ಮುಂಬೈ(ಏ.15): ಸೋಲಿನ ನೋವು ತಿಳಿದವರಿಗೇ ಗೆಲುವಿನ ಖುಷಿ ಎಂಥದ್ದು ಎನ್ನುವುದು ಗೊತ್ತಿರಲು ಸಾಧ್ಯ. ಸದ್ಯ ರಾಯಲ್‌ ಚಾಲೆಂಜ​ರ್ಸ್ ಬೆಂಗಳೂರು ತಂಡದ ಪರಿಸ್ಥಿತಿಯೂ ಹಾಗೇ ಇದೆ. ಸತತ 6 ಸೋಲುಗಳನ್ನು ಕಂಡು ಬೆಂಡಾಗಿದ್ದ ಆರ್‌ಸಿಬಿ, ಕಿಂಗ್ಸ್‌ ಇಲೆವೆನ್‌ ಪಂಜಾಬ್‌ ವಿರುದ್ಧ ಶನಿವಾರ ಮೊಹಾಲಿಯಲ್ಲಿ ಮೊದಲ ಗೆಲುವು ಸಾಧಿಸುತ್ತಿದ್ದಂತೆ ಪ್ರಶಸ್ತಿ ಗೆದ್ದಷ್ಟೇ ಸಂಭ್ರಮಿಸಿತು. ಈ ಗೆಲುವು ಆರ್‌ಸಿಬಿ ಪಾಳಯದಲ್ಲಿ ಉತ್ಸಾಹ ಹೆಚ್ಚಿಸಿದ್ದು, ಸೋಮವಾರ ಇಲ್ಲಿನ ವಾಂಖೇಡೆ ಕ್ರೀಡಾಂಗಣದಲ್ಲಿ ಮುಂಬೈ ಇಂಡಿಯನ್ಸ್‌ ವಿರುದ್ಧ ಕಣಕ್ಕಿಳಿಯಲಿದ್ದು ಜಯದ ಓಟ ಮುಂದುವರಿಸಲು ಕಾತರಿಸುತ್ತಿದೆ. ಜತೆಗೆ ಪ್ಲೇ-ಆಫ್‌ ರೇಸ್‌ನಲ್ಲೂ ಉಳಿದುಕೊಳ್ಳುವ ಒತ್ತಡ ಕೊಹ್ಲಿ ತಂಡದ ಮೇಲಿದೆ.

ಆರ್‌ಸಿಬಿ ವಿರಾಟ್‌ ಕೊಹ್ಲಿ ಹಾಗೂ ಎಬಿ ಡಿವಿಲಿಯರ್ಸ್ ಮೇಲೆ ಅತಿಯಾಗಿ ಅವಲಂಬಿತಗೊಂಡಿದೆ. ಮುಂಬೈ ಅಭಿಮಾನಿಗಳ ಮುಂದೆ ಈ ಇಬ್ಬರು ಮತ್ತೊಮ್ಮೆ ಜಾದೂ ಪ್ರದರ್ಶಿಸಬೇಕಿದೆ. ಈ ಮೈದಾನದಲ್ಲಿ ಇಬ್ಬರೂ ಸವಿ ನೆನಪುಗಳನ್ನು ಹೊಂದಿದ್ದು, ಅದ್ಭುತ ಲಯ ಮುಂದುವರಿಸಿದರೆ ಆರ್‌ಸಿಬಿಗೆ ಗೆಲುವು ನಿಶ್ಚಿತ. ಕೊಹ್ಲಿ (7 ಪಂದ್ಯಗಳಲ್ಲಿ 270 ರನ್‌) ಹಾಗೂ ಎಬಿಡಿ (7 ಪಂದ್ಯಗಳಲ್ಲಿ 232 ರನ್‌) ಹೊರತುಪಡಿಸಿ ಸ್ಥಿರ ಪ್ರದರ್ಶನ ತೋರುತ್ತಿರುವ ಮತ್ತೊಬ್ಬ ಬ್ಯಾಟ್ಸ್‌ಮನ್‌ ಎಂದರೆ ಅದು ವಿಕೆಟ್‌ ಕೀಪರ್‌ ಪಾರ್ಥೀವ್‌ ಪಟೇಲ್‌. ಅವರ ತಂದೆ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದರೂ, ತಂಡಕ್ಕೆ ಸಂಪೂರ್ಣ ಬದ್ಧತೆ ತೋರುತ್ತಿರುವ ಪಾರ್ಥೀವ್‌ 7 ಪಂದ್ಯಗಳಲ್ಲಿ 191 ರನ್‌ ಗಳಿಸಿದ್ದಾರೆ. ಆದರೆ ಅಕ್ಷ್’ದೀಪ್‌ ನಾಥ್‌, ಮೋಯಿನ್‌ ಅಲಿ, ಮಾರ್ಕಸ್‌ ಸ್ಟೋಯ್ನಿಸ್‌ರಿಂದಲೂ ದೊಡ್ಡ ಇನ್ನಿಂಗ್ಸ್‌ ಮೂಡಿಬರಬೇಕಿದೆ.

