ವಾಲ್ಮೀಕಿಯ 'ಕೋ ನ್ವಸ್ಮಿನ್' ಎಂಬ ಪ್ರಶ್ನೆಯಿಂದ ಪ್ರಾರಂಭಿಸಿ, ರಾಮಾಯಣದ ಆದರ್ಶ ಪುರುಷನ ಹುಡುಕಾಟವನ್ನು ಈ ಲೇಖನವು ವಿವರಿಸುತ್ತದೆ. ರಾಮನ ಸಂಕೀರ್ಣ ವ್ಯಕ್ತಿತ್ವ, ಸ್ವತಃ ರಾಮನೇ 'ತಾನು ಯಾರು?' ಎಂದು ಕೇಳಿದ ಸಂದರ್ಭ ಮತ್ತು ಅಂತಿಮವಾಗಿ ರಾಮನೇ ಪರಿಪೂರ್ಣ ಮಾನವನೆಂಬ ಸತ್ಯ ಎಂಬುದನ್ನು ಇದು ಚರ್ಚಿಸುತ್ತದೆ.

-ನಾರಾಯಣ ಯಾಜಿ, ಚಿಂತಕರು

ರಾಮಾಯಣ ಪ್ರಾರಂಭವಾಗುವುದೇ ‘ಕೋ ನ್ವಸ್ಮಿನ್ಸಾಂಪ್ರತಂ ಲೋಕೇ…’ ಎನ್ನುವ ಕುತೂಹಲದಿಂದ. ಪೂರ್ವಾಶ್ರಮದಲ್ಲಿ ಹಿಂಸಾಪ್ರವೃತ್ತಿಯವನಾದ ರತ್ನಾಕರ ಅಥವಾ ಪ್ರಾಚೇತಸ ಎನ್ನುವ ಬೇಡ ಹಿಂಸಾರತಿಯನ್ನು ಮರೆತಿದ್ದಾನೆ. ಸಪ್ತರ್ಷಿಗಳು ಆತನಿಗೆ ‘ರಾಮ’ ಎನ್ನುವ ಎರಡಕ್ಷರವನ್ನು ತಿಳಿಸಿ ಬದುಕಿನ ಆದರ್ಶವನ್ನು ಅರಿಯಬೇಕಾದರೆ ಈತನನ್ನು ಧ್ಯಾನಿಸು ಎಂದಿದ್ದಾರೆ. ಈ ಹುಡುಕಾಟ ಕೇವಲ ರಾಮಾಯಣ ಕಾಲಕ್ಕೆ ಮಾತ್ರ ಸೀಮಿತವಾಗಿಲ್ಲ. ಇದೊಂದು ಆದರ್ಶದ ಹುಡುಕಾಟ. ಇದು ಯಾವುದೋ ಕಾಲದ ತತ್ತ್ವಬೋಧೆಯಲ್ಲ. ಸದಾ ವರ್ತಮಾನದಲ್ಲಿಯೇ ಇರುವಂತಹ ಆದರ್ಶ ಸ್ಥಿತಿ. ಮೌಲ್ಯಗಳನ್ನು ಅಳೆಯುವಾಗ ‘ಸನಾತನ’- ಯಾವುದಕ್ಕೆ ಆರಂಭವಿಲ್ಲವೋ ಮತ್ತು ಯಾವುದು ಎಂದಿಗೂ ಕೊನೆಯಾಗುವುದಿಲ್ಲವೋ ಅದು ಸನಾತನ. ಇನ್ನೊಂದು ‘ಅಧುತನ’ - ಇತ್ತೀಚಿನದ್ದು, ನೂತನವಾದದ್ದು. ಮೂರನೆಯದೇ ಈ ಎರಡು ಮೌಲ್ಯಗಳ ನಡುವೆ ‘ಸದಾತನ- ಯಾವಾಗಲೂ ಇರುವಂತದ್ದು’ ಅಥವಾ ‘ನಿರಂತರವಾದದ್ದು’ (Everlasting/Perpetual); ಸನಾತನದ ಆದರ್ಶಗಳೆಲ್ಲವೂ ನಿರಂತರವಾಗಿ ಯಾವಕಾಲಕ್ಕೂ ಸಲ್ಲುವಂತಹದ್ದು. ವಾಲ್ಮೀಕಿ ತಪಸ್ಸಿನಭಿತ್ತಿಯಲ್ಲಿ ಕಂಡ ಅಮೂರ್ತತತ್ತ್ವದ ಮೂರ್ತರೂಪ ಪುರುಷನಾಗಿದ್ದರೆ ಕಾಣಬೇಕೆನ್ನುವ ರೂಪ ಅದು. ತಾನು ತಪಸ್ಸಿನಲ್ಲಿ ಕಂಡ ಆದರ್ಶಮಯವಾದ ಪುತ್ರ, ಸೋದರ, ಪತಿ, ಬಂದು, ರಾಜನೀತಿಜ್ಞ, ಯೋಧ, ಮಹಾವೀರ, ಮಾಹಾಧಿರ, ಮಿತ್ರ ಜೊತೆಗೆ ಆದರ್ಶ ಶತ್ರುವಾಗಿಯೂ ಇರಬೇಕಾದವ ನಿಜಕ್ಕೂ ಇದ್ದಾನೆಯೋ, ಇದ್ದರೆ ಆತ ಯಾರು ಎನ್ನುವ ಪ್ರಶ್ನೆ ‘ಕೋ ನ್ವಸ್ಮಿನ್ಸಾಂಪ್ರತಂ ಲೋಕೇ..’ ಕಾಡುತ್ತಿದೆ.

