ಅವರ ಬರಹವೇ ನನ್ನ ನಟನೆಯಲ್ಲಿ ಬಂದ ‘ಚಿನ್ನಾರಿಮುತ್ತ’ ಸಿನಿಮಾ. ಆದರೆ, ಎಚ್ ಎಚ್ ವೆಂಕಟೇಶಮೂರ್ತಿ ಅವರ ಬಗ್ಗೆ ಹೇಳಬೇಕು ಎಂದರೆ ‘ಚಿನ್ನಾರಿಮುತ್ತ’ ಚಿತ್ರಕ್ಕೂ ಮೀರಿದ್ದು. ಯಾಕೆಂದರೆ ಸಾಹಿತ್ಯಕ್ಕೆ ಅವರ ಕೊಡು ಅಪಾರ.
ಅವರ ಬರಹವೇ ನನ್ನ ನಟನೆಯಲ್ಲಿ ಬಂದ ‘ಚಿನ್ನಾರಿಮುತ್ತ’ ಸಿನಿಮಾ. ಆದರೆ, ಎಚ್ ಎಚ್ ವೆಂಕಟೇಶಮೂರ್ತಿ ಅವರ ಬಗ್ಗೆ ಹೇಳಬೇಕು ಎಂದರೆ ‘ಚಿನ್ನಾರಿಮುತ್ತ’ ಚಿತ್ರಕ್ಕೂ ಮೀರಿದ್ದು. ಯಾಕೆಂದರೆ ಸಾಹಿತ್ಯಕ್ಕೆ ಅವರ ಕೊಡು ಅಪಾರ.
ಅಪಾರ ಜ್ಞಾನ ಇದ್ದ ನಗುಮುಖದ ವ್ಯಕ್ತಿ : ನಟ ವಿಜಯ್ ರಾಘವೇಂದ್ರ
ಅವರ ಬರಹವೇ ನನ್ನ ನಟನೆಯಲ್ಲಿ ಬಂದ ‘ಚಿನ್ನಾರಿಮುತ್ತ’ ಸಿನಿಮಾ. ಆದರೆ, ಎಚ್ ಎಚ್ ವೆಂಕಟೇಶಮೂರ್ತಿ ಅವರ ಬಗ್ಗೆ ಹೇಳಬೇಕು ಎಂದರೆ ‘ಚಿನ್ನಾರಿಮುತ್ತ’ ಚಿತ್ರಕ್ಕೂ ಮೀರಿದ್ದು. ಯಾಕೆಂದರೆ ಸಾಹಿತ್ಯಕ್ಕೆ ಅವರ ಕೊಡು ಅಪಾರ. ನನಗೆ ಅವರ ಸಾಹಿತ್ಯದ ಕೃಷಿ, ಬರಹಗಳ ಬಗ್ಗೆ ಸಂಪೂರ್ಣ ತಿಳುವಳಿಕೆ ಇಲ್ಲದಿದ್ದರೂ ಎಚ್ಚಸ್ವಿ ಅಂಕಲ್ ಅಂದರೆ ನಗು ಮುಖವೊಂದು ಕಣ್ಣ ಮುಂದೆ ಬರುತ್ತದೆ. ಪ್ರೀತಿಯಿಂದ ಬರೆಯುತ್ತಿದ್ದವರು. ಯಾರೇ ಕಂಡರೂ, ನಾನು ಎಲ್ಲೇ ಕಂಡರೂ ಪ್ರೀತಿಯಿಂದ ಮಾತನಾಡಿಸುತ್ತಿದ್ದವರು. ನನ್ನ ಪ್ರಕಾರ ಎಚ್ಚಸ್ವಿ ಅಂಕಲ್ ಎಂದರೆ ಅಪಾರ ಜ್ಞಾನ ಇದ್ದ ನಗು ಮುಖದ ಚೇತನ. ಈಗ ಅವರು ನಮ್ಮೊಂದಿಗೆ ಇಲ್ಲ ಎಂಬುದನ್ನು ನಾವು ಮಾತಿನಲ್ಲಿ ಹೇಳಿ ಶೋಕ ವ್ಯಕ್ತಪಡಿಸಬಹುದು. ಆದರೆ, ಸಾಹಿತ್ಯ, ಸಿನಿಮಾ, ರಂಗಭೂಮಿಯಲ್ಲಿನ ಅವರ ಸೇವೆಯ ಮೂಲಕ ಎಚ್ಚಸ್ವಿ ಅವರು ಸದಾ ನಮ್ಮೊಂದಿಗೆ ಇದ್ದಾರೆ.
