ಸಾಮೂಹಿಕ ನಡವಳಿಕೆ ಹಾಗೂ ಸೃಜನಶೀಲ ಪರಿಕಲ್ಪನೆಗೆ ಮೀಸಲಾಗಿದ್ದ ಉತ್ತಮ ನಡೆನುಡಿಯನ್ನೇ ಹೋಮೋ ವಲ್ಗರಿಕಸ್‌ಗಳು ಅಳಿಸಿಬಿಟ್ಟಿದ್ದಾರೆ. ನಡೆನುಡಿ ಎಂಬ ಪದವೇ ಈಗ ಬಹಳ ಕೃತಕವಾಗಿಬಿಟ್ಟಿದೆ. ನಡೆನುಡಿಯಿಂದ ಒಂದಷ್ಟು ಗೌರವ ಹಾಗೂ ನೆಮ್ಮದಿ ಇತ್ತು. ಅದು ಈಗ ವಲ್ಗರಿಕಸ್‌ಗಳ ಮರ್ಜಿಗೆ ಸಿಲುಕಿಕೊಂಡಿದೆ.

-ಸೂಸನ್‌ ಥಾಮಸ್‌

ಮಾನವರ ವಿಕಾಸಕ್ಕಿಂತ ಮೊದಲು ಇದ್ದ ‘ಆಸ್ಟ್ರಲೋಪಿಥೆಕಸ್‌’ಗಳು ಕಲ್ಲುಗಳನ್ನು ಹಿಡಿಯುತ್ತಿದ್ದರೆ, ಮಾನವರ ವಿಕಾಸದ ಆರಂಭಿಕ ಹಂತದಲ್ಲಿನ ‘ಹೋಮೋ ಹ್ಯಾಬಿಲಿಸ್‌’ಗಳು ಮರದ ಸೀಳುಗಳನ್ನು ಇಟ್ಟುಕೊಳ್ಳುತ್ತಿದ್ದರು. ‘ಹೋಮೋ ವಲ್ಗರಿಕಸ್‌’ (2025ನೇ ಇಸ್ವಿ)ಗಳು ಸ್ಮಾರ್ಟ್‌ಫೋನ್‌ಗಳನ್ನು ಕೈಯಲ್ಲಿ ಹಿಡಿದ ರೂಪದಲ್ಲಿ ಹಲವು ಶತಮಾನಗಳ ಬಳಿಕ ಇತಿಹಾಸ ಪುಸ್ತಕಗಳಲ್ಲಿ ಗೋಚರಿಸಲಿದ್ದಾರೆ. ಕಲ್ಲು, ಈಟಿ ಹಾಗೂ ಮರದ ತುಂಡುಗಳು ಪುರಾತನ ಮಾನವನಿಗೆ ರಕ್ಷಣೆಯ ಸಾಧನಗಳಾಗಿದ್ದರೆ, ದಾಳಿ ಮಾಡುವ ಅವಶ್ಯಕತೆ ಬಂದಾಗ ಹೋಮೋ ವಲ್ಗರಿಕಸ್‌ಗಳಿಗೆ ತಾವು ಹೊಂದಿರುವ ಸ್ಮಾರ್ಟ್‌ಫೋನೇ ಹೊಸ ಅಸ್ತ್ರ. ವಿಮಾನ ನಿಲ್ದಾಣಗಳು, ಶಾಪಿಂಗ್‌ ಮಾಲ್‌ಗಳು, ರೈಲುಗಳು, ಚರ್ಚ್‌ಗಳು, ದೇಗುಲಗಳು, ಸಮುದ್ರ ಕಿನಾರೆಗಳು, ಬಸ್‌ ನಿಲ್ದಾಣಗಳು, ಅಂಗಡಿಗಳಲ್ಲಿ ಜೋರಾಗಿ ಅರಚುತ್ತಾ, ವಿಡಿಯೋ ಕಾಲ್‌ ಮಾಡುತ್ತಾ, ರೆಕಾರ್ಡ್‌ ಮಾಡಿಕೊಳ್ಳುತ್ತಾ, ವಿಡಿಯೋಗಳನ್ನು ನೋಡುತ್ತಾ, ವಾಕರಿಕೆ ಬರುವಷ್ಟು ಆನ್‌ಲೈನ್‌ ಗೇಮುಗಳನ್ನು ಆಡುತ್ತಾ ಅವರು ಕಂಡುಬರುತ್ತಾರೆ.

