ಲೋಧ ಸಮಿತಿಯ ಶಿಫಾರಸ್ಸಿನ್ನು ಜಾರಿಗೊಳಸದ ಕಾರಣಕ್ಕಾಗಿ ಜ.2ರಂದು ಸುಪ್ರೀಂ ಕೋರ್ಟ್ ಬಿಸಿಸಿಐ ಅಧ್ಯಕ್ಷ ಅನುರಾಗ್ ಠಾಕೂರ್ ಹಾಗೂ ಕಾರ್ಯದರ್ಶಿ ಅಜಯ್ ಶಿರ್ಕೆ ಅವರನ್ನು  ವಜಾಗೊಳಿಸಿದೆ. ಬಿಸಿಸಿಐ ನಿವೃತ್ತ ನ್ಯಾಯಮೂರ್ತಿ ಲೋಧ ಸಮಿತಿಯ ಶಿಫಾರಸ್ಸನ್ನು ತಿರಸ್ಕರಿಸಲು ಕೆಳಗಿನ 10 ಪ್ರಮುಖ ಅಂಶಗಳು ಕಾರಣವಾಗಿವೆ.

1. ವಯಸ್ಸಿನ ಮಾನದಂಡ: ಲೋಧ ಸಮಿತಿಯ ಶಿಫಾರಸ್ಸಿನಲ್ಲಿ ವಯಸ್ಸಿನ ಮಾನದಂಡ ಪ್ರಮುಖವಾಗಿತ್ತು. ಎಲ್ಲ ಬಿಸಿಸಿಐ ಹಾಗೂ ರಾಜ್ಯದ ಪ್ರತಿನಿಧಿಗಳು 70 ವರ್ಷ ಮೀರುವಂತಿರಲಿಲ್ಲ.ಮುಂಬೈ ಕ್ರಿಕೆಟ್ ಸಂಸ್ಥೆಯ ಶರದ್ ಪವಾರ್, ಸೌರಾಷ್ಟ್ರ ಕ್ರಿಕೆಟ್ ಸಂಸ್ಥೆಯ ನಿರಂಜನ್ ಷಾ, ತಮಿಳುನಾಡಿನ ಎನ್.ಶ್ರೀನಿವಾಸನ್ ಸೇರಿದಂತೆ  ಬಹುತೇಕ ರಾಜ್ಯಗಳ ಪ್ರತಿನಿಧಿಗಳು 70 ವರ್ಷ ಮೀರಿದ್ದರು. ಇದು ಬಿಸಿಸಿಐ ವಿರೋಧಕ್ಕೆ ಕಾರಣವಾಗಿತ್ತು.

2. ಹೆಚ್ಚು ವರ್ಷ ಅಧಿಕಾರಕ್ಕೆ ಕತ್ತರಿ: ಬಿಸಿಸಿಐ ಅಥವಾ ರಾಜ್ಯ ಸಂಸ್ಥೆಯ ಪದಾಧಿಕಾರಿಗಳು 3 ಅವಧಿಗಿಂತ ಹೆಚ್ಚು ಬಾರಿ ಅಧಿಕಾರದಲ್ಲಿರುವಂತಿಲ್ಲ. 3 ವರ್ಷದ ಅವಧಿಯಲ್ಲಿ 9 ವರ್ಷಕ್ಕಿಂತ ಹೆಚ್ಚಿಗೆ ಕೂಡ ಇರುವಂತಿರಲಿಲ್ಲ. ಹಲವು ರಾಜ್ಯಗಳ ಪದಾಧಿಕಾರಿಗಳು ವರ್ಷಾನುಗಟ್ಟಲೆ ಕ್ರಿಕೆಟ್ ಸಂಸ್ಥೆಗಳಲ್ಲಿ ಅಧಿಕಾರ ಅನುಭವಿಸುತ್ತಿದ್ದರು. ಇದು ಲೋಧಾ ಸಮಿತಿ ಹಾಗೂ ಬಿಸಿಸಿಐ ಇರುಸುಮುರಿಸಿಗೆ ಕಾರಣವಾಗಿತ್ತು.