ರಾಮನಾಮದ ಅನಂದ:

ಮನುಷ್ಯ ಎಲ್ಲಾ ವಿಧವಾದ ಮೋಹವನ್ನು ತೊರೆದು ಆದರ್ಶದ ಬದುಕನ್ನು ಬಾಳಬೇಕು, ಅದಕ್ಕೆ ಆದರ್ಶವೇ ಬದುಕಾಗಬೇಕು ಎನ್ನುವುದನ್ನು ಒಂದುಕಾಲಕ್ಕೆ ಲೋಕಕ್ಕೆ ಬೇಡನಾದವ ತಪಸ್ಸಿನಿಂದ ಅರಿತಿದ್ದಾನೆ. ಮಾಗಿದ ಹಣ್ಣಿನ ಬೀಜ ಮಣ್ಣಿನೊಡನೆ ಸೇರಿದಾಗ ಮಾತ್ರ ಮೊಳೆಕೆ ಒಡೆದು ಬರುವಂತೆ ಪ್ರಾಚೇತಸನಿಗೂ ಸಹ ಮುನಿಗಳು ತಿಳಿಸಿದ ರಾಮನಾಮದ ಅನಂದ ಮನಸ್ಸಿನಲ್ಲಿ ತುಂಬಿದೆ. ಮನಸ್ಸಿನಲ್ಲಿರುವ ಅಮೂರ್ತವಾದ ಆನಂದ ಮೂರ್ತರೂಪವಾದ ಹೊರತೂ ಸಮಾಧಾನವಾಗುವುದಿಲ್ಲ. ಅಂತಹ ಪುರುಷ ಇರಬಹುದೇ ಎನ್ನುವ ಕುತೂಹಲ ಜೊತೆಗೆ ಸಂಶಯವೂ ಮೂಡಿದೆ. ಹುತ್ತದಿಂದ ಎದ್ದು ವಾಲ್ಮೀಕಿ ಈಗ ತಪಸ್ವಿ. ತಪಸ್ಸಿನಲ್ಲಿ ಕಾಯಿಕ, ವಾಚಿಕ, ಮಾನಸಿಕ ಎನ್ನುವ ಮೂರು ಬಗೆ. ವಾಲ್ಮೀಕಿಗೆ ಈ ಮೂರೂ ಹಂತದಲ್ಲಿ ನಿರತನಾಗಿರುವಾಗ ಭಿತ್ತಿಯಲ್ಲಿ ಮೂಡಿದ ಮೂರ್ತರೂಪವನ್ನು ತೋರಿಸಬೇಕಾದ ಮಹಾತ್ಮ ಇದುತನಕ ಸಿಕ್ಕಿಲ್ಲ. ಹಾಗಾಗಿ ಅವರಲ್ಲಿ ‘ಕಃ- ಯಾರು’ ಎನ್ನುವ ಪ್ರಶ್ನೆ ನಿರಂತರವಾಗಿ ಕಾಡುತ್ತಿತು. ಅದಕ್ಕೆ ಉತ್ತರಿಸಬಲ್ಲವರು ಕೇವಲ ತಪಸ್ವಿಗಳಾದರೆ ಸಾಲದು ‘ತಪಸ್ವಾಧ್ಯಾಯಯ ನಿರತಂ -. ಅಧ್ಯಯನ ಅಧ್ಯಾಪನಗಳಲ್ಲಿಯೂ ಸದಾ ನಿರತರಾಗಿರಬೇಕು, ವಾಗ್ವಿದಾಂ ವರಂ- ಮಾತು ಬಲ್ಲವರಲ್ಲಿ ಶ್ರೇಷ್ಠರಾಗಿರಬೇಕು. ‘ವಾಕ್’ ಎಂದರೆ ಸರಸ್ವತಿ, ವೇದಸ್ವರೂಪಿ. ಅದರಲ್ಲಿನ ಗೂಢವನ್ನು ರಮಣೀಯವಾಗಿ ನಿರೂಪಿಸುವವನೇ ಸರಸ್ವತಿಯ ಪುತ್ರ, ಆತನೇ ನಾರದ. ಆತ ವಾಲ್ಮೀಕಿಯನ್ನು ಹುಡುಕಿಕೊಂಡು ಬಂದ ಉದ್ದೇಶವೇ ತಪಸ್ವಿಯನ್ನು ನಿರಂತರವಾಗಿ ಕಾಡುತ್ತಿರುವ ‘ಯಾರು’ ಎನ್ನುವ ಮಹಾಪುರುಷನ ಚರಿತ್ರೆಯನ್ನು ತಿಳಿಸಿಹೇಳಲು.