ಮರೆಯಾದ ಉತ್ತಮ ನಡವಳಿಕೆ:

ಸಾಮೂಹಿಕ ನಡವಳಿಕೆ ಹಾಗೂ ಸೃಜನಶೀಲ ಪರಿಕಲ್ಪನೆಗೆ ಮೀಸಲಾಗಿದ್ದ ಉತ್ತಮ ನಡೆನುಡಿಯನ್ನೇ ಹೋಮೋ ವಲ್ಗರಿಕಸ್‌ಗಳು ಅಳಿಸಿಬಿಟ್ಟಿದ್ದಾರೆ. ನಡೆನುಡಿ ಎಂಬ ಪದವೇ ಈಗ ಬಹಳ ಕೃತಕವಾಗಿಬಿಟ್ಟಿದೆ. ನಡೆನುಡಿಯಿಂದ ಒಂದಷ್ಟು ಗೌರವ ಹಾಗೂ ನೆಮ್ಮದಿ ಇತ್ತು. ಅದು ಈಗ ವಲ್ಗರಿಕಸ್‌ಗಳ ಮರ್ಜಿಗೆ ಸಿಲುಕಿಕೊಂಡಿದೆ. ‘ಗುಣಮುಖವಾದ ಸ್ಥಿತಿಯಲ್ಲಿರುವ ತೊಡೆಯ ಮೂಳೆಯು ನಾಗರಿಕತೆಯ ಅಂತಿಮ ಚಿಹ್ನೆ, ಏಕೆಂದರೆ ಅದು ಮಾನವರನ್ನು ಕಾಳಜಿಯಿಂದ ಆರೈಕೆ ಮಾಡಲಾಗಿತ್ತು ಎಂಬುದನ್ನು ತೋರಿಸುತ್ತದೆ’ ಎಂದು ಅಮೆರಿಕ ಮೂಲದ ಮಾನವಶಾಸ್ತ್ರಜ್ಞೆಯಾಗಿದ್ದ ಮಾರ್ಗರೆಟ್ ಮೀಡ್‌ ಅವರು ಹೇಳಿದ್ದರು ಎಂದು ನಂಬಲಾಗಿದೆ. ನಮ್ಮ ಭೌತಿಕ ನಾಗರಿಕತೆಯ ತುತ್ತ ತುದಿಯಂತಾಗಿರುವ ಸ್ಮಾರ್ಟ್‌ಫೋನ್‌ಗಳು ಸಮಯವನ್ನು ತೋರಿಸುತ್ತವೆ, ದಾಖಲೆಗಳನ್ನು ನಿರ್ವಹಿಸುತ್ತವೆ, ನೆನಪೋಲೆ ಕಳುಹಿಸುತ್ತವೆ, ನಮ್ಮ ಹೆಜ್ಜೆಗಳ ಮೇಲೆ ಕಣ್ಣಿಡುತ್ತವೆ, ಸಸ್ಯ, ಚಿಟ್ಟೆಗಳನ್ನು ಗುರುತಿಸುತ್ತವೆ. ದುರಾದೃಷ್ಟವೆಂದರೆ, ಈ ಫೋನ್‌ಗಳು ನಮ್ಮ ಪಕ್ಕದಲ್ಲೇ ಇರುವ ಮನುಷ್ಯನ ಬಗ್ಗೆ ತಲೆಕೆಡಿಸಿಕೊಳ್ಳುವುದಿಲ್ಲ. ಒಂದು ಬಗೆಯ ನಿರ್ಭಾವುಕರನ್ನಾಗಿ ನಮ್ಮನ್ನು ಮಾಡಿಬಿಡುತ್ತವೆ. ಪರಿಣಾಮವಾಗಿ, ಅಪಘಾತ ಹಾಗೂ ಒಂದು ವಿಪತ್ತು ಸಂಭವಿಸಿದಾಗ ಸಂತ್ರಸ್ತರನ್ನು ರಕ್ಷಿಸುವ ಬದಲಿಗೆ, ನೀವು ಅದರ ವಿಡಿಯೋ ರೆಕಾರ್ಡ್‌ ಮಾಡುತ್ತಿರುತ್ತೀರಿ. ರೆಸ್ಟೋರೆಂಟ್‌ನಲ್ಲೋ ಅಥವಾ ರೈಲಿನಲ್ಲೋ ಹತ್ತಾರು ಮಂದಿ ಕಾಣುತ್ತಿದ್ದರೂ ವಿಡಿಯೋ ಕಾಲ್‌ ಮಾಡಿ ನಡತೆಹೀನರಂತೆ ನಡೆದುಕೊಳ್ಳುತ್ತಿರುತ್ತೀರಿ.

ಪ್ರತಿಯೊಬ್ಬರೂ ತಮಗಿಷ್ಟ ಬಂದಂತೆ ವಿಡಿಯೋ ಸೆರೆ ಹಿಡಿಯುವ, ಚಿತ್ರಗಳನ್ನು ಕ್ಲಿಕ್‌ ಮಾಡುವ ಸಂಸ್ಕೃತಿಹೀನತೆಯಿಂದಾಗಿ ‘ಸಮ್ಮತಿ’ ಎಂಬುದು ನಿಧಾನ ಮರಣವನ್ನಪ್ಪಿದೆ. ಅಪರಿಚಿತರ ವಿಡಿಯೋಗಳನ್ನು ರೆಕಾರ್ಡ್‌ ಮಾಡುವ ಸಾಮೂಹಿಕ ಸನ್ನಿಯ ನೈಜ ಕತೆ ಆಧರಿಸಿದ ‘ವಿಕೃತಿ’ ಎಂಬ ಮಲಯಾಳ ಚಿತ್ರವಿದೆ. ಆದರೆ ಆ ಸಿನಿಮಾ ಮಲಯಾಳಿಗಳಿಗೆ ಏನನ್ನೂ ಕಲಿಸಲಿಲ್ಲ. ಮಹಿಳೆಯೊಬ್ಬಳು ತುಂಬಿದ ಬಸ್‌ನಲ್ಲಿ ಸೆರೆ ಹಿಡಿದ ವಿಡಿಯೋದಿಂದಾಗಿ ಅಪಮಾನಕ್ಕೆ ಒಳಗಾಗಿ ಕೇರಳದಲ್ಲಿ ವ್ಯಕ್ತಿಯೊಬ್ಬರು ದಾರುಣ ಆತ್ಮಹತ್ಯೆ ಮಾಡಿಕೊಂಡಿದ್ದು ಅದಕ್ಕೆ ನಿದರ್ಶನ.

ಪ್ರಾರ್ಥನೆ ಅಲ್ಲ ಪ್ರದರ್ಶನ:

ಚರ್ಚ್‌ ಹಾಗೂ ದೇಗುಲಗಳಲ್ಲಿ ‘ವಲ್ಗರಿಕಸ್‌’ ಪುರುಷರನ್ನು ಪತ್ತೆ ಮಾಡಲು ನಿರ್ದಿಷ್ಟ ‘ಮೂಳೆ’ ಇದೆ. ಪವಿತ್ರ ಖರ್ಬಾನಾ ಅಥವಾ ಆರತಿಗಳಲ್ಲಿ ಭಾಗಿಯಾಗುವುದಷ್ಟೇ ಈಗ ಮುಖ್ಯ ಅಲ್ಲ, ಅದರ ದಾಖಲೆ ಉಳಿಸಬೇಕು. ಹೀಗಾಗಿ ಆತ ತನ್ನ ಫೋನ್‌ ಅನ್ನು ಗದೆಯ ರೀತಿ ಎತ್ತಿ ದೌರ್ಜನ್ಯ ಶುರು ಮಾಡುತ್ತಾನೆ. ಅರ್ಚಕರು ಹಾಗೂ ಪುರೋಹಿತರ ಉತ್ತಮ ಕ್ಷಣಗಳನ್ನು ಸೆರೆ ಹಿಡಿಯಲು ಎಲ್ಲರೂ ತನ್ನತ್ತ ನೋಡುವಂತೆ ಗಮನ ಸೆಳೆಯುತ್ತಾನೆ. ಇದು ಪ್ರಾರ್ಥನೆಯಲ್ಲ, ಪ್ರದರ್ಶನ. ತಾನು ಸೆರೆ ಹಿಡಿದ ದೃಶ್ಯವನ್ನು ವಿಶ್ವಾದ್ಯಂತ ಪ್ರದರ್ಶಿಸಿದರೆ, ಆತನಿಗೆ ‘ಪುಣ್ಯ’ ಸಿಗುತ್ತದೆ. ಚಿತ್ರೀಕರಣಕ್ಕೆ ನಿರ್ಬಂಧ ಇರುವ ಸ್ಥಳಗಳಲ್ಲೂ ಈ ಕಿರಿಕಿರಿಯ ಮನುಷ್ಯರು ಚಿತ್ರೀಕರಣಕ್ಕೆ ಮುಂದಾಗುತ್ತಾರೆ. ಗದ್ದಲ ಆರಂಭವಾಗುತ್ತದೆ. ವಾಗ್ವಾದಗಳು ನಡೆದು ಸುತ್ತಲಿನವರನ್ನು ಬೇಸರಗೊಳಿಸಿ, ರೆಕಾರ್ಡ್‌ ಮಾಡುತ್ತಾರೆ.

