ವಚನ ಪಿತಾಮಹ ಫಕೀರಪ್ಪ ಗುರುಬಸಪ್ಪ ಹಳಕಟ್ಟಿ ಅವರು ಇಪ್ಪತ್ತನೇ ಶತಮಾನದ ಪ್ರಾತ:ಸ್ಮರಣೀಯರಲ್ಲಿ ಪ್ರಮುಖರು. ಬಡತನದಲ್ಲಿ ಹುಟ್ಟದೇ ಇದ್ದರೂ ಅದನ್ನು ಅನುಭವಿಸಿದವರು, ಸಾಕಷ್ಟು ಗಳಿಸಬಹುದಾಗಿದ್ದ ವಕೀಲಿ ವೃತ್ತಿ ಇದ್ದರೂ ಆರ್ಥಿಕ ತೊಂದರೆಯಲ್ಲಿ ಬಳಲಿದವರು.

ಡಾ। ಮನು ಬಳಿಗಾರ್, ನಿಕಟಪೂರ್ವ ಅಧ್ಯಕ್ಷ, ಕನ್ನಡ ಸಾಹಿತ್ಯ ಪರಿಷತ್ತು.

ವಚನ ಪಿತಾಮಹ ಫಕೀರಪ್ಪ ಗುರುಬಸಪ್ಪ ಹಳಕಟ್ಟಿ ಅವರು ಇಪ್ಪತ್ತನೇ ಶತಮಾನದ ಪ್ರಾತ:ಸ್ಮರಣೀಯರಲ್ಲಿ ಪ್ರಮುಖರು. ಬಡತನದಲ್ಲಿ ಹುಟ್ಟದೇ ಇದ್ದರೂ ಅದನ್ನು ಅನುಭವಿಸಿದವರು, ಸಾಕಷ್ಟು ಗಳಿಸಬಹುದಾಗಿದ್ದ ವಕೀಲಿ ವೃತ್ತಿ ಇದ್ದರೂ ಆರ್ಥಿಕ ತೊಂದರೆಯಲ್ಲಿ ಬಳಲಿದವರು. ಸ್ವಂತ ಮನೆ ಮಾರಿ ಬಾಡಿಗೆ ಮನೆಯಲ್ಲಿ ಬದುಕು ಸಾಗಿಸಿದವರು. ಇದಕ್ಕೆಲ್ಲ ಕಾರಣ ಅವರ ಸಮಾಜಸೇವಾ ಮನೋಭಾವ. ಸರ್ವಸ್ವವನ್ನೂ ವಚನ ಸಾಹಿತ್ಯ ಸಂಶೋಧನೆ ಹಾಗೂ ಶೈಕ್ಷಣಿಕ, ಸಹಕಾರ, ಕೃಷಿ ಮುಂತಾದ ಕ್ಷೇತ್ರಗಳ ಏಳಿಗೆಗಾಗಿ ಧಾರೆ ಎರೆದದ್ದು.