ಬೌಲಿಂಗ್‌ ವಿಭಾಗದಲ್ಲಿ ಯಜುವೇಂದ್ರ ಚಹಲ್‌ ತಂಡದ ಪ್ರಮುಖ ಅಸ್ತ್ರವಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. 7 ಪಂದ್ಯಗಳಲ್ಲಿ 11 ವಿಕೆಟ್‌ ಕಬಳಿಸಿರುವ ಚಹಲ್‌ಗೆ ಇನ್ನುಳಿದ ಬೌಲರ್‌ಗಳಿಂದ ಸರಿಯಾದ ಬೆಂಬಲ ಸಿಗುತ್ತಿಲ್ಲ. ನವ್‌ದೀಪ್‌ ಸೈನಿ ರನ್‌ ನಿಯಂತ್ರಿಸುತ್ತಿದ್ದಾರೆ ಆದರೂ, ವಿಕೆಟ್‌ ಕೀಳುವಲ್ಲಿ ವಿಫಲರಾಗುತ್ತಿದ್ದಾರೆ. ಮೊಹಮದ್‌ ಸಿರಾಜ್‌ ಹಾಗೂ ಉಮೇಶ್‌ ಯಾದವ್‌ ಪ್ರತಿ ಪಂದ್ಯದಲ್ಲಿ ದುಬಾರಿಯಾಗುತ್ತಿದ್ದರೂ ಅವರನ್ನೇ ಆಡಿಸುತ್ತಿರುವುದೇಕೆ ಎನ್ನುವ ಪ್ರಶ್ನೆಗೆ ಕೊಹ್ಲಿಯೇ ಉತ್ತರಿಸಬೇಕು.

ಮತ್ತೊಂದೆಡೆ ಕಳೆದ ಪಂದ್ಯದಲ್ಲಿ ರಾಜಸ್ಥಾನ ರಾಯಲ್ಸ್‌ ವಿರುದ್ಧ 4 ವಿಕೆಟ್‌ ಸೋಲು ಅನುಭವಿಸಿದ ಮುಂಬೈ, ಗೆಲುವಿನ ಹಳಿಗೆ ಮರಳಲು ಎದುರು ನೋಡುತ್ತಿದೆ. ನಾಯಕ ರೋಹಿತ್‌ ಶರ್ಮಾ ಹಾಗೂ ಕ್ವಿಂಟನ್‌ ಡಿ ಕಾಕ್‌ ಲಯಕ್ಕೆ ಮರಳಿರುವುದು ತಂಡದ ಆತ್ಮವಿಶ್ವಾಸ ಹೆಚ್ಚಿಸಿದೆ. ಸೂರ್ಯಕುಮಾರ್‌, ಪೊಲ್ಲಾರ್ಡ್‌, ಹಾರ್ದಿಕ್‌, ಕೃನಾಲ್‌ರಂತಹ ಬಲಿಷ್ಠ ಬ್ಯಾಟಿಂಗ್‌ ಪಡೆ ಹೊಂದಿರುವ ಮುಂಬೈ, ಆರ್‌ಸಿಬಿಯ ಅಸ್ಥಿರ ಬೌಲಿಂಗ್‌ ಪ್ರದರ್ಶನದ ಲಾಭ ಪಡೆಯಲು ಕಾತರಿಸುತ್ತಿದ್ದಾರೆ.

ಚಿನ್ನಸ್ವಾಮಿಯಲ್ಲಿ ನಡೆದಿದ್ದ ಮೊದಲ ಪಂದ್ಯದಲ್ಲಿ ಜಸ್ಪ್ರೀತ್‌ ಬುಮ್ರಾ, ವಿರಾಟ್‌ ಕೊಹ್ಲಿಯನ್ನು ಔಟ್‌ ಮಾಡುವಲ್ಲಿ ಯಶಸ್ಸು ಸಾಧಿಸಿದ್ದರು. ಕೊಹ್ಲಿ ಹಾಗೂ ಎಬಿಡಿಯನ್ನು ಕಟ್ಟಿಹಾಕಲು ರೋಹಿತ್‌ ಮತ್ತೊಮ್ಮೆ ಬುಮ್ರಾ ಮೇಲೆಯೇ ವಿಶ್ವಾಸವಿರಿಸಲಿದ್ದಾರೆ. ವೇಗಿ ಅಲ್ಜಾರಿ ಜೋಸೆಫ್‌ ಭುಜದ ಗಾಯಕ್ಕೆ ತುತ್ತಾಗಿದ್ದು, ಈ ಪಂದ್ಯಕ್ಕೆ ಅಲಭ್ಯರಾಗುವ ಸಾಧ್ಯತೆ ಇದೆ.