ಹೋಮೋ ವಲ್ಗರಿಕಸ್‌ಗಳಿಗೆ ಲಕ್ಷ್ಯವೇ ಇರುವುದಿಲ್ಲ. ಅವರು ಬೇರೆಯವರ ಲಕ್ಷ್ಯವನ್ನೂ ಕೆಡಿಸುತ್ತಾರೆ. ಕೆಂಗಂದು ಬಣ್ಣದ ಆಗಸ ನೋಡುತ್ತಾ ಸಮುದ್ರದ ಅಲೆಗಳು ಕಾಲಿಗೆ ಅಪ್ಪಳಿಸುವ ದೃಶ್ಯವನ್ನು ‘ಒಂದು ಫೋಟೋ ತೆಗೆದುಕೊಡಿ’ ಎಂಬ ಮನವಿ ಇಲ್ಲದೆ ನೀವು ಮೌನವಾಗಿ ಆನಂದಿಸಲಾಗದು. ನೀಲಿ-ಹಸಿರುಮಿಶ್ರಿತ ಬಣ್ಣದ ನೀರು ನಿಮ್ಮ ಶುಭ್ರ ಪಾದಗಳನ್ನು ಹೊಳೆಯುವಂತೆ ಮಾಡಿದಾಗ, ಅದರ ದೃಶ್ಯ ಸೊಬಗಿನ ಮೇಲೆ ಒತ್ತಡ ಬೀಳುತ್ತದೆ. ನಿಮ್ಮ ಕಾಲುಗಳ ಸುತ್ತ ಸುತ್ತಿಕೊಂಡ ನೊರೆ ಅಥವಾ ಕಾಲಬುಡದಲ್ಲಿ ಜಾರುತ್ತಿರುವ ಮರಳನ್ನು ಅನುಭವಿಸುವ ಬದಲಿಗೆ ದೃಶ್ಯ ಸೆರೆ ಹಿಡಿಯುವುದಕ್ಕೆ ಗಮನ ಹೋಗುತ್ತದೆ. ಇತ್ತೀಚೆಗೆ ನಾನು ಸಮುದ್ರಕ್ಕೆ ಮುಖ ಮಾಡಿರುವ ಪ್ರಪಾತದಂತಹ ಸ್ಥಳದ ಮೇಲಿರುವ ಕೆಫೆಯೊಂದಕ್ಕೆ ಹೋಗಿದ್ದೆ. ಸಮುದ್ರದಲ್ಲಿ ಸೂರ್ಯನನ್ನು ಮುಳುಗುವ ದೃಶ್ಯವನ್ನು ಆನಂದಿಸುವ ಬದಲಿಗೆ, ಟಿಕ್‌ಟಾಕ್‌ ವಿಡಿಯೋ ಮಾಡುವ ಹಾಗೂ ಚಿತ್ರೀಕರಿಸುವ ಸಾಮೂಹಿಕ ಮನೋವ್ಯಾಧಿಯನ್ನು ಕಂಡು ಮಂಕಾದೆ.