ಯೌವನಾವಸ್ಥೆಯಲ್ಲಿ ಆಪ್ತರೊಬ್ಬರ ಮನೆಗೆ ಊಟಕ್ಕೆ ಹೋದಾಗ ಅಕಸ್ಮಾತ್ ಅಲ್ಲಿ ಸಂರಕ್ಷಿಸಿ ಬಟ್ಟೆಯಲ್ಲಿ ಬಿಗಿದು ಜೋಡಿಸಿಟ್ಟ ವಚನ ಸಾಹಿತ್ಯವುಳ್ಳ ಓಲೆಯ ಗರಿಗಳ ಕಟ್ಟಿನ ಮೇಲೆ ಹಳಕಟ್ಟಿಯವರ ದೃಷ್ಟಿಬಿದ್ದು, ಅದರಲ್ಲೇ ತಲ್ಲೀನರಾಗಿ ಊಟ ಮಾಡುವುದನ್ನೇ ಮರೆತು ಬೌದ್ಧಿಕ ಹಸಿವನ್ನು ತಣಿಸಿಕೊಳ್ಳುವ ಕಾಯಕದಲ್ಲಿ ತೊಡಗಿಸಿಕೊಂಡರು. ಮುಂದೆ ವಚನ ಸಂಶೋಧನೆ, ಸಂಗ್ರಹಣೆ, ಪರಿಷ್ಕರಣೆ, ಮುದ್ರಣ, ಪ್ರಕಾಶನ, ಪ್ರಚಾರ, ಪ್ರಸಾರ ಹಾಗೂ ಇಂಗ್ಲೀಷ್‌ಗೆ ವಚನಗಳ ಅನುವಾದ ಇವುಗಳಿಗಾಗಿಯೇ ತಮ್ಮ ತನು ಮನ ಧನಕನಕಾದಿಗಳನ್ನೆಲ್ಲ ಧಾರೆ ಎರೆದರು. ವಚನ ಸಾಹಿತ್ಯ, ರಗಳೆಗಳು, ಅಂಕಣ ಬರಹಗಳು ಇಂತಹ ಅಮೂಲ್ಯ ನೂರಕ್ಕಿಂತ ಹೆಚ್ಚು ಗ್ರಂಥಗಳನ್ನು ರಚಿಸಿ ಪ್ರಕಟಿಸಿದರು. ಇದರ ನೇರ ಹಾಗೂ ವ್ಯತಿರಿಕ್ತ ಪರಿಣಾಮ ವಕೀಲ ವೃತ್ತಿಯ ಮೇಲಾಯಿತು.

ಅಂದಿನ ಕಾಲದಲ್ಲಿಯೇ ಲಕ್ಷಗಟ್ಟಲೆ ಗಳಿಸಬಹುದಾಗಿದ್ದ ವಕೀಲ ವೃತ್ತಿ ಸ್ಥಗಿತಗೊಂಡಿತು. ಮುಂದೆ ದೊರೆತ ಕಾನೂನು ಇಲಾಖೆಯ ಹುದ್ದೆಗೂ ರಾಜೀನಾಮೆ ನೀಡಿದರು. ಜೀವನ ನಿರ್ವಹಣೆ ಕಡು ಕಷ್ಟವಾಯಿತು. ಆದರೆ ಹಳಕಟ್ಟಿ ಅವರಿಗೆ ಇದ್ಯಾವುದರ ಪರಿವೆಯೇ ಇಲ್ಲದಾಗಿತ್ತು. ಅವರ ಜೀವನದ ಮಹೋದ್ದೇಶ ವಚನಕಾರರನ್ನು ಹಾಗೂ ಶರಣ ಸಾಹಿತ್ಯವನ್ನು ಹುಡುಕಿ ತೆಗೆದು ಸಮಾಜದ ಮಡಿಲಿಗೆ ಹಾಕಿ ಮುಸುಕಿದ್ದ ಅಜ್ಞಾನದ ಅಂಧಕಾರವನ್ನು ಸರಿಸಿ ಜ್ಞಾನ ನೀಡುವುದಾಗಿತ್ತು. ಇದಕ್ಕಾಗಿ ಅವರು ಪಟ್ಟಪಾಡು ಅಷ್ಟಿಷ್ಟಲ್ಲ. ಅನೇಕ ಸಾರಿ ಸೈಕಲ್ ಏರಿ ಊರೂರು ಅಲೆಯುವುದು, ತಾಳೆಗರಿ, ಓಲೆಕಟ್ಟುಗಳನ್ನು ಬೇಡಿ ಇಲ್ಲವೆ ಹಣಕೊಟ್ಟು ಕೊಂಡು ಸಂಗ್ರಹಿಸಿ ಮುಂದಿನ ಕಾರ್ಯಕ್ಕೆ ತೊಡಗುತ್ತಿದ್ದರು. ವಿಪರೀತ ತಿರುಗಾಟ, ಅಪರಿಮಿತ ಕೆಲಸದ ಒತ್ತಡ, ಆರ್ಥಿಕ ತೊಂದರೆ, ಆಗಾಗ ಹದಗೆಡುತ್ತಿದ್ದ ಆರೋಗ್ಯ ಇದರಿಂದಾಗಿ ಜೀವ ಬೆಂದು ಹೋಯಿತು.

