ವೈದ್ಯಕೀಯ ಶಿಕ್ಷಣವು ಉಚಿತವಾಗಿರುವುದರಿಂದ ಜಾಣ್ಮೆಯುಳ್ಳ ವಿದ್ಯಾರ್ಥಿಗಳು ಅರ್ಹತಾ ಪರೀಕ್ಷೆಯಲ್ಲಿ ತೇರ್ಗಡೆಯಾದರಷ್ಟೇ ಉಚಿತ ವೈದ್ಯಕೀಯ ಶಿಕ್ಷಣಕ್ಕೆ ಆಯ್ಕೆಯಾಗುತ್ತಾರೆ. ಅಲ್ಲಿ ಶ್ರೀಮಂತರ ಮಕ್ಕಳು ಡೊನೇಷನ್ ನೀಡಿ ಡಾಕ್ಟರ್ ಆಗುವ ಸಾಧ್ಯತೆಯೇ ಇಲ್ಲ.

ಚಂದ್ರಶೇಖರ ದಾಮ್ಲೆ, ಶಿಕ್ಷಣ ತಜ್ಞರು

ಭಾರತದಲ್ಲಿ ಅಸ್ಪೃಶ್ಯತೆ ಎಂಬುದು ಬಹು ದೊಡ್ಡ ಸಾಮಾಜಿಕ ಪಿಡುಗು. ಹಿಂದೆ ವರ್ಣ ವ್ಯವಸ್ಥೆಯಲ್ಲಿದ್ದ ಅಸ್ಪೃಶ್ಯತೆಯು ಈಗ ಶಿಕ್ಷಣ ವ್ಯವಸ್ಥೆಯನ್ನು ಕಾಡುತ್ತಿದೆ. ಕನ್ನಡ ಮಾಧ್ಯಮವೇ ಕಳಂಕದಂತೆ ಆಗಿದೆ. ಈ ಕಳಂಕ ನಿವಾರಣೆಗೆ ಸರಕಾರವು ಕನ್ನಡ ಶಾಲೆಗಳ ಸುಧಾರಣೆಯ ಉಪಾಯವನ್ನು ಯೋಜಿಸುತ್ತಿಲ್ಲ. ಬದಲಿಗೆ ಇಂಗ್ಲಿಷ್ ಮಾಧ್ಯಮದ ಬಣ್ಣ ಕೊಟ್ಟು ಚಂದ ತೋರಿಸುವ ಯೋಚನೆ ಮಾಡುತ್ತಿದೆ. ಇನ್ನು ಮುಂದಕ್ಕೆ ಕರ್ನಾಟಕ ಪಬ್ಲಿಕ್ ಸ್ಕೂಲ್ (ಕೆಪಿಎಸ್) ಎಂಬುದು ಸರಕಾರಿ ಕನ್ನಡ ಶಾಲೆಗಳ ಹೆಸರಾಗಲಿದೆ. ಏಕೆಂದರೆ ವಿದ್ಯಾರ್ಥಿಗಳ ಕೊರತೆಯಿಂದಾಗಿ ಇನ್ನು ಗ್ರಾಮೀಣ ಸರಕಾರಿ ಶಾಲೆಗಳನ್ನು ವಿಲೀನಗೊಳಿಸಿ ದೂರ ದೂರದಲ್ಲೊಂದು ಕೆಪಿಎಸ್ ಅಸ್ತಿತ್ವಕ್ಕೆ ತರಲಿದೆ. ಈ ಪರಿವರ್ತನೆಯಿಂದಾಗಿ ಶಿಕ್ಷಣವು ಖರ್ಚು ಮಾಡಿ ಪಡೆಯುವವರಿಗೆ ಇದೆ; ಬಡವರಿಗೆ ಮರೀಚಿಕೆಯಾಗಲಿದೆ. ಗುಟ್ಟಾಗಿ ನಡೆದ ಈ ವಿದ್ಯಮಾನ ಪತ್ರಿಕೆಗಳಿಲ್ಲದಿದ್ದರೆ ನಮಗೆ ಗೊತ್ತಾಗುತ್ತಿರಲಿಲ್ಲ. ‘ಕನ್ನಡಪ್ರಭ’ ಪತ್ರಿಕೆಯು ಶಿಕ್ಷಣ ಇಲಾಖೆಯ 7000 ಕನ್ನಡ ಶಾಲೆಗಳ ಮುಚ್ಚುಗಡೆಯ ಹುನ್ನಾರವನ್ನು ಬಯಲು ಮಾಡಿದೆ. ಅಷ್ಟೇ ಅಲ್ಲ, ಇನ್ನು 50ಕ್ಕಿಂತ ಕಡಿಮೆ ಮಕ್ಕಳ ಶಾಲೆಗಳನ್ನು ಮುಚ್ಚುವುದಾದರೆ ಮುಂದಿನ ವರ್ಷ 25,000 ಶಾಲೆಗಳು ಸ್ಥಗಿತಗೊಳ್ಳಲಿವೆ.