ರಾಮಾಯಣದ ಮರ್ಮ:

ರಾಮಾಯಣದುದ್ದಕ್ಕೂ ವಾಲ್ಮೀಕಿಯನ್ನು ಕಾಡಿದ್ದ ‘ಕೋ ನ್ವಸ್ಮಿನ್’ ಇದು ನಿರಂತರವಾಗಿ ಓದುಗರನ್ನೂ ಸಹ ಕಾಡುತ್ತದೆ. ಪರಸ್ಪರ ವಿರುದ್ಧ ದ್ರುವಗಳಾದ ವಸಿಷ್ಠ - ವಿಶ್ವಾಮಿತ್ರ ಇಬ್ಬರ ಒಲವನ್ನೂ ಗಳಿಸಿದಲ್ಲಿಂದ ಹಿಡಿದು ಪಾರ್ತಿಸುಬ್ಬ ವರ್ಣಿಸಿದಂತೆ ‘ಪನ್ನೀರ ರಾಮನಿಗೆ ಪಂಕಜಾಕ್ಷಿಯರದರ್, ಚಿನ್ನಗಳ ತೊಡಿಸಿದರು ಚಿನುಮಯಾತ್ಮಕಗೆ..’ ಸ್ಥಿತಿಯಲ್ಲಿ ಪಟ್ಟಾಭಿಷೇಕಕ್ಕೆ ಸಿದ್ಧನಾದವ ಪಿತೃವ್ಯಾಕ್ಯಕ್ಕೆ ಅನುಗುಣವಾಗಿ ‘ಲೇಸನಾಡಿದರವ್ವ ಈ ಸಣ್ಣ ಕಾರ್ಯಕೆ’ ಎಂದು ನಾರುಮಡಿಯನ್ನುಟ್ಟು ಅರಣ್ಯಕ್ಕೆ ತೆರಳಿದ, ಸದಾ ಗಂಭೀರನಾಗಿರುವ ರಾಮ ಶೂರ್ಪನಖಿಯನ್ನು ಕಂಡಾಗ ಆಕೆಯ ವಿರೂಪವನ್ನು ನೋಡಿ ತಮಾಷೆ ಮಾಡಿ ಅದರಿಂದ ಸೀತಾಪಹರಣಕ್ಕೆ ನಾಂದಿಯಾದುದನ್ನು ಕಂಡಾಗ, ವಾಲಿವಧೆಯ ಸಂದರ್ಭದಲ್ಲಿ ಮರೆಯಿಂದ ಬಾಣ ಬಿಟ್ಟಿರುವುದು, ರಾವಣನನ್ನು ಕೊಲ್ಲುವ ಅವಕಾಶ ಸಿಕ್ಕಿದಾಗ ಹಾಗೇ ಬಿಟ್ಟು ನಂತರ ನೇರ ಯುದ್ಧದಲ್ಲಿ ಕೊಂದಿದ್ದು. ಸೀತೆಯನ್ನು ಅಗ್ನಿಪರೀಕ್ಷೆಗೆ ಗುರಿಪಡಿಸಿದ್ದು ಇವೆಲ್ಲ ಕಥಾನಕಗಳನ್ನು ಓದಿದಾಗ ಮನುಷ್ಯನಾಗಿ ಈ ವ್ಯಕ್ತಿ ಹೀಗೆ ಮಾಡಲು ಸಾಧ್ಯವೇ ಎನ್ನುವ ಕುತೂಹಲ ಮೂಡಿಸುವುದೇ ರಾಮಾಯಣದ ಕಾವ್ಯದ ಮರ್ಮ. ಕೇವಲ ಒಂದೆರಡು ಸರ್ಗಗಳೋ, ಕಾಂಡಗಳನ್ನೋ ಗಮನಿಸಿ ರಾಮನೆಂದರೆ ಹೀಗೆಯೋ ಎನ್ನುವ ನಿರ್ಣಯಕ್ಕೆ ಬರಲಾಗುವುದಿಲ್ಲ.