ಎಚ್ಚಸ್ವಿ, ನನ್ನ ಚಿನ್ನಾರಿ ಮುತ್ತ ಸೃಷ್ಟಿಕರ್ತ: ನಿರ್ದೇಶಕ ಟಿ ಎಸ್ ನಾಗಭರಣ
ಚಿನ್ನಾರಿ ಮುತ್ತ ಸೃಷ್ಟಿಕರ್ತ ನಮ್ಮನ್ನು ಅಗಲಿದ್ದಾರೆ. 70ರ ದಶಕದಲ್ಲಿ ಸಿನಿಮಾ, ಸಾಹಿತ್ಯ ಹಾಗೂ ರಂಗಭೂಮಿ ಹೀಗೆ ಪ್ರತಿಯೊಂದರಲ್ಲೂ ಹೊಸ ಮೆರುಗು ಕಾಣುತ್ತಿದ್ವಿ. ಅಂಥ ಮೆರುಗಿನ ಕಾಲಘಟ್ಟದಲ್ಲಿ ಅದ್ಭುತವಾದ ಸಾಹಿತಿಗಳು, ನಾಟಕಗಾರರು, ಸಿನಿಮಾದವರು ಇದ್ದರು. ನಾವು ಅಂಥ ಕಾಲಘಟ್ಟದಲ್ಲಿ ಇದ್ದೇವೆ ಎಂಬುದೇ ನಮ್ಮ ಅದೃಷ್ಟ. ಪಿ ಲಂಕೇಶ್, ಗಿರೀಶ್ ಕಾರ್ನಾಡ್, ಇವರ ಸಾಲಿನಲ್ಲಿ ಎಚ್ ಎಸ್ ವೆಂಕಟೇಶಮೂರ್ತಿ ಅವರು. ಇವರೆಲ್ಲ ಕನ್ನಡ ಸಾಹಿತ್ಯವನ್ನು ವಿಭೃಂಬಿಸಿದರು. ಎಚ್ಚಸ್ವಿ ಅವರು ನಿರಂತರವಾಗಿ ಬರೆಯುತ್ತಿದ್ದವರು. ಯಾವುದೋ ಒಂದು ಆಯಾಮಕ್ಕೆ ಸೀಮಿತವಾದವರಲ್ಲ. ಸಿನಿಮಾ ಸಾಹಿತ್ಯ, ನಾಟಕ, ಕವನ, ಹಾಡುಗಳು, ಪದ್ಯಗಳು, ಕಿರುತೆರೆಯಲ್ಲಿ ಶೀರ್ಷಿಕೆ ಗೀತೆಗಳು ಹೀಗೆ ಎಲ್ಲಾ ರೀತಿಯ ಪ್ರಕಾರಗಳಲ್ಲೂ ತಮ್ಮನ್ನು ತೊಡಗಿಸಿಕೊಂಡಿದ್ದವರು. ಸಿನಿಮಾಗಳಿಗೆ ಬರೆಯುವುದು ಎಂದರೆ ಕೀಳರಿಮೆಯಾಗಿ ನೋಡುತ್ತಿದ್ದ ಕಾಲದಲ್ಲೇ ಸಾಹಿತ್ಯ ಕ್ಷೇತ್ರದಲ್ಲಿ ಜನಪ್ರಿಯತೆ ಪಡೆದುಕೊಂಡಿದ್ದರೂ ತಾನು ಸಿನಿಮಾ ಸಾಹಿತಿಯಾಗಿ ಏನು ಮಾಡಬೇಕು ಎಂದು ಯೋಚಿಸಿ, ಆ ನಿಟ್ಟಿನಲ್ಲಿ ಹತ್ತಾರು ಹಾಡುಗಳನ್ನು ಸಿನಿಮಾಗಳಿಗೆ ಕೊಟ್ಟವರು. ನಾಟಕಗಳಿಗೆ ಕತೆ ನೀಡಿದವರು. ಆ ಮೂಲಕ ಸಿನಿಮಾ ಕ್ಷೇತ್ರಕ್ಕೆ ಬರಲು ಬಹಳಷ್ಟು ಸಾಹಿತಿಗಳಿಗೆ ಸ್ಫೂರ್ತಿ ಆದವರು ಎಚ್ಚಸ್ವಿ ಅವರು. ನಿಜವಾಗಲೂ ಗುರುವಿನ ಸ್ಥಾನ ತುಂಬಿದ ನನ್ನ ಗುರುಗಳು ಅವರು. ನಾನು ಅವರನ್ನು ಗುರುಗಳೇ ಅಂತಲೇ ಕರೆಯುತ್ತಿದ್ದೆ. ಅವರು ನನ್ನ ಭರಣರೇ ಅಂತ ಬಾಯಿತುಂಬಾ ಕರೆಯುತ್ತಿದ್ದರು. ನನ್ನ ಸದಾ ಕಾಲ ಮನತುಂಬಿ ಹರಿಸಿದ ನನ್ನ ಸ್ನೇಹಿತ, ಗುರು ಮತ್ತು ಸ್ಫೂರ್ತಿ ಎಂದರೆ ಎಚ್ಚಸ್ವಿ. ಮತ್ತೊಂದು ‘ಚಿನ್ನಾರಿಮುತ್ತ’ ಮಾಡಕ್ಕೆ ಆಗಲ್ಲ. ಅದು ಎಚ್ಚಸ್ವಿ ಅವರಿಗೆ ಸಾಧ್ಯ. ನುಡಿದಂತೆ ನಡೆದವರು. ನಮಗೂ ಅದನ್ನೇ ಹೇಳಿಕೊಟ್ಟವರು. ಪ್ರಯೋಗ ಶೀಲ ಮನಸ್ಸಿನ ಎಚ್ ಎಸ್ ವೆಂಕಟೇಶಮೂರ್ತಿ ಅವರ ಜೊತೆಗಿನ ಪಯಣ, ಒಡನಾಟ ಅಜರಾಮರ.
