ಪ್ರತಿಪಕ್ಷದ ನಾಯಕರಾಗಿದ್ದಾಗ ವಾಜಪೇಯಿ ಒಮ್ಮೆ ಹುಬ್ಬಳ್ಳಿಗೆ ಬಂದಿದ್ದರು. ಸಂಜೆ ಬೃಹತ್ ಸಾರ್ವಜನಿಕ ಸಭೆ. ಅವರ ಹಿಂದಿ ಭಾಷಣದ ಅನುವಾದವನ್ನು ಆಗ ಮಾಡಿದವರು ''ವಿಕ್ರಮ'' ವಾರಪತ್ರಿಕೆಯ ಸಂಪಾದಕರಾಗಿದ್ದ ಬೆ.ಸು.ನಾ ಮಲ್ಯ ಅವರು.

ದು.ಗು.ಲಕ್ಷ್ಮಣ, ಹಿರಿಯ ಪತ್ರಕರ್ತ

ಒಬ್ಬ ಪ್ರತಿಭಾವಂತ ವ್ಯಕ್ತಿ ಶ್ರೇಷ್ಠ ಸಾಹಿತಿ, ಪತ್ರಕರ್ತ, ಅತ್ಯುತ್ತಮ ವಾಗ್ಮಿ, ಉತ್ತಮ ಸಂಸದೀಯ ಪಟು, ರಾಜಕಾರಣಿ, ಮುತ್ಸದ್ದಿ, ನಿಷ್ಠಾವಂತ ಕಾರ್ಯಕರ್ತ, ಜನಮನ ಗೆಲ್ಲುವ ನಾಯಕ, ಉತ್ತಮ ಸ್ನೇಹಿತ, ಯಾರ ಬಗೆಗೂ ದ್ವೇಷವಿರದ ಆಜಾತಶತ್ರುವೂ ಆಗಬಹುದು. ಆದರೆ ಈ ಎಲ್ಲ ಗುಣವಿಶೇಷಗಳು ಸಮ್ಮಿಳಿತಗೊಂಡಿದ್ದ ಮಹಾನ್ ವ್ಯಕ್ತಿಯೊಬ್ಬರು ನಮ್ಮ ನಡುವೆಯೇ ಓಡಾಡುತ್ತ ದೇಶ ಕಟ್ಟುವ ಕೆಲಸವನ್ನು ನಿರಂತರ ಮಾಡಿದರು. ಅವರೇ ದೇಶ ಕಂಡ ಮಹಾನ್ ಮುತ್ಸದ್ದಿ, ಶ್ರೇಷ್ಠ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ, 65ಕ್ಕೂ ಹೆಚ್ಚು ವರ್ಷ ದೀರ್ಘ ಕಾಲದ ರಾಜಕೀಯ ಏರಿಳಿತಗಳಲ್ಲಿ ಸ್ಥಿರವಾಗಿ, ಸ್ಥಿತಪ್ರಜ್ಞರಾಗಿ, ಪ್ರಬುದ್ಧರಾಗಿ, ಸೋಲಿಗೆ ಕುಗ್ಗದೆ, ಗೆಲುವಿಗೆ ಹಿಗ್ಗದೆ ನಿಷ್ಠಾವಂತಿಕೆಯ ನಿಯತ್ತಿನ ಕಾರ್ಯಕರ್ತನಾಗಿದ್ದ ವಾಜಪೇಯಿ-ರಾಜಕಾರಣದ ಎಲ್ಲೆ ದಾಟಿದ, ಜನಕೋಟಿಯ ಹೃದಯ ಮೀಟಿದ ಅಪೂರ್ವ ಮಾನವ.

