"ದೇಹದ ಮೇಲಿನ ಎಷ್ಟು ಗಾಯಗಳ ನೋವನ್ನು ಬೇಕಿದ್ದರೂ ಸಹಿಸುತ್ತೇನೆ, ಆದರೆ ಕ್ರಿಕೆಟ್ ಬಿಟ್ಟು ಜೀವಿಸಲು ಸಾಧ್ಯವಿಲ್ಲ"- ಇರ್ಫಾನ್ ಪಠಾಣ್

ನವದೆಹಲಿ(ಫೆ.22): ಬರೋಡದ ಆಲ್ರೌಂಡರ್ ಇರ್ಫಾನ್ ಪಠಾಣ್ ಹಾಗೂ ಇಶಾಂತ್ ಶರ್ಮಾ ಅವರನ್ನು ಐಪಿಎಲ್ 10 ಆವೃತ್ತಿಯಲ್ಲಿ ಯಾವುದೇ ಫ್ರಾಂಚೈಸಿಗಳು ಖರೀದಿಸದೇ ಇರುವುದು ಸಾಕಷ್ಟು ಕ್ರೀಡಾಭಿಮಾನಿಗಳಿಗೆ ಹುಬ್ಬೇರಿಸುವಂತೆ ಮಾಡಿದೆ. ಒಂದು ಕಾಲದಲ್ಲಿ ಐಪಿಎಲ್ ಸ್ಪೆಷಲಿಸ್ಟ್ ಎಂದೇ ಗುರುತಿಸಿಕೊಂಡಿದ್ದ ಇರ್ಫಾನ್ ಪಠಾಣ್ ಅವರಿಗೆ ನಿಗದಿಪಡಿಸಲಾಗಿದ್ದ 50 ಲಕ್ಷ ರೂಪಾಯಿಗೂ ಖರೀದಿಸಲು ಯಾವ ಫ್ರಾಂಚೈಸಿಯೂ ಮನಸು ಮಾಡಲಿಲ್ಲ.

ಈ ಬಗ್ಗೆ ಮನಬಿಚ್ಚಿ ಮಾತನಾಡಿರುವ ಬರೋಡದ ಆಲ್ರೌಂಡರ್, "ದೇಹದ ಮೇಲಿನ ಎಷ್ಟು ಗಾಯಗಳ ನೋವನ್ನು ಬೇಕಿದ್ದರೂ ಸಹಿಸುತ್ತೇನೆ, ಆದರೆ ಕ್ರಿಕೆಟ್ ಬಿಟ್ಟು ಜೀವಿಸಲು ಸಾಧ್ಯವಿಲ್ಲ" ಎಂದಿದ್ದಾರೆ.

ಪಠಾಣ್ ಅವರನ್ನು ಐಪಿಎಲ್ ಫ್ರಾಂಚೈಸಿಗಳು ಖರೀದಿಸಿದ ಬೆನ್ನಲ್ಲೆ ಸಾಮಾಜಿಕ ಜಾಲತಾಣಗಳಲ್ಲಿ ಇರ್ಫಾನ್ ಕ್ರಿಕೆಟ್ ಬದುಕು ಮುಗಿದೇ ಹೋಯಿತು ಎನ್ನುವಂತ ಚರ್ಚೆಗಳು ನಡೆಯುತ್ತಿವೆ. ಈ ಬಗ್ಗೆ ಟ್ವಿಟ್ಟರ್'ನಲ್ಲಿ ತಮ್ಮ ನೋವನ್ನು ತೋಡಿಕೊಂಡಿರುವ ಪಠಾಣ್, " 2010ರಲ್ಲಿ ನನಗೆ ಐದು ಗಂಭೀರ ಗಾಯಗಳಾಗಿದ್ದವು. ಆಗ ಫಿಸಿಯೋ ನೀವು ಭವಿಷ್ಯದಲ್ಲಿ ಕ್ರಿಕೆಟ್ ಆಡಲು ಸಾಧ್ಯವಾಗದೇ ಇರಬಹುದು ಎಂದಿದ್ದರು. ಆಗ ನಾನು ಅವರಿಗೆ ನಾನು ಎಷ್ಟು ಗಾಯದ ನೋವನ್ನು ಬೇಕಾದರೂ ಭರಿಸುತ್ತೇನೆ. ಆದರೆ ದೇಶಕ್ಕಾಗಿ ಕ್ರಿಕೆಟ್ ಆಡುವುದನ್ನು ಬಿಟ್ಟು ಜೀವಿಸಲು ಸಾಧ್ಯವಿಲ್ಲ ಎಂದಿದ್ದೆ"

ಇದಾದ ಕೆಲದಿನಗಳ ಬಳಿಕ ಟೀಂ ಇಂಡಿಯಾಗೆ ಕಮ್'ಬ್ಯಾಕ್ ಕೂಡ ಮಾಡಿದ್ದೆ. ನನ್ನ ಕ್ರಿಕೆಟ್ ವೃತ್ತಿಜೀವನದಲ್ಲಿ ಸಾಕಷ್ಟು ಏಳುಬೀಳುಗಳನ್ನು ಕಂಡಿದ್ದೇನೆ. ಖಂಡಿತಾ ಈ ಏಳುಬೀಳುಗಳನ್ನು ದಾಟಿ ಹೊರಬರುತ್ತೇನೆ. ಈಗಲೂ ಪ್ರಾರ್ಥಿಸುತ್ತಿರುವ ಅಭಿಮಾನಿಗಳಿಗೆ ಧನ್ಯವಾದಗಳನ್ನು ಹೇಳುತ್ತೇನೆ ಎಂದಿದ್ದಾರೆ.

Scroll to load tweet…