ಕಷ್ಟನಷ್ಟಗಳ ಲೆಕ್ಕಿಸದೆ ಮುನ್ನಡೆದ ಧೀಮಂತ: ಹಳಕಟ್ಟಿಯವರಿಗೆ ಎದುರಾದ ಸಮಸ್ಯೆಗಳು ಹಲವಾರು ಬಗೆಯವು. ಸ್ವಂತಕಾಲ ಮೇಲೆ ನಿಂತು ಜೀವನ ನಿರ್ವಹಿಸುತ್ತಿದ್ದ ಹರೆಯದ ಮಗನ ಅಕಾಲ ಮರಣ, ಮುದ್ರಣಕ್ಕೆ ಮಂಗಳೂರು ಪ್ರೆಸ್ ಗೆ ಕಳಿಸಿದ ವಚನ ಸಾಹಿತ್ಯದ ಗ್ರಂಥಗಳು ಮುದ್ರಣಗೊಳ್ಳದೆ ಮರಳಿ ಬಂದದ್ದು, ಇವೆಲ್ಲ ಅವರ ಜೀವವನ್ನು ಹಿಂಡಿ ಹಿಪ್ಪೆ ಮಾಡಿದ್ದರೂ ಛಲಬಿಡದ ಸಾಹಸಿಯಾಗಿ ಮುನ್ನಡೆದರು. ಕೆಲವೊಂದು ಮಠಮಾನ್ಯಗಳು, ಅಭಿಮಾನಿಗಳು ಅಷ್ಟಿಷ್ಟು ಸಹಾಯ ಮಾಡಿದರು. ಆದರೆ ಹಳಕಟ್ಟಿಯವರು ಹಮ್ಮಿಕೊಂಡಿದ್ದ ಯೋಜನೆಗಳು ಅಪಾರವಾಗಿದ್ದವು. ತಾವು ಕೈಗೆತ್ತಿಕೊಂಡ ಮುದ್ರಣಕಾರ್ಯ ಹಾಗೂ ಅವರೇ ನಡೆಸುತ್ತಿದ್ದ ಎರಡು ಪತ್ರಿಕೆಗಳ ನಿರ್ವಹಣೆ ತುಂಬ ಕಠಿಣವಾದಾಗ ಸ್ವಂತ ವಾಸಿಸಿದ ಮನೆಯನ್ನೇ ಮಾರಿ ತಮ್ಮ ಯೋಜನೆಗಳ ಅನುಷ್ಠಾನ ಮಾಡಿಕೊಂಡರು.