ಹಲವು ಹುದ್ದೆ ನಿರ್ವಹಿಸಿದ ಜನನಾಯಕ: ಏಳು ಬಾರಿ ಸಂಸದ, ಎರಡು ಬಾರಿ ರಾಜ್ಯಸಭಾ ಸದಸ್ಯ, ಹಲವಾರು ಬಾರಿ ಪ್ರತಿಪಕ್ಷದ ನಾಯಕ, ಮೂರು ಬಾರಿ ದೇಶದ ಪ್ರಧಾನಿ, ಪದ್ಮವಿಭೂಷಣ, ಭಾರತರತ್ನ ಪ್ರಶಸ್ತಿ ಪುರಸ್ಕೃತ, ಜಗದಗಲ ಸಂಚರಿಸಿ ಭಾರತದ ಅಸ್ಮಿತೆಯ ಛಾಪೊತ್ತಿದ ವಿದೇಶಾಂಗ ಸಚಿವ....ಬಹುಷಃ ರಾಜಕೀಯ ಬದುಕಿನಲ್ಲಿ ಇಷ್ಟೆಲ್ಲ ಹುದ್ದೆಗಳನ್ನು ಯಶಸ್ವಿಯಾಗಿ ನಿರ್ವಹಿಸಿದ ಜನನಾಯಕ ಭಾರತದಲ್ಲಿ ಮತ್ತೊಬ್ಬರು ಇರಲಿಕ್ಕಿಲ್ಲ.

ಅದು 1977, ನಾಗಪುರದಲ್ಲಿ ತೃತೀಯ ವರ್ಷದ ಸಂಘ ಶಿಕ್ಷಾವರ್ಗ. ವಾಜಪೇಯಿ ಶಿಕ್ಷಣಾರ್ಥಿಗಳಿಗೆ ಬೌದ್ಧಿಕ ವರ್ಗ ನಡೆಸಿಕೊಡಲು ಬಂದಿದ್ದರು. ಎಂದಿನಂತ ತಮ್ಮ ನವಿರಾದ ಹಾಸ್ಯಮಿಶ್ರಿತ ಮಾತುಗಳ ಮೂಲಕ ಸಂಘಕಾರ್ಯದ ಅನಿವಾರ್ಯತೆ, ಹಿಂದೂ ರಾಷ್ಟ್ರ. ಸೈದ್ಧಾಂತಿಕ ನಿಷ್ಠೆ ಇತ್ಯಾದಿ ಸಂಗತಿಗಳನ್ನು ಬೌದ್ಧಿಕ್‌ನಲ್ಲಿ ಅವರು ಪ್ರಸ್ತಾಪಿಸಿದರು. ಮಾತಿನ ನಡುವೆ ಶ್ರೀಕೃಷ್ಣ-ಅರ್ಜುನನಿಗೆ ಗೀತೋಪದೇಶ ಮಾಡುವ ಪ್ರಸಂಗ ಪ್ರಸ್ತಾಪವಾಯಿತು. ಆಗ ವಾಜಪೇಯಿ ಹೇಳಿದ್ದು: ‘ಒಂದು ವೇಳೆ ಶ್ರೀಕೃಷ್ಣನು ಅರ್ಜುನನಿಗೆ ಗೀತೋಪದೇಶ ಮಾಡಿ, ಸಮಯ ವ್ಯರ್ಥಗೊಳಿಸುವ ಬದಲು ಅರ್ಜುನನಿಗೆ ಸಂಘದ ಗಣವೇಶ ತೊಡಿಸಿ ಶಾಖೆಗೆ ಕಳಿಸಿದ್ದರೆ ಆತ ಗೀತೋಪದೇಶದ ಅಗತ್ಯವಿಲ್ಲದೇ, ನೇರವಾಗಿ ಕೌರವರ ವಿರುದ್ಧ ಯುದ್ಧಕ್ಕೆ ಸಿದ್ಧನಾಗುತ್ತಿದ್ದ!’ ಅಲ್ಲಿದ್ದ ಸಂಘದ ಹಿರಿಯ ಪ್ರಮುಖರು ಕೂಡ ವಾಜಪೇಯಿಯವರ ಈ ನಗೆಚಾಟಿಗೆ ಬಿದ್ದು ಬಿದ್ದು ನಕ್ಕಿದ್ದರು!