ಆಧುನಿಕತೆಯ ಹೊರೆ:

ನಿರಂತರ ಮಾನ್ಯತೆಯ ಅಗತ್ಯಕ್ಕೆ ಚಡಪಡಿಸುವವರು ಹೋಮೋ ವಲ್ಗರಿಕಸ್‌. ಮೂಗಿನ ಪ್ರತಿ ಉಸಿರನ್ನೂ ಸೆರೆ ಹಿಡಿದು ಸ್ಟೋರಿ ಹಾಗೂ ಸ್ಟೇಟಸ್‌ ಎಂದು ಹಂಚಿಕೊಳ್ಳಲಾಗುತ್ತದೆ. ಲೈಕ್‌ಗಳು, ಕಮೆಂಟ್‌ಗಳು, ಫಾಲೋವರ್ಸ್‌ ಹಾಗೂ ಅನ್‌ಫಾಲೋ ಮಾಡಿದವರ ಸಂಖ್ಯೆಯ ಮೇಲೆ ಪದೇ ಪದೇ ಕಣ್ಣಿಡಲಾಗುತ್ತದೆ. ಆಧುನಿಕ ಕಾಲದಲ್ಲಿ ಇದೊಂದು ಹೊರೆ. ಏಕೆಂದರೆ, ಉತ್ತಮವಾಗಿ ಜೀವನ ಮಾಡುವ ಬದಲು ಉತ್ತಮವಾಗಿ ಬಾಳುತ್ತಿರುವಂತೆ ತೋರಿಸಲು ಚಿಂತೆಪಡುವಂತಾಗಿದೆ. ನಾವು ನಮ್ಮ ಪುರಾತತೆಯನ್ನು ತೊರೆದು, ಆಧುನಿಕ, ವೈಯಕ್ತಿಕ ಗೂಡಿಗೆ ಸ್ಥಳಾಂತರಗೊಂಡಿದ್ದೇವೆ ಎಂದು ಭಾವಿಸಿದ್ದೇವೆ. ಆದರೆ ವಾಸ್ತವವಾಗಿ ಹಾಗಾಗಿಲ್ಲ. ನಾವು ಏನು ಧರಿಸುತ್ತೇವೆ, ಏನು ತಿನ್ನುತ್ತೇವೆ, ಎಲ್ಲಿ ತಿನ್ನುತ್ತೇವೆ ಎಂಬುದು ನಮ್ಮ ಸ್ವಂತ ಖುಷಿಗಿಂತ ಇಂಟರ್ನೆಟ್‌ನಲ್ಲಿರುವ ಅಪರಿಚಿತರಿಂದ ನಿರ್ಧರಿತವಾಗುತ್ತದೆ. ‘ವೈರಲ್‌ ಆಗಿರುವ ಬಿಸ್ಕಾಫ್‌ ಚೀಸ್‌ಕೇಕ್‌ ರುಚಿ ಸವಿಯದೆಯೂ ನೀವು ಬದುಕಿದ್ದೀರಾ? ಎಂದಾದರೂ ದೆಹಲಿಗೆ ಹೋಗಿ ಅಲ್ಲಿನ ಕರೀಮ್‌ ಬಿರಿಯಾನಿ ತಿಂದಿದ್ದೀರಾ?’ ಮಾನವ ವಲ್ಗರಿಕಸ್‌ಗಳು ತೂರುವ ಇಂತಹ ಅಸ್ತಿತ್ವದ ಪ್ರಶ್ನೆಗಳಿಂದಾಗಿ ಅತ್ಯುತ್ತಮರೂ ಕೂಡ ಅಸ್ತಿತ್ವ ತೋರಿಸಬೇಕಾದ ಪಾಪಕೂಪಕ್ಕೆ ಬೀಳಬೇಕಾಗಬಹುದು.

