1826ರಲ್ಲಿ ಬಳ್ಳಾರಿಯಲ್ಲಿ ಜಾನ್ ಹ್ಯಾಂಡ್ಸ್ ಪ್ರಯತ್ನದಿಂದ ಆರಂಭವಾದ ಕನ್ನಡ ಮುದ್ರಣೋದ್ಯಮವು ದ್ವಿಶತಕ ಪೂರೈಸಿದೆ. ಲೆಟರ್‌ಪ್ರೆಸ್‌ನಿಂದ ಆರಂಭವಾಗಿ ಆಫ್‌ಸೆಟ್, ಡಿಜಿಟಲ್ ಮತ್ತು ನ್ಯಾನೋಗ್ರಫಿಯಂತಹ ತಂತ್ರಜ್ಞಾನಗಳವರೆಗೆ ಕ್ರಾಂತಿಕಾರಿ ಬದಲಾವಣೆಗಳನ್ನು ಕಂಡಿದೆ. 

ಸ್ವ್ಯಾನ್‌ ಕೃಷ್ಣಮೂರ್ತಿ, ಮುದ್ರಕರು

ಮುದ್ರಣಲೋಕದ ಪಿತಾಮಹ ಗುಟೆನ್‌ಬರ್ಗ್ ಸ್ಮರಣಾರ್ಥ ಫೆ.24 ಅನ್ನು ‘ಮುದ್ರಕರ ದಿನ’ವೆಂದು ಆಚರಿಸಿಕೊಂಡು ಬರಲಾಗುತ್ತಿದೆ. ಜರ್ಮನಿಯ ಅಕ್ಕಸಾಲಿಗ ಗುಟೆನ್‌ಬರ್ಗ್ 1454ರಲ್ಲಿ ಬಿಡಿ ಅಕ್ಷರಗಳ ಮೊಳೆಗಳನ್ನು ಕಂಡುಹಿಡಿದ ಮೇಲೆ ಮುದ್ರಣ ಕಲೆಯು ಫ್ರಾನ್ಸ್, ಇಟಲಿ, ಪೋರ್ಚುಗಲ್, ಹಾಲೆಂಡ್, ಇಂಗ್ಲೆಂಡ್ ಮುಂತಾದ ರಾಷ್ಟ್ರಗಳಿಗೆ ಹಬ್ಬಿತು. ಇದಕ್ಕೂ ಮುಂಚೆ ಕ್ರಿ.ಶ.868ರಲ್ಲಿ ಮುದ್ರಿತವಾದ 6 ಹಾಳೆಯ ‘ಹಿರಕಸೂತ್ರ’ ಎಂಬ ಪುಸ್ತಕವು ಚೀನಾದ ಸಹಸ್ರಬುದ್ಧ ಗುಹೆಗಳಲ್ಲಿ ದೊರೆತಿದೆ. ಭಾರತಕ್ಕೆ 1556ರಲ್ಲಿ ಅನಿರೀಕ್ಷಿತವಾಗಿ ಮೊಟ್ಟಮೊದಲ ಮುದ್ರಣಯಂತ್ರ ಗೋವಾ ತಲುಪಿ ಮುದ್ರಣಕಾರ್ಯ ಆರಂಭ ಮಾಡಿತು. ಮುಂದೆ ಸಮುದ್ರತೀರ ಪ್ರದೇಶಗಳಾದ ಅಂಬಲಕ್ಕಾಡು, ವೈಪಿಕೋಟಾ, ಮುಂಬೈ, ಟ್ರಾಂಕ್ವೇಬಾರ್, ಮದ್ರಾಸ್ ಮತ್ತು ಶ್ರೀರಾಮಪುರಗಳಲ್ಲಿ ಮುದ್ರಣಾಲಯಗಳು ಪ್ರಾರಂಭವಾದವು. ಕರ್ನಾಟಕದಲ್ಲಿ ಮೊಟ್ಟಮೊದಲ ಮುದ್ರಣಾಲಯ ಪ್ರಾರಂಭವಾಗಿದ್ದು ಬಳ್ಳಾರಿಯಲ್ಲಿ.

