Asianet Suvarna News Asianet Suvarna News

ಶರಾವತಿ ಉಳಿವಿಗೆ ನಡೆಯುತ್ತಿರುವ ಶಿವಮೊಗ್ಗ ಬಂದ್‌ಗೆ ಮಿಶ್ರ ಪ್ರತಿಕ್ರಿಯೆ

ಶರಾವತಿ ಉಳಿಸಿ ಹೋರಾಟ ಒಕ್ಕೂಟದ ನೇತೃತ್ವದಲ್ಲಿ ಬುಧವಾರ ಶಿವಮೊಗ್ಗ ಬಂದ್‌ಗೆ ಕರೆ ನೀಡಲಾಗಿದ್ದು, ಬಂದ್ ಬಹುತೇಕ ಯಶಸ್ವಿಯಾಗುವ ಎಲ್ಲ ಲಕ್ಷಣಗಳು ಇವೆ.

Shivamogga bandh to save Sharavathi
Author
Bangalore, First Published Jul 10, 2019, 12:20 PM IST
  • Facebook
  • Twitter
  • Whatsapp

ಶಿವಮೊಗ್ಗ: ಲಿಂಗನಮಕ್ಕಿಯಿಂದ ಬೆಂಗಳೂರಿಗೆ ನೀರು ಹರಿಸುವ ಉದ್ದೇಶಿತ ಯೋಜನೆ ವಿರುದ್ಧ ಶರಾವತಿ ಉಳಿಸಿ ಹೋರಾಟ ಒಕ್ಕೂಟದ ನೇತೃತ್ವದಲ್ಲಿ ಶಿವಮೊಗ್ಗ ಬಂದ್‌ಗೆ ಕರೆ ನೀಡಿದ್ದು, ಬಂದ್‌ಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಸಾಗರದಲ್ಲಿ ಬಂದ್‌ಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಖಾಸಗಿ ಬಸ್‌ ನಿಲ್ದಾಣ ಬಿಕೋ ಎನ್ನುತ್ತಿದೆ. ಶಿವಮೊಗ್ಗದ ಬಸ್ ನಿಲ್ದಾಣದ ಬಳಿ ಕರವೇ ನಾರಾಯಣ ಗೌಡ ಬಣದಿಂದ ಶರಾವತಿ ನದಿ ಉಳಿಸಿ ಹೋರಾಟಕ್ಕೆ ಬೆಂಬಲ ಸೂಚಿಸಿ ಪ್ರತಿಭಟನೆ ನಡೆದಿದೆ. ಶರಾವತಿ ನದಿ ನೀರನ್ನು ಬೆಂಗಳೂರಿಗೆ ತೆಗೆದುಕೊಂಡು ಹೋಗುವ ಯೋಜನೆ ಅವೈಜ್ಞಾನಿಕ ಎಂದು ಪ್ರತಿಭಟನಾಕಾರರು ರಾಜ್ಯ ಸರ್ಕಾರದ ವಿರುದ್ಧ  ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಶಿವಮೊಗ್ಗ ಜಿ.ಪಂ. ನಿಂದ ಹಿಡಿದು ಬಹುತೇಕ ಗ್ರಾ.ಪಂ.ಗಳು ಕೂಡ ಶರಾವತಿ ನೀರನ್ನು ಬೆಂಗಳೂರಿಗೆ ಕೊಂಡೊಯ್ಯುವ ಯೋಜನೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದು, ಜಿಲ್ಲಾ ಬಂದ್‌ಗೆ ಬೆಂಬಲ ನೀಡಿವೆ. ಕಾಂಗ್ರೆಸ್, ಬಿಜೆಪಿ, ಜೆಡಿಸ್ ಪಕ್ಷಗಳು ಬಂದ್‌ಗೆ ತಮ್ಮ ಬೆಂಬಲ ಘೋಷಿಸಿವೆ. ಜಿಲ್ಲಾ ವಾಣಿಜ್ಯ ಸಂಘ, ವರ್ತಕರ ಸಂಘ, ಹೋಟೆಲ್ ಮಾಲೀಕರ ಸಂಘ, ಆಟೋ ಚಾಲಕರ ಸಂಘ, ಖಾಸಗಿ ಬಸ್ ಮಾಲೀಕರ ಸಂಘ, ವಿವಿಧ ಕನ್ನಡಪರ ಸಂಘಟನೆಗಳು, ವಿವಿಧ ಸಂಘ ಸಂಸ್ಥೆಗಳು, ಖಾಸಗಿ ಶಾಲಾ ಆಡಳಿತ ಮಂಡಳಿಗಳು, ವಿಚಾರ ವಾದಿಗಳು, ಚಿಂತಕರು, ಪರಿಸರ ಹೋರಾಟಗಾರರು, ಸಾಹಿತಿಗಳು, ಲೇಖಕಿಯರು ಯೋಜನೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದು ಬಂದ್‌ಗೆ ಬೆಂಬಲ ಘೋಷಿಸಿದ್ದಾರೆ. ಎಲ್ಲ ತಾಲೂಕು, ಹೋಬಳಿ, ಗ್ರಾ.ಪಂ. ಮಟ್ಟದಲ್ಲಿಯೂ ಹೋರಾಟದ ಕಾವು ಜೋರಾಗಿದೆ. ಶಾಲಾ ಕಾಲೇಜು ವಿದ್ಯಾರ್ಥಿಗಳು ಈಗಾಗಲೇ ಬೀದಿಗೆ ಇಳಿದು ತಮ್ಮ ಬೆಂಬಲ ಸೂಚಿಸಿದ್ದಾರೆ. ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಡಿಸಿದ್ದಾರೆ.

