ಟಿ20 ವಿಶ್ವಕಪ್ ತಂಡದಿಂದ ಹೊರಬಿದ್ದಿರುವ ಶುಭ್‌ಮನ್ ಗಿಲ್, ಇದೀಗ ಡಿಸೆಂಬರ್ 24ರಿಂದ ಆರಂಭವಾಗಲಿರುವ ವಿಜಯ್ ಹಜಾರೆ ಟೂರ್ನಿಯಲ್ಲಿ ಪಂಜಾಬ್ ತಂಡದ ಪರ ಆಡಲು ಸಜ್ಜಾಗಿದ್ದಾರೆ. ಗಾಯದಿಂದ ಚೇತರಿಸಿಕೊಂಡಿರುವ ಗಿಲ್, ಈ ಟೂರ್ನಿಯಲ್ಲಿ ಪಂಜಾಬ್ ತಂಡದ ನಾಯಕತ್ವ ವಹಿಸಿಕೊಳ್ಳುವ ಸಾಧ್ಯತೆಯಿದೆ.

ಬೆಂಗಳೂರು: ಭಾರತ ಟೆಸ್ಟ್ ಹಾಗೂ ಏಕದಿನ ತಂಡದ ನಾಯಕ ಶುಭ್‌ಮನ್ ಗಿಲ್, ಮುಂಬರುವ ಐಸಿಸಿ ಟಿ20 ವಿಶ್ವಕಪ್ ಟೂರ್ನಿಗೆ ಭಾರತ ತಂಡದಲ್ಲಿ ಸ್ಥಾನ ಪಡೆಯಲು ವಿಫಲವಾಗಿದ್ದಾರೆ. ಏಷ್ಯಾಕಪ್ ಟೂರ್ನಿ ವೇಳೆಗೆ ಭಾರತ ಟಿ20 ತಂಡದ ಉಪನಾಯಕನಾಗಿ ಕಮ್‌ಬ್ಯಾಕ್ ಮಾಡಿದ್ದ ಗಿಲ್, ಚುಟುಕು ಕ್ರಿಕೆಟ್‌ ಮಾದರಿಯಲ್ಲಿ ಮಿಂಚಲು ಸಾಧ್ಯವಾಗಲಿಲ್ಲ. ಟಿ20 ಕ್ರಿಕೆಟ್‌ನಲ್ಲಿ ಸತತ ವೈಫಲ್ಯ ಅನುಭವಿಸಿದ ಶುಭ್‌ಮನ್ ಗಿಲ್, ಇದೀಗ ಐಸಿಸಿ ಟಿ20 ವಿಶ್ವಕಪ್ ಟೂರ್ನಿಗೆ ಭಾರತ ತಂಡದಲ್ಲಿ ಸ್ಥಾನ ಪಡೆಯಲು ಸಾಧ್ಯವಾಗಲಿಲ್ಲ. ಕಳೆದ ಬಾರಿಯ ಟಿ20 ವಿಶ್ವಕಪ್ ಟೂರ್ನಿಯಲ್ಲೂ ಗಿಲ್‌ಗೆ ಭಾರತ ತಂಡದಲ್ಲಿ ಸ್ಥಾನ ಸಿಕ್ಕಿರಲಿಲ್ಲ.

ಇದೀಗ ಶುಭ್‌ಮನ್ ಗಿಲ್ ಮುಂಬರುವ 2025-26ನೇ ಸಾಲಿನ ವಿಜಯ್ ಹಜಾರೆ ಟೂರ್ನಿಯಲ್ಲಿ ಕಣಕ್ಕಿಳಿಯಲು ರೆಡಿಯಾಗಿದ್ದಾರೆ. ಇದು 50 ಓವರ್‌ಗಳ ಕ್ರಿಕೆಟ್ ಟೂರ್ನಮೆಂಟ್ ಆಗಿದೆ. ಇದೀಗ ಡಿಸೆಂಬರ್ 24ರಿಂದ ಆರಂಭವಾಗಲಿರುವ ವಿಜಯ್ ಹಜಾರೆ ಟೂರ್ನಿಯಲ್ಲಿ ಶುಭ್‌ಮನ್ ಗಿಲ್, ಪಂಜಾಬ್ ಕ್ರಿಕೆಟ್ ತಂಡದ ಪರವಾಗಿ ಕಣಕ್ಕಿಳಿಯಲಿದ್ದಾರೆ. ಪಂಜಾಬ್ ಕ್ರಿಕೆಟ್ ಸಂಸ್ಥೆಯು ಇದೀಗ 18 ಆಟಗಾರರನ್ನೊಳಗೊಂಡ ತಂಡವನ್ನು ಪ್ರಕಟಿಸಿದ್ದು, ಶುಭ್‌ಮನ್ ಗಿಲ್ ಜತೆಗೆ ಅರ್ಶದೀಪ್ ಸಿಂಗ್ ಹಾಗೂ ಅಭಿಷೇಕ್ ಶರ್ಮಾ ಸೇರಿದಂತೆ ಹಲವು ಸ್ಟಾರ್ ಆಟಗಾರರು ಸ್ಥಾನ ಪಡೆದಿದ್ದಾರೆ.

ಪಂಜಾಬ್ ತಂಡದ ನಾಯಕ ಯಾರು?

