ಐಪಿಎಲ್ 10ನೇ ಆವೃತ್ತಿಯಲ್ಲಿ ರಾಹುಲ್ ತ್ರಿಪಾಠಿ, ನಿತೀಶ್ ರಾಣಾ, ಸಿದ್ದಾರ್ಥ್ ಕೌಲ್, ಕೃನಾಲ್ ಪಾಂಡ್ಯ ಸೇರಿದಂತೆ ಸಾಕಷ್ಟು ಯುವ ಕ್ರಿಕೆಟಿಗರು ಗಮನಸೆಳೆಯುವಲ್ಲಿ ಯಶಸ್ವಿಯಾಗಿದ್ದಾರೆ.

ಬೆಂಗಳೂರು(ಮೇ.16): ಇಂಡಿಯನ್ ಪ್ರೀಮಿಯರ್ ಲೀಗ್'ನಿಂದಾಗಿ ಯುವ ಪ್ರತಿಭೆಗಳು ಹೊರಹೊಮ್ಮುತ್ತಿದ್ದು, ಭಾರತ ಕ್ರಿಕೆಟ್ ತಂಡದ ಬೆಳವಣಿಗೆ ಕಂಡರೆ ಭಯವಾಗುತ್ತಿದೆ ಎಂದು ದಕ್ಷಿಣ ಆಫ್ರಿಕಾದ ಖ್ಯಾತ ಆಟಗಾರ ಎಬಿ ಡಿವಿಲಿಯರ್ಸ್ ಅಭಿಪ್ರಾಯಪಟ್ಟಿದ್ದಾರೆ.

ಐಪಿಎಲ್'ನಿಂದಾಗಿ ವರ್ಷದಿಂದ ವರ್ಷಕ್ಕೆ ಭಾರತದಲ್ಲಿ ಹೊಸ ಪ್ರತಿಭೆಗಳು ಬೆಳಕಿಗೆ ಬರುತ್ತಿದ್ದು, ತಮ್ಮ ಸಾಮರ್ಥ್ಯ ಅನಾವರಣ ಮಾಡಲು ಚುಟುಕು ಕ್ರಿಕೆಟ್ ಮಾದರಿ ಸಹಾಯಕವಾಗಿದೆ. ಬೇರೆ ದೇಶಗಳಿಗೆ ಹೋಲಿಸಿದರೆ ಭಾರತದಲ್ಲಿ ಅತಿ ಹೆಚ್ಚು ಯುವ ಕ್ರಿಕೆಟಿಗರು ಹೊರಹೊಮ್ಮುತ್ತಿದ್ದು, ಒತ್ತಡದ ಸಂದರ್ಭದಲ್ಲೂ ಅತ್ಯುತ್ತಮ ಆಟವಾಡುತ್ತಿದ್ದಾರೆ. ಹೀಗಾಗಿ ಟೀಂ ಇಂಡಿಯಾ ಮುಂದಿನ ದಿನಗಳಲ್ಲಿ ಇನ್ನಷ್ಟು ಬಲಿಷ್ಟವಾಗುವುದರಲ್ಲಿ ಎರಡು ಮಾತಿಲ್ಲ ಎಂದು ಏಕದಿನ ಕ್ರಿಕೆಟ್'ನಲ್ಲಿ ಅತಿವೇಗದ ಶತಕ ದಾಖಲಿಸಿರುವ ಎಬಿಡಿ ಹೇಳಿದ್ದಾರೆ.

ಐಪಿಎಲ್ 10ನೇ ಆವೃತ್ತಿಯಲ್ಲಿ ರಾಹುಲ್ ತ್ರಿಪಾಠಿ, ನಿತೀಶ್ ರಾಣಾ, ಸಿದ್ದಾರ್ಥ್ ಕೌಲ್, ಕೃನಾಲ್ ಪಾಂಡ್ಯ ಸೇರಿದಂತೆ ಸಾಕಷ್ಟು ಯುವ ಕ್ರಿಕೆಟಿಗರು ಗಮನಸೆಳೆಯುವಲ್ಲಿ ಯಶಸ್ವಿಯಾಗಿದ್ದಾರೆ.

ವಿಶ್ವದರ್ಜೆಯ ಕ್ರಿಕೆಟರ್'ಗಳಾದ ವಿರೇಂದ್ರ ಸೆಹ್ವಾಗ್, ಗ್ಲೇನ್ ಮ್ಯಾಕ್ಸ್'ವೆಲ್, ಬ್ರೆಂಡನ್ ಮೆಕ್ಲಮ್, ಲಸಿತ್ ಮಾಲಿಂಗ್ ಅವರಂತಹ ಆಟಗಾರರೊಂದಿಗೆ ಡ್ರೆಸ್ಸಿಂಗ್ ರೂಂ ಹಂಚಿಕೊಳ್ಳುವ ಮೂಲಕ ಈ ಯುವ ಆಟಗಾರರು ಇನ್ನಷ್ಟು ಪ್ರಯೋಜನ ಪಡೆದುಕೊಳ್ಳುತ್ತಿದ್ದಾರೆ. ಇದು ಟೀಂ ಇಂಡಿಯಾ ಪಾಲಿಗೆ ಒಳ್ಳೆಯ ಬೆಳವಣಿಗೆಯಾದರೆ, ಇತರೆ ತಂಡಗಳಿಗೆ ಎಚ್ಚರಿಕೆಯ ಕರೆಗಂಟೆಯಾಗಿದೆ ಎಂದು ಆರ್'ಸಿಬಿ ಸ್ಟಾರ್ ಆಟಗಾರ ಅಭಿಪ್ರಾಯಪಟ್ಟಿದ್ದಾರೆ.