ಕನ್ನಡ ಸಾಹಿತ್ಯ ಲೋಕದ ಅತ್ಯುತ್ತಮ ಧ್ವನಿ: ನಟ ರಕ್ಷಿತ್ ಶೆಟ್ಟಿ
ಇಂದು ಕನ್ನಡ ಸಾಹಿತ್ಯ ಲೋಕವು ತನ್ನ ಅತ್ಯುತ್ತಮ ಧ್ವನಿಗಳಲ್ಲಿ ಒಬ್ಬರನ್ನು ಕಳೆದುಕೊಂಡಿದೆ. ಅದು ಎಚ್ ಎಸ್ ವೆಕಟೇಶಮೂರ್ತಿ. ಆದರೆ, ಅವರ ಮಾತುಗಳು ನಮ್ಮ ಜೀವನವನ್ನು ಬೆಳಗಿಸುತ್ತಲೇ ಇರುತ್ತವೆ. ಎಚ್ಚಸ್ವಿ ಅವರ ಎರಡು ಸುಂದರ ಹಾಡುಗಳು ನನ್ನ ಚಿತ್ರಗಳಲ್ಲಿ ಬಳಕೆ ಆಗಿದೆ. ಇದು ನಮಗಾಗಿ ಎಚ್ಚಸ್ವಿ ಅವರು ಬಿಟ್ಟು ಹೋಗಿರುವ ಒಂದು ಸಣ್ಣ ಪರಂಪರೆ. ಕನ್ನಡದ ಮೇರು ಕವಿ, ಸಾಹಿತಿ ಡಾ. ಎಚ್ ಎಸ್ ವೆಂಕಟೇಶಮೂರ್ತಿ ಅವರಿಗೆ ನನ್ನ ಭಾವಪೂರ್ಣ ಶ್ರದ್ಧಾಂಜಲಿ.
ಬರೆದಂತೆ ಬದುಕಿದ ಭಾವ ಕವಿ: ಗಾಯಕಿ ನಾಗಚಂದ್ರಿಕಾ ಭಟ್
ನನ್ನ ಧ್ವನಿಯಲ್ಲಿ ಮೂಡಿ ಬಂದು, ರೆಕಾರ್ಡ್ ಆದ ಮೊಟ್ಟ ಮೊದಲ ಭಾವಗೀತೆ ಎಚ್ ಎಸ್ ವೆಂಕಟೇಶಮೂರ್ತಿ ಅವರು ಬರೆದಿದ್ದು. ‘ಎಲ್ಲಿರುವೆಯೊ ಘನಶ್ಯಾಮ’ ಎಂದು ಸಾಗುವ ಕೃಷ್ಣನ ಕುರಿತಾದ ಈ ಭಾವಗೀತೆ ಹಾಡು ಮೂಲಕ ನನಗೆ ಎಚ್ ಎಸ್ ವಿ ಅವರ ಪರಿಚಯ ಆಯಿತು. ಅವರು ಸಾಹಿತಿ, ಕವಿ, ಸಿನಿಮಾ ನಿರ್ದೇಶಕ, ನಟ, ನಾಟಕ ರಚನೆಕಾರ ಹೀಗೆ ಏನೆಲ್ಲ ಆಗಿದ್ದರೂ ಯಾರನ್ನೂ ನೋಯಿಸದ, ಇದು ಚೆನ್ನಾಗಿಲ್ಲ ಎಂದು ಹೇಳಿ ನಿರಾಸೆ ಮಾಡುತ್ತಿರಲಿಲ್ಲ. ತುಂಬಾ ತಾಳ್ಮೆ, ಸಹನೆಯಿಂದ ಕೇಳಿಸಿಕೊಂಡು ಇನ್ನೂ ಚೆನ್ನಾಗಿ ಹಾಡು, ಇನ್ನೂ ಚೆನ್ನಾಗಿ ಬರಯಬಹುದು ಎಂದು ಅತ್ಯಂತ ಸೌಜನ್ಯದಿಂದ ಪ್ರೋತ್ಸಾಹಿಸುತ್ತಿದ್ದ ವ್ಯಕ್ತಿ. ಎಚ್ಚಸ್ವಿ ಅವರು ಸಿಟ್ಟು ಮಾಡಿಕೊಂಡಿದ್ದು ನಾನು ನೋಡೇ ಇಲ್ಲ. ಬಹುಶಃ ಅವರು ಮೇಸ್ಟ್ರು ಆಗಿದ್ದ ಕಾರಣಕ್ಕೋ ಏನೋ ಮತ್ತೊಬ್ಬರ ಪ್ರತಿಯನ್ನು ಗುರುತಿಸಿ, ಬೆಳೆಸುವ ಗುಣ ಅವರಲ್ಲಿತ್ತು. ವೆಂಕಟೇಶಮೂರ್ತಿ ಅವರು ಅಗಲಿದ್ದಾರೆ ಎಂದಾಗ ನಮ್ಮ ಮನೆಯ ಸದಸ್ಯರೇ ಹೋದಷ್ಟು ದುಃಖವಾಗುತ್ತಿದೆ. ಮಹಕಾವ್ಯ, ವಿಮರ್ಶೆ, ಮಕ್ಕಳ ಸಾಹಿತ್ಯ, ಭಾವಗೀತೆ ಪ್ರಪಂಚ. ನಾಟಕ, ಸಿನಿಮಾ... ಹೀಗೆ ಎಲ್ಲಾ ಕ್ಷೇತ್ರಗಳಲ್ಲೂ ತಮ್ಮ ಸೃಜನಶೀಲ ಕೃಷಿಯಿಂದ ಗುರುತಿಸಿಕೊಂಡು, ತೊಡಗಿಸಿಕೊಂಡವರು. ಅವರು ನಿಂತ ನೀರಲ್ಲ. ನಿರಂತವಾಗಿರುವ ಹರಿಯುತ್ತಿದ್ದ ಸೃಜಶೀಲ ವ್ಯಕ್ತಿತ್ವ ಅವರದ್ದು. ಇಂದಿನ ಯುವ ಜನತೆಗೆ ಸ್ಫೂರ್ತಿಯಾಗಿ ನಿಲ್ಲುವ ವ್ಯಕ್ತಿ. ‘ಇರಬೇಕು ಇರುವಂತೆ, ತೊರೆದು ಸಾವಿರ ಚಿಂತೆ, ಮಳೆಸುರಿಸಿ ಹಗುರಾದ ಮುಗಿಲಿನಂತೆ..’ ಎಂದು ಬರೆದು, ತಾವು ಬರೆದಂತೆ ಬದುಕಿದ ಮಹಾನ್ ಭಾವ ಕವಿ ಎಚ್ ಎಸ್ ವೆಂಕಟೇಶಮೂರ್ತಿ ಅವರು.
ಸೂಕ್ಷ್ಮ ಸಂವೇದನೆಯ ಗೀತೆಗಳ ಜನಕ : ಗಾಯಕಿ ಎಂ ಡಿ ಪಲ್ಲವಿ
ಭಾವ ತುಂಬಿ ಹಾಡಬಹುದಾದ ಹತ್ತಾರು ಭಾವಗೀತೆಗಳಿಗೆ ಸಾಹಿತ್ಯ ನೀಡಿದವರು ಎಚ್ಚಸ್ವಿ. ನನ್ನ ಪುಣ್ಯಕ್ಕೆ ಅವರ ರಚನೆಯ ಅಸಂಖ್ಯಾತ ಗೀತೆಗಳಿಗೆ ನಾನು ಧ್ವನಿಯಾಗಿದ್ದೇನೆ. ಅನ್ನ ನಾನು ದೇವರಾಣೆ ಬೆಣ್ಣೆ ಕದ್ದಿಲ್ಲಮ್ಮ, ಲೋಕದ ಕಣ್ಣಿಗೆ ರಾಧೆ ಕೂಡ, ತೂಗು ಮಂಚದಲ್ಲಿ ಕೂತು, ಎಲೆಗಳು ನೂರಾರು... ಹೀಗೆ ಸಾಕಷ್ಟು ಗೀತೆಗಳನ್ನು ನಾನು ಹಾಡಿದ್ದೇನೆ. ಎಚ್ ಎಸ್ ವೆಂಕಟೇಶಮೂರ್ತಿ ಅವರ ಭಾವಗೀತೆಗಳು ಹೇಗಿದ್ದವು ಎಂದರೆ ನಾವು ದಿನ ನಿತ್ಯ ಕೊಡುವ ಯಾವುದೇ ಕಾರ್ಯಕ್ರಮದ ವೇದಿಕೆ ಮೇಲೆ ಹಾಡಬಹುದಿತ್ತು. ಭಾವ ತುಂಬಿ ಹಾಡುವಂತಹ, ಸೂಕ್ಷ್ಮ ಸಂವೇದನೆಯ ಗೀತೆಗಳನ್ನು ಸುಗಮ ಸಂಗೀತ ಕ್ಷೇತ್ರಕ್ಕೆ ಕೊಟ್ಟವರು. ಹೀಗಾಗಿ ಅವರ ನಿಧನ ಸುಗಮ, ಭಾವಗೀತೆ, ಸಾಹಿತ್ಯ ಕ್ಷೇತ್ರಕ್ಕೆ ಬಹುದೊಡ್ಡ ನಷ್ಟ.
