ನವದೆಹಲಿ(ಜು.05): ಭಾರತದ ಯುವ ಅಥ್ಲೀಟ್ ದ್ಯುತಿ ಚಾಂದ್ ವಿರುದ್ಧದ ಲಿಂಗ ಪ್ರಕರಣವನ್ನು ಮತ್ತೆ ತೆರೆಯಲು ಅಂತರಾಷ್ಟ್ರೀಯ ಅಥ್ಲೆಟಿಕ್ಸ್ ಸಂಸ್ಥೆ(ಐಎಎಎಫ್) ನಿರ್ಧರಿಸಿದೆ.

ದ್ಯುತಿ ದೇಹದಲ್ಲಿ ಟೆಸ್ಟೊಸ್ಟಿರೊನ್ ಎಂಬ ಗ್ರಂಥಿ ಪ್ರಮಾಣ ಸಾಮಾನ್ಯ ಮಹಿಳಾ ಅಥ್ಲೀಟ್'ಗಳಿಗಿಂತ ಹೆಚ್ಚಿದ್ದು, ಇದು ಅವರ ಪ್ರದರ್ಶನ ಮಟ್ಟವನ್ನು ಹೆಚ್ಚಿಸುತ್ತಿದೆ ಎಂದು ಐಎಎಎಫ್ 2015ರಲ್ಲಿ ಆರೋಪಿಸಿತ್ತು. ಐಎಎಎಫ್ ಆದೇಶದ ಮೇರೆಗೆ ಭಾರತೀಯ ಅಥ್ಲೆಟಿಕ್ ಸಂಸ್ಥೆ ದ್ಯುತಿ ಅವರನ್ನು ಅಮಾನತುಗೊಳಿಸಿತ್ತು.

ಅಮಾನತ್ತು ಪ್ರಶ್ನಿಸಿ ದ್ಯುತಿ ಕ್ರೀಡಾ ನ್ಯಾಯಾಲಯದಲ್ಲಿ ಅರ್ಜಿಸಲ್ಲಿಸಿದ್ದರು. ಈ ಪ್ರಕರಣದ ವಿಚಾರಣೆ ನಡೆಸಿದ್ದ ಕ್ರೀಡಾ ನ್ಯಾಯಾಲಯ, ಟೆಸ್ಟೊಸ್ಟಿರೊನ್ ಗ್ರಂಥಿ ಪ್ರದರ್ಶನದ ಮೇಲೆ ಪರಿಣಾಮ ಬೀರುತ್ತಿದೆ ಎನ್ನುವುದನ್ನು ಮತ್ತಷ್ಟು ಪುರಾವೆಗಳೊಂದಿಗೆ ಸಾಬೀತುಪಡಿಸುವಂತೆ ತಿಳಿಸಿ ಎರಡು ವರ್ಷಗಳ ಗಡುವು ನೀಡಿತ್ತು. ಆ ಗಡುವು ಜುಲೈ 27ಕ್ಕೆ ಮುಕ್ತಾಯಗೊಳ್ಳಲಿದೆ.

ದ್ಯುತಿ ಚಾಂದ್ ಗುರುವಾರದಿಂದ ಆರಂಭವಾಗಲಿರುವ ಏಷ್ಯಾ ಅಥ್ಲೆಟಿಕ್ಸ್ ಚಾಂಪಿಯನ್'ಶಿಪ್'ನಲ್ಲಿ ಪಾಲ್ಗೊಳ್ಳಲಿದ್ದಾರೆ.