ಸೇಮಿಸ್ ಕನಸು ಬಲುದೂರ ಎಂದ ಸೆಹ್ವಾಗ್ ಕೊಟ್ಟ ಅಂಕಿ ಅಂಶ
*ನ್ಯೂಜಿಲೆಂಡ್ ವಿರುದ್ಧ ಭಾರತದ ಸೋಲು
* ವಿಶ್ವಕಪ್ ಸೇಮಿಸ್ ಹಾದಿ ದುರ್ಗಮ
* ಸೇಮಿಸ್ ಏರುವುದು ಅನುಮಾನ ಎಂದ ಸೆಹ್ವಾಗ್
* ದಿಗ್ಗಜ ಕ್ರಿಕೆಟರ್ ವಿಶ್ಲೇಷಣೆ
ನವದೆಹಲಿ(ನ. 01): ಐಸಿಸಿ ಟಿ20 ವಿಶ್ವಕಪ್ (ICC T20 World Cup) ಟೂರ್ನಿಯಲ್ಲಿ ಭಾರತ (Team India) ನ್ಯೂಜಿಲೆಂಡ್ ವಿರುದ್ಧ ಎಂಟು ವಿಕೆಟ್ ಗಳ ಸೋಲು ಅನುಭವಿಸಿದೆ. ಈ ಮೂಲಕ ಸೇಮಿಸ್ ಹಾದಿ ಅತಿ ಕಠಿಣವಾಗಿದೆ.
ಭಾನುವಾರದ ಪಂದ್ಯದಲ್ಲಿ ಟಾಸ್ ಗೆದ್ದ ನ್ಯೂಜಿಲೆಂಡ್ ತಂಡ ಬಿಗಿ ಬೌಲಿಂಗ್ ದಾಳಿ ನಡೆಸಿ ಭಾರತವನ್ನು 110 ರನ್ ಕಟ್ಟಿ ಹಾಕಿತ್ತು. ಈ ಮೊತ್ತವನ್ನು ನ್ಯೂಜಿಲೆಂಡ್ ಸಲೀಸಾಗಿ ಚೇಸ್ ಮಾಡಿತ್ತು. 5. 3 ಓವರ್ ಗಳು ಬಾಕಿ ಇರುವಂತೆ ಕೀವಿಸ್ ಪಂದ್ಯ ಗೆದ್ದುಕೊಂಡಿತ್ತು.
ನ್ಯೂಜಿಲೆಂಡ್ ವಿರುದ್ಧದ ಸೋಲಿನ ನಂತರ ವಿರಾಟ್ ಕೊಹ್ಲಿ ಪಡೆ ಸೇಮಿಸ್ ತಲುಪುವುದು ಕಷ್ಟ ಸಾಧ್ಯ ಎಂದು ದಿಗ್ಗಜ ವೀರೇಂದ್ರ ಸೆಹ್ವಾಗ್ (Virender Sehwag)ವಿಶ್ಲೇಷಣೆ ಮಾಡಿದ್ದಾರೆ.
ಮೊದಲ ಪಂದ್ಯವನ್ನು ಭಾರತ ಪಾಕಿಸ್ತಾನದ ವಿರುದ್ಧ ಸೋತಿತ್ತು. ಇದಾದ ಮೇಲೆ ನ್ಯೂಜಿಲೆಂಡ್ ವಿರುದ್ಧ ಸೋಲು. ಹಾಗಾಗಿ ಅಂಕಪಟ್ಟಿಯಲ್ಲಿ ಯಾವುದೇ ಸಂಪಾದನೆ ಆಗಿಲ್ಲ. ಪಾಕಿಸ್ತಾನದ ವಿರುದ್ಧ ಹತ್ತು ವಿಕೆಟ್ ಅಂತರದ ಸೋಲು ಮತ್ತು ನ್ಯೂಜಿಲೆಂಡ್ ವಿರುದ್ಧದ ಎಂಟು ವಿಕೆಟ್ ಸೋಲಿನ ನಂತರ ಭಾರತದ ರನ್ ರೇಟ್ ಸಹ ಪಾತಾಳದಲ್ಲಿದೆ.
ಭಾರತದ ಸೋಲು ಎಲ್ಲರಿಗೂ ಆಘಾತ ನೀಡಿದೆ. ಈ ಬಗ್ಗೆ ಗಂಭೀರವಾಗಿ ಮೌಲ್ಯಮಾಪನ ಮಾಡಬೇಕಾದ ಅಗತ್ಯವಿದೆ ಎಂದು ಸೆಹ್ವಾಗ್ ಹೇಳಿದ್ದಾರೆ.