ಕನ್ನಡ ಮುದ್ರಣಕ್ಕೆ ಬುನಾದಿ

ಜಾನ್ ಹ್ಯಾಂಡ್ಸ್‌ನ ಸತತ 7 ವರ್ಷಗಳ ಪ್ರಯತ್ನದ ಫಲವಾಗಿ 1826ರಲ್ಲಿ ಮುದ್ರಣಯಂತ್ರವು ಬಳ್ಳಾರಿಯನ್ನು ಸೇರಿತು. ಆದರೆ ಅನೇಕ ಅಡಚಣೆಗಳನ್ನು ದಾಟಿ 1828ರಿಂದ ಕನ್ನಡ ಮುದ್ರಣವನ್ನು ನಿಯಮಿತವಾಗಿ ಪ್ರಾರಂಭಿಸಲಾಯಿತು. ಮೊದಲು ಸಿದ್ಧಪಡಿಸಿದ ಮೊಳೆಗಳು ಅಷ್ಟು ಚಂದವಾಗಿರಲಿಲ್ಲ. ಹ್ಯಾಂಡ್ಸ್ 1832ರಲ್ಲಿ ಪುನಃ ಕಾರ್ಯಪ್ರವೃತ್ತನಾಗಿ ಲಂಡನ್‌ಗೆ ತೆರಳಿ ಅಲ್ಲಿನ ಕಂಚುಗಾರರಿಗೆ ಕನ್ನಡ ಅಕ್ಷರಗಳನ್ನು ಪರಿಚಯಿಸಿ ಅವರ ಸಹಾಯದಿಂದ ಅಂದವಾದ ಕನ್ನಡದ ಮೊಳೆಗಳನ್ನು ಎರಕ ಹೊಯ್ಸಿಕೊಂಡ. ಅದರ ಜೊತೆಗೆ ಪೇನ್ ಎಂಬ ಮುದ್ರಕನನ್ನೂ ಕನ್ನಡನಾಡಿಗೆ ಕರೆತಂದ. ಹೀಗೆ ಕನ್ನಡದ ಅಚ್ಚುಮೊಳೆಗಳ ಸುಧಾರಣೆಗೆ ಹೆಚ್ಚು ಗಮನಕೊಡುವುದರ ಮುಖಾಂತರ ನಾಡಿನಲ್ಲಿ ಮುದ್ರಣೋದ್ಯಮಕ್ಕೆ ಭದ್ರ ಬುನಾದಿ ಹಾಕಿಕೊಟ್ಟ.

ಹೀಗೆ 1826ರಲ್ಲಿ ಪ್ರಾರಂಭವಾದ ಮುದ್ರಣೋದ್ಯಮದಲ್ಲಿ 2026ರವರೆಗೆ ಬಹಳಷ್ಟು ಬದಲಾವಣೆಗಳಾಗಿವೆ. ಮೊದಲು ಮಣ್ಣಿನ ಅಚ್ಚು, ಮರದ ಅಚ್ಚು, ನಂತರ ಲೋಹದ ಅಚ್ಚು, ಸೀಸದ ಅಚ್ಚುಗಳು ಬಳಕೆಗೆ ಬಂದವು. ನಂತರದಲ್ಲಿ ಲೋಹದ ಅಕ್ಷರ ಜೋಡಣೆಯ ಲೆಟರ್ ಪ್ರೆಸ್ ಬಂದು ಬಹುಕಾಲ ಮುದ್ರಣಲೋಕವನ್ನು ಆಳಿತು. ಕೈಯಿಂದ ಯಂತ್ರವನ್ನು ನಡೆಸಿ ಗಂಟೆಗೆ 100-200 ಪ್ರತಿಗಳನ್ನು ಮುದ್ರಿಸುತ್ತಿದ್ದ ರೀತಿ ಬದಲಾಗಿ ಕಾಲಿನಿಂದ ತುಳಿಯುತ್ತ ಮುದ್ರಣ ಮಾಡುವ ಹಂತವನ್ನು ತಲುಪಿತು. ವಿದ್ಯುತ್ ಆವಿಷ್ಕಾರದ ನಂತರ ಮೋಟಾರನ್ನು ಅಳವಡಿಸಿ ಯಂತ್ರವನ್ನು ನಡೆಸುವ ವೇಗದ ಮುದ್ರಣ ಆರಂಭವಾಯಿತು. ನಂತರ ಲಿಥೋಗ್ರಾಫಿ ಎನ್ನುವ ಮುದ್ರಣ ಬಹಳ ಪರಿಣಾಮಕಾರಿಯಾಗಿ ಹೆಸರಾಯಿತು. ಲಿಥೋಗ್ರಾಫಿ ಆಧಾರದ ಮೇಲೆಯೇ ಆಫ್‌ಸೆಟ್ ಯಂತ್ರಗಳು ಬಂದು ಅಕ್ಷರ ಜೋಡಣೆಯ ಲೆಟರ್‌ಪ್ರೆಸ್ ಎಂಬ ಖ್ಯಾತಿಯ ಮುದ್ರಣ ಸೊರಗತೊಡಗಿತು.