3. ಒಂದು ವ್ಯಕ್ತಿಗೆ ಒಂದು ಹುದ್ದೆ: ಬಿಸಿಸಿಐ ಹಾಗೂ ರಾಜ್ಯ ಕ್ರಿಕೆಟ್ ಸಂಸ್ಥೆಗಳ ಪ್ರತಿನಿಧಿಗಳು ಒಂದು ಹುದ್ದೆಯಲ್ಲಿ ಮಾತ್ರ ಅಧಿಕಾರದಲ್ಲಿರಬೇಕು. ಕ್ರಿಕೆಟ್ ಅಥವಾ ಬೇರೆ ಯಾವುದೇ ರೀತಿಯ 2 ಹುದ್ದೆಗಳನ್ನು ಹೊಂದುವಂತಿರಲಿಲ್ಲ. ಬಹುತೇಕ ಕ್ರಿಕೆಟ್ ಸಂಸ್ಥೆಯ ಪ್ರತಿನಿಧಿಗಳು ರಾಜಕಾರಣಿಗಳು ಹಾಗೂ ಉದ್ಯಮಿಗಳಾಗಿದ್ದರು.

4. ಒಂದು ರಾಜ್ಯಕ್ಕೆ ಒಂದು ಮತ: ಕ್ರಿಕೆಟ್ ಸಂಸ್ಥೆಗಳ ಚುನಾವಣೆಯ ಸಂದರ್ಭದಲ್ಲಿ ಒಂದು ರಾಜ್ಯಕ್ಕೆ ಒಂದು ಮತ ಲೋಧ ಸಮಿತಿಯ ಪ್ರಮುಖ ಶಿಫಾರಸ್ಸಾಗಿತ್ತು. ರಾಜ್ಯವನ್ನು ಪ್ರತಿನಿಧಿಸುತ್ತಿರುವ ಬಹುತೇಕ ಪ್ರತಿನಿಧಿಗಳು ಹೆಚ್ಚು ಮತವನ್ನು ಹೊಂದಿದ್ದರು. ಈ ನಿಯಮ ಜಾರಿಗೊಳಿಸುವುದರಿಂದ ಬಹುತೇಕರಿಗೆ ತಮ್ಮ ಮತವನ್ನು ಕಳದುಕೊಳ್ಳುವ ಭೀತಿ ಎದುರಾಗಿತ್ತು.

5. ಸರ್ಕಾರದ ವ್ಯಾಪ್ತಿಗೆ ಮಹಾಲೇಖಪಾಲರು  : ಬಿಸಿಸಿಐನ ಅಪೆಕ್ಸ್ ಕೌನ್ಸಿಲ್ ಮಹಾಲೇಖಪಾಲರನ್ನು ಒಳಗೊಳ್ಳಬೇಕಾಗಿತ್ತು. ಎಲ್ಲ ಹಣಕಾಸಿನ ವರದಿಯ ಲೆಕ್ಕಪತ್ರವನ್ನು ಸರ್ಕಾರಕ್ಕೆ ಸಲ್ಲಿಸಬೇಕಾಗಿತ್ತು.

6. ಆರ್'ಟಿಐ ವ್ಯಾಪ್ತಿಗೆ ಬಿಸಿಸಿಐ: ಆರ್'ಟಿಐ ವ್ಯಾಪ್ತಿಗೆ ಬಿಸಿಸಿಐ ಅನ್ನು ಒಳಪಡಿಸಬೇಕೆನ್ನುವುದು ಲೋಧ ಸಮಿತಿಯ ಅಂಶಗಳಲ್ಲೊಂದು. ಬಿಸಿಸಿಐ ಸರ್ಕಾರಿ ಸಂಸ್ಥೆಯಾಗಿರದೆ ತಮಿಳುನಾಡಿನ ಸಹಕಾರ ಕಾಯಿದೆಯನ್ವಯ ಆಡಳಿತ ನಿರ್ವಹಿಸುತ್ತಿರುವ ಸಂಸ್ಥೆಯನ್ನುವುದು ಅನುರಾಗ್ ಠಾಕೂರ್ ವಾದವಾಗಿತ್ತು. ಅಲ್ಲದೆ ನಾವು ಕೇಂದ್ರದಿಂದಾಗಲಿ ರಾಜ್ಯದಿಂದಾಗಲಿ ಹಣ ತೆಗೆದುಕೊಳ್ಳುತ್ತಿಲ್ಲ ಎಂದು ಬಿಸಿಸಿಐ ವಾದಿಸಿದರೆ, ಲೋಧ ಸಮಿತಿಯ ನ್ಯಾಯಮೂರ್ತಿಗಳು ಸಾರ್ವಜನಿಕರ ಹಣದಿಂದ ಕಾರ್ಯನಿರ್ವಹಿಸುತ್ತಿರುವ ಕಾರಣದಿಂದ ಆರ್'ಟಿಐ ವ್ಯಾಪ್ತಿಗೆ ಒಳಪಡಲೇಬೇಕು ಎಂದು ತಿಳಿಸಿತ್ತು.