ದಿಗ್ಗಜ ಕವಿಗಳ ಕೊನೆಯ ಕೊಂಡಿ ಎಚ್ಚಸ್ವಿ: ಗಾಯಕಿ ಅರ್ಚನಾ ಉಡುಪ
ನನ್ನ ಗಾಯನ ಮತ್ತು ಎಚ್ ಎಸ್ ವೆಂಕಟೇಶಮೂರ್ತಿ ಅವರ ಸಾಹಿತ್ಯದ ನಂಟು ‘ಚಿನ್ನಾಮುತ್ತ’ ಚಿತ್ರದಿಂದ ಶುರುವಾಗಿದ್ದು. ಎಚ್ಚಸ್ವಿ ಅವರ ನಿಧನ ನನ್ನ ಪ್ರಕಾರ ದಿಗ್ಗಜ ಕವಿಗಳ ಸಾಲಿನಲ್ಲಿದ್ದ ಕೊನೆಯ ಕೊಂಡಿ ಮುಗಿದು ಹೋದಂತೆ. ನನ್ನ ಸಂಬಂಧಿರಲ್ಲದ ಇಬ್ಬರನ್ನು ನಾನು ದೊಡ್ಡಪ್ಪ ಅಂತಲೇ ಕರೆಯುತ್ತಿದ್ದೆ. ಒಬ್ಬರು ಎಸ್ ಪಿ ಬಾಲಸುಭ್ರಮಣ್ಯಂ ಹಾಗೂ ಎಚ್ ಎಸ್ ವೆಂಕಟೇಶಮೂರ್ತಿ ಅವರು. ಅವರೂ ಕೂಡ ನನ್ನ ಮಗಳೇ ಅಂತಲೇ ಕರೆಯುತ್ತಿದ್ದರು. ನಾನು ಅವರ ರಚನೆಯ ಅಸಂಖ್ಯಾತ ಹಾಡುಗಳನ್ನು ಹಾಡಿದ್ದೇನೆ, ಕಂಪೋಸ್ ಮಾಡಿದ್ದೇನೆ. ನಾನು ‘ಬಾಳಗಾಯನ’ ಎನ್ನುವ ಆಲ್ಬಂ ಮಾಡಿದಾಗ ಅದರಲ್ಲಿ ನಾಲ್ಕು ಗೀತೆಗಳು ಎಚ್ಚಸ್ವಿ ಅವರದ್ದೇ ಆಗಿದ್ದವು. ಹಾಡುಗಳ ಧ್ವನಿ ಮುದ್ರಣ ಮಾಡುವ ಮೊದಲು ಒನ್ನೆ ಅವರ ಮುಂದೆ ಹಾಡಿದಾಗ ತುಂಬಾ ಚೆನ್ನಾಗಿದೆ ಮಗಳೇ ಅಂತ ಮೆಚ್ಚಿಕೊಂಡರು. ‘ಇರಬೇಕು ಇರುವಂತೆ ಸಾವಿರದ ಚಿಂತೆ ತೊರದು’ ಹಾಡನ್ನು ಹಾಡಿದಾಗ ಅವರ ಕಣ್ಣಿಲ್ಲಿ ನೀರಿತ್ತು. ಕಳೆದ ವರ್ಷ ರಾಮನವಮಿಗೆ ಅವರು ರಚನೆ ಮಾಡಿದ್ದ ‘ರಾಮ ನವಮಿ’ ಕವನವನ್ನು ಸಂಯೋಜನೆ ಮಾಡಬೇಕು ಎಂದಾಗ ಇದನ್ನು ರೆಕಾರ್ಡ್ ಮಾಡಬೇಕು ಅಂದರು. ನಾವು ವಿಡಿಯೋ ಕೂಡ ಮಾಡುತ್ತೇನೆ. ನೀವೇ ವಿಡಿಯೋದಲ್ಲಿ ಇರಬೇಕು ಎಂದಾಗ ಆರೋಗ್ಯ ಸಮಸ್ಯೆ ಇದ್ದರೂ ತುಂಬಾ ಉತ್ಸಾಹದಿಂದ ಬಂದು ಚಿತ್ರೀಕರಣದಲ್ಲಿ ಪಾಲ್ಗೊಂಡರು. ಇದು ನನ್ನ ಅದೃಷ್ಟ. ಇತ್ತೀಚೆಗೆ ನಾನು ಅವರನ್ನು ನೋಡಲು ಹೋದೆ. ನನ್ನ ಕಂಪೋಸಿಂಗ್‌ನಲ್ಲಿ ಬಂದಿರುವ ಎಚ್ಚಸ್ವಿ ಅವರ ಮೆಚ್ಚಿನ ‘ಏಕೆ ಬಾರದಿರುವೆ ನನ್ನ ಮರಳಿ ಮೋಹನ’ ಹಾಡನ್ನು ಅವರ ಮುಂದೆ ಹಾಡಿದೆ. ಇದೆಲ್ಲವೂ ಈಗ ನೆನಪು ಮಾತ್ರ.