ಸತತ ಆವಿಷ್ಕಾರ ಕ್ರಾಂತಿ

ಆಫ್‌ಸೆಟ್‌ನಲ್ಲಿ ಒಂದು ಬಣ್ಣದ, 2 ಬಣ್ಣದ, ನಂತರ 4 ಬಣ್ಣದ ಮುದ್ರಣ ಯಂತ್ರಗಳು ಬಂದವು. ಈಗ 4 ಬಣ್ಣಗಳ ಜೊತೆಗೆ ಇನ್ನೂ ಹೆಚ್ಚು 2 ಅಥವಾ 3 ವಿಶೇಷ ಬಣ್ಣಗಳು ಬಂದಿವೆ. ಸ್ಪಾಟ್ ಲ್ಯಾಮಿನೇಷನ್, ವಾರ್ನಿಶಿಂಗ್‌ ಆಗಿ ಕ್ಷಣಾರ್ಧದಲ್ಲಿ ಒಣಗಿ ಒಂದು ಗಂಟೆಗೆ ಹತ್ತರಿಂದ ಹದಿನೈದು ಸಾವಿರ ಪ್ರತಿಗಳ ವೇಗದಲ್ಲಿ ಕಡಿಮೆ ಕೆಲಸಗಾರರೊಂದಿಗೆ ಮುದ್ರಣವಾಗುವಂತಹ ಯಂತ್ರಗಳು ಬಂದಿವೆ. ಮೊದಲು ಮುದ್ರಣಾಲಯದ ಯಂತ್ರಗಳಲ್ಲಿ ಕೆಲಸ ಮಾಡುವಾಗ ಕೈ ಕಾಲು ಕಳೆದುಕೊಳ್ಳುವ, ಪ್ರಾಣಾಪಾಯಗಳು ಆಗುವ ಭಯ ಕೆಲಸಗಾರರನ್ನು ಕಾಡುತ್ತಿತ್ತು. ಇತ್ತೀಚಿನ ದಿನಗಳಲ್ಲಿ ಅಂಥ ಅಪಾಯಗಳನ್ನು ತಡೆಗಟ್ಟುವ ಸೆನ್ಸಾರ್ ಅಳವಡಿಕೆಯಾಗಿರುವ ಯಂತ್ರಗಳು ಬಂದಿವೆ. ಕೆಲಸಗಾರರು ಸೆನ್ಸಾರ್‌ಗಳ ದೃಷ್ಟಿಯಿಂದ ಹಿಂದೆ ಸರಿಯುವವರೆಗೂ ಯಂತ್ರಗಳು ಚಾಲನೆಯಾಗುವುದಿಲ್ಲ. ಆದ್ದರಿಂದ ಕೆಲಸಗಾರರು ಧೈರ್ಯವಾಗಿ ದೈತ್ಯ ಯಂತ್ರಗಳ ಮೂಲಕ ಕೆಲಸ ಮಾಡಬಹುದಾಗಿದೆ.