ಸ್ವತಃ ರಾಮನನ್ನು ಕಾಡಿದ್ದ ಪ್ರಶ್ನೆ:

ಸ್ವತಃ ರಾಮನನ್ನು ತಾನು ಸಹ ಕಃ- ಯಾರು ಎನ್ನುವ ಪ್ರಶ್ನೆ ಕಾಡಿತ್ತು. ಸೀತೆಯನ್ನು ರಾಮ ಮನಃಪೂರ್ವಕವಾಗಿ ಪ್ರೀತಿಸುತ್ತಿದ್ದ. ಸೀತಾಪಹರಣದ ನಂತರ ರಾಮನ ವಿಲಾಪದ ತುರೀಯದಲ್ಲಿದ್ದಾನೆ. ಅದರ ಪರಿಮಾರ್ಜನೆಯೇ ರಾವಣ ವದೆ. ಆದರೆ ಯಾವ ಸೀತೆಗಾಗಿ ಅಡವಿಯಲ್ಲಿ ಗಿಡಗಳನ್ನೆಲ್ಲ ಹುಡುಕಿ ಹುಡುಕಿ ಅಲೆದಿದ್ದನೋ, ಬೆಳದಿಂಗಳಲ್ಲಿ ಪಂಪಾ ಸರೋವರದಲ್ಲಿನ ಕಮಲವನ್ನು ಕಂಡ ರಾಮನಿಗೆ ಕಮಲಮುಖಿಯಾದ ಸೀತೆಯ ನೆನಪಾಗಿ ಆ ಸರೋವರಕ್ಕೆ ಧುಮುಕಲು ಹೊರಟಿದ್ದನೋ, ಸಮುದ್ರಕ್ಕೆ ಸೇತುವೆಯನ್ನು ಕಟ್ಟಿ ಅಬೇಧ್ಯವಾದ ಕನಕಲಂಕೆಯನ್ನು ಜಯಿಸಿದ್ದನೋ ಅಂತಹ ರಾಘವನಿಗೆ ಸೀತೆಯನ್ನು ನೋಡಿದ ತಕ್ಷಣ ಹರುಷ, ಮರುಕ, ರೋಷಗಳೆಲ್ಲ ಏಕಕಾಲದಲ್ಲಿ ಬಂದವಂತೆ. ಸೀತೆಯನ್ನು ಎಲ್ಲಿ ಬೇಕಾದರೂ ಹೋಗು ಎಂದು ಜರೆದ. ಹತ್ತಿರ ಹತ್ತಿರ ಒಂದು ವರ್ಷಗಳ ವಿರಹ ವೇದನೆಯಲ್ಲಿದ್ದ ಸೀತೆ ಲಜ್ಜೆಯಿಂದ ರಾಮ ತನ್ನನ್ನು ಹಿಡಿದು ಎತ್ತಿ ತಬ್ಬಿಕೊಳ್ಳುವ ಎನ್ನುವ ನಿರೀಕ್ಷೆಯಲ್ಲಿದ್ದರೆ ಆಕೆಯ ಕಿವಿಗೆ ಅಪ್ಪಳಿಸಿದ್ದು ರಾಮ ತಾನು ಈ ಯುದ್ಧವನ್ನು ಸೀತೆಗಾಗಿ ಮಾಡಲಿಲ್ಲ ಎನ್ನುವ ಮೊದಲ ವ್ಯಾಕ್ಯದಿಂದಲೇ. ವಾಲ್ಮೀಕಿಗೂ ರಾಮನ ಈ ನಡತೆ ಸಹ್ಯವಾಗಲಿಲ್ಲ ಎನ್ನುವುದನ್ನು ಅವರು ‘ಹೃದಯಾಂತರ್ಗತಂ ಭಾವಂ ವ್ಯಾಹರ್ತುಮುಪಚಕ್ರಮೇ’ ತನ್ನ ಹೃದಯದಲ್ಲಿನ ಮಾನಸವಿಕಾರಗಳನ್ನು ತೋಡಿಕೊಳ್ಳಲಾರಂಭಿಸಿದ ಎನ್ನುವ ಶಬ್ಧಗಳಿಂದ ಉಪಯೋಗಿಸುತ್ತಾರೆ. ಇಂತಹ ಬಿರುನುಡಿಗಳನ್ನು ಕೇಳುವುದಕ್ಕಿಂತ ಅಗ್ನಿದಿವ್ಯವೇ ಲೇಸೆನಿಸಿ ಸೀತೆ ಅಗ್ನಿಪ್ರವೇಶವನ್ನು ಮಾಡುತ್ತಾಳೆ. ಸಮಸ್ತ ಲೋಕವೂ ಈ ಬೀಭತ್ಸ ಈ ದೃಶ್ಯವನ್ನು ನೋಡಲಾಗದೇ; ರಾಮನಿಗೆ ಎದುರಾಡಲಾಗದೇ ಭಯ ಮತ್ತು ಚಿಂತಾಕ್ರಾಂತರಾದರಂತೆ. ಜಗತ್ತನ್ನು ಕಾಡಿದ ಈ ವ್ಯಾಕುಲವನ್ನು ಕಳೆಯಲು ಬ್ರಹ್ಮದೇವನೇ ಸಾಕ್ಷಾತ ದಶರಥನ ಸಹಿತವಾಗಿ ದೇವತೆಗಳೊಡಗೂಡಿ ಬಂದು ರಾಮನಿಗೆ ಈ ನಾಟಕ ಸಾಕು ಎಂದರಂತೆ. ದೇವತೆಗಳು ರಾಮನಿಗೆ ನೀನೆ ‘ಋತಧಾಮನೆನ್ನುವ ವಸು’ (ಸತ್ಯಕ್ಕೆ ಯಾರು ಆಶ್ರಯನೋ), ನೀನು ಹೀಗೆ ಮಾಡುಬಹುದೇ ಎಂದು ಕೇಳುತ್ತಾರೆ. ಆಗ ರಾಮ ದೇವತೆಗಳಿಗೆ ಕೇಳಿದ ಪ್ರಶ್ನೆಯೇ ತಾನು ಯಾರು-ಕಃ ಎನ್ನುವ ಪ್ರಶ್ನೆಯನ್ನು ಕೇಳುತ್ತಾನೆ. ಅದುವೇ