ಕೊನೆಯ ಹಾಡು ಕೇಳದೆ ಹೋದರು: ಪಂಚಮ್ ಹಳಿಬಂಡಿ
ಎಚ್ಚಸ್ವಿ ಅವರನ್ನು ಕನ್ನಡದ ಹಿರಿಯ ಸಾಹಿತಿ ಮತ್ತು ಸಾರಸತ್ವ ಲೋಕದ ತಜ್ಞ ಅಂತಲೇ ಹೇಳಬಹುದು. ಸಹೃದಯಿ ವ್ಯಕ್ತಿತ್ವದ ಅವರಿಗೆ ನಾನು ತರುಣ ಮಿತ್ರನಾಗಿದ್ದೆ. ಅವರ ಮನೆಗೆ ಸಾಕಷ್ಟು ಬಾರಿ ಹೋಗಿದ್ದೇನೆ. ಒಂದು ರೀತಿಯಲ್ಲಿ ನಾನು ಅವರ ಮನೆ ಮಗನೇ ಆಗಿದ್ದೆ. ಎಲ್ಲಾ ವರ್ಗದವರನ್ನು ತುಂಬಾ ಪ್ರೀತಿಯಿಂದ ಸಹೃದಯದಿಂದ ಮಾತನಾಡಿಸುತ್ತಿದ್ದ ಸರಳ, ಸಜ್ಜನಿಕೆಯ ವ್ಯಕ್ತಿತ್ವ ಅವರದ್ದು. ಎಚ್ಚಸ್ವಿ ಅವರ ಮತ್ತೊಂದು ವಿಶೇಷ ಎಂದರೆ ಯಾವುದೇ ಕಾರ್ಯಕ್ರಮದಲ್ಲಿ ಅವರು ಮಾತನಾಡಲು ನಿಂತರೆ ಜನರನ್ನು ತಮ್ಮತ್ತ ಸೆಳೆಯುತ್ತಿದ್ದರು. ಆ ಮಟ್ಟಿಗೆ ಭಾಷೆಯ ಕೌಶಲ್ಯ ಇತ್ತು. ಅವರು ಬಳಸುತ್ತಿದ್ದ ಪದಪುಂಜಗಳು, ಸುಗಮ ಸಂಗೀತದ ಬಗ್ಗೆ ಅವರಿಗೆ ಇದ್ದ ಒಲವು, ಮತ್ತೊಬ್ಬ ಕವಿಯನ್ನು ಪ್ರೋತ್ಸಾಹಿಸುವ ಅವರ ಔದಾರ್ಯ ಇದೆಲ್ಲವನ್ನು ಮರೆಯಲಾಗದು. ಅವರ ಹಲವು ಗೀತೆಗಳಿಗೆ ನಾನು ಕಂಠದಾನ ಮಾಡಿದ್ದೇನೆ. ಹತ್ತು ದಿನಗಳ ಹಿಂದೆಯಷ್ಟೆ ಒಂದು ರಾತ್ರಿ 10 ಗಂಟೆಗೆ ನನಗೆ ಫೋನ್ ಮಾಡಿ, ‘ಪಂಚಮ....’ ಅಂದಾಗ ನನ್ನ ಎದೆ ಝಳ್ ಅಂದಿತ್ತು. ನಾನು ಒಂದು ಹಾಡು ಬರೆದಿದ್ದೇನೆ. ನೀನೇ ಅದನ್ನು ರೇಕಾರ್ಡ್ ಮಾಡಬೇಕು ಅಂದರು. ‘ಜಗದಲಿ ಸುಂದರ ಎರಡೇ ರಾಮ, ಅವಧೆಯ ರಾಮ, ಮಧುರೆಯ ಶಾಮ’ ಎಂದು ಸಾಗುವ ಗೀತೆ ಅದು. ಫೋನಿನಲ್ಲಿ ನನಗೆ ಇಡೀ ಗೀತೆಯನ್ನು ಚಿಕ್ಕ ಮಗುವಿನಂತೆ ಓದಿ ಹೇಳಿದಾಗ ನನಗೇ ಅಚ್ಚರಿ ಆಯಿತು. ನಿಜ ಹೇಳಬೇಕು ಅಂದರೆ ಈ ಹಾಡನ್ನು ನಾವು ಇವತ್ತು ಅವರಿಗೆ ಕೇಳಿಸಬೇಕಿತ್ತು. ಆದರೆ, ಅವರಿಲ್ಲ. ತಾವು ಬರೆದ ಹಾಡನ್ನು ಕೇಳಿದೆ ಹೊರಟು ಬಿಟ್ಟಿದ್ದಾರೆ.