ಶ್ರೀಮಂತ ದೇಶಗಳಲ್ಲಿ ಶಿಕ್ಷಣ ಹೇಗಿದೆ?: ‘ಸಮಾನತೆ’ಯ ತಳಹದಿ ಇಲ್ಲದೆ ಯಾವುದೇ ದೇಶದಲ್ಲಿ ಭ್ರಾತೃ ಭಾವನೆ ಬೆಳೆಯುವುದು ಕಷ್ಟ. ‘ದೇಶ ನನಗೇನು ಮಾಡಿದೆ ಎನ್ನುವುದಕ್ಕಿಂತ ನಾನು ದೇಶಕ್ಕೇನು ಮಾಡಿದ್ದೇನೆ ಎಂಬುದು ಮುಖ್ಯ’ ಎನ್ನುವ ಬೋಧನೆ ವೇದಿಕೆಗಳಿಂದ ಕೇಳಿ ಬರುತ್ತದೆ. ಆದರೆ ದೇಶವು ವ್ಯಕ್ತಿಗೆ ಏನಾದರೂ ಮಾಡಿರಬೇಕಲ್ಲವೇ? ವಿಶ್ವದ ಶ್ರೀಮಂತರ ರಾಷ್ಟ್ರಗಳಲ್ಲಿ ಶಿಕ್ಷಣವು ಎಲ್ಲರಿಗೂ ಉಚಿತವಾಗಿ ಹಾಗೂ ಸಮಾನವಾಗಿ ಸಿಗುತ್ತದೆ. ಉತ್ತಮ ಗುಣಮಟ್ಟದ ಶಿಕ್ಷಣ ನೀಡುವ ಹೊಣೆಯನ್ನು ಸರಕಾರವೇ ನಿರ್ವಹಿಸುತ್ತದೆ. ಆ ದೇಶಗಳಲ್ಲಿ ಮಕ್ಕಳ ಆರೋಗ್ಯ, ಆರೈಕೆ ಹಾಗೂ ಸುರಕ್ಷೆಗಳ ಬಗೆಗಿನ ಹೊಣೆಗಾರಿಕೆ ಸರಕಾರದ್ದೇ ಆಗಿದೆ. ಆರ್ಥಿಕ ವರ್ಗ ಭೇದದ ಲೆಕ್ಕವಿಲ್ಲದೆ ಒಬ್ಬಾಕೆ ಗರ್ಭಿಣಿಯಾದ ತಕ್ಷಣದಿಂದ ನಿಗದಿತವಾಗಿ ಆಕೆಯ ಆರೋಗ್ಯ ವಿಚಾರಣೆ, ಪೌಷ್ಟಿಕ ಆಹಾರಕ್ಕಾಗಿ ಮಾಸಿಕ ಅನುದಾನ ಹಾಗೂ ಮಗು ಹುಟ್ಟಿದ ಬಳಿಕವೂ ಅನುದಾನ ಮತ್ತು ಉಚಿತ ಶಿಕ್ಷಣವನ್ನು ಸ್ವೀಡನ್‌ನಲ್ಲಿ ಕೊಡಲಾಗುತ್ತದೆ. ಅಲ್ಲಿ ಒಬ್ಬ ವಿದ್ಯಾರ್ಥಿ ತನ್ನ ಅರ್ಹತೆಯಿಂದ ಯಾವುದೇ ಶಿಕ್ಷಣವನ್ನು ಉಚಿತವಾಗಿ ಪಡೆಯಬಹುದು.