ಪಿಚ್‌ ರಿಪೋರ್ಟ್‌

ವಾಂಖೇಡೆ ಪಿಚ್‌ ಬ್ಯಾಟ್ಸ್‌ಮನ್‌ಗಳ ಪಾಲಿಗೆ ಸ್ವರ್ಗ ಎನಿಸಿದ್ದು ರನ್‌ ಹೊಳೆ ಹರಿಯಲಿದೆ. ಮೊದಲು ಬ್ಯಾಟ್‌ ಮಾಡುವ ತಂಡ ಕನಿಷ್ಠ 190-200 ರನ್‌ ದಾಖಲಿಸಬೇಕು. ನಿಧಾನಗತಿಯ ಬೌಲಿಂಗ್‌ಗೆ ನೆರವು ಸಿಗಲಿದ್ದು, ಸ್ಪಿನ್ನರ್‌ಗಳು ಪ್ರಮುಖ ಪಾತ್ರ ವಹಿಸಲಿದ್ದಾರೆ.


ಒಟ್ಟು ಮುಖಾಮುಖಿ: 24

ಆರ್‌ಸಿಬಿ: 09

ಮುಂಬೈ: 15

ಸಂಭವನೀಯ ಆಟಗಾರರ ಪಟ್ಟಿ

ಆರ್‌ಸಿಬಿ: ಪಾರ್ಥೀವ್‌ ಪಟೇಲ್‌, ವಿರಾಟ್‌ ಕೊಹ್ಲಿ (ನಾಯಕ), ಎಬಿ ಡಿವಿಲಿಯ​ರ್ಸ್, ಮಾರ್ಕಸ್‌ ಸ್ಟೋಯ್ನಿಸ್‌, ಮೋಯಿನ್‌ ಅಲಿ, ಅಕ್‌್ಷದೀಪ್‌ ನಾಥ್‌, ಪವನ್‌ ನೇಗಿ, ಉಮೇಶ್‌ ಯಾದವ್‌, ಮೊಹಮದ್‌ ಸಿರಾಜ್‌, ನವ್‌ದೀಪ್‌ ಸೈನಿ, ಯಜುವೇಂದ್ರ ಚಹಲ್‌.

ಮುಂಬೈ: ರೋಹಿತ್‌ ಶರ್ಮಾ (ನಾಯಕ), ಕ್ವಿಂಟನ್‌ ಡಿ ಕಾಕ್‌, ಸೂರ್ಯಕುಮಾರ್‌, ಇಶಾನ್‌ ಕಿಶನ್‌, ಕಿರೊನ್‌ ಪೊಲ್ಲಾರ್ಡ್‌, ಹಾರ್ದಿಕ್‌ ಪಾಂಡ್ಯ, ಕೃನಾಲ್‌ ಪಾಂಡ್ಯ, ರಾಹುಲ್‌ ಚಾಹರ್‌, ಜೇಸನ್‌ ಬೆಹ್ರನ್‌ಡೋರ್ಫ್, ಲಸಿತ್‌ ಮಾಲಿಂಗ, ಜಸ್ಪ್ರೀತ್‌ ಬುಮ್ರಾ.

ಸ್ಥಳ: ಮುಂಬೈ 
ಪಂದ್ಯ ಆರಂಭ: ರಾತ್ರಿ 8ಕ್ಕೆ
ನೇರ ಪ್ರಸಾರ: ಸ್ಟಾರ್‌ ಸ್ಪೋರ್ಟ್ಸ್ 1

ಮತದಾನ ನಮ್ಮ ಹಕ್ಕು... ಪ್ರಜಾಪ್ರಭುತ್ವದ ಉತ್ಸವವನ್ನು ಯಶಸ್ವಿಗೊಳಿಸೋಣ...

ದೇಶದಲ್ಲಿ ಏ.11 ರಿಂದ ಮೇ 19ರವರೆಗೆ ಏಳು ಹಂತಗಳಲ್ಲಿ ಮತದಾನ. ಕರ್ನಾಟಕದಲ್ಲಿ ಏ.18 ಹಾಗೂ ಏ.23ರಂದು ಎರಡು ಹಂತಗಳಲ್ಲಿ ಮತದಾನ. ಭಾರತದಲ್ಲಿ 543 ಲೋಕಸಭಾ ಕ್ಷೇತ್ರ, ಕರ್ನಾಟಕದಲ್ಲಿ 28.