ವ್ಯಕ್ತಿ ಏಕ, ಸೇವೆ ಅನೇಕ: ತಮ್ಮದೇ ಆದ ಕಾರಣಗಳಿಂದಾಗಿ ಧಾರವಾಡ, ಬೆಳಗಾವಿ ಬಿಟ್ಟು ಬಿಜಾಪುರಕ್ಕೆ ಬಂದು ನೆಲೆಸಿದ ಹಳಕಟ್ಟಿಯವರು ಅಲ್ಲಿ ಕೈಗೊಂಡ ಕಾರ್ಯಗಳು ಅನನ್ಯ ಅಪರೂಪ. ಬರಗಾಲ ಪೀಡಿತ ಪ್ರದೇಶವನ್ನು ಅದರಿಂದ ಮುಕ್ತಗೊಳಿಸಲು ಬರ ನಿವಾರಣಾ ಸಂಸ್ಥೆ (anti famine institute) ಕುಡಿಯುವ ನೀರು ಪೂರೈಕೆಗಾಗಿ ಭೂತನಾಳ ಕೆರೆ ನಿರ್ಮಾಣ (ಇದಕ್ಕಾಗಿ ಸರ್ ಎಂ ವಿಶ್ವೇಶ್ವರಯ್ಯ ಅವರ ಮಾರ್ಗದರ್ಶನ ಪಡೆದರು), ಕೃಷಿಕರ, ಕೃಷಿ ಕಾರ್ಮಿಕರ, ನೇಕಾರರ ಕುಶಲಕರ್ಮಿಗಳ ಕಲ್ಯಾಣಕ್ಕಾಗಿ ಅನೇಕ ಸಹಕಾರ ಸಂಘಗಳನ್ನು ಸ್ಥಾಪಿಸಿದರು. ಸಮಾಜದ ಆರ್ಥಿಕ ಪರಿಸ್ಥಿತಿ ಬಲವರ್ಧನೆಗಾಗಿ ಸಿದ್ಧೇಶ್ವರ ಬ್ಯಾಂಕ್ ಸ್ಥಾಪನೆ(ಇಂದು ಇದು ಸಾವಿರಾರು ಕೋಟಿ ರೂಪಾಯಿಗಳ ವ್ಯವಹಾರ ಮಾಡುತ್ತಾ ಲಕ್ಷಾಂತರ ಜನರ ಆರ್ಥಿಕ ಸಂಕಷ್ಟವನ್ನು ಪರಿಹರಿಸುತ್ತಿದೆ.) ಶಿಕ್ಷಣ ವಂಚಿತ ಸಮಾಜ ಯಾವ ಸಾಧನೆಯನ್ನೂ ಮಾಡದು ಎಂದರಿತ ಅವರು ಹಲವಾರು ವಿದ್ಯಾಸಂಸ್ಥೆಗಳನ್ನು ಸ್ಥಾಪಿಸಿದರು.

ಇದಕ್ಕೆ ಮುಕುಟಪ್ರಾಯದಂತೆ ಬಿ.ಎಲ್. ಡಿ.ಈ. ಸಂಸ್ಥೆಯನ್ನು ಹುಟ್ಟುಹಾಕಿದ್ದು, ಇಂದು ಇದರಡಿ ೯೦ ಶಿಕ್ಷಣ ಸಂಸ್ಥೆಗಳು ನಡೆಯುತ್ತಿದ್ದು, ಲಕ್ಷ ಲಕ್ಷ ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ.(ಕಾರ್ಯಾಧ್ಯಕ್ಷರಾಗಿ ಸಚಿವರಾದ ಎಂ. ಬಿ. ಪಾಟೀಲ್ ಕಾರ್ಯನಿರ್ವಹಿಸುತ್ತಿದ್ದಾರೆ). ಇದಲ್ಲದೆ ಹಳಕಟ್ಟಿಯವರು ಒಂದು ವಾರಪತ್ರಿಕೆ (ನವ ಕರ್ನಾಟಕ), ಮಾಸ ಪತ್ರಿಕೆಗಳನ್ನು (ಶಿವಾನುಭವ) ಮೂವತ್ತು ವರ್ಷಗಳ ಕಾಲ ನಿರಂತರವಾಗಿ ನಡೆಸಿಕೊಂಡು ಬಂದರು. ಸ್ವಾತಂತ್ರ್ಯಾಂದೋಲನ ಹಾಗೂ ಕರ್ನಾಟಕ ಏಕೀಕರಣ ಚಳವಳಿಗಳ ಮುಂಚೂಣಿಯಲ್ಲಿ ಇದ್ದವರು. ಕರ್ನಾಟಕ ಏಕೀಕರಣ ರಾಜ್ಯ ಸಮ್ಮೇಳನದ ಅಧ್ಯಕ್ಷತೆ ಹಾಗೂ 1926 ರಲ್ಲಿ ಬಳ್ಳಾರಿಯಲ್ಲಿ ನಡೆದ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆಯನ್ನು ವಹಿಸಿದ್ದರು.