ಪ್ರತಿಪಕ್ಷದ ನಾಯಕರಾಗಿದ್ದಾಗ ವಾಜಪೇಯಿ ಒಮ್ಮೆ ಹುಬ್ಬಳ್ಳಿಗೆ ಬಂದಿದ್ದರು. ಸಂಜೆ ಬೃಹತ್ ಸಾರ್ವಜನಿಕ ಸಭೆ. ಅವರ ಹಿಂದಿ ಭಾಷಣದ ಅನುವಾದವನ್ನು ಆಗ ಮಾಡಿದವರು ''ವಿಕ್ರಮ'' ವಾರಪತ್ರಿಕೆಯ ಸಂಪಾದಕರಾಗಿದ್ದ ಬೆ.ಸು.ನಾ ಮಲ್ಯ ಅವರು. ಮಲ್ಯರು ಸ್ವತಃ ಉತ್ತಮ ಭಾಷಣಕಾರರಾಗಿದ್ದರಿಂದ ವಾಜಪೇಯಿ ಹಿಂದಿ ಭಾಷಣದ ಅನುವಾದದ ಜತೆಗೇ, ಅವರು ಭಾಷಣದಲ್ಲಿ ಸೇರಿಸದ ಸ್ಥಳೀಯ ಸಮಸ್ಯೆಗಳ ವಿಶ್ಲೇಷಣೆಯನ್ನೂ ಮಾಡಿದರು.

ವಾಜಪೇಯಿಗೆ ಕನ್ನಡ ಅರ್ಥವಾಗದಿದ್ದರೂ ತಾನು ಹೇಳದ ಸಂಗತಿಗಳನ್ನು ಮಲ್ಯರು ಹೇಳುತ್ತಿದ್ದಾರೆಂಬ ಗುಮಾನಿ ಬಂತು. ಅವರು ನಡುವೆಯೇ ‘I think he is improving my speech’ ಎಂದರು. ಮಲ್ಯರು ಕಕ್ಕಾಬಿಕ್ಕಿ. ಭಾಷಣ ಆಲಿಸುತ್ತಿದವರಿಗೆ ಭರಪೂರ ಮನರಂಜನೆ! ವಾಜಪೇಯಿ ಅವರಿಗೆ ಮಾತ್ರ ಮಲ್ಯರ ಬಗ್ಗೆ ಅಂದಿನಿಂದಲೇ ಅದೇನೋ ಅಭಿಮಾನ.

ಉಭಯ ಕುಶಲೋಪರಿ ವಿಚಾರಿಸುತ್ತಿದ್ದ ಅಟಲ್: ಅಟಲ್‌ಜಿ ಪ್ರಧಾನಿಯಾಗಿದ್ದ ಸಂದರ್ಭ. 2002ರ ಜೂನ್ 19 ರಂದು ''ಪಾಂಚಜನ್ಯ'' ಪತ್ರಿಕೆ ವತಿಯಿಂದ ದೇಶದ ಆಯ್ದ ಕೆಲವು ಪತ್ರಕರ್ತರಿಗೆ ನಚಿಕೇತ, ದೀನದಯಾಳರ ಹೆಸರಿನಲ್ಲಿ ಪ್ರಶಸ್ತಿ ಪ್ರದಾನ ಸಮಾರಂಭ. ಕರ್ನಾಟಕದಿಂದ ''ವಿಕ್ರಮ'' ಪತ್ರಿಕೆಯ ಹಿರಿಯ ಸಂಪಾದಕರಾಗಿದ್ದ ಬೆ.ಸು.ನಾ.ಮಲ್ಯರಿಗೆ ನಚಿಕೇತ ಪ್ರಶಸ್ತಿ, ಜೊತೆಗೆ ''ಹೊಸದಿಗಂತ'' ದೈನಿಕ ಸಂಪಾದಕನಾಗಿದ್ದ ನನಗೆ ದೀನದಯಾಳ್‌ ಸಮ್ಮಾನ್ ಪುರಸ್ಕಾರ. ಆ ಪ್ರಶಸ್ತಿಗಳಿಗೆ ''ಪಾಂಚಜನ್ಯ'' ಅರ್ಜಿ ಆಹ್ವಾನಿಸಿರಲಿಲ್ಲ. ಆಯ್ಕೆ ಸಮಿತಿಯೇ ಪುರಸ್ಕೃತರ ಪಟ್ಟಿ ತಯಾರಿಸಿತ್ತು.