ವೈದ್ಯಕೀಯ ಶಿಕ್ಷಣವು ಉಚಿತವಾಗಿರುವುದರಿಂದ ಜಾಣ್ಮೆಯುಳ್ಳ ವಿದ್ಯಾರ್ಥಿಗಳು ಅರ್ಹತಾ ಪರೀಕ್ಷೆಯಲ್ಲಿ ತೇರ್ಗಡೆಯಾದರಷ್ಟೇ ಉಚಿತ ವೈದ್ಯಕೀಯ ಶಿಕ್ಷಣಕ್ಕೆ ಆಯ್ಕೆಯಾಗುತ್ತಾರೆ. ಅಲ್ಲಿ ಶ್ರೀಮಂತರ ಮಕ್ಕಳು ಡೊನೇಷನ್ ನೀಡಿ ಡಾಕ್ಟರ್ ಆಗುವ ಸಾಧ್ಯತೆಯೇ ಇಲ್ಲ. ಹಾಗೆಯೇ ಎಂಜಿನಿಯರ್‌ಗಳು ತಜ್ಞರೇ ಆಗಿರುತ್ತಾರೆ. ಇದು ವಿಶ್ವದ ನಂಬರ್‌ ಒನ್ ಸ್ಥಾನಕ್ಕೆ ಏರುವ ಆಸೆಯುಳ್ಳ ಭಾರತದಲ್ಲಿಯೂ ಬರಬೇಕು. ಆರ್ಥಿಕ ಸಂಪನ್ನತೆಯು ಸಮಾನ ಗುಣಮಟ್ಟದ ಸಾರ್ವತ್ರಿಕ ಶಿಕ್ಷಣದ ಪೂರೈಕೆಯನ್ನು ಹೊಂದಿರಬೇಕು. ಆದರೆ ನಮ್ಮಲ್ಲಿ ಇದು ಸಾಧ್ಯವೇ? ಬಹುಶಃ ಸಾಧ್ಯವಿಲ್ಲ.

‘ಈಗಿದ್ದಂತೆ ಇರಲಿ’ ನೀತಿ ತಂದ ಸಂಕಷ್ಟ: ಭಾರತದಲ್ಲಿ ಆಧುನಿಕ ಶಿಕ್ಷಣವನ್ನು ಬ್ರಿಟಿಷರು ಆರಂಭಿಸಿದರು. ಮೆಕಾಲೆಯ ಶಿಕ್ಷಣ ನೀತಿಯೇ ‘ಇಂಗ್ಲೀಷರ ಮೆದುಳಿನ ಭಾರತೀಯ ಕಾರಕೂನರನ್ನು’ ನಿರ್ಮಿಸುವುದಾಗಿತ್ತು ಎಂಬುದು ಎಲ್ಲರಿಗೂ ಗೊತ್ತಿದ್ದ ವಿಚಾರ. ಬ್ರಿಟಿಷರು ತಮ್ಮ ಮಾದರಿಯ ಶಿಕ್ಷಣ ನೀಡುವ ಖಾಸಗಿ ಶಾಲೆಗಳಿಗೆ ಅನುದಾನ ನೀಡುವ ನೀತಿಯನ್ನು ಅಳವಡಿಸಿ ಸಾರ್ವಜನಿಕ ಖಾಸಗಿ ಸಹಭಾಗಿತ್ವ ಮೂಲಕ ಆಂಗ್ಲ ಶಿಕ್ಷಣವನ್ನು ಉತ್ತೇಜಿಸಿದರು. ಹಾಗಾಗಿ ಅನೇಕ ಅನುದಾನಿತ ಖಾಸಗಿ ಶಾಲೆಗಳನ್ನು ಸ್ಥಳೀಯ ಮುಖಂಡರು