ಏನಾದರು ಆಗು ಮೊದಲು ಮಾನವನಾಗು ಸಾಲಿಗೆ ಅನ್ವರ್ಥ : ಪುತ್ತೂರು ನರಸಿಂಹನಾಯಕ್
ನನಗೆ ಎಚ್ ಎಸ್ ವೆಂಕಟೇಶಮೂರ್ತಿ ಅವರು ಸುಮಾರು 40 ವರ್ಷಗಳಿಂದ ಗೊತ್ತು. ಅವರೊಬ್ಬ ಶ್ರೇಷ್ಠ ಕವಿ, ಸಾಹಿತಿ ಎಂಬುದು ನಿಜ. ಆದರೆ, ಅವರ ಜತೆಗೆ ಮಾತನಾಡುತ್ತಿದ್ದಾಗ ಈ ಶ್ರೇಷ್ಠತೆ ಭಾವನೆ ಕಾಣದಂತೆ ನೋಡಿಕೊಳ್ಳುತ್ತಿದ್ದರು. ಅಂದರೆ ಅವರು ನಮ್ಮ ಜತೆಗೆ ಮಾತನಾಡುವಾಗ, ಇದ್ದಾಗ ನಮ್ಮ ಕುಟುಂಬದ ವ್ಯಕ್ತಿ, ಸ್ನೇಹಿತ, ಆಪ್ತನೆಂಬ ಭಾವನೆ ಮೂಡಿಸುತ್ತಿದ್ದರು. ಯಾಕೆಂದರೆ ಕಾವ್ಯದಲ್ಲಿ ಶ್ರೇಷ್ಠತೆ ಕಾಣಬೇಕು ಎಂದು ನಂಬಿದವರು ಎಚ್ಚಸ್ವಿ ಅವರು. ಅಂತ್ಯತ ಸರಳವಾಗಿ ಇದ್ದರು. ಅವರು ನನ್ನ ನೋಡಿದ ಕೂಡಲೇ ನಾಯಕರೇ ಹೇಗಿದ್ದೀರಿ ಅಂತ ತುಂಬಾ ಆತ್ಮೀಯತೆಯಿಂದ ಮಾತನಾಡಿಸುತ್ತಿದ್ದರು. ಇದು ಎಲ್ಲಕ್ಕಿಂತ ದೊಡ್ಡದು. ಏಕಕಾಲಕ್ಕೆ ಮಾಸ್ ಮತ್ತು ಕ್ಲಾಸ್ ತಲುಪಿದ ಕವಿ ಅವರು. ಸಾಮಾನ್ಯ ಓದುಗನಿಗೆ ತಲುಪುತ್ತಿದ್ದರು ಎಂಬುದು ಅವರ ಕಾವ್ಯಕ್ಕೆ ಇದ್ದ ಶಕ್ತಿ. ಮನುಷ್ಯನಾಗಿ ತಾನು ಏನೂ ಅಂತ ತೋರಿಸಿ ಕೊಟ್ಟವರು. ‘ಏನಾದರೂ ಆಗು ಮೊದಲು ಮಾನವಾನಗು’ ಎನ್ನುವ ಸಾಲಿಗೆ ಎಚ್ಚಸ್ವಿ ಅವರದ್ದು ಅನ್ವರ್ಥನಾಮ.
ಲೌಕಿಕ, ಅಲೌಕಿದಲ್ಲಿ ಜೀವನ ಪ್ರೀತಿ ಕಲಿಸಿದರು: ಗಾಯಕ ರಾಘವೇಂದ್ರ ಬಿಜಾಡಿ
ಸಾಹಿತ್ಯ, ಬರವಣಿಗೆ, ನಾಟಕ, ಸಿನಿಮಾ ಇವುಗಳ ನಡುವೆಯೂ ಜೀವನ ಪ್ರೀತಿ ಕಲಿಸಿಕೊಟ್ಟ ಮಹಾನ್ ವ್ಯಕ್ತಿ ಎಚ್ ಎಸ್ ವೆಂಕಟೇಶಮೂರ್ತಿ ಅವರು. ಅಂದರೆ ಲೌಕಿಕ ಜಗತ್ತಿನಲ್ಲಿದ್ದು ಅಲೌಕಿವಾಗಿ ಹೇಗಿರಬೇಕು, ಅಲೌಕಿಕ ಪ್ರಪಂಚದಲ್ಲಿ ಇದ್ದಾಗಲೂ ಲೌಕಿಕವಾಗಿ ಹೇಗೆ ಜೀವನ ಮಾಡಬೇಕು ಎಂದು ಹೇಳಿಕೊಟ್ಟಿದ್ದಾರೆ. ಕೆಲವು ಬಾರಿ ಹಾಡುಗಳನ್ನು ಕಂಪೋಸ್ ಮಾಡುವಾಗ ‘ಅದು ಬೇಡ ಕಣಯ್ಯ, ಸಾಹಿತ್ಯ ಅಷ್ಟು ಬಿಗಿಯಾಗಿಲ್ಲ’ ಎನ್ನುತ್ತಿದ್ದರು. ‘ಇದು ಚೆನ್ನಾಗಿದೆ. ಇದು ಮಾಡು. ಇದು ನಿನ್ನ ಜೀವನಕ್ಕಾಗಿ. ಇದು ಲೌಕಿಕ. ವರ್ಷದಲ್ಲಿ ಒಂದೋ-ಎರಡೋ ಹಾಡುಗಳನ್ನು ಮಾಡು. ಅದನ್ನು ಯಾರು ಕೇಳುತ್ತಾರೋ, ಇಲ್ಲವೋ, ಲಾಭವೋ, ನಷ್ಟವೋ ಅಂತ ಯೋಚಿಸಬೇಡ. ಅದು ನಿನಗಾಗಿ ಮಾಡಿಕೊಂಡಿರುವುದು. ಇದು ಅಲೌಕಿಕವಾದದ್ದು’ ಎಂದು ತಿಳಿ ಹೇಳಿದವರು ಎಚ್ ಎಸ್ ವೆಂಕಟೇಶವಮೂರ್ತಿ ಅವರು. ಬೇರೆಯವರು ರಚಿಸಿದ, ಹಾಡಿದ ಹಾಡುಗಳನ್ನು ಕೂಡ ಕೇಳಿ ಸಂಭ್ರಮಿಸುತ್ತಿದ್ದರು. ಸಣ್ಣ ಸಣ್ಣ ಸಂಗತಿಗಳನ್ನು ಹಾಗೂ ಸಂತೋಷದ ಕ್ಷಣಗಳನ್ನು ಮಕ್ಕಳಂತೆ ಸಂಭ್ರಮಿಸುತ್ತಾ, ಹಿರಿ-ಕಿರಿಯರನ್ನು ಸಮಾನವಾಗಿ ಮಾತನಾಡಿಸುತ್ತಾ ಆ ಮೂಲಕ ಜೀವನ ಅಂದರೆ ಏನೂ ಅಂತ ತೋರಿಸಿಕೊಟ್ಟವರು ಎಚ್ಚಸ್ವಿ.
