ಸಾಗರ (ನ.14):  ನೇಣಿಗೆ ಕೊರಳೊಡ್ಡಿ ಇನ್ನೇನು ಸಾವಿಗೆ ಶರಣಾಗುತ್ತಿದ್ದಾರೆ ಎನ್ನುವಷ್ಟರಲ್ಲಿ ಪೊಲೀಸ್‌ ಮತ್ತು ಹೋಂಗಾರ್ಡ್‌ ಅವರ ಸಮಯ ಪ್ರಜ್ಞೆಯಿಂದ ವೃದ್ಧರೊಬ್ಬರ ಪ್ರಾಣ ಉಳಿಸಿದ ಘಟನೆ ಸಾಗರದ ಪ್ರವಾಸಿ ಮಂದಿರದ ಬಳಿ ನಡೆದಿದೆ.

ಮಾಂಸಹಾರಿ ಹೋಟೆಲ್‌ವೊಂದರ ಮಾಲೀಕ ರಮೇಶ್‌ (70) ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ಮನಸ್ತಾಪಗೊಂಡು ಆತ್ಮಹತ್ಯೆ ಮಾಡಿಕೊಳ್ಳಲು ನಿರ್ಧರಿಸಿ ತಮ್ಮ ಹೋಟೆಲ್‌ ಮುಂಭಾಗದ ಚಾವಣಿಯ ಪಕಾಸಿಗೆ ಹಗ್ಗ ಹಾಕಿ ಕುತ್ತಿಗೆಗೆ ಬಿಗಿದಿದ್ದರು ಎನ್ನಲಾಗಿದೆ. ಆದರೆ ಅವರು ಆತ್ಮಹತ್ಯೆಗೆ ಮಾಡಿಕೊಳ್ಳಲು ಬಳಸಿದ್ದ ಖುರ್ಚಿ ಕೆಳಗೆ ಬಿದ್ದ ರಭಸಕ್ಕೆ ದೊಡ್ಡ ಶಬ್ಧ ಕೇಳಿ ಬಂದಿದೆ.

ಅದೇ ಹೊತ್ತಿಗೆ ಹೋಟೆಲ್‌ ಹೊರಗಿದ್ದ ಪಾಯಿಂಟ್‌ ಬುಕ್‌ಗೆ ಸಹಿ ಹಾಕಲು ಬಂದ ಬೀಟ್‌ ಪೊಲೀಸ್‌ ಪೇದೆ ಹರೀಶ್‌, ಹೋಮ್‌ ಗಾರ್ಡ್‌ ಮಂಜಪ್ಪ ನೇಣಿನ ಕುಣಿಕೆಯಲ್ಲಿ ಒದ್ದಾಡುತ್ತಿದ್ದನ್ನು ಗಮನಿಸಿ ಕತ್ತಿನಲ್ಲಿದ್ದ ಹಗ್ಗ ತೆಗೆದು ಜೀವ ಉಳಿಸಿದ್ದಾರೆ.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ತಕ್ಷಣ ಪಿಸಿಆರ್‌ ವಾಹನದಲ್ಲಿದ್ದ ಪಿಎಸ್‌ಐ ಸಾಗರ್ಕರ್‌ ಹಾಗೂ ಚಾಲಕ ನರಸಿಂಹ 108 ಅಂಬುಲೆನ್ಸ್‌ ಗೆ ಕರೆಮಾಡಿ ಆಸ್ಪತ್ರೆಗೆ ಸಾಗಿಸಿ ಪ್ರಾಣ ರಕ್ಷಿಸಿದ್ದಾರೆ. ಪೊಲೀಸರ ಈ ಕಾರ್ಯಕ್ಕೆ ಸಾರ್ವಜನಿಕ ವಲಯದಲ್ಲಿ ವ್ಯಾಪಕ ಶ್ಲಾಘನೆ ವ್ಯಕ್ತವಾಗಿದೆ.

ಪ್ರಾಣ ಉಳಿಸಲು ನೆರವಾದ ಇಡೀ ತಂಡಕ್ಕೆ ಎಎಸ್‌ಪಿ ಯತೀಶ್‌ ಕೃತಜ್ಞತೆ ಸಲ್ಲಿಸಿದ್ದಾರೆ. ಜೊತೆಗೆ ಹರೀಶ್‌ಗೆ 2 ಸಾವಿರ ರು. ನಗದು ಹಾಗೂ ಪ್ರಶಂಸನಾ ಪತ್ರ ನೀಡಿ ಅಭಿನಂದಿಸಿದರು.