ಜೆಡಿಎಸ್ ಕುಟುಂಬದ ಪಕ್ಷವಲ್ಲ. ಇದು ನಿಷ್ಠಾವಂತ ಕಾರ್ಯಕರ್ತರ ಪಕ್ಷ. ನಾನು ಹೋದ ಬಳಿಕವೂ ಜೆಡಿಎಸ್ ಪಕ್ಷ ಇರಲಿದೆ, ಪಕ್ಷವನ್ನು ಮುಗಿಸುತ್ತೇನೆ ಎನ್ನುವ ಮಹಾನುಭಾವ ಎಂದಿಗೂ ಹುಟ್ಟಲು ಸಾಧ್ಯವಿಲ್ಲ ಎಂದು ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ಎಚ್.ಡಿ.ದೇವೇಗೌಡ ಗುಡುಗಿದ್ದಾರೆ.
ಬೆಂಗಳೂರು : ಜೆಡಿಎಸ್ ಕುಟುಂಬದ ಪಕ್ಷವಲ್ಲ. ಇದು ನಿಷ್ಠಾವಂತ ಕಾರ್ಯಕರ್ತರ ಪಕ್ಷ. ನಾನು ಹೋದ ಬಳಿಕವೂ ಜೆಡಿಎಸ್ ಪಕ್ಷ ಇರಲಿದೆ, ಪಕ್ಷವನ್ನು ಮುಗಿಸುತ್ತೇನೆ ಎನ್ನುವ ಮಹಾನುಭಾವ ಎಂದಿಗೂ ಹುಟ್ಟಲು ಸಾಧ್ಯವಿಲ್ಲ ಎಂದು ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ಎಚ್.ಡಿ.ದೇವೇಗೌಡ ಗುಡುಗಿದ್ದಾರೆ.
ಪಕ್ಷದ ಕಚೇರಿ ಜೆ.ಪಿ.ಭವನದ ಆವರಣದಲ್ಲಿ ಭಾನುವಾರ ನಡೆದ ಸಮಾವೇಶದಲ್ಲಿ ನಿಖಿಲ್ ಕುಮಾರಸ್ವಾಮಿ ನೇತೃತ್ವದ ‘ಜನರೊಂದಿಗೆ ಜನತಾದಳ’ ಪಕ್ಷ ಸಂಘಟನಾ ರಾಜ್ಯ ಪ್ರವಾಸಕ್ಕೆ ಚಾಲನೆ ನೀಡಿ ಮಾತನಾಡಿದರು. ‘ಜನತಾದಳ ಎಷ್ಟೇ ಭಾಗವಾದರೂ ಈ ಪಕ್ಷ ಇನ್ನೂ ಉಳಿದಿದೆ. ನಾನು ಹೋದ ಮೇಲೂ ಪಕ್ಷ ಉಳಿಯುತ್ತದೆ. ಇದನ್ನು ಬರೆದಿಟ್ಟುಕೊಳ್ಳಿ. ಚನ್ನಪಟ್ಟಣ ಉಪ ಚುನಾವಣೆ ಸೋಲು ನಮ್ಮನ್ನು ಎದೆಗುಂದಿಸಲು ಸಾಧ್ಯವಿಲ್ಲ. ಎದೆಗುಂದುವ ಪ್ರಶ್ನೆಯೂ ಇಲ್ಲ. ಮತ್ತೆ ಪುಟಿದೆದ್ದು ಬರುತ್ತೇವೆ. ಆ ಶಕ್ತಿ ನಮ್ಮ ಪಕ್ಷಕ್ಕಿದೆ’ ಎಂದರು.
