ಶಿವಮೊಗ್ಗ [ಅ.26]: ಜಿಲ್ಲೆಯಾದ್ಯಂತ ಶುಕ್ರವಾರವೂ ಜಡಿ ಮಳೆ ಮುಂದುವರಿದಿದೆ. ಕಳೆದ ಮೂರ್ನಾಲ್ಕು ದಿನಗಳಿಂದ ಆಗಾಗ್ಗೆ ಬೀಳುತ್ತಿದ್ದ ಮಳೆ ಗುರುವಾರದಿಂದ ಮತ್ತಷ್ಟುಬಿರುಸುಗೊಂಡಿದ್ದು, ಮಲೆನಾಡು ತಾಲೂಕುಗಳಾದ ತೀರ್ಥಹಳ್ಳಿ, ಸಾಗರ ಮತ್ತು ಹೊಸನಗರ ತಾಲೂಕಿನಲ್ಲಿ ಬಿಡುವಿಲ್ಲದೆ ಸುರಿಯುತ್ತಿದೆ. ಅರೆಮಲೆನಾಡು ತಾಲೂಕುಗಳಲ್ಲಿ ಆಗಾಗ್ಗೆ ಬಿಸಿಲು, ತುಂತುರು ಮಳೆ ಸುರಿಯುತ್ತಿದೆ.

ಮಲೆನಾಡು ತಾಲೂಕುಗಳಲ್ಲಿ ಮಳೆಯ ಜೊತೆಗೆ ಶುಕ್ರವಾರದಿಂದ ಗಾಳಿಯೂ ಸೇರಿಕೊಂಡಿದೆ. ಅನೇಕ ಕಡೆ ಅಡಕೆ ಮರಗಳು ಉರುಳಿ ಬಿದ್ದಿವೆ. ಆದರೆ ಯಾವುದೇ ದೊಡ್ಡ ಪ್ರಮಾಣದ ಹಾನಿ ಸಂಭವಿಸಿಲ್ಲ. ನದಿ ಮತ್ತು ಹಳ್ಳಗಳಲ್ಲಿ ಸ್ವಲ್ಪ ಹೆಚ್ಚಾಗಿಯೇ ಹರಿಯುತ್ತಿದೆ.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಲಿಂಗನಮಕ್ಕಿ ಜಲಾಶಯದ ನೀರಿನ ಒಳಹರಿವಿನಲ್ಲಿ ಏರಿಕೆ ಕಾಣಿಸಿದ್ದು, ಶುಕ್ರವಾರ ಬೆಳಗ್ಗೆ 8 ಗಂಟೆಗೆ 24,915 ಕ್ಯು. ನೀರು ಹರಿದು ಬರುತ್ತಿದೆ. ಭದ್ರಾ ಜಲಾಶಯಕ್ಕೆ 11325 ಕ್ಯು. ನೀರು ಹಾಗೂ ತುಂಗಾ ಜಲಾಶಯಕ್ಕೆ 14,613 ಕ್ಯು. ನೀರು ಹರಿದು ಬರುತ್ತಿದೆ.

ಸಾಗರ: ಶಾಲೆಗಳಿಗೆ ರಜೆ

ಕಳೆದೆರಡು ದಿನಗಳಿಂದ ಒಂದೇ ಸಮನೆ ಸುರಿಯುತ್ತಿರುವ ಮಳೆಯ ಕಾರಣ ಅ. 26ರ ಶನಿವಾರ ತಾಲೂಕಿನ ಎಲ್ಲ ಪ್ರಾಥಮಿಕ ಮತ್ತು ಪ್ರೌಢಶಾಲೆಗಳಿಗೆ ರಜೆ ಘೋಷಿಸಲಾಗಿದೆ. ಎರಡು ದಿನಗಳಿಂದ ತಾಲೂಕಿನಲ್ಲಿ ಮಳೆ ಸುರಿಯುತ್ತಿದ್ದು, ಇದರಿಂದ ಮುನ್ನೆಚ್ಚರಿಕೆ ಕ್ರಮವಾಗಿ ರಜೆ ಘೋಷಣೆ ಮಾಡಲಾಗಿದೆ ಎಂದು ಸಾಗರ ತಾಲೂಕಿನ ಕ್ಷೇತ್ರ ಶಿಕ್ಷಣಾಧಿಕಾರಿಗಳು ತಿಳಿಸಿದ್ದಾರೆ.