ದಿನಪತ್ರಿಕೆ ಮುದ್ರಣದಲ್ಲೂ ಕ್ರಾಂತಿಕಾರಿ ಬದಲಾವಣೆಗಳು ಆಗಿವೆ. ಪ್ರಸ್ತುತ ಏಕಕಾಲದಲ್ಲಿ 24 ಪುಟಗಳು, ಗಂಟೆಗೆ 50ರಿಂದ 70 ಸಾವಿರ ಪ್ರತಿಗಳನ್ನು ಎರಡೂ ಬದಿಯಲ್ಲಿ ಬಹು ಬಣ್ಣಗಳಲ್ಲಿ ಮುದ್ರಿಸಿ, ಮಡಚಿ, ಒಂದರೊಳಗೆ ಒಂದನ್ನು ಸೇರಿಸಿ, ಕತ್ತರಿಸಿ, ಒಂದು ಬಂಡಲ್‌ಗೆ ಎಷ್ಟು ಪ್ರತಿಗಳು ಬೇಕೋ ಅಷ್ಟು ಪ್ರತಿಗಳನ್ನು ಲೆಕ್ಕ ಮಾಡಿ, ಪ್ಯಾಕ್ ಮಾಡಿ ಹೊರನೂಕುವ ವೆಬ್ ಆಫ್‌ಸೆಟ್ ಯಂತ್ರಗಳು ಬಂದಿವೆ. ಮೊದಲು ಮುದ್ರಣದ ನಂತರ ಬೈಂಡ್ ಮಾಡಲು ಕೈಯಲ್ಲಿ ಮಡಚಿ, ಫಾರಂಗಳನ್ನು ಸೇರಿಸಿ, ಕೈಯಲ್ಲೇ ಹೊಲಿದು ಅಥವಾ ಪಿನ್‌ಮಾಡಿ, ಕವರ್‌ಪೇಜ್ ಅಂಟಿಸುವ ಪದ್ಧತಿ ಇತ್ತು. ಈಗ ಮಡಚಲು, ಫಾರಂಗಳನ್ನು ಸೇರಿಸಲು, ಹೊಲಿಗೆ ಮಾಡಲು ಯಂತ್ರಗಳು ಬಂದಿವೆ. ಹಾಗೆಯೇ ಒಂದರಿಂದ ಇನ್ನೊಂದಕ್ಕೆ ಒಂದು ಮಿ.ಮೀ. ಕೂಡ ವ್ಯತ್ಯಾಸವಾಗದಂತೆ ಕತ್ತರಿಸುವ ಅತ್ಯಾಧುನಿಕ ಯಂತ್ರಗಳೂ ಬಂದಿವೆ.

ಡಿಜಿಟಲ್ ಮುದ್ರಣದ ಸಾಧನೆ

ಮುದ್ರಣ ಕ್ಷೇತ್ರದಲ್ಲಿ ಅತ್ಯಲ್ಪ ಕಾಲದಲ್ಲಿಯೇ ಖ್ಯಾತಿ ಗಳಿಸಿದ್ದು ಡಿಜಿಟಲ್ ಮುದ್ರಣ. ಈ ವಿಧಾನದಲ್ಲಿ ಪ್ರತಿಬಿಂಬವು ಕಂಪ್ಯೂಟರ್‌ನಿಂದ ನೇರವಾಗಿ ಡಿಜಿಟಲ್ ಯಂತ್ರದ ಮೂಲಕ ವಿವಿಧ ಸಾಧನಗಳ ಮೇಲೆ ಮುದ್ರಣವಾಗುತ್ತದೆ. ಇಲ್ಲಿ ಆಫ್‌ಸೆಟ್ ಮುದ್ರಣ ವಿಧಾನದಲ್ಲಿ ಬಳಸುವ ಪ್ಲೇಟ್‌ನ ಆವಶ್ಯಕತೆಯೇ ಬರುವುದಿಲ್ಲ. ಆಫ್‌ಸೆಟ್‌ಗೆ ಹೋಲಿಸಿದರೆ ಡಿಜಿಟಲ್ ಮುದ್ರಣ ತುಸು ದುಬಾರಿ. ಈ ವಿಧಾನದಲ್ಲಿ ಸಣ್ಣ ಪ್ರಮಾಣದ ಮುದ್ರಣ ಕೆಲಸಗಳನ್ನು ತಮಗೆ ಬೇಕಾದಾಗ ತಕ್ಷಣ ಮಾಡಿಕೊಳ್ಳಬಹುದು. ತೀರಾ ಇತ್ತೀಚಿನ ಡಿಜಿಟಲ್ ಯಂತ್ರಗಳಲ್ಲಿ 4 ಬಣ್ಣಗಳ ಜೊತೆಗೆ ಇನ್ನೂ ಒಂದೆರಡು ವಿಶೇಷ ಬಣ್ಣಗಳು, ಯು.ವಿ. ಕೋಟಿಂಗ್, ಇಂಪೋಸಿಂಗ್, ಫೋಲ್ಡಿಂಗ್, ಬೈಂಡಿಂಗ್ ಆಗಿ ಕ್ಷಣಾರ್ಧದಲ್ಲಿ ಹೊರಗೆ ಬರುವ ತಂತ್ರಜ್ಞಾನವುಳ್ಳ ಯಂತ್ರಗಳು ಬರುತ್ತಿವೆ. ಒಂದು ಬಣ್ಣದಲ್ಲಿ ಮುದ್ರಿಸಲು ಡಿಜಿಟಲ್ ಯಂತ್ರಗಳು ಬಂದು ಕಡಿಮೆ ಪ್ರಮಾಣದ ಪುಸ್ತಕಗಳನ್ನು ಮುದ್ರಿಸಲು ಅನುಕೂಲವಾಗಿದೆ.

