ಬೆಂಗಳೂರು[ಆ.25]: ಭಾರತ-ಇಂಗ್ಲೆಂಡ್ ನಡುವಿನ ಟೆಸ್ಟ್ ಸರಣಿಯ ಬಳಿಕ ಟೀಂ ಇಂಡಿಯಾ ಏಷ್ಯಾಕಪ್ ಟೂರ್ನಿಯಲ್ಲಿ ಪಾಲ್ಗೊಳ್ಳಲಿದೆ. ಏಷ್ಯಾದ ಆರು ತಂಡಗಳು ಯುಎಇನಲ್ಲಿ ಜರುಗುವ ಟೂರ್ನಿಯಲ್ಲಿ ಪಾಲ್ಗೊಳ್ಳಲಿದ್ದು, 2019ರ ಏಕದಿನ ವಿಶ್ವಕಪ್ ದೃಷ್ಟಿಯಿಂದ ಸಾಕಷ್ಟು ಮಹತ್ವ ಪಡೆದಿದೆ.

ಸೆಪ್ಟೆಂಬರ್ 15ರಿಂದ ಆರಂಭವಾಗಲಿರುವ ಏಷ್ಯಾಕಪ್ ಟೂರ್ನಿಯಲ್ಲಿ ಭಾರತ ಕೆಲ ಆಟಗಾರರಿಗೆ ವಿಶ್ರಾಂತಿ ನೀಡುವ ಸಾಧ್ಯತೆ ಹೆಚ್ಚು ಎನ್ನಲಾಗುತ್ತಿದೆ. ಐಪಿಎಲ್ ಬಳಿಕ ಆಫ್ಘಾನಿಸ್ತಾನ ವಿರುದ್ಧದ ಏಕೈಕ ಟೆಸ್ಟ್ ಹಾಗೂ ಎರಡು ತಿಂಗಳುಗಳ ಕಾಲ ಇಂಗ್ಲೆಂಡ್ ಪ್ರವಾಸ ಹೀಗೆ ನಿರಂತರ ಕ್ರಿಕೆಟ್ ಆಡುತ್ತಿರುವುದು ಆಟಗಾರರ ಮೇಲೆ ಋಣಾತ್ಮಕ ಪರಿಣಾಮ ಬೀರುವ ಸಾಧ್ಯತೆಯಿದೆ. ಅಲ್ಲದೇ ಏಷ್ಯಾಕಪ್ ಬಳಿಕ ಭಾರತ ತಂಡವು ಆಸ್ಟ್ರೇಲಿಯಾ ಹಾಗೂ ನ್ಯೂಜಿಲೆಂಡ್ ಪ್ರವಾಸ ಕೈಗೊಳ್ಳಲಿದ್ದು ಟೀಂ ಇಂಡಿಯಾ ಈ ಮೂವರು ಆಟಗಾರರಿಗೆ ವಿಶ್ರಾಂತಿ ನೀಡುವ ಸಾಧ್ಯತೆ ಹೆಚ್ಚು. ಯಾರು ಆ ಆಟಗಾರರು ಎಂಬ ನಿಮ್ಮ ಕುತೂಹಲಕ್ಕೆ ಇಲ್ಲಿದೆ ಉತ್ತರ.

3. ಶಿಖರ್ ಧವನ್: 

ಟೀಂ ಇಂಡಿಯಾದ ಸ್ಫೋಟಕ ಆರಂಭಿಕ ಬ್ಯಾಟ್ಸ್’ಮನ್ ಶಿಖರ್ ಧವನ್ ಬಿಡುವಿಲ್ಲದಷ್ಟು ಕ್ರಿಕೆಟ್ ಆಡುತ್ತಲೇ ಬಂದಿದ್ದಾರೆ. ಆದರೆ ನಿದಾಸ್ ಟ್ರೋಫಿಯ ಸಂದರ್ಭದಲ್ಲಿ ವಿಶ್ರಾಂತಿ ನೀಡಲಾಗಿತ್ತು. ಐಪಿಎಲ್ ಬಳಿಕ ಆಫ್ಘಾನ್ ಟೆಸ್ಟ್ ಹಾಗೂ ಇಂಗ್ಲೆಂಡ್ ಸರಣಿಯಲ್ಲೂ ತಂಡದ ಅವಿಭಾಜ್ಯ ಅಂಗವಾಗಿ ಗುರುತಿಸಿಕೊಂಡಿರುವ ಧವನ್ ಅವರಿಗೆ ರೆಸ್ಟ್ ನೀಡುವ ಸಾಧ್ಯತೆ ಹೆಚ್ಚು. ಧವನ್’ಗೆ ವಿಶ್ರಾಂತಿ ನೀಡಿ ಆರಂಭಿಕ ಸ್ಥಾನದಲ್ಲಿ ಕೆ,ಎಲ್ ರಾಹುಲ್, ಮಯಾಂಕ್ ಅಗರ್’ವಾಲ್ ಇಲ್ಲವೇ ಪೃಥ್ವಿ ಶಾ ಅವರಿಗೆ ಅವಕಾಶ ನೀಡುವ ಸಾಧ್ಯತೆಯಿದೆ.
2. ಹಾರ್ದಿಕ್ ಪಾಂಡ್ಯ:

