ನವದೆಹಲಿ(ಜ.26): 2020ನೇ ಸಾಲಿನ ಪದ್ಮ ಪ್ರಶಸ್ತಿಯನ್ನು ಕೇಂದ್ರ ಸರ್ಕಾರ ಸೋಮವಾರ ಪ್ರಟಕಗೊಳಿಸಿದ್ದು, ಕರ್ನಾಟಕದ ಹಿರಿಯ ಪ್ಯಾರಾ ಅಥ್ಲೀಟ್‌ ಕೆ.ವೈ.ವೆಂಕಟೇಶ್‌ ಪದ್ಮಶ್ರೀ ಗೌರವಕ್ಕೆ ಪಾತ್ರರಾಗಿದ್ದಾರೆ. ಒಟ್ಟಾರೆ 7 ಕ್ರೀಡಾಪಟುಗಳಿಗೆ ಪದ್ಮಶ್ರೀ ಪ್ರಶಸ್ತಿ ದೊರೆತಿದೆ.

ಲಿಮ್ಕಾ ದಾಖಲೆ ವೀರ ವೆಂಕಟೇಶ್‌

ಬೆಂಗಳೂರಿನ ಕೆ.ವೈ.ವೆಂಕಟೇಶ್‌ ಭಾರತದ ಪ್ಯಾರಾ ಸ್ಪೋರ್ಟ್ಸ್‌ನಲ್ಲಿ ಪರಿಚಿತ ಹೆಸರು. ಕುಬ್ಜ ಅಥ್ಲೀಟ್‌ ವೆಂಕಟೇಶ್‌ 1994ರಲ್ಲಿ ಬರ್ಲಿನ್‌ನಲ್ಲಿ ನಡೆದಿದ್ದ ಮೊದಲ ಅಂತಾರಾಷ್ಟ್ರೀಯ ಪ್ಯಾರಾಲಿಂಪಿಕ್‌ ಸಮಿತಿ (ಐಪಿಸಿ) ವಿಶ್ವ ಅಥ್ಲೆಟಿಕ್ಸ್‌ ಚಾಂಪಿಯನ್‌ಶಿಪ್‌ನಲ್ಲಿ ಪಾಲ್ಗೊಂಡಿದ್ದರು. ಕೇವಲ ಅಥ್ಲೆಟಿಕ್ಸ್‌ ಮಾತ್ರವಲ್ಲದೆ ಬ್ಯಾಡ್ಮಿಂಟನ್‌, ಬಾಸ್ಕೆಟ್‌ಬಾಲ್‌, ಹಾಕಿ, ವಾಲಿಬಾಲ್‌ ಸೇರಿ ಇನ್ನೂ ಕೆಲ ಕ್ರೀಡೆಗಳಲ್ಲಿ ವೆಂಕಟೇಶ್‌ ಸ್ಪರ್ಧಿಸಿ ಹಲವು ಪ್ರಶಸ್ತಿಗಳನ್ನು ಜಯಿಸಿದ್ದಾರೆ.