ರಾಷ್ಟ್ರೀಯ ಪಕ್ಷಗಳ ನಡುವೆ ಜೆಡಿಎಸ್ ಸದೃಢ:
ಎಷ್ಟೋ ಮಹಾನುಭಾವರು ಈ ಪಕ್ಷದಲ್ಲಿ ಅಧಿಕಾರ ಅನುಭವಿಸಿ ಹೋಗಿದ್ದಾರೆ, ಇನ್ನೂ ಅನುಭವಿಸುತ್ತಿದ್ದಾರೆ. ಆದರೆ ಪಕ್ಷ ಮಾತ್ರ ಹಾಗೆಯೇ ಇದೆ. ಎರಡು ರಾಷ್ಟ್ರೀಯ ಪಕ್ಷಗಳ ನಡುವೆ ಜೆಡಿಎಸ್ ಇನ್ನೂ ಸದೃಢವಾಗಿ ಬದುಕಿದೆ. ಇದು ಹೇಗೆ ಎಂಬ ಪ್ರಶ್ನೆಯನ್ನು ಟೀಕೆ ಮಾಡುವವರು ಕೇಳಿಕೊಳ್ಳಬೇಕು ಎಂದು ತಿರುಗೇಟು ನೀಡಿದರು.
ಎಚ್‌ಡಿಕೆ ವಿರುದ್ಧ ವ್ಯವಸ್ಥಿತ ಅಪಪ್ರಚಾರ:
ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರ ವಿರುದ್ಧ ಕೆಲವರು ವ್ಯವಸ್ಥಿತವಾಗಿ ಅಪಪ್ರಚಾರ ಮಾಡುತ್ತಿದ್ದಾರೆ. ಯಾವುದೇ ಆರೋಪಗಳನ್ನು ಸಾಬೀತು ಮಾಡಲು ಅವರಿಂದ ಆಗಿಲ್ಲ, ಕೇವಲ ಆರೋಪ ಮಾಡಿಕೊಂಡೇ ಅವರೆಲ್ಲ ಸೋಲುತ್ತಿದ್ದಾರೆ ಎಂದು ಟೀಕೆ ಮಾಡಿದರು.
ಮೋದಿ ಎದುರು ಮತ್ತೊಬ್ಬ ನಾಯಕ ಇಲ್ಲ:
ಪ್ರಧಾನಿ ನರೇಂದ್ರ ಮೋದಿ ಅವರು ದೊಡ್ಡ ನಾಯಕರು. ಅವರಿಗೆ ಎದುರು ನಿಲ್ಲುವ ಮತ್ತೊಬ್ಬ ನಾಯಕ ಇಡೀ ದೇಶದಲ್ಲಿ ಹಾಗೂ ಯಾವ ಪಕ್ಷದಲ್ಲಿಯೂ ಇಲ್ಲ. ಈ ಕಾರಣಕ್ಕಾಗಿ ನಾವು ಬಿಜೆಪಿ ಜೊತೆ ಮೈತ್ರಿಮಾಡಿಕೊಂಡಿದ್ದೇವೆ ಎಂದು ದೇವೇಗೌಡರು ಹೇಳಿದರು.