ಆತ್ಮಾನಾಂ ಮಾನುಷಂ ಮನ್ಯೇ ರಾಮಂ ಧಶರಥಾತ್ಮಜಂ

ಸೋಹಂ ಯಸ್ಯ ಯತಶ್ಚಾಹಂ ಭಗವಾಂಸ್ತದ್ಬ್ರವೀತು ಮೇ ।।

‘ದೇವತೆಗಳೇ ನಾನು ಮನುಷ್ಯನೆಂದು ದಶರಥನ ಮಗನಾದ ರಾಮನೆಂದೂ ತಿಳಿದಿರುವೆನು. ನಾನು ಯಾರವನು. ಯಾವ ಪ್ರಯೋಜನಕ್ಕಾಗಿ ಎಲ್ಲಿಂದ ಬಂದಿರುವೆನು ಎಂಬುದು ನಿಮಗೇನಾದರೂ ತಿಳಿದಿದ್ದರೆ ನೀವೇ ದಯಮಾಡಿ ಹೇಳಿ’ ಎನ್ನುತ್ತಾನೆ. ‘ದಶರಥನ ಮಗ ತಾನು ಎಂದು ತಿಳಿದುಕೊಂಡಿದ್ದೇನೆ’ ಎನ್ನುವುದರ ಇನ್ನೊಂದು ರೂಪ ತಾನು ದಶರಥನ ಮಗನಲ್ಲ ಎನ್ನುವ ಒಳಂತರಂಗ ತಿಳಿದಿದೆ ಎನ್ನುವುದು ಸ್ಪಷ್ಟ. ತಾನು ದಶರಥನ ಮಗನಲ್ಲದಿದ್ದರೆ ಬೇರೆ ಯಾರು ಎನ್ನುವ ಮರುಪ್ರಶ್ನೆಯೇ ಇದಕ್ಕೆ ಸಾಕ್ಷಿ. ದೇವತೆಗಳಿಗೂ ರಾಮ ‘ಯಾರು’-ಕಃ’ ಎನ್ನುವುದನ್ನು ವಿವರಿಸಲು ಶಕ್ಯರಾಗಲಿಲ್ಲ.

