ಹದಗೆಟ್ಟರಸ್ತೆ: ವಿದ್ಯಾರ್ಥಿನಿ ಪತ್ರಕ್ಕೆ ಪ್ರಧಾನಿ ಸ್ಪಂದನೆ
ತಮ್ಮೂರಿನ ರಸ್ತೆ ತೀರಾ ಹದಗೆಟ್ಟಿದ್ದು ತಕ್ಷಣ ಕ್ರಮ ಕೆಐಗೊಳ್ಳುವಂತೆ ಹೊಸನಗರದ ವಿದ್ಯಾರ್ಥಿನಿ ಬರೆದ ಪತ್ರಕ್ಕೆ ಪ್ರಧಾನಿ ಮೋದಿ ಕಚೇರಿ ಸ್ಪಂದಿಸಿದೆ.
ಹೊಸನಗರ (ಅ.11): ರಸ್ತೆ ತೀರಾ ಹದಗೆಟ್ಟಕಾರಣ ಸಂಪರ್ಕಕ್ಕೆ ಕಷ್ಟವಾಗುತ್ತಿದೆ. ಕೂಡಲೇ ಕ್ರಮ ಕೈಗೊಳ್ಳುವಂತೆ ವಿದ್ಯಾರ್ಥಿಯೊಬ್ಬಳು ಪ್ರಧಾನಿ ಮೋದಿಗೆ ಬರೆದ ಪತ್ರಕ್ಕೆ ಕೊನೆಗೂ ಸ್ಪಂದನೆ ಸಿಕ್ಕಿದೆ. ವಿದ್ಯಾರ್ಥಿನಿ ಬೇಡಿಕೆಯಾಗಿದ್ದ ಹೊಸನಗರ ತಾಲೂಕಿನ ಆರೋಡಿ-ಮಂಡ್ರಳ್ಳಿ ರಸ್ತೆ ಅಭಿವೃದ್ಧಿಗೆ ರಾಜ್ಯ ಸರ್ಕಾರ ಕರ್ನಾಟಕ ನೀರಾವರಿ ನಿಗಮದಡಿ ಒಂದು ಕೋಟಿ ರು. ಬಿಡುಗಡೆ ಮಾಡಿದೆ.
ಹೊಸನಗರದ ಕೊಡಚಾದ್ರಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ದ್ವಿತೀಯ ಬಿಎ ಓದುತ್ತಿರುವ ನಗರ ಮೂಡುಗೊಪ್ಪ ಗ್ರಾಪಂ ವ್ಯಾಪ್ತಿಯ ಕೊಡಸೆ ಗ್ರಾಮದ ಅಶ್ವಿನಿ ಜಿ, ಎರಡು ಕಿಮೀ ಸಂಪರ್ಕ ರಸ್ತೆ ತೀರಾ ಹದಗೆಟ್ಟಿದ್ದು ಕೂಡಲೇ ಅಭಿವೃದ್ಧಿ ಮಾಡುವಂತೆ ಪತ್ರ ಬರೆದಿದ್ದಳು. ಐಶ್ವರ್ಯ ಪಿಯುಸಿ ಓದುತ್ತಿದ್ದ ವೇಳೆ ಈ ಪತ್ರ ಬರೆದಿದ್ದು ಕೂಡಲೇ ಪ್ರಧಾನಿ ಕಚೇರಿ ಸ್ಪಂದಿಸಿ ರಾಜ್ಯ ಮುಖ್ಯ ಕಾರ್ಯದರ್ಶಿಗೆ ಪತ್ರ ರವಾನಿಸಿತ್ತು. ಅಲ್ಲಿಂದ ಶಿವಮೊಗ್ಗ ಜಿಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿಗೂ ಪತ್ರವನ್ನು ಮುಂದಿನ ಕ್ರಮಕ್ಕಾಗಿ ರವಾನಿಸಲಾಗಿತ್ತು. ಆದರೆ ನಂತರ ಯಾವುದೇ ಪ್ರಕ್ರಿಯೆ ನಡೆಯದೆ ಸ್ಥಗಿತಗೊಂಡಿದ್ದು ಐಶ್ವರ್ಯರಲ್ಲಿ ನಿರಾಸೆ ಮೂಡಿಸಿತ್ತು.