ಮತ್ತೊಂದು ಆಘಾತಕಾರಿ ಸೋಲು.. ಬ್ಯಾಟಿಂಗ್ ವೈಫಲ್ಯಕ್ಕೆ ಬೆಲೆ ತೆತ್ತ ಭಾರತ
ಸತತ ಎರಡು ಸೋಲುಗಳ ಹೊರತಾಗಿಯೂ ಟೀಂ ಇಂಡಿಯಾ ಇನ್ನೂ ಸೆಮೀಸ್ ರೇಸ್‌ನಿಂದ ಹೊರಬಿದ್ದಿಲ್ಲ. ಇನ್ನುಳಿದ ಪಂದ್ಯಗಳಲ್ಲಿ ಟೀಂ ಇಂಡಿಯಾ ಭರ್ಜರಿ ಗೆಲುವು ಸಾಧಿಸಿ, ಅದೃಷ್ಟ ಕೂಡಾ ಕೈ ಹಿಡಿದರೆ ಟೀಂ ಇಂಡಿಯಾ ಈಗಲೂ ಸೆಮಿ ಫೈನಲ್ ಪ್ರವೇಶಿಸಬಹುದಾಗಿದೆ ಎನ್ನುವ ಲೆಕ್ಕಾಚಾರ ಇದೆ.
ಆಫ್ಘಾನಿಸ್ತಾನ ಹಾಗೂ ನ್ಯೂಜಿಲೆಂಡ್ ನಡುವಿನ ಪಂದ್ಯದಲ್ಲಿ ಆಫ್ಘಾನಿಸ್ತಾನ ಕ್ರಿಕೆಟ್ ತಂಡವು ನ್ಯೂಜಿಲೆಂಡ್ ಎದುರು ಸಣ್ಣ ಅಂತರದ ಗೆಲುವನ್ನು ಸಾಧಿಸಿದರೆ, ಟೀಂ ಇಂಡಿಯಾ ಸೆಮೀಸ್ ಹಾದಿ ಸುಗಮವಾಗಲಿದೆ.
ಇದಾದ ಬಳಿಕ ಟೀಂ ಇಂಡಿಯಾ ಆಫ್ಘಾನಿಸ್ತಾನ ಎದುರು ಭಾರೀ ಅಂತರದ ಗೆಲುವು ಸಾಧಿಸಬೇಕಿದೆ. ಹೀಗಾದರೆ ನ್ಯೂಜಿಲೆಂಡ್, ಅಫ್ಘಾನಿಸ್ತಾನ ಹಾಗೂ ಭಾರತ ಉಳಿದ ಎಲ್ಲಾ ಪಂದ್ಯಗಳನ್ನು ಜಯಿಸಿದರು ತಮ್ಮ ಖಾತೆಯಲ್ಲಿ 6 ಅಂಕಗಳನ್ನು ಹೊಂದಲಿವೆ.
ಒಂದು ವೇಳೆ ಟೀಂ ಇಂಡಿಯಾ ಕ್ರಿಕೆಟ್ ಶಿಶುಗಳಾದ ಸ್ಕಾಟ್ಲೆಂಡ್ ಹಾಗೂ ನಮೀಬಿಯಾ ತಂಡಗಳ ಎದುರು ಭಾರೀ ಅಂತರದ ಗೆಲುವು ಸಾಧಿಸಿದರೆ, ಗ್ರೂಪ್ 2ನಲ್ಲಿ ಎರಡನೇ ತಂಡವಾಗಿ ಟೀಂ ಇಂಡಿಯಾ ಸೆಮೀಸ್ ಪ್ರವೇಶಿಸಲಿದೆ.
ಅಫ್ಘಾನಿಸ್ತಾನ(ನವೆಂಬರ್ 03), ಸ್ಕಾಟ್ಲೆಂಡ್(ನವೆಂಬರ್ 05) ಹಾಗೂ ನಮೀಬಿಯಾ(ನವೆಂಬರ್ 08) ಈ ಮೂರೂ ಪಂದ್ಯಗಳಲ್ಲೂ ಟೀಂ ಇಂಡಿಯಾ ಭಾರೀ ಅಂತರದಲ್ಲಿ ಗೆಲುವು ಸಾಧಿಸಬೇಕಿದೆ.