ಹಳ್ಳಿಗಳಲ್ಲಿ ಸ್ಥಾಪಿಸಿದರು. ಬ್ರಿಟಿಷರ ಈ ಉಪಾಯವು ಶಿಕ್ಷಣಕ್ಕೆ ಬಂಡವಾಳವನ್ನು ದೇಶಿಯವಾಗಿಯೇ ಹೂಡಿಕೆ ಮಾಡಿಸುವುದಾಗಿತ್ತು. ಇದೆಲ್ಲವನ್ನು ತಿಳಿದಿದ್ದರೂ ನಮ್ಮ ಸ್ವತಂತ್ರ ಆಡಳಿತಗಾರರು ಶಿಕ್ಷಣದ ಕ್ಷೇತ್ರದಲ್ಲಿ ಸಮಾನತೆಯ ಬೀಜವನ್ನು ಬಿತ್ತುವ ಚಿಂತನೆ ನಡೆಸಲಿಲ್ಲ. ಬದಲಾಗಿ ‘ಈಗಿದ್ದಂತೆ ಇರಲಿ’ ಎಂಬ ನೀತಿಯನ್ನು ಅನುಸರಿಸಿದ್ದರ ದುಷ್ಪರಿಣಾಮಗಳು ಈಗ ಘೋರವಾಗಿ ಕಂಡುಬರುತ್ತವೆ.

ಭಾರತದಲ್ಲಿ ಶಿಕ್ಷಣದ ಖಾಸಗೀಕರಣವು ಮೊದಲಿಗೆ ವೈದ್ಯಕೀಯ ಹಾಗೂ ಎಂಜಿನಿಯರಿಂಗ್ ಪದವಿಗಳನ್ನು ಆಕ್ರಮಿಸಿತು. ಮುಂದೆ ಈ ಶಿಕ್ಷಣಕ್ಕಾಗಿ ಇಂಗ್ಲಿಷ್ ಮಾಧ್ಯಮದಲ್ಲಿ ತಳಹದಿಯ ಶಿಕ್ಷಣ ನೀಡುವ ಪ್ರಾಥಮಿಕ ಹಾಗೂ ಪ್ರೌಢ ಶಾಲೆಗಳನ್ನು ಸ್ಥಾಪಿಸಲಾಯಿತು. ಮೊದಲಿಗೆ ಕ್ರಿಶ್ಚಿಯನ್ ಚರ್ಚ್‌ಗಳು ಇಂಗ್ಲಿಷ್ ಮಾಧ್ಯಮದಲ್ಲಿ ಶಾಲೆಗಳನ್ನು ಸ್ಥಾಪಿಸಿದವು. ಮುಂದೆ ವಾಣಿಜ್ಯೋದ್ಯಮವಾಗಿ ರಾಜಕಾರಣಿಗಳು ಅದಕ್ಕೆ ಕೈಹಾಕಿದರು. ಜನರಿಗೆ ಇಂಗ್ಲಿಷ್‌ ಮಾಧ್ಯಮದ ಹುಚ್ಚು ಹಿಡಿದಿದ್ದು, ಎಲ್ಲರೂ ಚರ್ಚ್ ಶಾಲೆಗಳಿಗೆ ಹೋದರೆ ಹಿಂದೂ ಧರ್ಮಕ್ಕೆ ಅಪಾಯವೆಂದು ಮಠಗಳೂ ದೇವಸ್ಥಾನಗಳೂ ಧರ್ಮಾಧಿಕಾರಿಗಳೂ ಉಳ್ಳವರಿಗೆ ಇಂಗ್ಲಿಷ್‌ ಮೀಡಿಯಂ ಹಾಗೂ ಬಡವರಿಗೆ ಕನ್ನಡ ಮಾಧ್ಯಮದ ಶಾಲೆಗಳನ್ನೂ ಸ್ಥಾಪಿಸಿದರು.

