ಬ್ಯಾಟ್ ಬದಲು ಕೋಟ್ ಕೊಟ್ಟ ಫ್ಲಿಪ್‌ಕಾರ್ಟ್‌ಗೆ 1 ಲಕ್ಷ ದಂಡ!
ಬ್ಯಾಟ್ ಆರ್ಡರ್ ಮಾಡಿದ ಗ್ರಾಹಕಗೆ ಕೋಟ್ ನೀಡಿದ ಫ್ಲಿಪ್ ಕಾರ್ಟ್ ಗೆ ಶಿವಮೊಗ್ಗ ಕೋರ್ಟ್ 1 ಲಕ್ಷ ದಂಡ ವಿಧಿಸಿದೆ.
ಶಿವಮೊಗ್ಗ [ಅ.13]: ಆರ್ಡರ್ ಮಾಡಿದ ವಸ್ತುವಿನ ಬದಲಿಗೆ ಬೇರೊಂದು ವಸ್ತುಗಳು ಕಳುಹಿಸಿದ್ದೂ ಅಲ್ಲದೆ, ಈ ಸಂಬಂಧ ವಿಚಾರಣೆಗೂ ಸ್ಪಂದಿಸದ ಆನ್‌ಲೈನ್ ಕಂಪನಿಯೊಂದಕ್ಕೆ ಇಲ್ಲಿನ ಗ್ರಾಹಕರ ಪರಿಹಾರ ವೇದಿಕೆ ಆದೇಶಿಸಿದ ವಸ್ತುವನ್ನು ನೀಡಬೇಕು ಎಂಬುದರ ಜೊತೆಗೆ 50 ಸಾವಿರ ರು. ದಂಡ ವಿಧಿಸಿ ಆದೇಶ ಹೊರಡಿಸಿದೆ. ಅಲ್ಲದೆ, ಗ್ರಾಹಕರ ಕಲ್ಯಾಣ ನಿಧಿಗೂ 50 ಸಾವಿರ ನೀಡುವಂತೆ ಹೇಳಿದೆ.
ಶಿವಮೊಗ್ಗದ ವಾದಿರಾಜ್ ರಾವ್ ಎಂಬವರು ಪ್ಲಿಪ್‌ಕಾರ್ಟ್ ಆನ್‌ಲೈನ್ ಸಂಸ್ಥೆಯ ಮೂಲಕ ಕ್ರಿಕೆಟ್ ಬ್ಯಾಟೊಂದಕ್ಕೆ ಆರ್ಡರ್ ಮಾಡಿದ್ದರು. ಒಂದು ವಾರದಲ್ಲಿ ಪಾರ್ಸಲ್ ಮನೆಗೆ ಬಂದಿತು. ಇದರ ಬೆಲೆಯಾದ 6074 ರು.ಗಳನ್ನು ನೀಡಿ ಪಾರ್ಸಲ್ ಪಡೆದ ವಾದಿರಾಜ್ ಬಿಚ್ಚಿ ನೋಡಿದಾಗ ಆಘಾತ ಕಾದಿತ್ತು. ಅದರಲ್ಲಿ ಬ್ಯಾಟ್ ಬದಲಿಗೆ ಕಪ್ಪು ಕೋಟು ಇತ್ತು. ತಕ್ಷಣವೇ ಇದನ್ನು ನೀಡಿದ ಕೋರಿಯರ್ ಸಂಸ್ಥೆಯನ್ನು ಮತ್ತು ಬಳಿಕ ಪ್ಲಿಪ್ ಕಾರ್ಟ್ ಸಂಸ್ಥೆಯನ್ನು ಸಂಪರ್ಕಿಸಿದಾಗಲೂ ಅವರು ಯಾವುದೇ ರೀತಿಯ ಸೂಕ್ತ ಸ್ಪಂದನೆ ನೀಡಲೇ ಇಲ್ಲ.
ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ
ಬೇಸತ್ತ ವಾದಿರಾಜ್ 2019ರ ಮೇ 13ರಂದು ಗ್ರಾಹಕ ವೇದಿಕೆಯ ಮೆಟ್ಟಿಲೇರಿದ್ದರು. ವಿಚಾರಣೆ ನಡೆಸಿದ ವೇದಿಕೆಯ ಸಿ.ಎಂ.ಚಂಚಲ ಮತ್ತು ಎಚ್.ಮಂಜುಳಾ ಅವರನ್ನೊಳಗೊಂಡ ಪೀಠವು ಆನ್‌ಲೈನ್ ಸಂಸ್ಥೆ ತಪ್ಪು ಮಾಡಿದ್ದು, ತಕ್ಷಣವೇ ಪಿರ್ಯಾದುದಾರರು ಆರ್ಡರ್ ಮಾಡಿದಂತೆ ಒಂದು ಬ್ಯಾಟ್ ನೀಡಬೇಕು. ಈ ತಪ್ಪಿನಿಂದ ಆದ ಮಾನಸಿಕ ನೋವಿಗಾಗಿ 50 ಸಾವಿರ ರು. ದಂಡ ತೆರಬೇಕು ಎಂದು ಆದೇಶ ನೀಡಿದ್ದಾರೆ.