ಇದನ್ನೂ ಓದಿ: ಕೈ‌ಮುಗಿದು ಕ್ಷಮೆ ಕೇಳಿದ ನಿರ್ಮಾಪಕ ಕನಕಪುರ ಶ್ರೀನಿವಾಸ್; ಕೊನೆಗೂ ಬಾಯಿಗೆ ಬಂದಂತೆ ಬೈದಿದ್ದ ಸೀಕ್ರೆಟ್ ರಿವೀಲ್!

ಆಫ್‌ಸೆಟ್ ಮುದ್ರಣಕ್ಕೆ ಪೈಪೋಟಿಯೊಡ್ಡಲು ಡಿಜಿಟಲ್ ಕ್ಷೇತ್ರದಲ್ಲಿ ನ್ಯಾನೋಗ್ರಫಿ ಮುದ್ರಣವು ಚಾಲನೆಗೆ ಬರುತ್ತಿದೆ. ಲ್ಯಾಂಡಾನ ಕ್ರಾಂತಿಕಾರಕ ಡಿಜಿಟಲ್ ಮುದ್ರಣ ತಂತ್ರಜ್ಞಾನವು ನ್ಯಾನೋಗ್ರಫಿ ವಿಜ್ಞಾನಕ್ಕೆ ಪ್ರೇರಣೆಯಾಗಿದೆ. ಇದು ಆಫ್‌ಸೆಟ್ ಮುದ್ರಣ ಮತ್ತು ಡಿಜಿಟಲ್ ಮುದ್ರಣವನ್ನು ಒಟ್ಟುಗೂಡಿಸುವ ರೀತಿಯಲ್ಲಿ ಕೆಲಸ ನಿರ್ವಹಿಸುತ್ತದೆ. ಈ ತಂತ್ರಜ್ಞಾನದಲ್ಲಿ ಮುದ್ರಣಕ್ಕೆ ಅನುಕೂಲಕರವಾಗುವಂತೆ ನ್ಯಾನೋ ಟೆಕ್ನಾಲಜಿ ಬಳಸಿ ನೀರಿನಂಶವನ್ನು ಆಧರಿಸಿ ಪರಿಸರಸ್ನೇಹಿ ಲ್ಯಾಂಡಾ ನ್ಯಾನೋ ಇಂಕನ್ನು ವಿಶೇಷವಾಗಿ ಅಭಿವೃದ್ಧಿಪಡಿಸಿದ್ದಾರೆ. ಇದು ಶೀಟ್‌ಫೀಡ್ ಮತ್ತು ವೆಬ್‌ಫಾರ್ಮೆಟ್ ಎಂಬ 2 ವಿಧಗಳಲ್ಲಿ ಕೆಲಸ ಮಾಡುತ್ತದೆ. ಇತ್ತೀಚೆಗೆ ಕಂಪ್ಯೂಟರ್ ಜ್ಞಾನವನ್ನು ಮುದ್ರಣ ಯಂತ್ರಗಳಲ್ಲಿ ಹೆಚ್ಚಿಸಿ ಎಲೆಕ್ಟ್ರಾನಿಕ್ಸ್ ಸಹಾಯ ಪಡೆದು ಮಾನವರಹಿತ ಯಂತ್ರಗಳನ್ನು ತಯಾರಿಸುವ ಪ್ರಯತ್ನ ನಡೆಯುತ್ತಿದೆ. ನೂರಕ್ಕೆ ನೂರು ಆಟೋಮ್ಯಾಟಿಕ್ ಆಗಬೇಕೆಂಬ ಚಿಂತನೆ ಮತ್ತು ಆವಿಷ್ಕಾರಗಳು ನಡೆದಿವೆ. ಪ್ರತಿ ದಿನ ಹೊಸ ಹೊಸ ಆವಿಷ್ಕಾರ ನಡೆದು, ಹೊಸ ಯಂತ್ರಗಳು ಬರುತ್ತಲೇ ಇವೆ.

ಇದನ್ನೂ ಓದಿ: ನಟಿ ಉಮಾಶ್ರೀ ಎಚ್ಚರಿಕೆಗೆ ಹಿರಿಯ ರಂಗಕರ್ಮಿ ಪೆಚ್ಚು