7. ತದ್ವಿರುದ್ದವಾದ ಆಯ್ಕೆ ಸಮಿತಿಯ ನೇಮಕ: ಲೋಧ ಸಮಿತಿಯು ಶಿಫಾರಸ್ಸಿನಂತೆ ಆಯ್ಕೆ ಸಮಿತಿಯ ಸದಸ್ಯರು 3 ಮಂದಿಯನ್ನು ನೇಮಕ ಮಾಡಿಕೊಳ್ಳಬೇಕಿತ್ತು. ಆದರೆ ಬಿಸಿಸಿಐ 5 ಮಂದಿಯ ಸದಸ್ಯರನ್ನು ನೇಮಕ ಮಾಡಿಕೊಂಡಿತ್ತು. ಅಲ್ಲದೆ ಹಿರಿಯ ಆಯ್ಕೆ ಸಮಿತಿಯಲ್ಲಿ ಇಬ್ಬರು ಪ್ರಥಮ ಕ್ರಿಕೆಟರ್'ಗಳು ಇದ್ದರು. ಇದು ಲೋಧ ಸಮಿತಿಗೆ ವಿರುದ್ಧವಾಗಿತ್ತು.

8. ಆಡಳಿತ ಮಂಡಳಿಯು ಬಿಸಿಸಿಐ ಹಾಗೂ ಐಪಿಎಲ್'ನಿಂದ ಪ್ರತ್ಯೇಕ: ಐಪಿಎಲ್ ಮತ್ತು ಬಿಸಿಸಿಐ'ನಿಂದ ಆಡಳಿತ ಮಂಡಳಿಗಳು ಪ್ರತ್ಯೇಕವಾಗಿರಬೇಕು. ಅಲ್ಲದೆ ಬಹುತೇಕ ರಾಜ್ಯಗಳು ಆದಾಯ ಮಾದರಿಗಳನ್ನು ರಚಿಸಿಕೊಂಡಿರಲಿಲ್ಲ. ಈ ಇಬ್ಬಾಗಿಸುವಿಗೆಯ ನೀತಿಯನ್ನು ಬಿಸಿಸಿಐ ವಿರೋಧಿಸಿತ್ತು.

9. ರಾಜಕಾರಣಿಗಳು, ಭ್ರಷ್ಟರು ದೂರವಿರಬೇಕು: ರಾಜಕಾರಣಿಗಳು ಸರ್ಕಾರದ ಅಧಿಕಾರಿಗಳು ಕ್ರಿಕೆಟ್'ನಿಂದ ದೂರವಿರಬೇಕು. ಅನುರಾಗ್ ಠಾಕೂರ್, ಶರದ್ ಪವಾರ್ ಸೇರಿದಂತೆ ಹಲವರು ರಾಜಕಾರಣಿಗಳಾಗಿದ್ದರು. ಕಳಂಕಿತರನ್ನು ಹೊರಗಿರಬೇಕೆಂಬುದು ಲೋಧ ಸಮಿತಿಯ ಶಿಫಾರಸ್ಸಾಗಿತ್ತು.

10. ಕ್ರಿಕೆಟ್ ಪಂದ್ಯಗಳ ವೇಳೆ ಜಾಹೀರಾತು:  ಓವರ್'ಗಳ ಮಧ್ಯೆ ಜಾಹೀರಾತುಗಳು ಇರಬಾರದೆಂಬುದು ಶಿಫಾರಸ್ಸಿನ ಪ್ರಮುಖ  ಅಂಶವಾಗಿತ್ತು. ಇದನ್ನು ಬಿಸಿಸಿಐನ ಬಹುತೇಕ ಮಂದಿ ವಿರೋಧಿಸಿದ್ದರು. ಈ ನಿಯಮ ಬಿಸಿಸಿಐ ಆದಾಯಕ್ಕೆ ಬಾರಿ ಹೊಡೆದ ಬೀಳುವ ಸಂಭವವಿತ್ತು. ಸಮಿತಿಯು ಕೂಡ ಈ ನಿಯಮವನ್ನು ಪರಿಷ್ಕರಿಸಲು ಮುಂದಾಗಿತ್ತು.