ಪುರುಷ ಎಂದರೆ ಪೂರ್ವದಲ್ಲಿದ್ದವ:

ನಾರದರು ವಾಲ್ಮೀಕಿಗೆ ಹೇಳಿದ ಕಥೆಯೂ ಆ ಮಹಾಪುರುಷನ ಕುರಿತೇ ಆಗಿದೆ. ‘ಪುರುಷ ಎಂದರೆ ಪೂರ್ವದಲ್ಲಿದ್ದವ’ ಎಂದು ಅರ್ಥ. ಯಾವುದು ಎಲ್ಲಕ್ಕಿಂತ ಪೂರ್ವವೋ ಅದು. ಛಾಂದೋಗ್ಯ ಉಪನಿಷತ್ತಿನಲ್ಲಿ ಸನತ್‌ ಕುಮಾರನು ನಾರದರಿಗೆ ‘ಆ ಪುರುಷ ತನ್ನ ಸ್ವಪ್ರಕಾಶದಲ್ಲಿಯೇ ಬೆಳಗುತ್ತಿರುವನು. ಅವನಿಗೆ ಇನ್ನೊಬ್ಬರ ಆಶ್ರಯವಾಗಲೀ, ಆಧಾರವಾಗಲೀ ಬೇಕಿಲ್ಲ. ಅವನೇ ಆಧಾರವು, ಅವನಿಂದಲೇ ಸರ್ವವೂ ಬೆಳಗುತ್ತಿರುವುದು. ತನ್ನ ಮಹಿಮೆಯಿಂದಲೇ ಅವನು ಬೆಳಗುತ್ತಿರುವನು’ ಎಂದು ವಿವರಿಸಿದ್ದಾನೆ. ಅಂತಹ ಪೂರ್ವದಲ್ಲಿದ್ದವನೇ ದೇವತೆಗಳಿಂದಲೂ ಇನ್ಯಾವ ಜೀವಿಗಳಿಂದಲೂ ಕೊಲ್ಲಲಾಗದ ರಾವಣನೆನ್ನುವನನ್ನು ಸಂಹರಿಸಲು ರಾಮನಾಗಿದ್ದಾನೆ. ಇಲ್ಲಿ ಗಮನಿಸಬೇಕಾದ ಸಂಗತಿ ಬ್ರಹ್ಮನ ವರದಂತೆ ಮಾನವರಿಂದ ಮಾತ್ರ ರಾವಣನನ್ನು ಕೊಲ್ಲಲು ಸಾಧ್ಯ. ರಾವಣನೇನೂ ಸಾಮಾನ್ಯದವನಲ್ಲ. ಮಹಾಪುರುಷನಿಗೆ ಪ್ರತಿನಾಯಕ ಆತ. ಸರ್ವಜ್ಞನಾದ ಆಂಜನೇಯನೇ ರಾವಣನ ತೇಜಸ್ವಿ ರೂಪವನ್ನು ನೋಡಿ‘ಅಹೋರೂಪಮಹೋ ಧೈರ್ಯ ಮಹೋ ಸತ್ತ್ವಮಹೋದ್ಯುತಿಃ ।

ಅಹೋ ರಾಕ್ಷಸರಾಜಸ್ಯ ಸರ್ವಲಕ್ಷಣಯುಕ್ತತಾ।। ಸು.49.17।।’