ಜನರು ಬದಲಾಗಿದ್ದು ಏಕೆ?: ಈ ಬೆಳವಣಿಗೆಯಿಂದಾಗಿ ತಮ್ಮ ಅಸ್ತಿತ್ವಕ್ಕೆ ಕೊಡಲಿ ಏಟು ಬಿದ್ದಿದೆ ಎಂದು ಸರಕಾರಿ ಶಾಲೆಗಳು ತಿಳಿಯುವ ಮೊದಲೇ ಜನರು ಚಿತ್ತಚಾಂಚಲ್ಯಕ್ಕೆ ಒಳಗಾಗಿದ್ದರು. ಇಂಗ್ಲಿಷ್‌ ಮೀಡಿಯಂ ಶಿಕ್ಷಣವೊಂದೇ ಉದ್ಯೋಗದ ಪಥಕ್ಕೆ ಒಯ್ಯಬಹುದು. ತಾವು ಕನ್ನಡ ಮಾಧ್ಯಮದಲ್ಲೇ ಕಲಿತು ಯಶಸ್ವಿಯಾಗಿದ್ದರೂ ತಮ್ಮ ಮಕ್ಕಳನ್ನು ಇನ್ನೂ ವೇಗದ ಮಾರ್ಗದಲ್ಲಿ ಮುಂದೂಡಲು ಸಮೀಪದ ಸರಕಾರಿ ಶಾಲೆಗಳನ್ನು ತ್ಯಜಿಸಿದರು. ನೆರೆಹೊರೆಯ ಮಕ್ಕಳನ್ನು ಈ ದಾಳಕ್ಕೆ ಎಳೆದ ಪರಿಣಾಮವಾಗಿ ಖಾಸಗೀ ಶಾಲೆಗಳ ನಿರ್ವಹಣೆಗೆ ಹೆತ್ತವರೇ ದೇಣಿಗೆಯ ರೂಪದಲ್ಲಿ ಬಂಡವಾಳ ನೀಡಿದರು.

ಕಳೆದ ನಾಲ್ಕು ದಶಕಗಳಲ್ಲಿ ಸರಕಾರಿ ಶಾಲೆಗಳಲ್ಲಿ ವಿದ್ಯಾರ್ಥಿಗಳ ಸೇರ್ಪಡೆ ಕಡಿಮೆಯಾಗುತ್ತಾ ಸಾಗಿ ಖಾಸಗಿ ಇಂಗ್ಲಿಷ್ ಮೀಡಿಯಂ ಶಾಲೆಗಳ ದಾಖಲಾತಿ ಪ್ರಮಾಣವು ವೇಗವಾಗಿ ಏರಿತು. ಶಿಕ್ಷಣ ಇಲಾಖೆ ಈ ಪರಿವರ್ತನೆಯನ್ನು ಆತಂಕವಿಲ್ಲದೆ ಸ್ವೀಕರಿಸಿತು. ಏಕೆಂದರೆ ಖಾಸಗಿ ಇಂಗ್ಲಿಷ್ ಮಾಧ್ಯಮ ಶಾಲೆಗಳ Recognition ಮತ್ತು Permission ಶಿಕ್ಷಣಾಧಿಕಾರಿಗಳ ಕೈಯಲ್ಲಿತ್ತು. ಅಕ್ರಮ ಪಾವತಿಗಳ ದರ ಹೆಚ್ಚಾದದ್ದು ಅವರಿಗೆ ಲಾಭವೇ ಆಯಿತು. ತಮ್ಮ ಸರಕಾರಿ ಶಾಲೆಗಳನ್ನು ಖಾಸಗಿ ಶಾಲೆಗಳು ಮುಕ್ಕುತ್ತಿದ್ದರೂ ಅದು ಅಧಿಕಾರಿಗಳಿಗೆ ಕಾಳಜಿಯ ವಿಷಯವಾಗಿರಲಿಲ್ಲ. ಶಾಲಾ ಶಿಕ್ಷಕರಿಗೂ ಅದು ಸಮಸ್ಯೆ ಎನ್ನಿಸಿರಲಿಲ್ಲ. ಏಕೆಂದರೆ ಅಷ್ಟರಲ್ಲಿ ಅಧಿಕಾರಿಗಳೂ ಶಿಕ್ಷಕರೂ ತಮ್ಮ ಮಕ್ಕಳನ್ನು ಇಂಗ್ಲಿಷ್ ಮಾಧ್ಯಮ ಶಾಲೆಗಳಿಗೆ ಸೇರಿಸಿಯಾಗಿತ್ತು. ತಮ್ಮನ್ನು ತಾವೇ ನಂಬದ ಮಾದರಿಗಳನ್ನು ಸರಕಾರಿ ಶಿಕ್ಷಣ ವ್ಯವಸ್ಥೆ ಪ್ರದರ್ಶಿಸಿತ್ತು.