ಸಂಸದರ ಸ್ಪಂದನೆ:
ಐಶ್ವರ್ಯ ಪ್ರಸ್ತುತ ಬಿಎ ಓದುತ್ತಿದ್ದು, ಆಕೆ ಪಿಯುಸಿಯಲ್ಲಿರುವಾಗ ಪತ್ರ ಬರೆದಿದ್ದು ತಡವಾಗಿ ಬೆಳಕಿಗೆ ಬಂದಿದ್ದು, ಮಾಧ್ಯಮಗಳಲ್ಲಿ ಸುದ್ದಿ ಭಿತ್ತರವಾಗಿತ್ತು. ಸುದ್ದಿ ತಿಳಿಯುತ್ತಿದ್ದಂತೆ ಜಿಪಂ ಸದಸ್ಯ ಸುರೇಶ ಸ್ವಾಮಿರಾವ್ ಆರೋಡಿಗೆ ಭೇಟಿ ನೀಡಿ ರಸ್ತೆಯನ್ನು ಪರಿಶೀಲಿಸಿದ್ದರು. ಇದರಿಂದ ಮತ್ತೆ ಉತ್ಸಾಹ ಪಡೆದ ಐಶ್ವರ್ಯ ಸಂಸದ ಬಿ.ವೈ. ರಾಘವೇಂದ್ರ ಮತ್ತು ಶಾಸಕರಾದ ಜ್ಞಾನೇಂದ್ರರನ್ನು ಸಂಪರ್ಕಿಸಿ ರಸ್ತೆ ಅಭಿವೃದ್ಧಿಗೆ ಒತ್ತಾಯಿಸಿದ್ದರು. ಇದಕ್ಕೆ ಸ್ಪಂದಿಸಿದ ಸಂಸದ ಬಿ.ವೈ.ರಾಘವೇಂದ್ರ ಶಾಸಕ ಆರಗ ಸಹಕಾರದೊಂದಿಗೆ ರಾಜ್ಯ ಸರ್ಕಾರದ ಗಮನ ಸೆಳೆದು ಕರ್ನಾಟಕ ನೀರಾವರಿ ನಿಗಮದಿಂದ ಒಂದು ಕೋಟಿಯನ್ನು ರಸ್ತೆ ಅಭಿವೃದ್ಧಿಗೆ ಇಡಿಸುವಲ್ಲಿ ಯಶಸ್ವಿಯಾಗಿದ್ದಾರೆ. ಐಶ್ವರ್ಯ ಕೇಳಿದ್ದ ಎರಡು ಕಿಮೀ ರಸ್ತೆಯನ್ನು ಮುಂದುವರೆಸಿ 5 ಕಿಮೀ ಅಭಿವೃದ್ಧಿಗೆ ನಿರ್ಧರಿಸಲಾಗಿದೆ. ಇದರಿಂದಾಗಿ ಸುಮಾರು 80 ಕುಟುಂಬಗಳಿಗೆ ಸಹಕಾರಿಯಾಗಲಿದೆ. ಅಲ್ಲದೆ ತೀರ್ಥಹಳ್ಳಿ ಸಂಪರ್ಕ ಇನ್ನಷ್ಟುಹತ್ತಿರವಾಗಲಿದೆ.
ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ
ಒಟ್ಟಾರೆ ಗ್ರಾಮೀಣ ಪ್ರದೇಶದ ವಿದ್ಯಾರ್ಥಿನಿ ಕಾಳಜಿಗೆ ಪ್ರತಿಫಲ ದೊರಕಿದಂತಾಗಿದೆ. ಸಂಸದರು ಮತ್ತು ಶಾಸಕರ ವಿಶೇಷ ಪ್ರಯತ್ನದಿಂದಾಗಿ ನೆನಗುದಿಗೆ ಬಿದ್ದಿದ್ದ ರಸ್ತೆಗೆ ಜೀವ ಬಂದಿದೆ. ಐಶ್ವರ್ಯ ಕಾಳಜಿ ಗ್ರಾಮಸ್ಥರ ಪ್ರಶಂಸೆಗೆ ಪಾತ್ರವಾಗಿದೆ.
ವಿದ್ಯಾರ್ಥಿ ಜೀವನದಲ್ಲೇ ಊರಿನ ಬಗ್ಗೆ ಕಾಳಜಿ ಹೊಂದಿ ಪ್ರಧಾನಿಗೆ ಪತ್ರ ಬರೆದ ಐಶ್ವರ್ಯ ಬಗ್ಗೆ ಮೆಚ್ಚುಗೆ ಇದೆ. ಆರೋಡಿ ಮತ್ತು ಮಂಡ್ರಳ್ಳಿ ರಸ್ತೆ ಅಭಿವೃದ್ಧಿಗೆ ರಾಜ್ಯ ಸರ್ಕಾರ 1 ಕೋಟಿ ನೀಡಿದೆ. ಶಾಸಕ ಜ್ಞಾನೇಂದ್ರ ಸಹಕಾರದೊಂದಿಗೆ ಮಾಡಿದ ಪ್ರಯತ್ನಕ್ಕೆ ಫಲ ಸಿಕ್ಕಿದೆ. ಇಂದಿನ ಯುವ ಪೀಳಿಗೆ ಸರ್ಕಾರ ಮತ್ತು ಅಭಿವೃದ್ಧಿಯ ಕಾಳಜಿ ತೋರಬೇಕು.
- ಬಿ.ವೈ.ರಾಘವೇಂದ್ರ, ಸಂಸದ
ನಾನು ಪಿಯುಸಿ ಓದುವಾಗ ಪತ್ರ ಬರೆದಿದ್ದೆ. ಅದು ಈಗ ಫಲ ಕೊಟ್ಟಿದೆ. ಇದಕ್ಕೆ ಮಾಧ್ಯಮದ ಸಹಕಾರ ಪ್ರಮುಖ ಕಾರಣ. ಅಲ್ಲದೆ ಸಂಸದ ಬಿ.ವೈ.ರಾಘವೇಂದ್ರ ಶಾಸಕ ಆರಗ ಜ್ಞಾನೇಂದ್ರ ಮತ್ತು ಜಿಪಂ ಸದಸ್ಯರು ಸ್ಪಂದಿಸಿದ್ದು ಅವರುಗಳಿಗೆ ಚಿರರುಣಿ.
- ಐಶ್ವರ್ಯ, ದ್ವಿತೀಯ ಬಿಎ ವಿದ್ಯಾರ್ಥಿನಿ