ಜು.10ಕ್ಕೆ ಶಿವಮೊಗ್ಗ ಬಂದ್ : ಸಂಪೂರ್ಣ ಸ್ತಬ್ಧವಾಗಲಿದೆ ಜಿಲ್ಲೆ

ಬಹುಶಃ ಇದೇ ಮೊದಲ ಬಾರಿಗೆ ಎಲ್ಲ ರಾಜಕೀಯ ಪಕ್ಷಗಳು, ಸಂಘಟನೆಗಳು, ಮಠ ಮಂದಿರಗಳು ಒಂದೇ ವೇದಿಕೆಯಲ್ಲಿ ಹೋರಾಟಕ್ಕೆ ಮುಂದಾಗಿವೆ. ಇದುವರೆಗೆ ಹೋರಾಟದಲ್ಲಿ ಯಾವುದೇ ಅಪಸ್ವರ ಕೇಳಿಸಿಲ್ಲ. ಹೋರಾಟದ ದಿಕ್ಕು ಒಂದೇ ಕಡೆಗೆ ನಡೆದಿದೆ. ಹಿರಿಯ ಸಾಹಿತಿ ನಾ. ಡಿಸೋಜಾ ನೇತೃತ್ವದಲ್ಲಿ ರಚನೆಯಾಗಿರುವ ಹೋರಾಟ ಒಕ್ಕೂಟ ಈ ಬಂದ್ ನೇತೃತ್ವ ವಹಿಸಿದೆ. ಖಾಸಗಿ ಬಸ್ ಮಾಲೀಕರ ಸಂಘ ತನ್ನ ಬೆಂಬಲ ವ್ಯಕ್ತಪಡಿಸಿದೆ. ಇದೇ ರೀತಿ ಆಟೋಗಳ ಸಂಚಾರ ಕೂಡ ಕಡಿಮೆ ಇರಲಿದೆ. ಹೋಟೆಲ್, ಸಿನಿಮಾ ಕೂಡ ಬಂದ್ ಆಗಲಿವೆ. ನಗರದ ಪ್ರಮುಖ ವಾಣಿಜ್ಯ ಕೇಂದ್ರಗಳು ಮುಚ್ಚಲಿವೆ. ಆಸ್ಪತ್ರೆ, ಔಷಧ ಕೇಂದ್ರಗಳು, ಹಾಲು ಸೇರಿದಂತೆ ಅವಶ್ಯಕ ಸೇವೆ ಮಾತ್ರ ಎಂದಿನಂತೆ ಲಭ್ಯವಿರುತ್ತದೆ ಎಂದು ಹೋರಾಟ ಒಕ್ಕೂಟದ ಪ್ರಮುಖರು ತಿಳಿಸಿದ್ದಾರೆ.

ಬಂದ್ ಹಿನ್ನೆಲೆಯಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್

ಬಂದ್ ಹಿನ್ನೆಲೆ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ. 3 ಕೆಎಸ್‌ಆರ್‌ಪಿ ತುಕಡಿ, 14 ಡಿಆರ್ ತುಕಡಿ, ಒಂದು ಕ್ಯುಆರ್‌ಟಿ ಬಂದೋಬಸ್ತ್‌ಗೆ ನೇಮಿಸಲಾಗಿದೆ. ಇಲಾಖೆ ಸಿಬ್ಬಂದಿ ಬಂದೋಬಸ್ತ್ ಕಾರ್ಯದಲ್ಲಿ ನಿಯೋಜನೆಗೊಳ್ಳಲಿ ದ್ದಾರೆ. ಇಲಾಖೆ ವತಿಯಿಂದ ಎಲ್ಲ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಲಾಗಿದೆ. ಬಂದ್ ಶಾಂತಿಯುತ ನಡೆಯಲಿದೆ ಎಂಬ ವಿಶ್ವಾಸವಿದೆ. ಯಾರೂ ಕೂಡ ಬಂದ್‌ಗೆ ಬಲವಂತ ಮಾಡದಂತೆ ಸೂಚನೆ ನೀಡಲಾಗಿದೆ ಎಂದು ಎಸ್‌ಪಿ ಡಾ. ಎಂ. ಅಶ್ವಿನಿ ತಿಳಿಸಿದ್ದಾರೆ.

Follow Us:
Download App:
  • android
  • ios