ಮರ್ಯಾದೆ ಹಾಗೂ ನೈತಿಕತೆಯನ್ನು ಹೋಮೋ ವಲ್ಗರಿಕಸ್‌ಗಳು ನಿಷ್ಕ್ರಿಯ ಮಾಡಿಬಿಟ್ಟಿವೆ. ಆನ್‌ಲೈನ್‌ ಅಶ್ಲೀಲತೆ ಹಾಗೂ ಮಾದಕ ವಸ್ತುಗಳ ಬಳಕೆ ವ್ಯಾಧಿಯನ್ನು ಇದು ಸಾಮಾನ್ಯ ಎಂಬಂತೆ ಮಾಡಿಬಿಟ್ಟಿವೆ. ಖಾಸಗಿ ಹಾಗೂ ಸಾರ್ವಜನಿಕತೆಯ ನಡುವಿನ ಗೆರೆಗಳು ಅಳಿಸುತ್ತಿದ್ದು, ಪರಸ್ಪರ ಅಸಭ್ಯತೆಯಲ್ಲಿ ಬೀಳುವಂತಾಗಿದೆ. ಅದನ್ನು ನಿಯಂತ್ರಿಸಲು ಅಥವಾ ತಡೆಯಲು ಕಷ್ಟವಾಗುತ್ತಿದೆ. ಐರ್ಲೆಂಡ್‌ ಸಾಹಿತಿ ಆಸ್ಕರ್‌ ವೈಲ್ಡ್‌ ತನ್ನ ಕಾದಂಬರಿ ‘ಡೋರಿಯನ್‌ ಗ್ರೇ’ನಲ್ಲಿ ಹೇಳುವಂತೆ, ‘ಎಲ್ಲ ಅಸಭ್ಯತೆ ಅಪರಾಧ.’ ಇತ್ತೀಚಿನ ದಿನಗಳಲ್ಲಿ ಪ್ರಸ್ತುತತೆಯ ಬಗ್ಗೆ ನಾವು ಬಾಯ್ತುಂಬಾ ಮಾತನಾಡುತ್ತೇವೆ. ವಿಚಿತ್ರವೆಂದರೆ ಲೊಕೇಷನ್‌ ಟ್ಯಾಗ್‌, ಬ್ರ್ಯಾಂಡ್‌ ಟ್ಯಾಗ್‌ ಹಾಗೂ ಹಿಂದೆಂದಿಗಿಂತ ಅಧಿಕ ವೈಯಕ್ತಿಕ ಗೀಳಿನ ಸೆಲ್ಫಿ ಪಾಯಿಂಟ್‌ಗಳ ಮೂಲಕ ಮತಿಹೀನ ಪ್ರದರ್ಶನಕ್ಕೆ ಧುಮುಕಿದ್ದೇವೆ. ಮೊಬೈಲ್‌ಗಳ ಫ್ರಂಟ್‌ ಕ್ಯಾಮೆರಾವೇ ಇದರಲ್ಲಿ ತಪ್ಪಿತಸ್ಥ. ಮೊಬೈಲ್‌ ಹಿಡಿದವನನ್ನು ಮಾತ್ರ ಕೇಂದ್ರೀಕರಿಸದೆ, ಅಕ್ಕಪಕ್ಕದಲ್ಲಿರುವವರನ್ನೂ ಸೆರೆ ಹಿಡಿಯುವ ಮೂಲಕ ಸಮ್ಮತಿ ಎಂಬುದನ್ನೇ ಅದು ಮಣಿಸಿಬಿಟ್ಟಿದೆ.

ಸಾಂಸ್ಕೃತಿಕವಾಗಿ ನಾವು ಕವಲು ದಾರಿಯಲ್ಲಿದ್ದೇವೆ. ಎಲೆಕ್ಟ್ರಾನಿಕ್‌ ಉಪಕರಣಗಳು ಹಾಗೂ ಅದರಲ್ಲಿ ತುಂಬಲಾಗಿರುವ ಅಲ್ಗಾರಿದಂಗಳ ಮೂಲಕ ನಮ್ಮ ಮೌಲ್ಯಾಧಾರಿತ ವ್ಯವಸ್ಥೆಯ ಜತೆ ತಿಕ್ಕಾಟಕ್ಕೆ ಇಳಿದಿದ್ದೇವೆ. ನಮ್ಮ ಸುತ್ತಲಿರುವವರಿಗೆ ಕಡಿಮೆ ತೊಂದರೆ ಹಾಗೂ ಕಿರಿಕಿರಿ ಉಂಟು ಮಾಡಬಹುದಾದಂತಹ ಹೆಚ್ಚು ಸಂವೇದನೆಯ ನಡವಳಿಕೆಯನ್ನು ಅದರಲ್ಲೂ ವಿಶೇಷವಾಗಿ ಸಾರ್ವಜನಿಕವಾಗಿ ಇರುವಾಗ, ಬೆಳೆಸಿಕೊಳ್ಳುವತ್ತ ನಾವು ಚಿಂತನೆ ಹರಿಸಬೇಕಿದೆ. ಪ್ರತಿಯೊಬ್ಬರೂ ಸುಲಭವಾಗಿ ಉಸಿರಾಡಲಿ. ಈ ಅಸಭ್ಯತೆ ಇನ್ನಿಲ್ಲವಾಗಲಿ.