ಹೆಚ್‌ಎಸ್‌ವಿ ಮುಖ್ಯವಾಗಿ ಕವಿಗಳು. ಕವಿ ಅಂತ ಹೇಳುವುದೇ ಜನ ಸಮುದಾಯ ಒಬ್ಬ ಲೇಖಕನನ್ನು ಗೌರವಿಸುವ ರೀತಿ.ಅವರ ‘ಒಣಮರದ ಗಿಳಿಗಳು’ ಕವನಸಂಕಲನದಲ್ಲಿ ‘ಆವಾಹನೆ’ ಎಂಬ ಕವಿತೆಯಲ್ಲಿ ಪ್ರಾರ್ಥನೆಯಂತೆ ಅವರು ಕೇಳುವ ಪ್ರಸಂಗವಿದೆ.

ಕವಿ ಎಚ್ ಎಸ್ ವೆಂಕಟೇಶ ಮೂರ್ತಿಯವರು ಕನ್ನಡದ ಕಾವ್ಯ ಸಾತತ್ಯವನ್ನು, ಜೀವಂತಿಕೆಯನ್ನು ಪೋಷಿಸಿದ ಮುಖ್ಯ ಕವಿಗಳಲ್ಲಿ ಒಬ್ಬರು. ಪಂಪನಿಂದ ಕುಮಾರವ್ಯಾಸ, ಬೇಂದ್ರೆ, ಕುವೆಂಪು, ಪುತಿನ, ಕೆಎಸ್‌ನ, ಅಡಿಗ ಮೊದಲಾದವರವರೆಗೆ ಬೆಳೆದ ಅಭಿಜಾತ ಕಾವ್ಯ ಪರಂಪರೆಯನ್ನು ರೂಢಿಸಿ ಮುಂದುವರಿಸಿದ ಇಂದಿನ ಕವಿಗಳಲ್ಲಿ ಪ್ರಮುಖರು. ಫಲ ಬಿಡುವ ವೃಕ್ಷದಂತೆ ಕನ್ನಡ ಕಾವ್ಯದ ಬೀಜ ಪ್ರವೃತ್ತಿಯನ್ನು ಸೃಷ್ಟಿ ರೂಪದಲ್ಲಿ ಮುಂದುವರಿಸಿದವರು.

ಹೆಚ್‌ಎಸ್‌ವಿ ಮುಖ್ಯವಾಗಿ ಕವಿಗಳು. ಕವಿ ಅಂತ ಹೇಳುವುದೇ ಜನ ಸಮುದಾಯ ಒಬ್ಬ ಲೇಖಕನನ್ನು ಗೌರವಿಸುವ ರೀತಿ.ಅವರ ‘ಒಣಮರದ ಗಿಳಿಗಳು’ ಕವನಸಂಕಲನದಲ್ಲಿ ‘ಆವಾಹನೆ’ ಎಂಬ ಕವಿತೆಯಲ್ಲಿ ಪ್ರಾರ್ಥನೆಯಂತೆ ಅವರು ಕೇಳುವ ಪ್ರಸಂಗವಿದೆ. ‘ಶಬ್ದಗಳೇ ಒದಗಿ ನಿಶ್ಶಬ್ದಗಳೇ ಒದಗಿ ಶಬ್ದ ಶಬ್ದಗಳ ಪ್ರಾರಬ್ಧಗಳೇ ಒದಗಿ’ ಎಂದು ಆರಂಭವಾಗುವ ಕವಿತೆಯಲ್ಲಿ ‘ನೀಲ ನಿಶ್ಯಬ್ದಕ್ಕೆ ಚೆಲ್ಲಿ ಬಿದ್ದಕ್ಷರದ ಅಕ್ಷರಗಳೇ ಒದಗಿ/ ಮಾತಲ್ಲಿ ಹೂತಂತ ನಾದ ಈ ನಾದ ನಾನಾದಗಳಿಗೆಗಳೇ ಈ ಗಳಿಗೆ ಒದಗಿ’ ಎಂದು ಸೊಗಸಾಗಿ ಹೇಳ್ತಾರೆ. ‘ಆ ನಾದ ಈ ನಾದ ಎಲ್ಲ ಸೇರಿ ನಾನಾಗಬೇಕಾಲ್ಲ.. ಅಂತ ಹೇಳುವ ಬಗೆಯದು.