ಪ್ರಶಸ್ತಿ ಪುರಸ್ಕೃತರಿಗೆ ಫ್ಯಾಕ್ಸ್ ಮೂಲಕ ಸುದ್ದಿ ತಿಳಿಸಿ, ದೆಹಲಿಗೆ ಬರುವಂತೆ ಆಹ್ವಾನ ನೀಡಿತ್ತು. ಮಲ್ಯರಿಗೆ ಆಗ 75ರ ಇಳಿವಯಸ್ಸು. ಅವರೊಬ್ಬರೇ ದೆಹಲಿಗೆ ಹೋಗುವಷ್ಟು ಆರೋಗ್ಯ, ದೈಹಿಕ ಶಕ್ತಿ ಇರಲಿಲ್ಲ. ಹಾಗಾಗಿ ಮಲ್ಯರನ್ನು ನನ್ನೊಂದಿಗೆ ದೆಹಲಿಗೆ ಕರೆದುಕೊಂಡು ಹೋಗಿ, ವಾಪಸ್ ಕರೆತರುವ ಹೊಣೆ ನನ್ನ ಹೆಗಲೇರಿತ್ತು. ಪ್ರಧಾನಿ ವಾಜಪೇಯಿ ನಿವಾಸದಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಮಲ್ಯರ ಹೆಸರನ್ನು ನಿರೂಪಕರು ಘೋಷಿಸುತ್ತಿದ್ದಂತೆ ಮಲ್ಯರು ನಿಧಾನವಾಗಿ ವೇದಿಕೆಯ ಮೇಲೆ ಹೋದರು. ವಾಜಪೇಯಿ ಅವರನ್ನು ಬರಸೆಳೆದು ಅಪ್ಪಿಕೊಂಡು ''ಮಲ್ಯಜೀ ,ಕೈಸೆ ಹೈ ಆಪ್'' ಎಂದು ಉಭಯ ಕುಶಲೋಪರಿ ವಿಚಾರಿಸಿ ಪ್ರಶಸ್ತಿ ನೀಡಿದರು.

ಆ ಸಮಾರಂಭದಲ್ಲಿ ಮುಖ್ಯ ಭಾಷಣ ಮಾಡಿದ ವಾಜಪೇಯಿ ''ಜಬ್ ಮೈ ತರುಣ್ ಥಾ, ತಬ್ ಮೈ ಪಾಂಚಜನ್ಯ ಸಾಪ್ತಾಹಿಕ್ ಕಾ ಸಂಪಾದಕ್ ಥಾ'' ಎಂದು ನಗೆಚಟಾಕಿ ಹಾರಿಸಿ, ತಮ್ಮ ಪತ್ರಕರ್ತ ಬದುಕಿನ ಕ್ಷಣಗಳನ್ನು ಮೆಲುಕು ಹಾಕಿದ್ದರು. ಪಾಂಚಜನ್ಯಕ್ಕೆ ಆಗ ಸಂಪಾದಕರಾಗಿದ್ದವರು ತರುಣ್ ವಿಜಯ್... ನಗೆಚಟಾಕಿ ಹಾರಿಸುವುದಕ್ಕೆ ತರುಣ್ ವಿಜಯ್ ಕಾರಣರಾಗಿದ್ದರು.