ನನ್ನ ಕನ್ನಡ ಮೇಷ್ಟ್ರು: ಪ್ರಕಾಶ್ ರೈ
ನಾನು ಕಾಲೇಜಿಗೆ ಸೇರಿದಾಗ ನನಗೆ ಕನ್ನಡ ಮೇಷ್ಟರಾಗಿ ಸಿಕ್ಕಿದವರು ಅವರು. ಮೊದಲ ದಿನ ನನಗೆ ಕೆ ಎಸ್ ನರಸಿಂಹಸ್ವಾಮಿ ಅವರ ಇಡದಿರು ನನ್ನ ನಿನ್ನ ಸಿಂಹಾಸನದ ಮೇಲೆ ಪದ್ಯ ಕೊಟ್ಟು, ವಿಮರ್ಶೆ ಬರಿ ಅಂದಿದ್ದರು. ನಾನಾಗ ಬರೆದಿದ್ದೆ. ನಂತರ ಆ ಪದ್ಯವನ್ನು ಹೇಗೆ ನೋಡಬೇಕು, ಓದಬೇಕು ಅನ್ನುವುದನ್ನು ಹೇಳಿಕೊಟ್ಟರು. ಸಾರಸ್ವತ ಲೋಕದ ಮೇಲೆ ಆಸಕ್ತಿ ಹುಟ್ಟುವಂತೆ ಮಾಡಿದ್ದೇ ಅವರು. ಸಾಹಿತ್ಯವನ್ನು ಹೇಗೆ ನೋಡಬೇಕು ಅಂತ ಹೇಳಿಕೊಟ್ಟವರು ಕೂಡ. ನನ್ನ ಕನ್ನಡ ಮೇಷ್ಟ್ರು ಅಂತ ಹೇಳಿಕೊಳ್ಳುವುದಕ್ಕೆ ನನಗೆ ಹೆಮ್ಮೆ. ಅವರು ಕೂಡ ಎಲ್ಲೇ ಸಿಕ್ಕರೂ ನನ್ನ ಮೆಚ್ಚಿನ ಶಿಷ್ಯ ಅಂತ ಹೆಮ್ಮೆಯಿಂದ ಹೇಳಿಕೊಳ್ಳುತ್ತಿದ್ದರು. ಅದಕ್ಕಿಂತ ಹೆಚ್ಚಿಗೇನು ಬೇಕು? ಹಿಂದೊಮ್ಮೆ ನನ್ನ ಬಗ್ಗೆ ಮಾತಾಡುತ್ತಾ `ನನ್ನ ಕೆನ್ನೆಯ ಮೇಲಿನ ಕಂಬನಿಯನ್ನು ಒಂದು ತಂಗಾಳಿ ಒರೆಸಿ ಹೋಯಿತು. ಧನ್ಯವಾದ ಹೇಳೋಣ ಅಂತ ತಿರುಗಿ ನೋಡುವಷ್ಟರಲ್ಲಿ ಆ ತಂಗಾಳಿ ಮಾಯವಾಗಿತ್ತು. ಈ ದಕ್ಷಿಣ ಕನ್ನಡವರೇ ಹೀಗೆ, ಥ್ಯಾಂಕ್ಸ್ ಹೇಳೋದಕ್ಕೂ ಕಾಯೋದಿಲ್ಲ'' ಅಂತ ಹೇಳಿದ್ದರು. ಆ ನೆನಪು ನನ್ನಲ್ಲಿದೆ. ನುಡಿದಂತೆ ನಡೆದ ವಿನಯವಂತರು ಅವರು. ಅವರ ನಿರ್ಗಮನ ನೋವು ತಂದಿದೆ.