ಮೊಟ್ಟೆ ಕೊಟ್ಟರು, ಶಿಕ್ಷಕರನ್ನು ಮರೆತರು

ಮರ್ಯಾದೆಗೇಡಿನಿಂದ ತಪ್ಪಿಸಿಕೊಳ್ಳುವ ನಾಟಕದ ಅಂಗವಾಗಿ ಉಚಿತ ಪುಸ್ತಕ, ಊಟ, ಮೊಟ್ಟೆ, ಸೈಕಲ್ಲು, ಶಾಕ್ಸ್, ಶೂ ಇತ್ಯಾದಿ ಆಮಿಷಗಳನ್ನೊಡ್ಡಿ ಬಂದಷ್ಟು ಬಡ ಮಕ್ಕಳು ಕೈ ತಪ್ಪದಂತೆ ನೋಡಿಕೊಂಡರು. ಆದರೆ ಹೆಚ್ಚಿನ ಶಿಕ್ಷಕರನ್ನು ನೇಮಿಸಿ ಸರಕಾರಿ ಶಾಲೆಗಳ ಸಶಕ್ತೀಕರಣಕ್ಕೆ ಪ್ರಯತ್ನಿಸಲಿಲ್ಲ. ಐಎಎಸ್‌ಗಳ ಹುನ್ನಾರ ಹೇಗಿತ್ತೆಂದರೆ ಶಿಕ್ಷಣ ಕ್ಷೇತ್ರವು ಸಂಪೂರ್ಣವಾಗಿ ಖಾಸಗಿಯವರ ಕೈಯಲ್ಲಿರಬೇಕು ಹಾಗೂ ಅದರ ಆಡಳಿತ ಮಾತ್ರ ತಮ್ಮ ಕೈಯಲ್ಲಿರಬೇಕು. ಆಗ ತಮ್ಮ ಹಫ್ತಾಕ್ಕೆ ತೊಂದರೆ ಇಲ್ಲ. ಶಿಕ್ಷಣಾಧಿಕಾರಿಗಳ ಇಂತಹ ಚಿಂತನೆಯೇ ಇಂದಿನ ಸಮಸ್ಯೆಗೆಕಾರಣವಾಗಿದೆ. ಅಂದರೆ ಮುಂದಿನ ವರ್ಷಗಳಲ್ಲಿ ಕೆಪಿಎಸ್ ಗಳನ್ನು ಕೂಡ ದುರ್ಬಲಗೊಳಿಸಿ ಬಡವರಿಗೆ ಕನ್ನಡ ಮತ್ತು ಬಲ್ಲವರಿಗೆ (ಶ್ರೀಮಂತರಿಗೆ) ಇಂಗ್ಲೀಷನ್ನು ಕಾಯಂಗೊಳಿಸಿದ್ದಲ್ಲಿಗೆ ಅವರ ಮಿಷನ್ ಪೂರ್ಣಗೊಳ್ಳುತ್ತದೆ.