ಅಟಲ್‌ ಮುಗುಳ್ನಗುವಿಗೆ ತಲೆ ಕೆಡಿಸಿಕೊಳ್ಳಿತ್ತಿದ್ದ ಪತ್ರಕರ್ತರು: ಪ್ರಧಾನಿಯಾಗಿದ್ದಾಗ ಪತ್ರಕರ್ತರ ಕಾಲೆಳೆಯುವ ಹಲವು ಪ್ರಶ್ನೆಗಳಿಗೆ ಅಟಲ್‌ಜಿಯವರ ಪ್ರತಿಕ್ರಿಯೆ - ಒಂದು ಮುಗುಳ್ನಗು ಮಾತ್ರ. ಪತ್ರಕರ್ತರಾಗಿ ಅನುಭವ ಗಳಿಸಿದ್ದರಿಂದ ಪತ್ರಕರ್ತರ ಹಲವು ಪಟ್ಟುಗಳ ಹಿಂದಿನ ಗುಟ್ಟು ಅವರಿಗೆ ತಿಳಿದಿತ್ತು. ವಾಜಪೇಯಿ ಮುಗುಳ್ನಕ್ಕಿದ್ದಕ್ಕೆ ಏನರ್ಥವಿರಬಹುದೆಂದು ಪತ್ರಕರ್ತರೆಲ್ಲ ತಲೆಕೆಡಿಸಿಕೊಂಡು, ಮರುದಿನ ತಮಗೆ ತೋಚಿದಂತೆ ಆ ಮುಗುಳ್ನಗುವನ್ನು ವ್ಯಾಖ್ಯಾನಿಸುತ್ತಿದ್ದದ್ದೂ ಉಂಟು. ಅವರ ಒಂದು ಮುಗುಳ್ನಗು, ಒಂದು ಮೌನ, ಮಾತನಾಡುವಾಗ ಶಬ್ದಗಳ ನಡುವೆ ನೀಡುತ್ತಿದ್ದ ವಿರಾಮ, ಏರಿಳಿತದ ಭಾವತೀವ್ರತೆ - ಇದೇ ಅವರ ತಾಕತ್ ಆಗಿತ್ತು.

ಕಾರ್ಯಕ್ರಮಕ್ಕೆ ತಡವಾಗಿ ಬಂದು ಆರ್‌.ಗುಂಡೂರಾವ್‌ಗೆ ಟಾಂಗ್‌: ಕರ್ನಾಟಕದಲ್ಲಿ ಆರ್.ಗುಂಡೂರಾವ್ ಮುಖ್ಯಮಂತ್ರಿಯಾಗಿ ಮೆರೆಯುತ್ತಿದ್ದ ಕಾಲ ಅದು (1983). ವಿಧಾನಸಭಾ ಚುನಾವಣಾ ಪ್ರಚಾರಕ್ಕೆಂದು ವಾಜಪೇಯಿ ಶಿಕಾರಿಪುರಕ್ಕೆ ರಾತ್ರಿ ತಡವಾಗಿ ಬಂದಿದ್ದರು. ಆಗೆಲ್ಲ ಯಾವುದೋ ಬಾಡಿಗೆಯ ಅಂಬಾಸಿಡ‌ರ್ ಕಾರಿನಲ್ಲೇ ವಾಜಪೇಯಿಯವರ ಓಡಾಟ. ಶಿವಮೊಗ್ಗ ಸಭೆ ಮುಗಿಸಿ, ಶಿಕಾರಿಪುರಕ್ಕೆ ಬರುವ ವೇಳೆಗೆ ರಾತ್ರಿ 9 ದಾಟಿತ್ತು. ಬಂದವರೇ ನೇರವಾಗಿ ವೇದಿಕೆಯ ಮೇಲೆ ಹೋಗಿ ಕುಳಿತರು. ಸ್ವಾಗತ ಇತ್ಯಾದಿ ಮುಗಿದ ಬಳಿಕ ಎದ್ದು ನಿಂತು "ಭಾಯಿಯೋ ಔರ್ ಬೆಹನೋ ,ಮೈ ಇದರ್ ಆನೇ ಮೇ ಬಹುತ್ ದೇರ್ ಹೋಗಯಾ, ಮುಜ್ಹೆ ಮಾಫ್ ಕೀಜಿಯೇ" ಎಂದರು. ಸಭೆಯಲ್ಲಿ ನಿಶ್ಯಬ್ದ, ಒಂದೆರಡು ಸೆಕೆಂಡ್ ನಂತರ ಅವರು ಹೇಳಿದ್ದು, "ಇತನಾ ದೇರ್ ಕ್ಯೋ ಹುವಾ? ಕ್ಯೋಂಕೀ ಮೇರಾ ಪಾಸ್ ಹೆಲಿಕ್ಯಾಪ್ಟರ್ ನಹೀ ಹೈ"? ಸಭೆಯಲ್ಲಿ ಐದು ನಿಮಿಷ ಗಡಚಿಕ್ಕುವ ಚಪ್ಪಾಳೆ!