SPBಗೆ ಪದ್ಮವಿಭೂಷಣ, ಕಂಬಾರರಿಗೆ ಪದ್ಮಭೂಷಣ, ಮಂಜಮ್ಮ ಜೋಗತಿಗೆ ಪದ್ಮಶ್ರೀ

1999ರಲ್ಲಿ ಆಸ್ಪ್ರೇಲಿಯಾದಲ್ಲಿ ನಡೆದಿದ್ದ ಚಾಂಪಿಯನ್‌ಶಿಪ್‌ನಲ್ಲಿ ಶಾಟ್‌ಪುಟ್‌ ಸ್ಪರ್ಧೆಯಲ್ಲಿ ಚಿನ್ನದ ಪದಕ ಗೆದ್ದಿದ್ದ ವೆಂಕಟೇಶ್‌, 2005ರಲ್ಲಿ ನಡೆದಿದ್ದ 4ನೇ ವಿಶ್ವ ಕುಬ್ಜರ ಕ್ರೀಡಾಕೂಟದಲ್ಲಿ ಸ್ಪರ್ಧಿಸಿ, ಈ ಕ್ರೀಡಾಕೂಟದಲ್ಲಿ ಪಾಲ್ಗೊಂಡ ಭಾರತದ ಮೊದಲ ಕ್ರೀಡಾಪಟು ಎನ್ನುವ ದಾಖಲೆ ಬರೆದಿದ್ದರು. ಈ ಕ್ರೀಡಾಕೂಟದಲ್ಲಿ ವೆಂಕಟೇಶ್‌ ಅಥ್ಲೆಟಿಕ್ಸ್‌ ಹಾಗೂ ಬ್ಯಾಡ್ಮಿಂಟನ್‌ನಲ್ಲಿ 2 ಚಿನ್ನ, 1 ಬೆಳ್ಳಿ ಹಾಗೂ 3 ಕಂಚಿನ ಪದಕ ಜಯಿಸಿದ್ದರು. ಇವರ ಪದಕ ಸಾಧನೆಯನ್ನು ಪರಿಗಣಿಸಿ ಲಿಮ್ಕಾ ಬುಕ್‌ ಆಫ್‌ ರೆಕಾರ್ಡ್ಸ್‌ಗೆ ಇವರ ಹೆಸರನ್ನು ಸೇರ್ಪಡೆಗೊಳಿಸಲಾಗಿತ್ತು.

ಪದ್ಮಶ್ರೀ ಗೌರವ ಸಿಕ್ಕಿದ್ದು ಬಹಳ ಖುಷಿ ನೀಡಿದೆ. ಕ್ರೀಡೆಯಲ್ಲಿ ನಾನು ಮಾಡಿದ ಸಾಧನೆಯನ್ನು ಪರಿಗಣಿಸಿ ಅತ್ಯುನ್ನತ ಗೌರವಕ್ಕೆ ನನ್ನನ್ನು ಆಯ್ಕೆ ಮಾಡಿದ್ದಕ್ಕೆ ಕೇಂದ್ರ ಸರ್ಕಾರಕ್ಕೆ ಹಾಗೂ ಪ್ರಶಸ್ತಿ ಆಯ್ಕೆ ಸಮಿತಿಗೆ ಧನ್ಯವಾದ ತಿಳಿಸುತ್ತೇನೆ - ಕೆ.ವೈ.ವೆಂಕಟೇಶ್‌, ಪದ್ಮಶ್ರೀ ಪುರಸ್ಕೃತರು

ವಿರೇಂದರ್‌ ಸಿಂಗ್‌: ಹರ್ಯಾಣದ ಅರ್ಜುನ ಪ್ರಶಸ್ತಿ ವಿಜೇತ ಕುಸ್ತಿ ಪಟು ವಿಜೇಂದರ್‌ ಸಿಂಗ್‌ ಕಿವುಡರ ಒಲಿಂಪಿಕ್ಸ್‌ನಲ್ಲಿ ಒಟ್ಟು 3 ಚಿನ್ನ ಹಾಗೂ ಒಂದು ಕಂಚಿನ ಪದಕವನ್ನು ಜಯಿಸಿದ್ದಾರೆ. ಜೊತೆಗೆ 3 ವಿಶ್ವ ಚಾಂಪಿಯನ್‌ಶಿಪ್‌ಗಳಲ್ಲಿ ತಲಾ ಒಂದು ಚಿನ್ನ, ಬೆಳ್ಳಿ ಹಾಗೂ ಕಂಚು ಗೆದ್ದಿದ್ದಾರೆ.

ಸುಧಾ ಸಿಂಗ್‌: ಉತ್ತರ ಪ್ರದೇಶದ ಅಥ್ಲೀಟ್‌ ಸುಧಾ ಸಿಂಗ್‌, 3000 ಮೀ. ಸ್ಟೀಪಲ್‌ ಚೇಸ್‌ನಲ್ಲಿ ರಾಷ್ಟ್ರೀಯ ದಾಖಲೆ ಹೊಂದಿದ್ದು, ಏಷ್ಯಾ ಚಾಂಪಿಯನ್‌ ಸಹ ಆಗಿದ್ದಾರೆ. 2012, 2016ರ ಒಲಿಂಪಿಕ್ಸ್‌ನಲ್ಲಿ ಭಾರತವನ್ನು ಪ್ರತಿನಿಧಿಸಿದ್ದರು. 2012ರಲ್ಲಿ ಅರ್ಜುನ ಪ್ರಶಸ್ತಿ ದೊರೆತಿತ್ತು.