ಶಾಲೆಗಳನ್ನು ಸ್ಥಾಪಿಸಿದ ರಾಜಕಾರಣಿಗಳು ಪಕ್ಷಾತೀತವಾಗಿ ಇದನ್ನು ಬೆಂಬಲಿಸುವುದರಿಂದಾಗಿ ಮುಂದಿನ ವರ್ಷಗಳಲ್ಲಿ ಸರಕಾರಿ ಶಾಲೆಗಳು ಮಾಯವಾಗಲಿವೆ. ರಾಜ್ಯದಲ್ಲಿ ಈಗಾಗಲೇ 307 ಕೆಪಿಎಸ್ ಶಾಲೆಗಳು ಕಾರ್ಯ ನಿರ್ವಹಿಸುತ್ತಿದ್ದು ಇನ್ನು ಮುಂದಿನ ವರ್ಷ 700 ಶಾಲೆಗಳನ್ನು ಸ್ಥಾಪಿಸಿ ಸರಾಸರಿ 7ರಿಂದ 10 ಶಾಲೆಗಳನ್ನು ಮುಚ್ಚಿದರೆ ಕನಿಷ್ಠ 7000 ಶಾಲೆಗಳು ಮುಚ್ಚುವುದು ಗ್ಯಾರಂಟಿಯಾಗುತ್ತದೆ. ಹೀಗೆ ಪ್ರಕ್ರಿಯೆ ಮುಂದುವರಿದರೆ ಮುಂದಿನ ವರ್ಷ 50ಕ್ಕಿಂತ ಕಡಿಮೆ ಮಕ್ಕಳಿರುವ ೨೫,೦೦೦ಸಣ್ಣ ಶಾಲೆಗಳು ನಾಪತ್ತೆಯಾಗಲಿವೆ! ಇದು ಶಿಕ್ಷಣವನ್ನು ಅಂದರೆ ಪರೋಕ್ಷವಾಗಿ ಕನ್ನಡವನ್ನು ಕೊಲ್ಲುವುದೇ ಆಗುತ್ತದೆ. ಈ ಮಧ್ಯೆ ಕನ್ನಡಪ್ರಭದಲ್ಲಿ ಶುಭವಾರ್ತೆಯೆಂದು ಬಂದಿದೆ. ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಅಧ್ಯಕ್ಷರು ನೋಟಿಸ್ ನೀಡಿ ಶಿಕ್ಷಣ ಇಲಾಖೆಯ ಕ್ರಮದ ಬಗ್ಗೆ ಕಾರಣಗಳೊಂದಿಗೆ ಸೂಕ್ತ ಸ್ಪಷ್ಟನೆ ನೀಡಲು ತಿಳಿಸಿದ್ದಾರೆ. ಶಿಕ್ಷಣ ಇಲಾಖೆ ಹೇಗೆ ಸ್ಪಂದಿಸುತ್ತದೆಂದು ನೋಡಬೇಕು.

ನಾನು ಐದನೇ ತರಗತಿಯಲ್ಲಿ (ಸುಮಾರು 1960) ಇದ್ದಾಗ “ಕನ್ನಡಕೆ ಹೋರಾಡು ಕನ್ನಡದ ಕಂದ” ಎಂಬ ಪದ್ಯದ ಕೊನೆಗೆ “ಕನ್ನಡವ ಕೊಲುವ ಮುನ್ ಓ ನನ್ನ ಕೊಲ್ಲು” ಎಂದು ರಾಷ್ಟ್ರಕವಿ ಕುವೆಂಪು ಬರೆದದ್ದನ್ನು ನಮ್ಮ ಮಾಸ್ತರ್ರು ವಿವರಿಸಿದಾಗ “ಯಾಕಪ್ಪಾ ಹೀಗೆ ಬರೆದಿದ್ದಾರೆ? ಅಂತಹದ್ದೇನು ಆತಂಕವಿದೆ” ಎಂದು ನನಗೆ ಅನ್ನಿಸಿತ್ತು. ಆದರೆ ಇಂದು ಖಡ್ಗದ ಧಾರೆಗೆ ಕನ್ನಡ ಭಾಷೆಯೇ ಕೊರಳನ್ನು ಕೊಡಬೇಕಾದ ಸ್ಥಿತಿ ಇದೆ. ಆದರೆ ಆತ್ಮಾಹುತಿ ನೀಡಲು ಕವಿ ಇಲ್ಲ!