ಎಚ್‌ಎಸ್ವಿ ಕನ್ನಡದ ಸಾತತ್ಯದ ಕವಿ. ಒಂದು ಮರ ಫಲ ಕೊಟ್ಟು, ಆ ಹಣ್ಣಿನ ಬೀಜದಿಂದ ಮತ್ತೊಂದು ಮರ ಹುಟ್ಟಿ ಮತ್ತೊಂದು ಹಣ್ಣಾಗಿ ಹೋದ ಹಾಗೆ, ಪ್ರತಿ ಮರದ ಹಣ್ಣೂ ಬೇರೆ ರುಚಿ ಇರುವ ಹಾಗೆ ಇದು ಫಲ ಸಾಂದ್ರತೆಯ ರೀತಿ. ಅಂಥಾ ಸಾತತ್ಯದ ಕವಿ ಎಚ್ಚೆಸ್ವಿ. ಕನ್ನಡದ ಈ ತನಕದ ಎಲ್ಲ ಶಕ್ತಿಯನ್ನು ಮುಂದಿನ ಪೀಳಿಗೆಗೆ ತಮ್ಮ ಕಾವ್ಯದ ಮೂಲಕ ದಾಟಿಸಿದವರು. ಸ್ವದರ್ಮದ ಹುಡುಕಾಟದಲ್ಲಿ ತೊಡಗಿಕೊಂಡವರು. ಸ್ವಾನುರಕ್ತರಾಗಲಿಲ್ಲ. ಸಮಾಜಕ್ಕೂ ಬದ್ಧವಾದ ಕವಿ, ಸ್ವಂತಿಕೆಗೂ ಬದ್ಧವಾದ ಕವಿ.

ಗೀತ ನಮನ: ಎಚ್‌ಎಸ್‌ವಿ ಅವರ ಪಾರ್ಥಿವ ಶರೀರದ ಅಂತಿಮ ದರ್ಶನದ ವ್ಯವಸ್ಥೆ ಮಾಡಿದ್ದ ರವೀಂದ್ರ ಕಲಾಕ್ಷೇತ್ರದ ಸಂಸ ಬಯಲು ರಂಗಮಂದಿರದಲ್ಲಿ ಹಿರಿಯ ಗಾಯಕರಾದ ಸಂಗೀತ ಕಟ್ಟಿ, ಕಿಕ್ಕೇರಿ ಕೃಷ್ಣಮೂರ್ತಿ, ವೈ.ಕೆ.ಮುದ್ದುಕೃಷ್ಣ, ನಾಗಚಂದ್ರಿಕಾ ಭಟ್‌, ಜೋಗಿ ಸುನೀತಾ, ಅಪರ್ಣ ನರೇಂದ್ರ, ಮಂಗಳ ರವಿ ಸೇರಿದಂತೆ ಹಲವು ಗಾಯಕರು ಭಾವಗೀತೆಗಳ ಸರದಾರ ಎಚ್‌ಎಸ್‌ವಿ ಅವರಿಗೆ ಗೀತ ನಮನ ಸಲ್ಲಿಸಿದರು. ಇದೇ ವೇಳೆ ಮುಕ್ತ ಮುಕ್ತ ಧಾರಾವಾಹಿ ನಿರ್ದೇಶಕ ಟಿ.ಎನ್‌.ಸೀತಾರಾಮ್‌ ಸೇರಿದಂತೆ ಸ್ಥಳದಲ್ಲಿದ್ದ ಎಲ್ಲ ಗಾಯಕರು ಎಚ್‌.ಎಸ್‌.ವೆಂಕಟೇಶಮೂರ್ತಿ ಅವರ ರಚನೆಯ ‘ಮಣ್ಣ ತಿಂದು ಸಿಹಿ ಹಣ್ಣ ಕೊಡುವ ಮರ...’ ಹಾಡಿಗೆ ಧ್ವನಿಗೂಡಿಸುವ ಮೂಲಕ ಅಗಲಿದ ಎಚ್‌ಎಸ್‌ವಿ ಅವರಿಗೆ ಭಾವಪೂರ್ಣ ಶ್ರದ್ಧಾಂಜಲಿ ಸಲ್ಲಿಸಿದರು.

ಸರ್ಕಾರಿ ಗೌರವ: ಕನ್ನಡ ಸಾರಸ್ವತ ಲೋಕಕ್ಕೆ ಅನನ್ಯ ಕೊಡುಗೆ ನೀಡಿದ ಡಾ.ಎಚ್‌.ಎಸ್‌.ವೆಂಕಟೇಶಮೂರ್ತಿ ಅವರ ಗೌರವಾರ್ಥ ಗಾಳಿಯಲ್ಲಿ ಮೂರು ಸುತ್ತು ಕುಶಲ ತೋಪು ಹಾರಿಸಿ ಸಕಲ ಸರ್ಕಾರಿ ಗೌರವ ಸಲ್ಲಿಸಲಾಯಿತು. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಪರವಾಗಿ ನಿರ್ದೇಶಕಿ ಕೆ.ಎಂ.ಗಾಯಿತ್ರಿ ಅವರು ಗೌರವ ವಂದನೆ ಸಲ್ಲಿಸಿದರು.