ಪ್ರಶಸ್ತಿ ಬಿರುದುಗಳ ಸುರಿಮಳೆ: ಯಾವ ಪ್ರಚಾರ ಮನ್ನಣೆಗಳ ಬಗ್ಗೆ ತಲೆ ಕೆಡಿಸಿಕೊಳ್ಳದೆ ಧ್ಯಾನಸ್ಥರಾಗಿ ಸಾಧನೆಯಲ್ಲಿ ತೊಡಗಿಕೊಂಡ ಇವರಿಗೆ ಅಂದಿನ ಸರ್ಕಾರವೇ ರಾವ್ ಸಾಹೇಬ್ ಎಂಬ ಬಿರುದನ್ನು ನೀಡಿತ್ತು. ವಿದ್ವಾಂಸರು ಅವರನ್ನು ಕರ್ನಾಟಕದ ಮ್ಯಾಕ್ಸ್ಮುಲರ್, ಆಧುನಿಕ ಶರಣ ಇತ್ಯಾದಿಯಾಗಿ ಕರೆಯುತ್ತಿದ್ದರು. ಮುಂದೆ ಕರ್ನಾಟಕ ವಿಶ್ವವಿದ್ಯಾಲಯ ಗೌರವ ಡಾಕ್ಟರೇಟ್ ಪ್ರದಾನ ಮಾಡಿತು. ಹಾಗೆಯೇ ಇವರಿಗೆ ಮುಂಬಯಿ ಪ್ರಾವಿನ್ಸ್ ನ ವಿಧಾನ ಪರಿಷತ್ ಸದಸ್ಯತ್ವ ಒಲಿದು ಬಂದಿತ್ತು.

ಬಿ.ಎಮ್.ಶ್ರೀ, ಅ.ನ.ಕೃ, ಎಂ.ಆರ್.ಶ್ರೀನಿವಾಸಮೂರ್ತಿ, ಉತ್ತಂಗಿ ಚೆನ್ನಪ್ಪ, ರಂಗನಾಥ ದಿವಾಕರ್ ಮುಂತಾದ ಗಣ್ಯರು ಹಳಕಟ್ಟಿಯವರನ್ನು ಪ್ರಶಂಸೆ ಮಾಡಿದ್ದರು. ಒಮ್ಮೆ ನಾಡಹಬ್ಬದ ಕಾರ್ಯಕ್ರಮವೊಂದಕ್ಕೆ ಬಿಜಾಪುರಕ್ಕೆ ಬಂದಿದ್ದ ಕನ್ನಡದ ಕಣ್ವ ಆಚಾರ್ಯ ಬಿ.ಎಂ.ಶ್ರೀಕಂಠಯ್ಯ ಅವರು ಅಲ್ಲಿನ ಜನ ಗೋಳಗುಮ್ಮಟ ತೋರಿಸುತ್ತೇವೆ ಅಂದಾಗ ಆಡಿದ ಮಾತು,"ನಾನು ಮೊದಲು ನಿಮ್ಮಲ್ಲಿಯ ಅಮೂಲ್ಯವಾದ ವಚನ ಗುಮ್ಮಟವನ್ನು ನೋಡಬೇಕು" ಎಂದು ಹೇಳಿ ಹಳಕಟ್ಟಿಯವರ ದರುಶನಕ್ಕೆ ಬಂದರು. ಹೀಗೆ ಈ ವಚನ ಪಿತಾಮಹರು ಮಾಡಿದ್ದು ಅಪಾರ, ಪಡೆದಿದ್ದು ಅತ್ಯಲ್ಪ.