆರೆ ಕಾಣಲು ಸಿದ್ಧಗೊಳ್ಳುತ್ತಿವೆ.

ಮುಂಬೈ(ಸೆ.20): ಮಹೇಂದ್ರ ಸಿಂಗ್ ಧೋನಿ ಹಾಗೂ ಸಚಿನ್ ತೆಂಡುಲ್ಕರ್ ಅವರ ಜೀವನಾಧಾರಿತ ಸಿನಿಮಾಗಳಿಗೆ ಅಮೋಘ ಪ್ರತಿಕ್ರಿಯೆ ದೊರೆತ ಬಳಿಕ, ಇದೀಗ ಭಾರತ ಮಹಿಳಾ ಕ್ರಿಕೆಟ್ ತಂಡದ ಹಿರಿಯ ಆಟಗಾರ್ತಿ ಜೂಲನ್ ಗೋಸ್ವಾಮಿ ಜೀವನ ಕಥೆ ಸಹ ಬಾಲಿವುಡ್‌'ನಲ್ಲಿ ಸಿನಿಮಾ ಆಗಲಿದೆ.

Add Asianetnews Kannada as a Preferred SourcegooglePreferred

ಚಕ್ ದಾಹ ಎಕ್ಸ್‌ಪ್ರೆಸ್ ಎಂದೇ ಜನಪ್ರಿಯಗೊಂಡಿರುವ ಜೂಲನ್ ವೈಯಕ್ತಿಕ ಹಾಗೂ ಕ್ರಿಕೆಟ್ ಬದುಕಿನ ಕಥೆಗಳನ್ನು ಆಧರಿಸಿ ಸಿನಿಮಾ ಮಾಡಲು ನಿರ್ಧರಿಸಿರುವುದಾಗಿ ಬಂಗಾಳದ ನಿರ್ದೇಶಕ ಸುಶಾಂತ ದಾಸ್ ಘೋಷಿಸಿದ್ದಾರೆ. ಖಾಸಗಿ ಕಾರ್ಯಕ್ರಮವೊಂದರಲ್ಲಿ ಜೂಲನ್ ಸಮ್ಮುಖದಲ್ಲೇ ಸುಶಾಂತ ಈ ವಿಷಯ ಬಹಿರಂಗಗೊಳಿಸಿದರು. ನದಿಯಾ ಜಿಲ್ಲೆಯ ಜೂಲನ್ ಹುಟ್ಟೂರಿನಿಂದ ಲಂಡನ್‌ನ ಲಾರ್ಡ್ಸ್'ವರೆಗೂ ಕಥೆ ಸಾಗಲಿದೆ. ಸದ್ಯದಲ್ಲೇ ಕಥೆ ಬರೆಯುವ ಕೆಲಸ ಆರಂಭವಾಗಲಿದ್ದು, 2018ರ ಏಪ್ರಿಲ್‌'ನಲ್ಲಿ ಚಿತ್ರೀಕರಣ ಆರಂಭವಾಗಲಿದೆ ಎಂದು ಸುಶಾಂತ ತಿಳಿಸಿದ್ದಾರೆ.

‘ನಮ್ಮ ತಂಡ ಜೂಲನ್ ಎಲ್ಲೆಲ್ಲಾ ಕ್ರಿಕೆಟ್ ಆಡಿದ್ದಾರೋ ಅಲ್ಲಿಗೆ ತೆರಳಿ ಮಾಹಿತಿ ಕಲೆಹಾಕಲಿದೆ. ಈಗಾಗಲೇ ನಾವು ಬಾಲಿವುಡ್‌'ನಲ್ಲಿ ಉದ್ದ ಇರುವ ನಟಿಯರ ಹುಡುಕಾಟ ಆರಂಭಿಸಿದ್ದೇವೆ. ಕೆಲವರನ್ನು ಸಂಪರ್ಕಿಸಿದ್ದೇವೆ. ಆದರೆ ಅಂತಿಮವಾಗುವವರೆಗೂ ಜೂಲನ್ ಪಾತ್ರದಲ್ಲಿ ಕಾಣಿಸಿಕೊಳ್ಳಲಿರುವ ನಟಿ ಯಾರೆಂದು ಹೇಳುವುದಿಲ್ಲ’ ಎಂದು ನಿರ್ದೇಶಕ ಹೇಳಿದ್ದಾರೆ. ಕ್ರಿಕೆಟ್ ಮಾತ್ರವಲ್ಲದೆ ವಿವಿಧ ಕ್ರೀಡಾಕ್ಷೇತ್ರಗಳ ದಿಗ್ಗಜ ಆಟಗಾರರ ಬಗ್ಗೆ ಬಾಲಿವುಡ್‌'ನಲ್ಲಿ ಕೆಲ ವರ್ಷಗಳಿಂದ ಹಲವು ಸಿನಿಮಾಗಳು ತೆರೆ ಕಂಡಿದ್ದು, ಮತ್ತಷ್ಟು ಸಿನಿಮಾಗಳು ತೆರೆ ಕಾಣಲು ಸಿದ್ಧಗೊಳ್ಳುತ್ತಿವೆ.