ಶಿವಮೊಗ್ಗ [ನ.14]:  ಕೆಎಸ್‌ಆರ್‌ಟಿಸಿ ಬಸ್‌ ಪ್ರಯಾಣ ದರ ವಿಧಿಸುವಿಕೆಯಲ್ಲಿನ ತಾರತಮ್ಯ ಸರಿಪಡಿಸಿ ಏಕರೂಪ ಪ್ರಯಾಣ ದರ ಜಾರಿಗೊಳಿಸಬೇಕೆಂದು ರಾಜ್ಯ ರೈತ ಸಂಘ ರಾಜ್ಯ ಸರ್ಕಾರವನ್ನು ಆಗ್ರಹಿಸಿದೆ.

ಪತ್ರಿಕಾಗೋಷ್ಠಿಯಲ್ಲಿ ರೈತ ಸಂಘದ ರಾಜ್ಯ ಗೌರವಾಧ್ಯಕ್ಷ ಎಚ್‌.ಆರ್‌. ಬಸವರಾಜಪ್ಪ ಮಾತನಾಡಿ, ಕೆಎಸ್‌ಆರ್‌ಟಿಸಿಯು ಶಿವಮೊಗ್ಗ ವಿಭಾಗದಲ್ಲಿ ತನ್ನ ಪ್ರಯಾಣಿಕರಿಂದ ಸುಲಿಗೆ ಮಾಡುತ್ತಿದೆ. ಇಬ್ಬಗೆ ದರದ ನೀತಿಯಿಂದ ಜನಸಾಮಾನ್ಯರಿಗೆ ತೊಂದರೆಯಾಗಿದೆ ಎಂದು ಆರೋಪಿಸಿದರು.

ಶಿವಮೊಗ್ಗ-ಭದ್ರಾವತಿ 18 ಕಿ.ಮೀ. ಅಂತರಕ್ಕೆ 22 ರು, ದರ ನಿಗದಿಪಡಿಸಿದರೆ, ಶಿವಮೊಗ್ಗ-ಹೊಳೆಹೊನ್ನೂರು 18 ಕಿ.ಮೀ. ದೂರವಿದ್ದರೆ 20 ರು. ದರ ನಿಗದಿಪಡಿಸಲಾಗಿದೆ. ಸಾಸ್ವೆಹಳ್ಳಿ 42 ಕಿ.ಮೀ. ಇದ್ದು ಅಲ್ಲಿ 30 ರು. ದರ ನಿಗದಿಪಡಿಸಲಾಗಿದೆ. ಹೊನ್ನಾಳಿ ಕೂಡ 40 ಕಿ.ಮೀ. ದೂರವಿದೆ.. ಆದರೆ ಇಲ್ಲಿ 44 ರು. ದರ ನಿಗದಿಪಡಿಸಲಾಗಿದೆ. ಹಾಗೆಯೇ ಚಿತ್ರದುರ್ಗ 105 ಕಿ.ಮೀ. ಇದ್ದು ಇಲ್ಲಿ 80 ರು. ದರ ಇದ್ದರೆ, ಇದೇ ಅಂತರವಿರುವ ಅರಸೀಕೆರೆಗೆ 110 ರು. ದರ ವಿಧಿಸಲಾಗಿದೆ ಎಂದು ತಿಳಿಸಿದರು.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಕೆಎಸ್‌ಆರ್‌ಟಿಸಿಯು ಏಕಸ್ವಾಮ್ಯದ ಮಾರ್ಗಗಳಲ್ಲಿ ಕಿ.ಮೀ.ಗೆ 1.10 ರು. ಪಡೆದರೆ, ಏಕಸ್ವಾಮ್ಯವಿಲ್ಲದ ಮಾರ್ಗಗಳಲ್ಲಿ ಕಿ.ಮೀ.ಗೆ 70 ಪೈಸೆ ಪಡೆಯುತ್ತಿರುವುದು ಕಂಡುಬಂದಿದೆ. ಇದು ಪ್ರಯಾಣಿಕರ ಹಗಲು ದರೋಡೆ, ಜನರನ್ನು ವಂಚಿಸುವ ಮಾರ್ಗ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಕೂಡಲೇ ಬಹುಜನ ಉಪಯೋಗಿ ಸಾರಿಗೆ ವ್ಯವಸ್ಥೆ ಜಾರಿಯಾಗಬೇಕು. ಎಲ್ಲಾ ಮಾರ್ಗಗಳಲ್ಲೂ ಕಿ.ಮೀ.ಗೆ 70 ಪೈಸೆಯಂತೆ ದರ ಪಡೆಯಬೇಕು. ಇಲ್ಲವಾದಲ್ಲಿ ರೈತ ಸಂಘ ಹೋರಾಟ ರೂಪಿಸಲಿದೆ ಎಂದು ಎಚ್ಚರಿಕೆ ನೀಡಿದರು.

ಗೋಷ್ಠಿಯಲ್ಲಿ ಸಂಘದ ಮುಖಂಡರಾದ ಕೆ. ರಾಘವೇಂದ್ರ, ಹಿಟ್ಟೂರು ರಾಜು, ಡಿ.ಎಚ್‌. ರಾಮಚಂದ್ರಪ್ಪ ಮೊದಲಾದವರು ಇದ್ದರು.