ವಿಷಯ ಇಷ್ಟೇ. ಆಗೆಲ್ಲ ಮುಖ್ಯಮಂತ್ರಿ ಗುಂಡೂರಾವ್ ಸಣ್ಣ ಪುಟ್ಟ ಕಾರ್ಯಕ್ರಮಗಳಿಗೂ ಹೆಲಿಕ್ಯಾಪ್ಟರ್‌ನಲ್ಲೇ ಸಂಚರಿಸುತ್ತಿದ್ದರು. ಸರ್ಕಾರದ ಹಣವನ್ನು ಎಗ್ಗಿಲ್ಲದೇ ದುಂದುವೆಚ್ಚ ಮಾಡುತ್ತಿದ್ದರು. ಗುಂಡುರಾಯರಿಗೆ ಈ ವಿಷಯಕ್ಕೆ ಸಂಬಂಧಿಸಿದಂತೆ ತಿವಿಯಲೆಂದೇ ವಾಜಪೇಯಿ "ಮೇರಾ ಪಾಸ್ ಹೆಲಿಕ್ಯಾಪ್ಟರ್ ನಹೀ ಹೈ" ಎಂದಿದ್ದರು!

ಪಂ.ದೀನದಯಾಳ ನಂತರ ವಾಜಪೇಯಿ ಉತ್ತರಾಧಿಕಾರಿ

ರಾಜಕೀಯ ಕ್ಷೇತ್ರ ಅವರಾಗಿ ಬಯಸಿದ್ದಲ್ಲ, ತಾನು ಜೀವನದಲ್ಲಿ ಎಸಗಿದ್ದ ಅತಿದೊಡ್ಡ ತಪ್ಪೆಂದರೇ ರಾಜಕೀಯಕ್ಕೆ ಬಂದಿದ್ದು, ಎಂದು ಅನೇಕ ಸಲ ವಾಜಪೇಯಿ ಹೇಳಿದ್ದಿದೆ. 1968ರ ಫೆಬ್ರವರಿಯಲ್ಲಿ ಜನಸಂಘದ ಅಧ್ಯಕ್ಷರಾಗಿದ್ದ ಪಂ.ದೀನದಯಾಳ ಉಪಾಧ್ಯಾಯರ ಬರ್ಬರ ಹತ್ಯೆಯಾದ ಬಳಿಕ ಅವರ ಉತ್ತರಾಧಿಕಾರಿ ಆಗಬೇಕೆಂದು ಪಕ್ಷದ ಹಿರಿಯ ಮುಖಂಡರು ಆಗ್ರಹಿಸಿದಾಗ ವಾಜಪೇಯಿ "ನಾನು ದೀನದಯಾಳಜೀ ಸ್ಥಾನ ತುಂಬಲು ಖಂಡಿತ ಅರ್ಹನಲ್ಲ" ಎಂದು ಬಿಕ್ಕಿಬಿಕ್ಕಿ ಅತ್ತಿದ್ದರಂತೆ.