ಮಾಧವನ್‌ ನಂಬಿಯಾರ್‌: ಭಾರತದ ದಿಗ್ಗಜ ಅಥ್ಲೀಟ್‌ ಪಿ.ಟಿ. ಉಷಾ ಅವರ ಕೋಚ್‌ ಆಗಿದ್ದ ಕೇರಳದ ಮಾಧವನ್‌ ನಂಬಿಯಾರ್‌ಗೆ 1985ರಲ್ಲಿ ದ್ರೋಣಾಚಾರ್ಯ ಪ್ರಶಸ್ತಿ ಲಭಿಸಿತ್ತು. ಕ್ರೀಡಾಪಟುಗಳು ತಮ್ಮ ಪ್ರದರ್ಶನ ಗುಣಮಟ್ಟಹೆಚ್ಚಿಸಲು ಡ್ರಗ್ಸ್‌ ಸೇವಿಸುವುದನ್ನು ಬಲವಾಗಿ ವಿರೋಧಿಸಿದ್ದರು.

ಅಂಶು ಜಾಮ್ಸೆನ್‌ಷಾ: ಅರುಣಾಚಲ ಪ್ರದೇಶದ ಅಂಶು ಭಾರತದ ಖ್ಯಾತ ಪರ್ವತಾರೋಹಿ. ಒಂದೇ ಋುತುವಿನಲ್ಲಿ ಎರಡು ಬಾರಿ ಮೌಂಟ್‌ ಎವರೆಸ್ಟ್‌ ಏರಿದ ವಿಶ್ವದ ಮೊದಲ ಮಹಿಳೆ ಎನ್ನುವ ದಾಖಲೆಯನ್ನು 2017ರಲ್ಲಿ ಬರೆದಿದ್ದರು. ಅದೇ ವರ್ಷ ಅವರಿಗೆ ರಾಷ್ಟ್ರೀಯ ಶೌರ್ಯ ಪ್ರಶಸ್ತಿ ಲಭಿಸಿತ್ತು.

ಮೌಮಾ ದಾಸ್‌: ಬಂಗಾಳದ ಹಿರಿಯ ಟೇಬಲ್‌ ಟೆನಿಸ್‌ ಆಟಗಾರ್ತಿ ಮೌಮಾ ದಾಸ್‌, ಕಾಮನ್‌ವೆಲ್ತ್‌ ಕ್ರೀಡಾಕೂಟಗಳಲ್ಲಿ ಹಲವು ಪ್ರಶಸ್ತಿ ಜಯಿಸಿದ್ದಾರೆ. 2004, 2016ರ ಒಲಿಂಪಿಕ್ಸ್‌ನಲ್ಲಿ ಭಾರತವನ್ನು ಪ್ರತಿನಿಧಿಸಿದ್ದರು. 2017ರ ವಿಶ್ವ ಚಾಂಪಿಯನ್‌ಶಿಪ್‌ನ ಮಹಿಳಾ ಡಬಲ್ಸ್‌ನಲ್ಲಿ ಕ್ವಾರ್ಟರ್‌ಗೇರಿ ದಾಖಲೆ ಬರೆದಿದ್ದರು.

ಪಿ.ಅನಿತಾ: ಭಾರತ ಬಾಸ್ಕೆಟ್‌ಬಾಲ್‌ ತಂಡದ ಮಾಜಿ ನಾಯಕಿ, ತಮಿಳುನಾಡಿದ ಪಿ.ಅನಿತಾ 18 ವರ್ಷಗಳ ಕಾಲ ರಾಷ್ಟ್ರೀಯ ತಂಡದಲ್ಲಿ ಆಡಿದ್ದರು. ಸತತ 9 ಬಾರಿ ಏಷ್ಯಾ ಬಾಸ್ಕೆಟ್‌ಬಾಲ್‌ ಕಾನ್ಫೆಡ್ರೇಷನ್‌ (ಎಬಿಸಿ) ಚಾಂಪಿಯನ್‌ಶಿಪ್‌ನಲ್ಲಿ ಆಡಿದ ಭಾರತದ ಏಕೈಕ ಆಟಗಾರ್ತಿ ಎನ್ನುವ ದಾಖಲೆ ಬರೆದಿದ್ದರು.