ಟೀಂ ಇಂಡಿಯಾದ ಸ್ಟಾರ್ ಆಲ್ರೌಂಡರ್ ಹಾರ್ದಿಕ್ ಪಾಂಡ್ಯ ಕಳೆದ ಒಂದು ವರ್ಷದೀಚೆಗೆ ಗಮನಾರ್ಹ ಪ್ರದರ್ಶನ ತೋರುವಲ್ಲಿ ಯಶಸ್ವಿಯಾಗಿದ್ದಾರೆ. 2017ರಲ್ಲಿ ಟೆಸ್ಟ್ ತಂಡದಲ್ಲೂ ಸ್ಥಾನ ಗಿಟ್ಟಿಸಿಕೊಂಡಿರುವ ಪಾಂಡ್ಯ ಎಡಬಿಡದೇ ಕ್ರಿಕೆಟ್ ಆಡುತ್ತಿದ್ದಾರೆ. ಇದುವರೆಗೂ ಗಾಯದ ಸಮಸ್ಯೆಗೆ ತುತ್ತಾಗದೇ ಇರುವ ಪಾಂಡ್ಯ ಕುರಿತು ಟೀಂ ಇಂಡಿಯಾ ಸದ್ಯದ ಮಟ್ಟಿಗೆ ರಿಸ್ಕ್ ತೆಗೆದುಕೊಳ್ಳುವ ಸಾಧ್ಯತೆಗಳಿಲ್ಲ. ಹೀಗಾಗಿ ಪಾಂಡ್ಯ ಬದಲಿಗೆ ಸಹೋದರ ಕೃನಾಲ್ ಪಾಂಡ್ಯ, ಅಕ್ಷರ್ ಪಟೇಲ್ ಇಲ್ಲವೇ ವಿಜಯ್ ಶಂಕರ್ ಅವರಿಗೆ ಅವಕಾಶ ಸಿಗಬಹುದು.
3. ವಿರಾಟ್ ಕೊಹ್ಲಿ:

ಏಷ್ಯನ್ ಗೇಮ್ಸ್’ನಲ್ಲಿ ಈ ಬಾರಿ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಭಾಗವಹಿಸುವಿಕೆ ಬಗ್ಗೆ ಇದುವರೆಗೆ ಯಾವುದೇ ಖಚಿತತೆ ಹೊರಬಿದ್ದಿಲ್ಲ. ಈ ವರ್ಷ ಕೆಲ ಸರಣಿಗಳಲ್ಲಿ ಕೊಹ್ಲಿಗೆ ರೆಸ್ಟ್ ನೀಡಲಾಗಿದ್ದರೂ, ಆಸೀಸ್ ಪ್ರವಾಸವನ್ನು ಗಮನದಲ್ಲಿಟ್ಟುಕೊಂಡು ಕೊಹ್ಲಿ ರೆಸ್ಟ್ ನೀಡಬಹುದು ಎನ್ನಲಾಗುತ್ತಿದೆ. 
ಇಂಗ್ಲೆಂಡ್ ವಿರುದ್ಧ ದಾಖಲೆಗಳ ಮೇಲೆ ದಾಖಲೆ ಬರೆಯುತ್ತಾ ಸಾಗುತ್ತಿರುವ ವಿರಾಟ್ ಕೊಹ್ಲಿಗೆ ಕಠಿಣ ಆಸೀಸ್ ಪ್ರವಾಸದಲ್ಲಿ ತೊಂದರೆಯಾಗಬಾರದು ಎಂದು ಗಮನದಲ್ಲಿಟ್ಟುಕೊಂಡು ವಿಶ್ರಾಂತಿ ನೀಡುವ ಸಾಧ್ಯತೆ ಇದೆ.