ಇನ್ನು ಇಂಟ್ರೆಸ್ಟಿಂಗ್ ಸಂಗತಿಯೆಂದರೇ, ವಿಜಯ್ ಹಜಾರೆ ಟೂರ್ನಿಯಲ್ಲಿ ಪಂಜಾಬ್ ಕಿಂಗ್ಸ್ ತಂಡದ ನಾಯಕ ಯಾರು ಎನ್ನುವ ಕುತೂಹಲಕ್ಕೆ ಇನ್ನೂ ಉತ್ತರ ಸಿಕ್ಕಿಲ್ಲ. ಪಂಜಾಬ್ ಕ್ರಿಕೆಟ್ ಸಂಸ್ಥೆಯು ಇನ್ನು ನಾಯಕ ಯಾರು ಎನ್ನುವುದನ್ನು ಘೋಷಿಸಿಲ್ಲ. ಕೆಲ ಮಾಧ್ಯಮಗಳ ವರದಿಗಳ ಪ್ರಕಾರ ಶುಭ್‌ಮನ್‌ ಗಿಲ್ ಅವರಿಗೆ ಪಂಜಾಬ್ ತಂಡದ ನಾಯಕತ್ವ ಜವಾಬ್ದಾರಿ ಹೆಗಲೇರಲಿದೆ ಎನ್ನಲಾಗುತ್ತಿದೆ. ಗಿಲ್ ಟಿ20 ಕ್ರಿಕೆಟ್‌ನಲ್ಲಿ ವೈಫಲ್ಯ ಅನುಭವಿಸಿದರೂ, ಈ ವರ್ಷ ಏಕದಿನ ಕ್ರಿಕೆಟ್ ಮಾದರಿಯಲ್ಲಿ ಅದ್ಭುತ ಪ್ರದರ್ಶನ ನೀಡಿದ್ದಾರೆ. ಈ ವರ್ಷ 11 ಏಕದಿನ ಪಂದ್ಯಗಳನ್ನಾಡಿ 49ರ ಬ್ಯಾಟಿಂಗ್ ಸರಾಸರಿಯಲ್ಲಿ 490 ರನ್ ಸಿಡಿಸಿದ್ದಾರೆ. ಇದರಲ್ಲಿ ಎರಡು ಶತಕ ಹಾಗೂ ಎರಡು ಅರ್ಧಶತಕ ಸಿಡಿಸಿದ್ದಾರೆ.

ಗಾಯದಿಂದಾಗಿ ತಂಡದಿಂದ ಹೊರಬಿದ್ದ ಗಿಲ್:

ದಕ್ಷಿಣ ಆಫ್ರಿಕಾ ಎದುರಿನ ಐದು ಪಂದ್ಯಗಳ ಟಿ20 ಸರಣಿಯಲ್ಲಿ ಗಿಲ್ ಸ್ಥಾನ ಪಡೆದಿದ್ದರು. ಆದರೆ ಗಿಲ್ ಮೊದಲ ಮೂರು ಪಂದ್ಯಗಳಲ್ಲಿ ಕ್ರಮವಾಗಿ 4,0,28 ರನ್ ಗಳಿಸಿದ್ದರು. ಇದರ ನಡುವೆ ನಾಲ್ಕನೇ ಪಂದ್ಯಕ್ಕೂ ಮುನ್ನ ಗಿಲ್ ಗಾಯಗೊಂಡು ತಂಡದಿಂದ ಹೊರಬಿದ್ದಿದ್ದರು. ಇದೀಗ ಗಿಲ್ ವಿಜಯ್ ಹಜಾರೆ ಟೂರ್ನಿಯಲ್ಲಿ ದೊಡ್ಡ ಮೊತ್ತ ಗಳಿಸಿ ಫಾರ್ಮ್‌ಗೆ ಮರಳಲು ಎದುರು ನೋಡುತ್ತಿದ್ದಾರೆ.

ವಿಜಯ್ ಹಜಾರೆ ಟೂರ್ನಿಗೆ ಪಂಜಾಬ್ ತಂಡ ಹೀಗಿದೆ ನೋಡಿ:

ಶುಭ್‌ಮನ್ ಗಿಲ್, ಅಭಿಷೇಕ್ ಶರ್ಮಾ, ಅರ್ಶದೀಪ್ ಸಿಂಗ್, ಪ್ರಭ್‌ಸಿಮ್ರನ್ ಸಿಂಗ್(ವಿಕೆಟ್ ಕೀಪರ್), ಹರ್ನೂರ್ ಪನ್ನು, ಅನ್ಮೋಲ್‌ಪ್ರೀತ್ ಸಿಂಗ್, ಸಲೀಲ್ ಅರೋರಾ(ವಿಕೆಟ್ ಕೀಪರ್), ಸನ್ವೀರ್ ಸಿಂಗ್, ರಮಣ್‌ದೀಪ್ ಸಿಂಗ್, ಜಶನ್‌ಪ್ರೀತ್ ಸಿಂಗ್, ಗುರ್ನೂರ್ ಬ್ರಾರ್, ಹರ್ಪ್ರೀತ್ ಬ್ರಾರ್, ರಘು ಶರ್ಮಾ, ಕ್ರಿಸ್ ಭಗತ್, ಗೌರವ್ ಚೌಧರಿ, ಸುಖ್‌ದೀಪ್ ಭಜ್ವಾ.