ರಾಕ್ಷಸ ರಾಜ ಸರ್ವ ಲಕ್ಷಣಯುಕ್ತನಾಗಿದ್ದಾನೆ ಎಂದು ಹೊಗಳಿದ್ದಾನೆ. ಇಂತಹವನನ್ನು ಕೊಲ್ಲಲು ಪುರುಷ ಶ್ರೇಷ್ಠನೆನ್ನುವ ಮಾನವನೇ ಆಗಿರಬೇಕು. ಅಂತಹ ಮಾನವರು ಯಾರು ಎಂದರೆ ತಿಲಮಾತ್ರವೂ ದೋಷವಿರದ ವ್ಯಕ್ತಿ ಎಂದರ್ಥ. ‘ಲೋಕದಲ್ಲಿ ಯಾವ ದೋಷವೂ ಇಲ್ಲದ ವ್ಯಕ್ತಿ ಎಂದರೆ ಆತನಲ್ಲಿ ಈ ಕೆಳಗಿನ ಹದಿನಾರು ಗುಣಗಳಿರಬೇಕು. ಅವು ‘ಕಲ್ಯಾಣವಂತ, ವೀರ್ಯವಂತ, ದರ್ಮಜ್ಞ, ಕೃತಜ್ಞ, ಸತ್ಯಭಾಷಿ, ದೃಢವ್ರತನಿಷ್ಠ, ಕುಲಾಚಾರಗಳನ್ನು ತಪ್ಪದೇ ನಡೆಸಿಕೊಂಡು ಬರುವಾತ, ಭೂತದಯೆ, ಚತುರ್ದಶ ವಿದ್ಯೆಗಳಲ್ಲಿಯೂ ಪಾರಂಗತ, ಸರ್ವಕಾರ್ಯ ದುರಂಧರ, ಮೋಹಕ ರೂಪಿನವ, ಧೈರ್ಯವಂತ, ಕೋಪವನ್ನು ಗೆದ್ದವ, ಎಣೆಯಿಲ್ಲದ ಕಾಂತಿಯುಳ್ಳವ, ಅನಸೂಯ, ದೇವತೆಗಳಿಗೂ ಅಂಜದ ಪರಾಕ್ರಮಿ’. ಯಾವ ರಾಮನ ಈ ಎಲ್ಲಾ ಗುಣಗಳನ್ನು ವಾಲ್ಮೀಕಿ ನಾರದರಿಂದ ಕೇಳಿದನೋ ಆಗ ಆತನ ಹುಡುಕಾಟಕ್ಕೆ ಒಂದು ಗುರಿ ಕಾಣಿಸಿತು. ಇಕ್ಷಾಕು ವಂಶದಲ್ಲಿ ಜನಿಸಿದ ರಾಮ ರಾಮ ಎಂದು ಜನಗಳು ಕರೆಯುವ ನರಪುಂಗವನಿದ್ದಾನೆ ಎಂದು ನಾರದರು ವಿವರಿಸಿದರೆ ನಂತರ ಬ್ರಹ್ಮ ಪ್ರತ್ಯಕ್ಷನಾಗಿ ರಾಮಾಯಣದ ಕಾವ್ಯವನ್ನು ರಚಿಸು ಎಂದು ವರ ನೀಡುತ್ತಾನೆ. ವರದ ಫಲದಿಂದ ರಾಮಾಯಣದಲ್ಲಿ ನಡೆದ ವೃತ್ತಾಂತಗಳು, ಎಲ್ಲಾ ಪಾತ್ರಗಳ ರಹಸ್ಯಗಳು ವಾಲ್ಮೀಕಿಗೆ ಅಂಗೈಯಲ್ಲಿನ ನೆಲ್ಲಿಕಾಯಿಯಂತೆ ತೋರುತ್ತದೆ. ರಾಮನೇ ಪರಿಪೂರ್ಣ ಮನುಷ್ಯನಾಗಿ ಅವತರಿಸಿದವ ಎನ್ನುವ ಗುಟ್ಟನ್ನು ವಾಲ್ಮೀಕಿಗೆ ಪ್ರಪಂಚಕ್ಕೆ ತೋರಿಸಬೇಕಾಗಿದೆ. ಅದರ ಪ್ರತಿಫಲವೇ ರಾಮಾಯಣ ಮಹಾಕಾವ್ಯ.

ಅಂತಹ ರಾಮನನ್ನು ನಾವು ನಮ್ಮೊಳಗೆ ಅಳವಡಿಸಿಕೊಳ್ಳಬೇಕಿದೆ. ಆತನೇ ‘ಯುಗದ ರಾಮ ಯಶದ ರಾಮ ಜಗದ ರಾಮ ನಾಮ’