ರಾಜ್ಯ ಸರ್ಕಾರ ಸಹಕರಿಸಬೇಕು
ರಾಜ್ಯ ಸರ್ಕಾರ ಸಹಕಾರ ನೀಡಿದರೆ ಎಚ್ಎಂಟಿ, ಕುದುರೆಮುಖ ಕಬ್ಬಿಣ ಅದಿರು ಸಂಸ್ಥೆ, ಭದ್ರಾವತಿಯ ಸರ್ ಎಂ. ವಿಶ್ವೇಶ್ವರಯ್ಯ ಕಬ್ಬಿಣ ಅದಿರು ಮತ್ತು ಉಕ್ಕು ಕಾರ್ಖಾನೆಯನ್ನು ಉಳಿಸಬಹುದು. ಈ ನಿಟ್ಟಿನಲ್ಲಿ ಕಾಂಗ್ರೆಸ್ ಸರ್ಕಾರ ಕೇಂದ್ರ ಸಚಿವ ಕುಮಾರಸ್ವಾಮಿ ಅವರಿಗೆ ಸಹಕಾರ ನೀಡಬೇಕು ಎಂದು ದೇವೇಗೌಡ ಅವರು ಹೇಳಿದರು.ನಾನು ಗಟ್ಟಿಮುಟ್ಟಾಗಿದ್ದೇನೆ, ಚಿಂತೆ ಬೇಡ: ಎಚ್ಡಿಕೆ
ಕಾಂಗ್ರೆಸ್ಸಿಗರು ಕುಮಾರಸ್ವಾಮಿ ಆರೋಗ್ಯ ಕೆಟ್ಟಿದೆ. ನಮ್ಮ ಪಕ್ಷಕ್ಕೆ ಬನ್ನಿ ಎಂದು ನಮ್ಮ ಶಾಸಕರನ್ನು ಕರೆಯುತ್ತಿದ್ದಾರೆ. ನಾನು ಆರೋಗ್ಯವಾಗಿ ಗಟ್ಟಿಮುಟ್ಟಾಗಿದ್ದೇನೆ. ಏನೂ ಚಿಂತೆ ಬೇಡ, ಇನ್ನೂ ನಿಮ್ಮ ಜೊತೆ ಹದಿನೈದು ಇಪ್ಪತ್ತು ವರ್ಷ ಇರುತ್ತೇನೆ. ಜನತಾದಳವೂ ಇರುತ್ತದೆ ಎಂದು ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಹೇಳಿದ್ದಾರೆ.
ಜೆಡಿಎಸ್ ರಾಜ್ಯ ಕಚೇರಿ ಜೆ.ಪಿ.ಭವನದ ಆವರಣದಲ್ಲಿ ಭಾನುವಾರ ನಡೆದ ಸಮಾವೇಶದಲ್ಲಿ ನಿಖಿಲ್ ಕುಮಾರಸ್ವಾಮಿ ನೇತೃತ್ವದ ‘ಜನರೊಂದಿಗೆ ಜೆಡಿಎಸ್’ ಪಕ್ಷ ಸಂಘಟನಾ ರಾಜ್ಯ ಪ್ರವಾಸಕ್ಕೆ ಚಾಲನೆ ನೀಡಿ ಮಾತನಾಡಿ, ನನಗೆ ಮೂರು ಬಾರಿ ಹಾರ್ಟ್ ಆಪರೇಷನ್ ಆಗಿದೆ. ಎರಡು ಬಾರಿ ಸ್ಟ್ರೋಕ್ ಆಗಿದೆ. ಆದರೂ ನಾನು ಆರೋಗ್ಯವಾಗಿದ್ದೇನೆ. ನಮ್ಮ ಪಕ್ಷಕ್ಕೆ ಶಕ್ತಿ ಇದೆ. ಜೆಡಿಎಸ್ ಬಿಟ್ಟು ಬನ್ನಿ ಎನ್ನುವವರಿಗೆ ಈ ಸಭೆಯ ಮೂಲಕ ಉತ್ತರ ಕೊಟ್ಟಿದ್ದೀರಿ. ಧೈರ್ಯದಿಂದ ಪಕ್ಷ ಸಂಘಟನೆ ಮಾಡಿ ಎಂದು ಕಾರ್ಯಕರ್ತರನ್ನು ಹುರಿದುಂಬಿಸಿದರು.
ಜೆಡಿಎಸ್- ಬಿಜೆಪಿ ಮೈತ್ರಿ ಬಗ್ಗೆ ಯಾವುದೇ ಅಪಪ್ರಚಾರಗಳಿಗೆ ತಲೆ ಕೆಡಿಸಿಕೊಳ್ಳಬೇಡಿ. ಕೈಲಾಗದವರು ಅಪಪ್ರಚಾರ ಮಾಡುತ್ತಾರೆ. ಅವರಿಗೆಲ್ಲ ದಿಟ್ಟ ಉತ್ತರ ಕೊಡೋಣ ಎಂದರು.
